Friday 15 January 2016

ಕಲ್ಲುಗಳ ಮರೆಯಲ್ಲಿ 'ಮಾತು ಮುರಿದವರ' ಆಟ

       ಅಯೋಧ್ಯೆಯಲ್ಲಿ ಸದ್ಯ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಪ್ರಸಿದ್ಧ ಇತಿಹಾಸಕಾರರಾದ ಇರ್ಫಾನ್ ಹಬೀಬ್, ಆದಿತ್ಯ ಮುಖರ್ಜಿ, ಶಿರಿನ್ ಮೂಸವಿ, ಸಾಹು ಇಂದುಬಂಗ ಮುಂತಾದವರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. ಅಯೋಧ್ಯೆಯ ಬೆಳವಣಿಗೆಯು ಇನ್ನೊಂದು ಬಾರಿ `ಕಾನೂನಿನ ಹತ್ಯೆ' ನಡೆಯುವ ಸೂಚನೆಯನ್ನು ನೀಡುತ್ತಿದೆ ಎಂದು ಅವರು ಹೇಳಿದ್ದಾರೆ. ಈ ಹೇಳಿಕೆಯ ಮರುದಿನವೇ, ‘ತಮಗೂ ಅಯೋಧ್ಯೆಯಲ್ಲಿನ ಬೆಳವಣಿಗೆಗೂ ಸಂಬಂಧ ಇಲ್ಲ’ ಎಂದು ಬಿಜೆಪಿ ಸ್ಪಷ್ಟಪಡಿಸಿದೆ. ಆದರೆ ಬಿಜೆಪಿ ಹೇಳಿಕೆಯನ್ನು ಅಷ್ಟು ಸುಲಭವಾಗಿ ನಂಬುವ ಸ್ಥಿತಿಯಲ್ಲಿ ಯಾರೂ ಇಲ್ಲ. ಯಾಕೆಂದರೆ, ರಾಮಮಂದಿರಕ್ಕೆ ಸಂಬಂಧಿಸಿ `ಮಾತು ಮುರಿದ' (ಮುಚ್ಚಳಿಕೆ ಉಲ್ಲಂಘಿಸಿದ)ಇತಿಹಾಸವೊಂದು ಬಿಜೆಪಿಗಿದೆ. ಅಲ್ಲದೆ, 2017ರಲ್ಲಿ ಉತ್ತರ ಪ್ರದೇಶದ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಆದ್ದರಿಂದಲೇ, ಅಯೋಧ್ಯೆಯ ರಾಮ್ ಸೇವಕ್ ಪುರಮ್‍ನಲ್ಲಿ ತಂದಿರಿಸಲಾಗುತ್ತಿರುವ ಕಲ್ಲುಗಳನ್ನು ಅನುಮಾನದಿಂದ ನೋಡಬೇಕಾಗುತ್ತದೆ. ರಾಮಮಂದಿರವನ್ನು ಮತ್ತೊಮ್ಮೆ ಚುನಾವಣಾ ಇಶ್ಯೂ ಆಗಿಸುವ ಸಂಚೊಂದು ಇದರ ಹಿಂದೆ ಅಡಗಿರುವಂತೆ ತೋರುತ್ತಿದೆ. ಈಗಾಗಲೇ ಮಹಂತ ನೃತ್ಯ ಗೋಪಾಲ್‍ದಾಸ್ ಅವರು ಈ ಕಲ್ಲುಗಳಿಗೆ ಶಿಲಾಪೂಜೆ ನೆರವೇರಿಸಿದ್ದಾರೆ. ಲಾರಿಗಳಲ್ಲಿ ಕಲ್ಲುಗಳನ್ನು ತಂದು ಅಲ್ಲಿ ಸುರಿಯಲಾಗುತ್ತಿದೆ. ಅಂದಹಾಗೆ, ಬಿಜೆಪಿ ಈ ಬೆಳವಣಿಗೆಯಿಂದ ಅಂತರ ಕಾಯ್ದುಕೊಂಡಷ್ಟೂ ಅದರ ಪಾತ್ರದ ಬಗ್ಗೆ ಅನುಮಾನಗಳು ಬಲಗೊಳ್ಳುತ್ತಲೇ ಹೋಗುತ್ತವೆ. ನಿಜವಾಗಿ, ಈ ದೇಶದಲ್ಲಿ ಬಾಬರಿ ಮಸೀದಿ ವಿವಾದವನ್ನು ರಾಜಕೀಯವಾಗಿ ಬಳಸಿಕೊಂಡದ್ದು ಬಿಜೆಪಿ. ಅಡ್ವಾಣಿ ರಥಯಾತ್ರೆ ನಡೆಸಿದರು. 1992ರಲ್ಲಿ ಬಾಬರಿ ಮಸೀದಿಯನ್ನು ಉರುಳಿಸುವುದಕ್ಕೆ ಅವರು ಒಂದು ಹಂತದವರೆಗೆ ನೇತೃತ್ವ ನೀಡಿದರು. ಈ ವಿವಾದವನ್ನು ಬಳಸಿಕೊಂಡು ದೇಶದೆಲ್ಲೆಡೆ ಭಾವನಾತ್ಮಕ ವಾತಾವರಣವೊಂದನ್ನು ನಿರ್ಮಿಸಲು ಬಿಜೆಪಿ ಆವತ್ತು ಭಾಗಶಃ ಯಶಸ್ವಿಯಾಗಿತ್ತು. ಬಾಬರಿ ಮಸೀದಿಯನ್ನು ಎತ್ತಿಕೊಂಡು ಭಾರತೀಯರನ್ನು ಹಿಂದೂಗಳು ಮತ್ತು ಮುಸ್ಲಿಮರು ಎಂದು ಬಿಜೆಪಿ ವಿಭಜಿಸಿ ಬಿಟ್ಟಿತು. ಇಟ್ಟಿಗೆಗಳ ಸಂಗ್ರಹವಾಯಿತು. ಮನೆ ಮನೆಗೆ ತೆರಳುವ ಅಭಿಯಾನಗಳು ನಡೆದುವು. ಒಂದು ಕಡೆ, ಈ ಎಲ್ಲ ಬೆಳವಣಿಗೆಗಳು ನಡೆಯುತ್ತಿರುವಾಗಲೇ ಇನ್ನೊಂದು ಕಡೆ ನ್ಯಾಯಾಲಯವು ವಿವಾದಿತ ಪ್ರದೇಶದಲ್ಲಿ ಯಥಾಸ್ಥಿತಿ ಕಾಪಾಡಬೇಕೆಂದು ಆದೇಶಿಸಿತು. ಬಾಬರಿ ಮಸೀದಿಗೆ ಯಾವ ಹಾನಿಯೂ ತಟ್ಟುವುದಿಲ್ಲವೆಂಬ ಬಗ್ಗೆ ಅದು ಸಂಬಂಧಿತರಿಂದ ಮುಚ್ಚಳಿಕೆಯನ್ನು ಪಡೆದುಕೊಂಡಿತು. ಹೀಗೆ, ಬಿಜೆಪಿಯ ರಾಮಮಂದಿರ ಚಳವಳಿ ಮತ್ತು ಕೋರ್ಟಿನ ನಿಲುವುಗಳು 1992 ಡಿ. 6ರಂದು ಮುಖಾಮುಖಿಯಾಗಿ ಮುಚ್ಚಳಿಕೆಯನ್ನೇ ಉಲ್ಲಂಘಿಸುವ ಮೂಲಕ ಕೊನೆಗೊಂಡಿತು. ಅಂದಿನಿಂದ ನ್ಯಾಯಾಲಯದಲ್ಲಿ ಈ ಪ್ರಕರಣ ವಿಚಾರಣೆಗೆ ಒಳಗಾಗುತ್ತಲೇ ಇದೆ. ರಾಮಮಂದಿರ ಚಳವಳಿಯ ರೂವಾರಿಗಳು ಯಾರು, ಬಾಬರಿ ಮಸೀದಿಯನ್ನು ಉರುಳಿಸುವಲ್ಲಿ ಯಾರ್ಯಾರು ಯಾವ್ಯಾವ ಪಾತ್ರವನ್ನು