Friday 15 January 2016

ವಿಜ್ಞಾನದ ರಾಪರ್‍ನಲ್ಲಿ ಮತ್ತೇರಿಸುವ ಸಿದ್ಧಾಂತ


      ಮೈಸೂರಿನಲ್ಲಿ ಕಳೆದವಾರ ನಡೆದಿದ್ದ `ಭಾರತೀಯ ವಿಜ್ಞಾನ ಕಾಂಗ್ರೆಸ್' ಸಭೆ ಮುಗಿದ ಮರುದಿನ ಜರ್ಮನಿಯಲ್ಲಿ ಅಡಾಲ್ಫ್ ಹಿಟ್ಲರ್‍ನಿಗೆ ಸಂಬಂಧಿಸಿದ ಪುಸ್ತಕವೊಂದು ಬಿಡುಗಡೆಯಾಯಿತು. ಹಿಟ್ಲರ್ ಸಾವಿಗೀಡಾಗಿ 70 ವರ್ಷಗಳು ಸಂದ ಬಳಿಕ ಆತನಿಗೆ ಸಂಬಂಧಿಸಿ ಬಿಡುಗಡೆಯಾದ ಪ್ರಭಾವಶಾಲಿ ಪುಸ್ತಕ ಎಂಬ ಕಾರಣಕ್ಕಾಗಿ ಜಾಗತಿಕವಾಗಿಯೇ ಅದು ಸುದ್ದಿಗೀಡಾಯಿತು. ಹಿಟ್ಲರ್‍ನ ಕುಖ್ಯಾತ ರಾಜಕೀಯ ಪ್ರಣಾಳಿಕೆಯನ್ನು ವಿವರಿಸುವ ಪುಸ್ತಕ (ಮೈನ್‍ಕ್ಯಾಂಪ್) ಇದು. ಇದರಲ್ಲಿ ಆತನ ಪ್ರಣಾಳಿಕೆಯನ್ನು ನಮೂದಿಸುವುದರ ಜೊತೆಗೇ ಆ ಪ್ರಣಾಳಿಕೆಯ ಪೊಳ್ಳುತನ, ಅರ್ಧಸತ್ಯ ಮತ್ತು ಸುಳ್ಳು ಮಾಹಿತಿಗಳನ್ನು ವಿವರಿಸುವ ಟಿಪ್ಪಣಿಗಳೂ ಇದ್ದುವು. ಇದೇ ವೇಳೆ, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಸಾಧ್ಯತೆಗಳನ್ನು ಕಂಡು ಹುಡುಕುವುದಕ್ಕೆ ವೇದಿಕೆಯಾಗಬೇಕಿದ್ದ ‘ವಿಜ್ಞಾನ ಕಾಂಗ್ರೆಸ್’ ಆ ವಿಷಯದಲ್ಲಿ ಸಂಪೂರ್ಣ ಎಡವುತ್ತಿದೆ ಎಂಬ ಟೀಕೆಗಳು ವ್ಯಕ್ತವಾದವು. ಸಂಘಪರಿವಾರದ ಕಾರ್ಯಸೂಚಿಯನ್ನು ಮಂಡಿಸುವ ಅವೈಜ್ಞಾನಿಕ ಮತ್ತು ಹಾಸ್ಯಾಸ್ಪದ ಸಭೆಗಳಾಗಿ ಅದು ಬದಲಾಗುತ್ತಿದೆ ಎಂಬ ಆರೋಪಗಳು ಬಂದುವು. ನೋಬೆಲ್ ಪ್ರಶಸ್ತಿ ವಿಜೇತ ವಿಜ್ಞಾನಿ ವಿ. ರಾಮಕೃಷ್ಣನ್ ಅಂತೂ `ಭಾರತೀಯ ವಿಜ್ಞಾನ ಕಾಂಗ್ರೆಸ್' ಅನ್ನು ಸರ್ಕಸ್ ಎಂದು ಕುಟುಕಿದರು. ‘ಇನ್ನೆಂದೂ ಆ ಸಭೆಯಲ್ಲಿ ಭಾಗಿವಹಿಸಲಾರೆ’ ಎಂದು ಘೋಷಿಸಿದರು. ಮೈಸೂರಿನ ಸಭೆಯಲ್ಲಿ, ‘ಶಂಖ ಊದುವುದರಿಂದ ಆರೋಗ್ಯ ಮತ್ತು ಮಾನಸಿಕ ನೆಮ್ಮದಿಯನ್ನು ಹೇಗೆ ಪಡೆಯಬಹುದು’ ಎಂಬ ಬಗ್ಗೆ ಪ್ರಬಂಧ ಮಂಡಿಸಲಾಗಿತ್ತು. ಇನ್ನೊಂದು ಪ್ರಬಂಧ, ‘ಶಿವನನ್ನು ಅಪ್ರತಿಮ ಪರಿಸರವಾದಿ’ಯೆಂದಿತು. ಕಳೆದ ವರ್ಷ ಮುಂಬೈನಲ್ಲಿ ನಡೆದ ವಿಜ್ಞಾನ ಕಾಂಗ್ರೆಸ್‍ನ ಸಭೆಯಂತೂ ಸಾರ್ವಜನಿಕವಾಗಿ ತೀವ್ರ ಚರ್ಚೆಗೆ ಒಳಗಾಗಿತ್ತು. ‘ಸಂಸ್ಕ್ರತದ ಮೂಲಕ ಪುರಾತನ ವಿಜ್ಞಾನ’ ಎಂಬ ಪ್ರಬಂಧದಲ್ಲಿ. ‘ವೇದ ಕಾಲದಲ್ಲಿಯೇ ಭಾರತೀಯರು ವಿಮಾನವನ್ನು ಸಂಶೋಧಿಸಿ ಹಾರಿಸಿದ್ದರು’ ಎಂದು ವಾದಿಸಲಾಗಿತ್ತು.
      ನಿಜವಾಗಿ, ಜರ್ಮನಿಯಲ್ಲಿ ಫ್ಯಾಸಿಸ್ಟ್ ಮತ್ತು ಮನುಷ್ಯ ವಿರೋಧಿ ಸಿದ್ಧಾಂತದ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನಗಳು ನಡೆಯುತ್ತಿರುವಾಗ ಇತ್ತ ಭಾರತದಲ್ಲಿ ಐತಿಹ್ಯ, ಪುರಾಣಗಳನ್ನು ವಿಜ್ಞಾನದ ರಾಪರ್‍ನಲ್ಲಿ ಕಟ್ಟಿಕೊಡುವ ಪ್ರಯತ್ನಗಳು ನಡೆಯುತ್ತಿವೆ. ಅಂದಹಾಗೆ, ಹಿಟ್ಲರ್‍ನ ಸಿದ್ಧಾಂತದಿಂದ ಸಂತ್ರಸ್ತರಾದದ್ದು ಯಹೂದಿಗಳು ಮಾತ್ರವಲ್ಲ, ಸ್ವತಃ ಆತನ ಬೆಂಬಲಿಗರೇ ಅದರ ಬಲಿಪಶುಗಳಾದರು. ಹಿಟ್ಲರ್ ತನ್ನ ಕಾರ್ಯಸೂಚಿಯನ್ನು ಪ್ರಚಾರ ಮಾಡುವುದಕ್ಕೆ ಲಭ್ಯವಿರುವ ಸಕಲ ಮಾಧ್ಯಮಗಳನ್ನೂ ಬಳಸಿಕೊಂಡ. ಅದಕ್ಕಾಗಿ ವೇದಿಕೆಗಳನ್ನು ಸೃಷ್ಟಿಸಿದ. ಆತನ ಪ್ರಣಾಳಿಕೆಯನ್ನು ಪ್ರಶ್ನಿಸಬಹುದಾದ ಎಲ್ಲವನ್ನೂ ನಾಶಪಡಿಸಿದ. ವಿಜ್ಞಾನ, ಕಲೆ, ಸಾಹಿತ್ಯ, ಖಗೋಳಶಾಸ್ತ್ರ ಸಹಿತ ಅಸಂಖ್ಯಾತ ಕೃತಿಗಳನ್ನು ಸುಟ್ಟು ಹಾಕಿ ಜನರು ಬೌದ್ಧಿಕವಾಗಿ ಬೆಳೆಯದಂತೆ ನೋಡಿಕೊಂಡ. ಶಾಲೆ, ಕಾಲೇಜು, ಸಾಹಿತ್ಯ ಗೋಷ್ಠಿಗಳು, ವೈಜ್ಞಾನಿಕ ಸಭೆಗಳು ಎಲ್ಲದರಲ್ಲೂ ಹಿಟ್ಲರ್‍ನ ಪ್ರಭಾವವಿತ್ತು. ಆತನ ಸಿದ್ಧಾಂತವನ್ನು ಬೆಂಬಲಿಸುವ, ಅದನ್ನು ಅತಿಶಯವಾಗಿ ಹೊಗಳುವ ಮತ್ತು ಅದುವೇ ಶ್ರೇಷ್ಠ ಎಂದು ವಾದಿಸುವ ವಾತಾವರಣವನ್ನು ಎಲ್ಲ ಕಡೆ ಬೆಳೆಸಿದ. ಭ್ರಮೆಯನ್ನು ಸೃಷ್ಟಿಸಿ ಅದನ್ನು ಎಲ್ಲ ಕಡೆ ಹಂಚಿದ. ಅದರ ಪರಿಣಾಮ ಎಷ್ಟು ಭೀಕರವಾಗಿತ್ತೆಂದರೆ, ಸಮಾಜದ ಆಲೋಚನಾ ರೀತಿಯೇ ಒಂದು ಹಂತದ ವರೆಗೆ ಬದಲಾಯಿತು. ‘ನಾವು’ ಮತ್ತು ‘ಅವರು’ ಅನ್ನುವ ವಿಭಜನೆಗೆ ಅದು ಪ್ರೇರಣೆ ನೀಡಿತು. `ಅವರು' ನಮ್ಮ ಜೊತೆ ಬದುಕಲು ಅನರ್ಹರು ಮತ್ತು ಸಾವಿಗೆ ಅರ್ಹರು ಎಂದು ಭಾವಿಸುವ ಗುಂಪನ್ನು ಅದು ತಯಾರುಗೊಳಿಸಿತು. ಅಂತಿಮವಾಗಿ ಆ ವಿಚಾರಧಾರೆ `ಅವರಿಗೆ' ಮಾತ್ರ ಮಾರಕವಾದದ್ದಲ್ಲ. `ಇವರನ್ನೂ' ಅದು ಆಹುತಿ ಪಡೆಯಿತು. ಎರಡನೇ ವಿಶ್ವ ಯುದ್ಧವು ಜರ್ಮನಿ, ಜಪಾನ್ ಸಹಿತ ವಿವಿಧ ರಾಷ್ಟ್ರಗಳ ಮೇಲೆ ಮಾಡಿರುವ ಅನಾಹುತಗಳನ್ನು ನೋಡಿದರೆ ಹಿಟ್ಲರ್‍ನ ವಿಚಾರಧಾರೆ ಎಷ್ಟು ಅನಾಹುತಕಾರಿ ಎಂಬುದು ಸ್ಪಷ್ಟವಾಗುತ್ತದೆ. ಇವತ್ತು ಪುನಃ ಜರ್ಮನಿಯಲ್ಲಿ ಆ ವಿಷಕಾರಿ ಸಿದ್ಧಾಂತ ನಿಧಾನಕ್ಕೆ ರೆಕ್ಕೆ ಬಿಚ್ಚಿಕೊಳ್ಳುತ್ತಿದೆ ಎಂಬ ಸುದ್ದಿ ಲಭ್ಯವಾಗುತ್ತಿರುವ ಹಿನ್ನೆಲೆಯಲ್ಲಿ ಆ ಪುಸ್ತಕ ಬಿಡುಗಡೆ ಮಹತ್ವ ಪಡೆಯುತ್ತದೆ. ಹಿಟ್ಲರ್ ವಿಚಾರಧಾರೆ ಮತ್ತೊಮ್ಮೆ ಜನಪ್ರಿಯವಾಗದಿರಲಿ ಎಂಬ ಕಳಕಳಿಯೊಂದೇ ಆ ಪುಸ್ತಕ ಬಿಡುಗಡೆಯ ಹಿನ್ನೆಲೆಯಲ್ಲಿದೆ ಎಂದೇ ಹೇಳಬೇಕಾಗುತ್ತದೆ. ಆದ್ದರಿಂದಲೇ ಆ ಪುಸ್ತಕಕ್ಕೆ ಜರ್ಮನಿಯು ನಿಷೇಧವನ್ನು ಹೇರಿಲ್ಲ. ಆದರೆ, ಭಾರತದಲ್ಲಿ ಅದಕ್ಕೆ ತದ್ವಿರುದ್ಧವಾದ ಬೆಳವಣಿಗೆಗಳು ನಡೆಯುತ್ತಿವೆ. ಕಲೆ, ಸಾಹಿತ್ಯ, ಶಿಕ್ಷಣ, ಸಿನಿಮಾ, ವಿಜ್ಞಾನ ಸಹಿತ ಎಲ್ಲದರಲ್ಲೂ ನಿರ್ದಿಷ್ಟ ವಿಚಾರಧಾರೆಯಲ್ಲಿ ತುರುಕುವ ಉಮೇದು ಕಾಣಿಸುತ್ತಿದೆ. ಅದರಲ್ಲೂ ಭಾರತೀಯ ವಿಜ್ಞಾನ ಕಾಂಗ್ರೆಸ್‍ಗೆ 103 ವರ್ಷಗಳ ಭವ್ಯ ಇತಿಹಾಸವಿದೆ. ಅದು  ಪುರಾಣ, ಐತಿಹ್ಯಗಳನ್ನು ಚರ್ಚಿಸುವ ವೇದಿಕೆಯಿಲ್ಲ. ಆಚಾರ್ಯ ಪಿ.ಸಿ.ರೇ, ಸರ್ ಜೆ.ಸಿ. ಬೋಸ್, ಸಿ.ವಿ. ರಾಮನ್, ಹೋಮಿ ಜಹಾಂಗೀರ್ ಬಾಬಾ, ಎಂ.ಎಸ್. ಸ್ವಾಮಿನಾಥನ್, ಡಾ| ಕಸ್ತೂರಿ ರಂಗನ್‍ರಂಥ ಪ್ರಭಾವಿ ವಿಜ್ಞಾನಿಗಳು ಈ ಕಾಂಗ್ರೆಸ್‍ನ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ. ವೈಜ್ಞಾನಿಕವಾಗಿ ಈ ದೇಶವನ್ನು ಬೆಳೆಸುವ ಪ್ರಯತ್ನ ನಡೆಸಿದ್ದಾರೆ. ಅವರು ಐಹಿಹ್ಯಗಳಿಗೆ ವಿಜ್ಞಾನದ ಲೇಪವನ್ನು ತೊಡಿಸುವುದಕ್ಕೆ ಅವಕಾಶ ಕೊಟ್ಟಿಲ್ಲ. ಕಲ್ಪಿತ ಮತ್ತು ಭ್ರಮಾಧೀತ ವಿಚಾರಧಾರೆಯನ್ನು ವಿಜ್ಞಾನದೊಳಕ್ಕೆ ತರಲು ಅವಕಾಶ ಮಾಡಿಕೊಟ್ಟಿಲ್ಲ. ಬಹುಶಃ ಇವತ್ತು ಈ ದೇಶವು ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಜಗತ್ತಿನ ಪ್ರಮುಖ 5 ರಾಷ್ಟ್ರಗಳಲ್ಲಿ ಒಂದಾಗಿ ಗುರುತಿಸಿಕೊಂಡಿದ್ದರೆ ಅದಕ್ಕೆ ಅವರ ನಿಲುವುಗಳೇ ಕಾರಣವಾಗಿದ್ದವು. ದುರಂತ ಏನೆಂದರೆ, ಇವತ್ತು ರಾಹು-ಕೇತುಗಳು, ಶುಭ-ಅಶುಭಗಳು ಸಂಶೋಧನಾ ಕೊಠಡಿಯೊಳಗೂ ನುಸುಳಿ ಬಿಟ್ಟಿವೆ. ಶುಭ ಘಳಿಗೆಯನ್ನು ನೋಡಿ ಉಪಗ್ರಹವನ್ನು ಉಡಾಯಿಸುವ ಚಿಂತಾಜನಕ ಸ್ಥಿತಿಗೆ ವೈಜ್ಞಾನಿಕ ಮನೋಭಾವ ಕುಸಿದು ಹೋಗುತ್ತಿದೆ. ನಿರ್ದಿಷ್ಟ ವಿಚಾರಾಧಾರೆಯನ್ನು ವಿಜ್ಞಾನದ ಹೆಸರಲ್ಲಿ ಒಪ್ಪಿಸುವ ತಂತ್ರಗಳು ಕಾಣಿಸುತ್ತಿವೆ. ಇದರ ಅಂತಿಮ ಫಲಿತಾಂಶ ಏನಾಗುತ್ತದೆಂದರೆ, ಐತಿಹ್ಯವೇ ವಿಜ್ಞಾನವಾಗಿ ಬಿಡುತ್ತದೆ. ಐತಿಹ್ಯವನ್ನು ವಿಜ್ಞಾನವೆಂದು ವಿಜ್ಞಾನಿಗಳೇ ವಾದಿಸತೊಡಗುವ ಸಂದರ್ಭಗಳು ಸೃಷ್ಟಿಯಾಗ ತೊಡಗುತ್ತವೆ. ಅದೇ ರೀತಿ, ಕಲೆ, ಸಾಹಿತ್ಯ, ಸಂಗೀತ, ಸಿನಿಮಾ ಸಹಿತ ಸರ್ವ ಕ್ಷೇತ್ರಗಳ ಮೇಲೂ ಈ ಐತಿಹ್ಯಾಧಾರಿತ ವಿಚಾರಧಾರೆಗಳು ಪ್ರಾಬಲ್ಯ ಪಡೆಯುತ್ತಾ, ಅದುವೇ `ಶ್ರೇಷ್ಠ'ವೆಂಬ ಭ್ರಮೆಯೊಂದು ಉತ್ಪತ್ತಿಯಾಗುತ್ತದೆ. ಅಂದಹಾಗೆ, ಐತಿಹ್ಯಗಳಿಗೆ ಯಥಾಸ್ಥಿತಿ ಎಂಬುದಿಲ್ಲ. ಅದನ್ನು ಸಂದರ್ಭಕ್ಕೆ ತಕ್ಕಂತೆ ಉತ್ಪಾದಿಸಬಹುದು. ನೀರಿನಿಂದ ಕಾರನ್ನು ಓಡಿಸುವ ತಂತ್ರಜ್ಞಾನವನ್ನು ಯುರೋಪಿನ ವಿಜ್ಞಾನಿಗಳು ಸಂಶೋಧಿಸಿದರೆ ಈ ಐತಿಹ್ಯವು ಅದನ್ನೂ
