Thursday 21 January 2016

ಅವರನ್ನು ಉಗ್ರರಾಗಿಸಿ 9 ವರ್ಷ ಕೊಳೆಯಿಸಿದರಲ್ಲ, ಅವರಿಗೆ ಯಾವ ಶಿಕ್ಷೆಯಿದೆ ಸ್ವಾಮಿ?

       ಕಳೆದವಾರ ಬಿಡುಗಡೆಗೊಂಡ ನೌಶಾದ್, ಅಲಿ ಅಕ್ಬರ್ ಹುಸೈನ್, ಅಝೀಝುರ್ರಹ್ಮಾನ್ ಸರ್ದಾರ್ ಮತ್ತು ಶೈಖ್ ಮುಖ್ತಾರ್ ಹುಸೈನ್ ಎಂಬ ನಾಲ್ವರು ಯುವಕರು ಈ ದೇಶದ ಮುಂದೆ ಕೆಲವು ಪ್ರಶ್ನೆಗಳನ್ನಿಟ್ಟಿದ್ದಾರೆ. ಹಾಗಂತ ಈ ಪ್ರಶ್ನೆಗಳು ಹೊಚ್ಚ ಹೊಸತೇನೂ ಅಲ್ಲ. ಈ ಹಿಂದೆಯೂ ಇಂಥ ಪ್ರಶ್ನೆಗಳು ಹುಟ್ಟಿಕೊಂಡಿದ್ದುವು. ಮಾತ್ರವಲ್ಲ, ಕೆಲವರು ಇಂಥ ಪ್ರಶ್ನೆಗಳನ್ನೇ ದೇಶದ್ರೋಹಿಯಾಗಿ ಪರಿವರ್ತಿಸಿ ಆನಂದಪಟ್ಟದ್ದೂ ಇದೆ. ಓರ್ವನ ಮೇಲೆ ಭಯೋತ್ಪಾದನೆಯ ಆರೋಪ ಹೊರಿಸುವುದಕ್ಕೆ ಇರುವ ಮಾನದಂಡಗಳು ಏನು? ಧರ್ಮವೇ, ಧಾರ್ಮಿಕತನವೇ, ವೇಷ-ಭೂಷಣಗಳೇ, ವೃತ್ತಿಯೇ? ಯಾಕೆ ಇಂಥ ಪ್ರಶ್ನೆಗಳು ಮತ್ತೆ ಮತ್ತೆ ಮುಖ್ಯವಾಗುತ್ತವೆಂದರೆ, ಈ ಮೇಲಿನ ನಾಲ್ವರು ಯುವಕರೂ ಭಯೋತ್ಪಾದನೆಯ ಆರೋಪದಲ್ಲಿ ತಮ್ಮ ಅಮೂಲ್ಯ 9 ವರ್ಷಗಳನ್ನು ಜೈಲಿನಲ್ಲಿ ಕಳೆದವರು. ಇವರಲ್ಲಿ ನೌಶಾದ್ ಎಂಬವನು ಮದ್ರಸ ಅಧ್ಯಾಪಕ. ಇವನ ತಂದೆಯಾದರೋ ಭಾರತೀಯ ವಾಯುದಳದ ನಿವೃತ್ತ ಯೋಧ. ಉತ್ತರ ಪ್ರದೇಶದ ಪೊಲೀಸರು 2007ರಲ್ಲಿ ಇವರನ್ನು ಭಯೋತ್ಪಾದನೆಯ ಆರೋಪದಲ್ಲಿ ಬಂಧಿಸಿದ್ದರು. ಹುಜಿ(ಹರ್ಕತುಲ್ ಜಿಹಾದುಲ್ ಇಸ್ಲಾಮ್)ಯಿಂದ ತರಬೇತಿ ಪಡೆದಿರುವ ಮತ್ತು ರಾಜ್ಯದಾದ್ಯಂತ ಭಯೋತ್ಪಾದನಾ ಚಟುವಟಿಕೆಗಳನ್ನು ನಡೆಸಲು ಸಂಚು ಹೂಡಿರುವ ಉಗ್ರರು ಎಂದು ಪೊಲೀಸರು ಬಹಿರಂಗವಾಗಿಯೇ ಆರೋಪಿಸಿದ್ದರು. ಇವರ ವಿರುದ್ಧ ದೇಶದ್ರೋಹ, ಸಮುದಾಯಗಳ ನಡುವೆ ಶತ್ರುತ್ವಕ್ಕೆ ಉತ್ತೇಜನ ಮತ್ತು ಹಿಂಸಾಚಾರದಂಥ ಗಂಭೀರ ಪರಿಚ್ಛೇದದಡಿ ಕೇಸುಗಳನ್ನು ದಾಖಲಿಸಿದ್ದರು. ಅದರಲ್ಲೂ 2008 ಆಗಸ್ಟ್ 12 ರಂದು ಇವರನ್ನು ಉತ್ತರ ಪ್ರದೇಶದ ನ್ಯಾಯಾಲಯಕ್ಕೆ ಹಾಜರುಗೊಳಿಸುವಾಗ ದೊಡ್ಡದೊಂದು ಕೋಲಾಹಲವೇ ಎದ್ದಿತ್ತು. ಇವರ ಪರವಾಗಿ ನ್ಯಾಯಾಲಯದಲ್ಲಿ ಹಾಜರಾದ ನ್ಯಾಯವಾದಿ ಮುಹಮ್ಮದ್ ಶುಹೈಬ್‍ರ ಮೇಲೆ ಇತರ ನ್ಯಾಯವಾದಿಗಳು ನ್ಯಾಯಾಲಯದಲ್ಲೇ ಹಲ್ಲೆ ನಡೆಸಿದ್ದರು. ಇದೀಗ ವಿಶೇಷ ನ್ಯಾಯಾಲಯ ಈ ಯುವಕರನ್ನು ನಿರಪರಾಧಿಗಳೆಂದು ಘೋಷಿಸಿ ಬಿಡುಗಡೆಗೊಳಿಸಿದೆ. ಹಾಗಂತ, ಈ ಯುವಕರಿಗೆ ನ್ಯಾಯ ಲಭ್ಯವಾಗಿದೆಯೇ? ಈ ಬಿಡುಗಡೆಯನ್ನೇ ನಾವು ನ್ಯಾಯಕ್ಕೆ ಸಂದ ಜಯ ಎಂದು ಹೇಳುವುದಾದರೆ ಕಳೆದು ಹೋದ 9 ವರ್ಷಗಳು ಮತ್ತು ಅದು ಕೊಟ್ಟಿರಬಹುದಾದ ಹಿಂಸೆಗಳನ್ನು ಏನೆಂದು ವ್ಯಾಖ್ಯಾನಿಸಬೇಕು? ಕಳೆದ 2007ರಿಂದ ಮೊನ್ನೆ ಬಿಡುಗಡೆಗೊಳ್ಳುವವರೆಗೆ ಇವರು ಶಂಕಿತ ಭಯೋತ್ಪಾದಕರಾಗಿದ್ದರು. ಪಾಕಿಸ್ತಾನದ ಹುಜಿಯೊಂದಿಗೆ ಸೇರಿಕೊಂಡು ಬಾಂಬ್‍ಸ್ಫೋಟದ ಸಂಚು ನಡೆಸಿದ ದೇಶದ್ರೋಹಿಗಳಾಗಿದ್ದರು. ಇಂಥ ಭಯಂಕರ ಬಿರುದುಗಳನ್ನು ಸರಿಸುಮಾರು ಒಂದು ದಶಕಗಳ ಕಾಲ ಮೈಮೇಲೆ ಅಂಟಿಸಿಕೊಂಡವರು ಇದೀಗ ಬಿಡುಗಡೆಗೊಂಡ ಕೂಡಲೇ ಅವೆಲ್ಲದರಿಂದ ಮುಕ್ತರಾಗುತ್ತಾರೆಯೇ? ಸಮಾಜ ಅವರನ್ನು ಸಹಜವಾಗಿ ಸ್ವೀಕರಿಸಬಹುದೇ? ಅವರಿಗೆ ಉದ್ಯೋಗ, ಸಾಮಾಜಿಕ ಮನ್ನಣೆಗಳು ಲಭ್ಯವಾಗಬಹುದೇ? ಸಭೆ, ಸಮಾರಂಭ, ಸಂತೋಷ ಕೂಟಗಳು ಅವರನ್ನು ಹೇಗೆ ನಡೆಸಿಕೊಂಡಾವು? ಅವರ ಕೌಟುಂಬಿಕ ಜೀವನದ ಮೇಲೆ ಬಿದ್ದಿರಬಹುದಾದ ಹೊಡೆತಗಳೇನು? ತಂದೆ-ತಾಯಿ, ಪತ್ನಿ-ಮಕ್ಕಳು, ಗೆಳೆಯ, ಕುಟುಂಬಿಕರು ಸಹಿತ ಒಂದು ದೊಡ್ಡ ಗುಂಪಿನ ಮೇಲೆ ಕಳೆದ 9 ವರ್ಷಗಳಲ್ಲಿ ಆಗಿರುವ ಗಾಯಗಳಿವೆಯಲ್ಲ, ಅವು ಇವರ ಬಿಡುಗಡೆಯ ತಕ್ಷಣ ಒಣಗಿ ಹೋಗುವುದೇ? ಮುಂದೆ ಎಲ್ಲಾದರೂ ಬಾಂಬ್ ಸ್ಫೋಟಗೊಂಡರೆ ಅಥವಾ ಸ್ಫೋಟವಾಗದ ಬಾಂಬು, ಜಿಲೆಟಿನ್ ಕಡ್ಡಿಗಳು ಪತ್ತೆಯಾದರೆ ಇವರು ಸುರಕ್ಷಿತರೇ? 