Thursday 25 February 2016

‘ಕಾವಲುನಾಯಿ’ಯನ್ನು ಗಲ್ಲಿಗೇರಿಸುವ ‘ಸುದ್ದಿಮನೆ’ಗಳು

ವಿಶ್ವ ದೀಪಕ್
      ‘ಕಾವಲು ನಾಯಿ’ ಎಂಬ ಗೌರವಾರ್ಹ ಪದದ ಸಕಲ ಗೌರವವನ್ನೂ ಕಿತ್ತೊಗೆದು, ತಮಾಷೆ ಮತ್ತು ವ್ಯಂಗ್ಯದ ಪ್ರತಿರೂಪವಾಗಿ ಅದನ್ನು ಮಾಧ್ಯಮಗಳು ಕುಲಗೆಡಿಸಿ ಈಗಾಗಲೇ ವರ್ಷಗಳೇ ