Thursday 11 February 2016

ಧರಣಿ ಮಂಡಲದಲ್ಲಿ ತಬ್ಬಲಿಯಾದ ಪುಣ್ಯಕೋಟಿಯ ಕತೆ

       ಗೋಮಾಂಸ ನಿಷೇಧವು ಎಷ್ಟಂಶ ಪ್ರಾಯೋಗಿಕ ಮತ್ತು ವ್ಯಾವಹಾರಿಕ ಎಂಬ ಚರ್ಚೆ ಇಂದು ನಿನ್ನೆಯದಲ್ಲ. ಗೋಮಾಂಸ ನಿಷೇಧಕ್ಕೆ ಈ ದೇಶದಲ್ಲಿ ಒಂದು ಗುಂಪು ಒತ್ತಾಯಿಸುವಾಗ ಇನ್ನೊಂದು ಗುಂಪು, ಅದನ್ನು ಆಹಾರವಾಗಿ ಸಮರ್ಥಿಸುತ್ತಲೂ ಇದೆ. ಅಲ್ಲದೇ, ಇಡೀ ಚರ್ಚೆಯನ್ನು ಹಿಂದೂ-ಮುಸ್ಲಿಮ್ ಆಗಿ ಪರಿವರ್ತಿಸುವ ಶ್ರಮಗಳು ನಡೆಯುತ್ತಲೂ ಇವೆ. ಇಂಥ ಹೊತ್ತಿನಲ್ಲಿ ಹರ್ಯಾಣದ ಬಿಜೆಪಿ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ಈ ಚರ್ಚೆಗೆ ಹೊಸತೊಂದು ತಿರುವನ್ನು ಕೊಟ್ಟಿದ್ದಾರೆ. ಗೋಮಾಂಸ ಸೇವನೆಯ ನಿಷೇಧದಿಂದ ವಿದೇಶಿಯರನ್ನು ಹೊರಗಿಡುವ ಇಂಗಿತವನ್ನು ಅವರು ವ್ಯಕ್ತಪಡಿಸಿದ್ದಾರೆ. ಹರ್ಯಾಣದಲ್ಲಿರುವ ವಿದೇಶಿಯರು ಗೋಮಾಂಸ ಸೇವಿಸಬಹುದು ಮತ್ತು ಅದಕ್ಕಾಗಿ ಅವರಿಗೆ ವಿಶೇಷ ಪರವಾನಿಗೆ ನೀಡಲಾಗುವುದು ಎಂದವರು ಹೇಳಿದ್ದಾರೆ. ತಿನ್ನುವ ಮತ್ತು ಕುಡಿಯುವ ವಿಷಯದಲ್ಲಿ ಪ್ರತಿಯೊಬ್ಬರಿಗೂ ವೈಯಕ್ತಿಕವಾದ ಜೀವನ ಕ್ರಮವಿದ್ದು, ಅದನ್ನು ವಿರೋಧಿಸಬೇಕಿಲ್ಲ ಎಂದೂ ಅವರು ವಾದಿಸಿದ್ದಾರೆ. ಇದಕ್ಕೆ ಸಮರ್ಥನೆಯಾಗಿ, ಗುಜರಾತ್‍ನಲ್ಲಿ ಮದ್ಯಪಾನಕ್ಕೆ ನಿಷೇಧ ಇದ್ದರೂ ವಿದೇಶಿಯರಿಗೆ ವಿಶೇಷ ಪರವಾನಿಗೆ ನೀಡಿರುವುದನ್ನು ದಿ ಹಿಂದೂ ಪತ್ರಿಕೆಗೆ (2016 ಫೆಬ್ರವರಿ 7 - ಪುಟ: 15) ನೀಡಿರುವ ಸಂದರ್ಶನದಲ್ಲಿ ಅವರು ಉಲ್ಲೇಖಿಸಿದ್ದಾರೆ. ನಿಜವಾಗಿ, 2015ರ ಕೊನೆಯಲ್ಲಿ ಅವರೇ ಜಾರಿಗೆ ತಂದಿರುವ ‘ಹರ್ಯಾಣ ಗೋರಕ್ಷಣೆ ಮತ್ತು ಗೋ ಅಭಿವೃದ್ಧಿ ಕಾಯ್ದೆ’ಯ ಸ್ಪಷ್ಟ ಅಣಕ ಇದು. ಈ ಕಾಯ್ದೆಯ ಪ್ರಕಾರ, ಗೋವುಗಳ ಸಾಗಾಟ, ಗೋಹತ್ಯೆ, ಗೋಮಾಂಸ ಸೇವನೆ ಮತ್ತು ಗೋಮಾಂಸ ರಫ್ತು ಮುಂತಾದುವುಗಳಲ್ಲಿ ಭಾಗಿಯಾದವರಿಗೆ 3 ರಿಂದ 10 ವರ್ಷಗಳ ಕಠಿಣ ಜೈಲು ಶಿಕ್ಷೆಯನ್ನು ವಿಧಿಸಲಾಗುತ್ತದೆ. ಅಂದಹಾಗೆ, ಈ ಕಾಯ್ದೆಯನ್ನು ಜಾರಿಗೊಳಿಸುವುದರ ಹಿಂದಿನ ಉದ್ದೇಶ ಏನಾಗಿತ್ತು? ಮನೋಹರಲಾಲ್ ಖಟ್ಟರ್ ಅವರು ಈ  ನಿಷೇಧ ಕಾಯ್ದೆಗೆ ಏನೆಲ್ಲ ಕಾರಣಗಳನ್ನು ಕೊಟ್ಟಿದ್ದರು? ಗೋವು ಮಾತೆ, ಪೂಜನೀಯ, ಮುಕ್ಕೋಟಿ ದೇವತೆಗಳ ಆವಾಸ ಸ್ಥಾನ ಎಂಬುದು ಆ ಕಾರಣಗಳಲ್ಲಿ ಸೇರಿತ್ತಲ್ಲವೇ? ಹಾಲು ಕೊಡುವ ಮತ್ತು ಸೆಗಣಿ-ಮೂತ್ರ ಸಹಿತ ಸರ್ವೋಪಯೋಗಿಯಾದ ಗೋವಿನ ರಕ್ತ ಹರಿಸುವುದು ಭಾರತ ಮಾತೆಗೆ ಮಾಡುವ ಕಳಂಕ ಎಂದು ಅವರ ಬೆಂಬಲಿಗರು ಈ ಕಾಯ್ದೆಯನ್ನು ಸಮರ್ಥಿಸಿಕೊಂಡಿರಲಿಲ್ಲವೇ? ಗೋಮಾಂಸ ಸೇವನೆಯು ಭಯೋತ್ಪಾದನೆಗೆ ಕಾರಣವಾಗುತ್ತದೆ ಎಂದವರೂ ಇದ್ದರಲ್ಲವೇ?
  ನಿಜವಾಗಿ, ಗೋವನ್ನು ರಾಜಕೀಯ ಪ್ರಾಣಿಯಾಗಿ ಪರಿಚಯಿಸಿದ್ದು ಬಿಜೆಪಿಯೇ. ಗೋವನ್ನು ಮುಂದಿಟ್ಟುಕೊಂಡು ನಡೆಸಲಾದ ಪ್ರತಿಭಟನೆ, ಹಲ್ಲೆ, ಕೊಲೆ, ಗಲಭೆಗಳಲ್ಲಿ ಸ್ಥಳೀಯ ಬಿಜೆಪಿ ನಾಯಕರಿಂದ ಹಿಡಿದು ರಾಷ್ಟ್ರಮಟ್ಟದ ನಾಯಕರ ವರೆಗೆ ಅನೇಕರು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಭಾಗಿಯಾಗಿದ್ದಾರೆ. ದಾದ್ರಿ ಘಟನೆಯು ಇದಕ್ಕೆ ಇತ್ತೀಚಿನ ಉದಾಹರಣೆ ಮಾತ್ರ. ಹಾಜಬ್ಬ-ಹಸನಬ್ಬ ಪ್ರಕರಣವಂತೂ ನಮ್ಮ ನಡುವೆಯೇ ನಡೆದಿರುವಂಥದ್ದು. ಹೀಗಿರುತ್ತಾ, ಹರ್ಯಾಣದಲ್ಲಿರುವ ವಿದೇಶಿಯರು ಗೋಮಾಂಸ ಸೇವಿಸಬಹುದು ಅಂದರೆ ಏನರ್ಥ? ಇದು ಗೋಮಾತೆಗೆ ಮಾಡುವ ಅವಮಾನ, ಮೋಸವಲ್ಲವೇ? ವಿದೇಶಿಯರು ಗೋಮಾಂಸ ಸೇವಿಸುವಾಗ ಭಾರತೀಯರು ಅದರಲ್ಲೂ ಹರ್ಯಾಣಿಗರ ಭಾವನೆಗೆ ಧಕ್ಕೆಯಾಗುವುದಿಲ್ಲವೇ? ಅಲ್ಲದೇ, ತಿನ್ನುವ ಮತ್ತು ಕುಡಿಯುವ ವಿಷಯದಲ್ಲಿ ವೈಯಕ್ತಿಕ ಶೈಲಿ ಇರುವುದು ವಿದೇಶಿಯರಿಗೆ ಮಾತ್ರ ಅಲ್ಲವಲ್ಲ. ಹರ್ಯಾಣಿಗರಿಗೂ ಅದು ಇರಬೇಕಲ್ಲವೇ? ತನಗೆ ಓಟು ಹಾಕಿದ, ತನ್ನನ್ನು ಬೆಂಬಲಿಸಿದ, ಇಲ್ಲಿನ ಸಂವಿಧಾನ-ಪ್ರಜಾತಂತ್ರ, ಸಂಸ್ಕೃತಿ, ಅಭಿವೃದ್ಧಿಗಾಗಿ ದುಡಿಯುವ ಜನರ ಜೀವನ ಶೈಲಿಗೆ ಬೆಲೆ ಕೊಡದ ಖಟ್ಟರ್ ಅವರು ವಿದೇಶಿಯರ ಜೀವನ ಶೈಲಿಗೆ ಮಹತ್ವ ಕೊಡುವುದೇಕೆ? ವಿದೇಶಿಯರಿಗೆ ಲಭ್ಯವಾಗಿರುವುದನ್ನು ದೇಶೀಯರಿಗೆ ಅಲಭ್ಯಗೊಳಿಸುವುದು ಯಾವ ನೀತಿ? ಎಂಥ ದ್ವಂದ್ವ? ಗೋವು ಪೂಜನೀಯ ಪ್ರಾಣಿ, ಮಾಂಸದ ಪ್ರಾಣಿಯಲ್ಲ ಎಂಬ ಖಟ್ಟರ್ ಅವರ ನಿಲುವು ಪ್ರಾಮಾಣಿಕವೇ ಆಗಿರುತ್ತಿದ್ದರೆ ಸ್ವದೇಶಿ ಮತ್ತು ವಿದೇಶಿ ಎನ್ನದೇ ಸರ್ವರಿಗೂ ಗೋಮಾಂಸವನ್ನು ಅಲಭ್ಯಗೊಳಿಸಬೇಕಾಗಿತ್ತು. ಆ ಮೂಲಕ ಗೋಹತ್ಯೆಯನ್ನು ತಡೆಯುವಲ್ಲಿ ತನ್ನ ನಿಲುವು ಪ್ರಾಮಾಣಿಕವಾದುದು ಎಂದು ಸಾರಬೇಕಿತ್ತು. ಆದರೆ ಗುಜರಾತ್‍ನಲ್ಲಿ ವಿದೇಶಿಯರಿಗೆ ಮದ್ಯಪಾನ ಮಾಡಲು ಇರುವ ಪರವಾನಿಗೆಯನ್ನು ಎತ್ತಿಕೊಂಡು ಖಟ್ಟರ್ ಅವರು ತನ್ನನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಹೀಗೆ ತನ್ನ ಗೋಪ್ರೇಮ ಎಷ್ಟು ನಕಲಿಯಾದುದು ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಗೋವಿಗೂ ಮದ್ಯಪಾನಕ್ಕೂ ಎಲ್ಲಿಯ ಹೋಲಿಕೆ? ಗೋವಿನಂತೆ ಮದ್ಯವನ್ನು ಯಾರಾದರೂ ಪೂಜಿಸುತ್ತಾರಾ? ಗೋವಿಗಿರುವ ನೆಲೆ ಮತ್ತು ಬೆಲೆ ಮದ್ಯಪಾನಕ್ಕಿದೆಯೇ? ಆರೋಗ್ಯ ಮತ್ತು ಕೌಟುಂಬಿಕ ಕಾರಣಗಳನ್ನು ಮುಂದಿಟ್ಟುಕೊಂಡು ನಿಷೇಧಿಸಲಾದ ಮದ್ಯವನ್ನು, ಸಂಪೂರ್ಣ ಧಾರ್ಮಿಕ ಕಾರಣಕ್ಕಾಗಿ ನಿಷೇಧಿಸಲಾದ ಗೋಹತ್ಯೆಯೊಂದಿಗೆ ಹೋಲಿಸುವುದು ಎಷ್ಟು ಸರಿ? ಗೋವಿಗೆ ಖಟ್ಟರ್ ಅವರು ಕೊಡುತ್ತಿರುವ ಬೆಲೆಯೇ ಇದು?
  ಅಂದಹಾಗೆ, ರಾಜಕಾರಣಿಗಳ ಮಟ್ಟಿಗೆ ಗೋವು ಅನುಕೂಲ ಸಿಂಧು ಪ್ರಾಣಿ. ಬಳಸಬೇಕಾದಲ್ಲಿ ಬಳಸಿ ಎಸೆಯಬೇಕಾದಲ್ಲಿ ಅವರು ಅದನ್ನು ಎಸೆದು ಬಿಡುತ್ತಾರೆ. ವಿಶೇಷ ಏನೆಂದರೆ, ಗೋವನ್ನು ಬಳಸುವಾಗ ಅವರಲ್ಲಿ ಧಾರ್ಮಿಕವಾದ ಮತ್ತು ಭಾವನಾತ್ಮಕವಾದ ಕಾರಣಗಳಿರುತ್ತವೆ. ಎಸೆಯುವಾಗ ಅತ್ಯಂತ ವ್ಯಾವಹಾರಿಕವಾದ ತರ್ಕಗಳಿರುತ್ತವೆ. ಖಟ್ಟರ್ ಅವರು ಇವತ್ತು ಅಂಥದ್ದೇ ಒಂದು ತರ್ಕವನ್ನು ತನ್ನ ‘ಎಸೆಯುವ ನೀತಿ’ಗೆ ಬಳಸಿಕೊಂಡಿದ್ದಾರೆ. ಅವರು ತನ್ನ ಈ ಹೊಸ ಗೋಮಾಂಸ ನೀತಿಯನ್ನು ಪ್ರಕಟಿಸುವುದಕ್ಕಿಂತ ಮೊದಲು ಜಪಾನ್‍ಗೆ ಭೇಟಿ ಕೊಟ್ಟಿದ್ದರು. ಅಲ್ಲಿನ ಸುಝುಕಿ ಕಂಪೆನಿಯ ಮುಖ್ಯಸ್ಥರೊಂದಿಗೆ ಭೇಟಿಯಾಗಿ ಹರ್ಯಾಣದಲ್ಲಿ ಹೂಡಿಕೆ ಮಾಡುವಂತೆ ಒತ್ತಾಯಿಸಿದ್ದರು. ಈ ದೇಶದ ಮುಂದುವರಿದ ರಾಜ್ಯಗಳಲ್ಲಿ ಹರ್ಯಾಣಕ್ಕೆ ಈಗ 14ನೇ ಸ್ಥಾನವಿದೆ. ಆ ಸ್ಥಾನವನ್ನು ಪ್ರಮುಖ 5 ಸ್ಥಾನಗಳೊಳಗೆ ತರಬೇಕೆಂಬ ಗುರಿ ಅವರದು. ಅದಕ್ಕಾಗಿ ಚೀನಾ, ಅಮೇರಿಕ, ಜಪಾನ್, ಕೆನಡದ ಉದ್ಯಮಿಗಳನ್ನು ಅವರು ಹರ್ಯಾಣದಲ್ಲಿ ಹೂಡಿಕೆ ಮಾಡುವಂತೆ ಆಹ್ವಾನಿಸಿದ್ದಾರೆ. ಸುಮಾರು 11 ಲಕ್ಷ ಕೋಟಿ ರೂಪಾಯಿಯ ಹೂಡಿಕೆ ಮಾಡುವ ಮತ್ತು 2 ಲಕ್ಷ ಉದ್ಯೋಗ ಸೃಷ್ಟಿಸುವ ಯೋಜನೆಯನ್ನು ಅವರು ಹಮ್ಮಿಕೊಂಡಿದ್ದಾರೆ. ಮುಖ್ಯವಾಗಿ, ಚೀನಾ ಮತ್ತು ಜಪಾನ್‍ಗಳು ಹರ್ಯಾಣದಲ್ಲಿ ಹೂಡಿಕೆ ಮಾಡುವ ಉಮೇದು ತೋರಿವೆ. ವಾಂಡ ಗುಂಪು ಸುಮಾರು 65 ಸಾವಿರ ಕೋಟಿ ರೂಪಾಯಿ ಹೂಡಿಕೆಗೆ ಈಗಾಗಲೇ ಸಮ್ಮತಿಸಿದೆ. ಅದಕ್ಕಾಗಿ 