2007ರಲ್ಲಿ ಇವರ ಮೇಲೆ ಭಯೋತ್ಪಾದನೆಯ ಆರೋಪ ಹೊರಿಸಿದವರು ಮತ್ತೊಮ್ಮೆ ಇವರನ್ನು ಗುರಿ ಮಾಡಲಾರರು ಎಂದು ಹೇಗೆ ಹೇಳುವುದು? ಮತ್ತೆ ಮತ್ತೆ ಅನುಮಾನ, ಬಂಧನ, ಆರೋಪ ಪಟ್ಟಿ... ಮುಂತಾದುವು ಇವರ ಬೆನ್ನ ಹಿಂದೆ ಕಾದು ಕುಳಿತಿರುವಾಗ ಈ ಬಿಡುಗಡೆಯನ್ನು `ನ್ಯಾಯಕ್ಕೆ ಸಂದ ಜಯ' ಎಂದು ಎಷ್ಟರ ಮಟ್ಟಿಗೆ ವ್ಯಾಖ್ಯಾನಿಸಬಹುದು? ಅಷ್ಟಕ್ಕೂ, ಇವರನ್ನು `ಹುಜಿ'ಯ ಸದಸ್ಯರೆಂದು ಕರೆದು ಆರೋಪ ಪಟ್ಟಿ ಸಲ್ಲಿಸಿದ ಪೆÇಲೀಸರು ಇವತ್ತು ಒಂದೋ ಭಡ್ತಿ ಹೊಂದಿ ಉನ್ನತ ಅಧಿಕಾರಿ ಆಗಿರಬಹುದು ಅಥವಾ ನಿವೃತ್ತರಾಗಿರಬಹುದು ಅಥವಾ ಅದೇ ಹುದ್ದೆಯಲ್ಲಿರಬಹುದು. ಅಲ್ಲದೇ, ಈ ಬಿಡುಗಡೆಯನ್ನು ಅವರು ತಮಗಾದ ಮುಖಭಂಗ ಎಂದು ಅಂದುಕೊಳ್ಳಲೂಬಹುದು. ಹಾಗೇನಾದರೂ ಆದದ್ದೇ ಆದಲ್ಲಿ ಅದು ಅತ್ಯಂತ ಅಪಾಯಕಾರಿ. ಇವರು ಮತ್ತೊಮ್ಮೆ ಉಗ್ರರಾಗುವುದಕ್ಕೆ ಸರ್ವ ಅವಕಾಶಗಳನ್ನು ಈ `ಮುಖಭಂಗ' ಮನಃಸ್ಥಿತಿಯು ತೆರೆದಿಡುತ್ತದೆ. ಹೀಗಿರುತ್ತಾ, ಈ ಬಿಡುಗಡೆಯನ್ನು ಆನಂದಿಸುವುದು ಹೇಗೆ? ನಿಜವಾಗಿ, ಈ ನಾಲ್ವರು ನಿರಪರಾಧಿಗಳೆಂದಾದರೆ ಅಪರಾಧಿಗಳು ಯಾರು ಎಂಬ ಪ್ರಶ್ನೆ ಸಹಜವಾಗಿಯೇ ಉದ್ಭವಿಸುತ್ತದೆ. ಈ ಪ್ರಶ್ನೆಗೆ ಉತ್ತರಿಸಬೇಕಾದದ್ದು ಪೊಲೀಸರು. ಯಾಕೆಂದರೆ ಇವರನ್ನು ಬಂಧಿಸಿದ್ದು ಅವರೇ. ಆರೋಪ ಪಟ್ಟಿ ಸಲ್ಲಿಸಿದ್ದೂ ಅವರೇ. ಹುಜಿಯ ಸದಸ್ಯರೆಂದೂ ಭಯೋತ್ಪಾದಕರೆಂದೂ ಬಹಿರಂಗವಾಗಿ ಘೋಷಿಸಿದ್ದೂ ಅವರೇ. ಇದೀಗ ನ್ಯಾಯಾಲಯವು ಇವರ ಆರೋಪ ಪಟ್ಟಿಯನ್ನೇ ತಿರಸ್ಕರಿಸಿರುವುದರಿಂದ ಮತ್ತೆ ಪ್ರಶ್ನೆಗಳು ಅವರ ಬಳಿಗೇ ಮರಳುತ್ತವೆ. ಈ ಯುವಕರನ್ನು ಬಂಧಿಸುವ ಸಂದರ್ಭದಲ್ಲಿ ಈ ಪೊಲೀಸರು ಪ್ರಾಮಾಣಿಕರಾಗಿದ್ದರೇ? ಅವರ ಮೇಲೆ ಒತ್ತಡಗಳಿದ್ದುವೇ? ಪೂರ್ವಗ್ರಹಗಳು ಅವರನ್ನು ಸುತ್ತುವರಿದಿದ್ದುವೇ? ಮಾಧ್ಯಮಗಳ ‘ಶಂಕಿತ ಮುಸ್ಲಿಮ್’ ಕಾಯಿಲೆಯು ಅವರ ಮೇಲೂ ಪ್ರಭಾವ ಬೀರಿದ್ದುವೆ?
        9 ವರ್ಷಗಳ ಅಮೂಲ್ಯ ಯೌವನವನ್ನು ಕಂಬಿಗಳ ಹಿಂದೆ ನಿಷ್ಪ್ರಯೋಜಕವಾಗಿ ಕಳೆದ ನಾಲ್ವರು ಯುವಕರು `ನಿರಪರಾಧಿಗಳು' ಎಂಬ ಗುರುತಿನೊಂದಿಗೆ ಸಮಾಜಕ್ಕೆ ಮರಳುವುದನ್ನು ನಾವು ಸಾಮಾನ್ಯವಾಗಿ ನ್ಯಾಯಕ್ಕೆ ಸಂದ ಜಯ ಎಂದು ಘೋಷಿಸಿ ಬಿಡುವುದಿದೆ. ನ್ಯಾಯ ವ್ಯವಸ್ಥೆಯ ಇತಿ-ಮಿತಿಗಳನ್ನು ಪರಿಗಣಿಸಿದರೆ ಇಂಥದ್ದೊಂದು ಘೋಷಣೆ ಸಮರ್ಥನಿಯವೇ ಆಗಿರಬಹುದು. ಆದರೆ ನಿಜಕ್ಕೂ ಹೀಗೆ ಘೋಷಿಸಿ ಬಿಡುವ ಸ್ಥಿತಿಯಲ್ಲಿ ನಾವಿದ್ದೇವೆಯೇ? ಕಳೆದು ಹೋದ 9 ವರ್ಷಗಳನ್ನು ಮತ್ತು ಅದರ ಮೌಲ್ಯವನ್ನು ಲೆಕ್ಕ ಹಾಕುವಾಗ ಕಾಣಿಸುವ ನ್ಯಾಯದೊಳಗಿನ ಅನ್ಯಾಯಕ್ಕೆ ಏನೆನ್ನಬೇಕು? ನಿಜವಾಗಿ, ತಮ್ಮ ಬಿಡುಗಡೆಯನ್ನು `ನ್ಯಾಯದ ಗೆಲುವು' ಎಂದು ಘೋಷಿಸಿ ಸಂಭ್ರಮಿಸಬೇಕಾದದ್ದು ಆ ಯುವಕರು. ಆದರೆ, ಅವರು ಆ ಸ್ಥಿತಿಯಲ್ಲಿದ್ದಾರೆಯೇ? ಯಾಕೆಂದರೆ, `ಉಗ್ರ'ನಾಗುವುದು ಸಾಮಾನ್ಯ ಅಡಿಕೆ ಕಳ್ಳ, ಕಿಸೆಗಳ್ಳ, ಮನೆಕಳ್ಳತನದಂತೆ ಅಲ್ಲವಲ್ಲ. `ಉಗ್ರ' ಎಂಬ ಪದಕ್ಕೆ `ಅಸಾಮಾನ್ಯ' ಅರ್ಥಗಳಿವೆ. ಆ ಪದಕ್ಕೆ ಕೋರೆಹಲ್ಲು, ಉಗುರು, ಬಾಹುಗಳನ್ನು ಜೋಡಿಸಲಾಗಿದೆ. ಅಲ್ಲದೇ, ಈ ದೇಶದಲ್ಲಿ ಮತ್ತು ಜಾಗತಿಕವಾಗಿಯೂ ಉಗ್ರರ ರಕ್ತದಾಹಿ ಚಟುವಟಿಕೆಗಳು ಮಾಧ್ಯಮಗಳಲ್ಲಿ ಪ್ರತಿದಿನವೆಂಬಂತೆ ಸುದ್ದಿಯಾಗುತ್ತಿವೆ. ಆದ್ದರಿಂದ ಸಮಾಜವು ಉಗ್ರರನ್ನು ಇತರ ಅಪರಾಧಿಗಳಿಂದ ಬೇರ್ಪಡಿಸಿ ನೋಡುವುದು