ನಿಭಾಯಿಸಿದ್ದಾರೆ, ಕಾನೂನನ್ನೇ ಕೊಲೆಗೈಯುವ ಕೃತ್ಯದಲ್ಲಿ ಯಾರೆಲ್ಲ ಭಾಗಿಯಾಗಿದ್ದಾರೆ ಎಂಬುದೆಲ್ಲ ಸ್ಪಟಿಕದಷ್ಟೇ ಸ್ಪಷ್ಟವಾಗಿದ್ದರೂ ಈ ವರೆಗೆ ಯಾರೊಬ್ಬರನ್ನು ಮುಟ್ಟಲೂ ನ್ಯಾಯಾಲಯಕ್ಕೆ ಸಾಧ್ಯವಾಗಿಲ್ಲ. ವಿಚಾರಣೆಯಂತೂ ಇನ್ನೂ ಪ್ರಾಥಮಿಕ ಹಂತವನ್ನೇ ದಾಟದಷ್ಟು ದಾರುಣ ಸ್ಥಿತಿಯಲ್ಲಿದೆ. ಹೀಗಿರುತ್ತಾ, ಉತ್ತರ ಪ್ರದೇಶದ ದಾದ್ರಿಯಲ್ಲಿ ಗೋ ಮಾಂಸದ ನೆಪದಲ್ಲಿ ಅಖ್ಲಾಕ್‍ನನ್ನು ಥಳಿಸಿ ಕೊಲೆಗೈದ ಘಟನೆಯ ಮುಖ್ಯ ಆರೋಪಿ ವಿಶಾಲ್ ರಾಣಾನ ತಂದೆ ಸಂಜಯ್ ರಾಣಾ ಕಳೆದ ವಾರ ಮಾತಾಡಿದ್ದಾರೆ. 1990ರ ಕರಸೇವೆಯಲ್ಲಿ ತಾನು ಭಾಗಿಯಾಗಿದ್ದೆ ಎಂದು ಈ ಬಿಜೆಪಿ ನಾಯಕ ಹೇಳಿಕೊಂಡಿದ್ದಾರೆ. ತಾನು ಒಂದು ವಾರ ಜೈಲಲ್ಲಿದ್ದುದನ್ನೂ ಪೆÇಲೀಸರ ದೌರ್ಜನ್ಯಗಳನ್ನೂ ಅವರು ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದಾರೆ. ಅಯೋಧ್ಯೆಯಲ್ಲಿ ಕಲ್ಲುಗಳು ಸಂಗ್ರಹವಾಗುತ್ತಿರುವ ಈ ಹೊತ್ತಿನಲ್ಲಿ  ‘ಕರಸೇವಕರು’ ತಮ್ಮ ಹಳೆಯ ದಿನಗಳನ್ನು ಮಾಧ್ಯಮಗಳ ಮೂಲಕ ಮೆಲುಕು ಹಾಕುವುದು ಏನನ್ನು ಸೂಚಿಸುತ್ತಿದೆ? ಮಗ-ಗೋ ಮಾಂಸದ ಹೆಸರಲ್ಲಿ ಕಾನೂನನ್ನು ಕೈಗೆತ್ತಿಕೊಂಡವನಾದರೆ ಅಪ್ಪ- ರಾಮಮಂದಿರದ ಹೆಸರಲ್ಲಿ ಕಾನೂನನ್ನು ಉಲ್ಲಂಘಿಸಿದವ. ವಿಶೇಷವೇನೆಂದರೆ ಈ ಎರಡಕ್ಕೂ ಒಂದು ಭಾವನಾತ್ಮಕ ಮುಖವಿದೆ. ಇಬ್ಬರೂ ಕಾನೂನನ್ನು ಉಲ್ಲಂಘಿಸಿದ್ದರೂ ಮತ್ತು ಎರಡೂ ಶಿಕ್ಷಾರ್ಹ ಅಪರಾಧವೇ ಆಗಿದ್ದರೂ ಅದನ್ನೇ ಹೆಮ್ಮೆಯೆಂದು ಕೊಂಡಾಡುವ ವೈಪರೀತ್ಯವೊಂದು ಈ ದೇಶದಲ್ಲಿ ನಡೆಯುತ್ತಿದೆ. ಬಾಬರಿ ಮಸೀದಿಯನ್ನು ಉರುಳಿಸಿದಾಗಲೂ ಈ ವೈಪರೀತ್ಯ ಕಂಡುಬಂದಿತ್ತು. ಅದರಲ್ಲಿ ಭಾಗಿಯಾದವರನ್ನು ಧರ್ಮ ರಕ್ಷಕರಂತೆ ಬಿಂಬಿಸಲಾಗಿತ್ತು. ದಾದ್ರಿ ಘಟನೆಯಲ್ಲೂ ಇಂತಹದ್ದೊಂದು ಅಸಂಬದ್ಧ ನಡೆಯಿತು. ಕೊಲೆಗಾರರನ್ನೇ ಮೆಚ್ಚಿಕೊಳ್ಳುವ ಭಾವನಾತ್ಮಕ ಧ್ರುವೀಕರಣ ಸೃಷ್ಟಿಯಾಯಿತು. ಆದ್ದರಿಂದಲೇ ಅಯೋಧ್ಯೆಯಲ್ಲಿ ಕಲ್ಲುಗಳು ದಾಸ್ತಾನುಗೊಳ್ಳುತ್ತಿರುವುದನ್ನೂ ಸಂಜಯ್ ರಾಣಾ ತನ್ನನ್ನು ಕರಸೇವಕ ಎಂದು ಸ್ಮರಿಸಿಕೊಳ್ಳುತ್ತಿರುವುದನ್ನೂ ಪರಸ್ಪರ ಹೋಲಿಸಿಕೊಂಡು ನೋಡಬೇಕಾಗುತ್ತದೆ. ಉತ್ತರ ಪ್ರದೇಶದ ವಿಧಾನ ಸಭೆಗೆ ಚುನಾವಣೆ ನಡೆಯಲು ಒಂದು ವರ್ಷ ಉಳಿದಿರುವಾಗ ಹಳೆಯ ಕರಸೇವಕರು ಮಾತಾಡ ತೊಡಗಿದ್ದಾರೆ. ಈ ಮಾತುಗಾರಿಕೆ ಸಂಜಯ್ ರಾಣಾರಿಗೆ ಮಾತ್ರ ಸೀಮಿತಗೊಳ್ಳುತ್ತದೆ ಎಂದು ಭಾವಿಸಬೇಕಾಗಿಲ್ಲ. ಉತ್ತರ ಪ್ರದೇಶದಲ್ಲಿ ರಾಮಮಂದಿರ ವಿಷಯವು ಫಲ ನೀಡಬಹುದೆಂದು ಬಿಜೆಪಿ ಮತ್ತು ಅದರ ಪರಿವಾರಕ್ಕೆ ಸ್ಪಷ್ಟವಾದರೆ ಅಂದಿನ ಅನುಭಗಳನ್ನು ಹಂಚಿಕೊಳ್ಳುವ ‘ಕರಸೇವಾ ಸ್ಮರಣೆಗಳು’ ಮುಂದಿನ ದಿನಗಳಲ್ಲಿ ಧಾರಾಳ ಬರಬಹುದು. ಜನರನ್ನು ಭಾವನಾತ್ಮಕವಾಗಿ ಮಣಿಸುವ ಶ್ರಮಗಳು ನಡೆಯಬಹುದು. ಅದರ ಭಾಗವಾಗಿಯೇ ಇದೀಗ ಕರ ಸೇವಕ್ ಪುರಂನಲ್ಲಿ ಕಲ್ಲುಗಳನ್ನು ದಾಸ್ತಾನು ಮಾಡಲಾಗುತ್ತಿದೆ. ಮಾತ್ರವಲ್ಲ, ಈ ಕುರಿತಂತೆ ಮಾಧ್ಯಮಗಳಲ್ಲಿ ಸುದ್ದಿ ಪ್ರಕಟವಾಗುವಂತೆಯೂ ನೋಡಿಕೊಳ್ಳಲಾಗುತ್ತಿದೆ. ಇದರಿಂದ ಆಗುವ ಲಾಭ ಏನೆಂದರೆ, ತಾವು ರಾಮಮಂದಿರವನ್ನು ಮರೆತಿಲ್ಲ ಎಂಬ ಸೂಚನೆಯನ್ನು ಜನರಿಗೆ ಕೊಡತ್ತಲಿರುವುದು. ಅದಕ್ಕಾಗಿ ಭಾರೀ ತಯಾರಿಯಲ್ಲಿದ್ದೇವೆ ಎಂಬ ಸಂದೇಶವನ್ನು ರವಾನಿಸುತ್ತಲಿರುವುದು. ಇದು ಜನರನ್ನು ಸೆಳೆಯುವ ಸೂಚನೆ ಕೊಟ್ಟರೆ ಸ್ವತಃ ಬಿಜೆಪಿಯೇ ಇದನ್ನು ಚುನಾವಣಾ ಇಶ್ಯೂ ಆಗುವಂತೆ ನೋಡಿಕೊಳ್ಳಬಹುದು. ಹಾಗಂತ, ಬಿಜೆಪಿ ಜನರಿಗೆ ಮೋಸ ಮಾಡಿಲ್ಲವೆಂದು ಚುನಾವಣೆಯ ಸಂದರ್ಭದಲ್ಲಿ ವಾದಿಸಬೇಕಾದರೆ ಕಲ್ಲುಗಳಾದರೂ ಇರಬೇಕಾದ ಅಗತ್ಯವಿದೆ. ಒಂದು ವೇಳೆ, ಜನರ ಮೇಲೆ ಈ ‘ಕಲ್ಲು ದಾಸ್ತಾನು’ ಮತ್ತು ‘ಕರಸೇವಾ ಸ್ಮರಣೆಗಳು’ ಪರಿಣಾಮ ಬೀರದಿದ್ದರೆ ಈ ಬೆಳವಣಿಗೆಯಿಂದ ಬಿಜೆಪಿ ಅಂತರವನ್ನು ಕಾಯ್ದುಕೊಳ್ಳಬಹುದು. ಬಹುಶಃ, ಇಂಥದ್ದೊಂದು ತಂತ್ರದ ಭಾಗವಾಗಿಯೇ ಅಯೋಧ್ಯೆಯಲ್ಲಿ ಕಲ್ಲುಗಳ ದಾಸ್ತಾನು ಆಗುತ್ತಿದೆ ಎನ್ನಬೇಕಾಗುತ್ತದೆ.
       ಅಷ್ಟಕ್ಕೂ, ಬಾಬರಿ ಮಸೀದಿಗೆ ಇರುವ ಪುರಾತನ ಹಿನ್ನಲೆ ಮತ್ತು ಅದನ್ನು ಸುತ್ತಿಕೊಂಡಿರುವ ವಿವಾದಗಳೇನೇ ಇರಲಿ, ಎಲ್ಲವೂ ಕಾನೂನಿನ ಮೂಲಕ ಇತ್ಯರ್ಥಗೊಳ್ಳಬೇಕೇ ಹೊರತು ಭುಜಬಲದಿಂದಲ್ಲ. ರಾಮಮಂದಿರ ಚಳವಳಿಯು ಬಿಜೆಪಿಗೆ ಒಂದು ಹಂತದವರೆಗೆ ರಾಜಕೀಯವಾಗಿ ಲಾಭ ತಂದುಕೊಟ್ಟಿರಬಹುದು. ಆದರೆ ಆ ಚಳವಳಿಯಿಂದಾಗಿ ಆದ ಜೀವಹಾನಿ, ನ್ಯಾಯಹಾನಿಯು ಬಿಜೆಪಿಯ ಮೇಲೆ ಅಳಿಸಲಾಗದ ಕಳಂಕವನ್ನು ಉಂಟುಮಾಡಿದೆÉ. ಆ ಕಳಂಕ ಶಾಶ್ವತವಾದುದು. ತಾತ್ಕಾಲಿಕವಾದ ಅಧಿಕಾರಕ್ಕಾಗಿ ಶಾಶ್ವತವಾದ ಕಳಂಕವನ್ನು ಮೆತ್ತಿಕೊಂಡ ಬಿಜೆಪಿ ಮತ್ತೆ ಅದೇ ತಪ್ಪನ್ನು ಮಾಡುತ್ತದೆಂದಾದರೆ ಅದಕ್ಕೆ ಇತಿಹಾಸದ ಅರಿವಿಲ್ಲ ಎನ್ನಬೇಕಾಗುತ್ತದೆ. ಮಾತ್ರವಲ್ಲ, ಮಂದಿರಕ್ಕಾಗಿ ದಾಸ್ತಾನು ಮಾಡಲಾಗುತ್ತಿರುವ ಕಲ್ಲುಗಳನ್ನೇ ಜನರು ಮುಂದೊಂದು ದಿನ ಬಿಜೆಪಿಗೆ ಪಾಠ ಕಲಿಸಲಿಕ್ಕಾಗಿ ಎತ್ತಿಕೊಳ್ಳಲೂಬಹುದು ಎಂದೇ ಹೇಳಬೇಕಾಗುತ್ತದೆ.


No comments:

Post a Comment