3 ಸಾವಿರ ಎಕರೆ ಭೂಮಿಯನ್ನು ಮಂಜೂರು ಮಾಡಲಾಗಿದೆ. ಅಟೋಮೊಬೈಲ್ ಮತ್ತು ಸೇವಾ ಕ್ಷೇತ್ರದಲ್ಲಿ ವಿದೇಶಿ ಕಂಪೆನಿಗಳು ಈಗಾಗಲೇ ಹರ್ಯಾಣದಲ್ಲಿ ಚಟುವಟಿಕೆಯಲ್ಲಿವೆ. ಮುಖ್ಯವಾಗಿ ಜಪಾನ್ ಮತ್ತು ಚೀನಿಯರ ಪ್ರಮುಖ ಆಹಾರವೇ ಗೋಮಾಂಸ. ಈ ಎರಡು ರಾಷ್ಟ್ರಗಳ ಪ್ರಮುಖ ಕಂಪೆನಿಗಳನ್ನು ಹರ್ಯಾಣದತ್ತ ಆಕರ್ಷಿಸಬೇಕಾದರೆ ಗೋಮಾಂಸ ನಿಷೇಧದಲ್ಲಿ ರಾಜಿ ಮಾಡಿಕೊಳ್ಳಲೇ ಬೇಕಾದ ಅನಿವಾರ್ಯತೆಯಿದೆ. ಆದ್ದರಿಂದಲೇ, ಖಟ್ಟರ್ ಅವರು ಗೋವು ಮತ್ತು 11 ಲಕ್ಷ ಕೋಟಿ ರೂಪಾಯಿಗಳನ್ನು ಮುಖಾಮುಖಿಗೊಳಿಸಿದ್ದಾರೆ. ಈ ಮುಖಾಮುಖಿಯಲ್ಲಿ ಗೋವು ಸೋಲೊಪ್ಪಿಕೊಂಡಿದೆ. ಸುಝುಕಿ, ವಾಂಡದಂಥ ದೈತ್ಯ ಕಂಪೆನಿಗಳು ಜಯಶಾಲಿಯಾಗಿವೆ. ಹಾಗಂತ, ಗೋವಿಗೆ ಮೋಸ ಮಾಡುವವರಲ್ಲಿ ಮನೋಹರ್ ಲಾಲ್ ಖಟ್ಟರ್ ಒಂಟಿಯಲ್ಲ. ಅವರ ಪಕ್ಷದವರಿಗೆ ಹೋಲಿಸಿದರೆ ಖಟ್ಟರ್ ತುಸು ಒಳ್ಳೆಯವರು. ತಾನು ಏನು ಎಂಬುದನ್ನು ಅವರು ಬಹಿರಂಗವಾಗಿಯೇ ಹೇಳಿಕೊಂಡಿದ್ದಾರೆ. ಆದರೆ ಅವರ ಪಕ್ಷ ಅವರಷ್ಚೂ ಪ್ರಾಮಾಣಿಕವಾಗಿಲ್ಲ. ಒಂದು ಕಡೆ ಗೋಮಾಂಸ ನಿಷೇಧಕ್ಕೆ ಒತ್ತಾಯಿಸುತ್ತಾ ಇನ್ನೊಂದು ಕಡೆ ಈ ಹಿಂದಿಗಿಂತಲೂ ಹೆಚ್ಚು ಉತ್ಸಾಹದಿಂದ ವಿದೇಶಕ್ಕೆ ಗೋಮಾಂಸವನ್ನು ಅದು ರಫ್ತು ಮಾಡುತ್ತಿದೆ.
        ಏನೇ ಆಗಲಿ, ಜಪಾನ್ ಮತ್ತು ಚೀನಾದ ಕೆಲವು ಉದ್ಯಮಿಗಳು ಮನೋಹರ್ ಲಾಲ್ ಖಟ್ಟರ್ ಅವರ ಗೋಪ್ರೇಮದ ನಿಜ ಮುಖವನ್ನು ಬಯಲುಗೊಳಿಸಿದ್ದಾರೆ. ಅವರಿಗೆ ಅಭಿನಂದನೆಗಳು.

No comments:

Post a Comment