ಅಸಹಜವೇನಲ್ಲ. ನ್ಯಾಯಾಲಯವು ಒಂದೊಮ್ಮೆ ನಿರಪರಾಧಿಗಳೆಂದು ಘೋಷಿಸಿದರೂ ವರ್ಷಗಳ ಕಾಲ ಅಪರಾಧಿಯೆಂದು ನಂಬಿದ್ದ ಮತ್ತು ಆ ಹಿನ್ನೆಲೆಯಲ್ಲಿ ಖಚಿತ ಅಭಿಪ್ರಾಯವನ್ನು ರೂಪಿಸಿಕೊಂಡಿದ್ದ ಸಮಾಜವು ಅಷ್ಟು ಸುಲಭದಲ್ಲಿ ತನ್ನ ನಿಲುವನ್ನು ಬಿಟ್ಟುಕೊಡಲು ಸಿದ್ಧವಾಗುವುದಿಲ್ಲ. ಸಮಾಜ ಅವರನ್ನು ಮುಂದೆಯೂ ಒಂದು ಹಂತದವರೆಗೆ ಶಂಕಿತವಾಗಿಯೇ ನೋಡುವುದಕ್ಕೆ ಅವಕಾಶ ಇದೆ. ಈ ಶಂಕಿತ ಭಾವನೆಯು ಅವರ ಉದ್ಯೋಗ, ಮದುವೆ, ಮಕ್ಕಳ ಶಾಲಾ ಸೇರ್ಪಡೆ ಇತ್ಯಾದಿಗಳ ಸಂದರ್ಭದಲ್ಲಿ ಕಾಣಿಸಿಕೊಳ್ಳಬಹುದು. ಅವರನ್ನು ಮತ್ತೆ ಮತ್ತೆ ಘಾಸಿಗೊಳಿಸುವ ಸಂದರ್ಭಗಳು ಸೃಷ್ಟಿಯಾಗಬಹುದು. ಸಾಮಾಜಿಕ ಅವಮಾನಗಳು ಎದುರಾಗಬಹುದು. ಬಿಡುಗಡೆಯ ಬಳಿಕ ಎದುರಾಗುವ ಇಂಥ ಸಮಸ್ಯೆಗಳಿಂದ ಅವರು ಮಾನಸಿಕವಾಗಿ ಕುಗ್ಗಿ ಹೋಗಬಹುದು. ಅಪಾಯಕಾರಿ ಹೆಜ್ಜೆಗೂ ಅವು ಕಾರಣವಾಗಬಹುದು. ಆದ್ದರಿಂದಲೇ, `ನ್ಯಾಯಕ್ಕೆ ಸಂದ ಜಯ'ದ ಒಳ-ಹೊರಗನ್ನು ಆಳ ವಿಶ್ಲೇಷಣೆಗೆ ಒಳಪಡಿಸಬೇಕಾಗಿದೆ. ನಿರಪರಾಧಿ ಯುವಕರನ್ನು ಉಗ್ರರಾಗಿಸುವ ಪೊಲೀಸರನ್ನು ಶಿಕ್ಷೆಗೊಳಪಡಿಸುವ ನ್ಯಾಯಾಲಯವು ಕಟು ಸಂದೇಶವನ್ನು ರವಾನಿಸಬೇಕಿದೆ. ಭಯೋತ್ಪಾದಕರಲ್ಲದವರನ್ನು ಭಯೋತ್ಪಾದಕರೆಂದು ಬಿಂಬಿಸುವುದೂ ಭಯೋತ್ಪಾದನೆಯಾಗುತ್ತದೆ ಎಂದು ನ್ಯಾಯಾಲಯ ಸಾರಬೇಕಿದೆ. ಇಲ್ಲದಿದ್ದರೆ ನ್ಯಾಯಕ್ಕೆ ಅರ್ಧ ಜಯವಷ್ಟೇ ಸಲ್ಲಬಹುದು.

No comments:

Post a Comment