ವಿ. ರಾಮಕೃಷ್ಣನ್
ತನ್ನದಾಗಿಸಿಕೊಳ್ಳಬಹುದು. ಎಷ್ಟೋ ಸಾವಿರ ವರ್ಷಗಳ ಹಿಂದೆ ಇಂತಿಂಥ ಯುಗದಲ್ಲಿ ಅದರ ಸಂಶೋಧನೆ ನಡೆದಿತ್ತು ಎಂದು ಹೇಳಬಹುದು. ಯಾಕೆಂದರೆ, ಹಾಗೆ ಹೇಳುವುದಕ್ಕೆ ಪುರಾವೆಗಳ ಅಗತ್ಯವಿರುವುದಿಲ್ಲ. ಈ ಬಗೆಯ ‘ನಾಗರಿಕ ಶ್ರೇಷ್ಠತೆ’, ಸಂಸ್ಕøತಿ ಶ್ರೇಷ್ಠತೆಯ ಅಮಲನ್ನು ತುಂಬಿಸಿಯೇ ಹಿಟ್ಲರ್ ಒಂದು ಸಮಾಜವನ್ನೇ ನಿರ್ಮೂಲನ ಮಾಡಿದ್ದು. ಆರ್ಯ ಸಂಸ್ಕ್ರತಿಯನ್ನು ಸರ್ವಶ್ರೇಷ್ಠವೆಂದು ಬಿಂಬಿಸಿ ಅನಾರ್ಯರನ್ನು ಕಾಲಕಸವಾಗಿ ಕಂಡಿದ್ದು. ಭಾರತೀಯ ವಿಜ್ಞಾನ ಕಾಂಗ್ರೆಸ್‍ನಲ್ಲಿ ಮಂಡಿತವಾದ ಪ್ರಬಂಧಗಳಲ್ಲಿ ಮತ್ತು ಅದು ಪ್ರತಿಪಾದಿಸುವ ಸಂಗತಿಗಳಲ್ಲಿ ಈ `ಶ್ರೇಷ್ಠತೆ'ಯ ರೋಗ ಲಕ್ಷಣಗಳೇ ಕಾಣಿಸುತ್ತಿವೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಬೆಂಬಲಿಗ ಪರಿವಾರವು ಈ ಮೊದಲು ಪ್ರತಿಪಾದಿಸಿದ್ದ ಮತ್ತು ಈಗ ಪ್ರತಿಪಾದಿಸುತ್ತಿರುವ ವಿಚಾರಗಳನ್ನೇ ವಿಜ್ಞಾನವೆಂದು ವಿಜ್ಞಾನ ಕಾಂಗ್ರೆಸ್‍ನಲ್ಲೂ ಹೇಳಲಾಗುತ್ತಿದೆ. ಈ ಬೆಳವಣಿಗೆ ಅಪಾಯಕಾರಿ. ಹಿಟ್ಲರ್‍ನ ವಿಚಾರಧಾರೆಯನ್ನು ಪ್ರಶ್ನಿಸುವ ಮತ್ತು ಅದರ ಸುಳ್ಳುಗಳನ್ನು ಜನರ ಮುಂದಿಡುವ ಪ್ರಯತ್ನಗಳು ಜರ್ಮನಿಯಲ್ಲಿ ನಡೆಯುತ್ತಿರುವಾಗ ನಮ್ಮಲ್ಲಿ ಅದನ್ನೇ ಪ್ರೋತ್ಸಾಹಿಸಿ ಸರ್ವಮಾನ್ಯಗೊಳಿಸುವ ಬೆಳವಣಿಗೆಗಳು ನಡೆಯುತ್ತಿರುವುದು ಖಂಡನಾರ್ಹ.

No comments:

Post a Comment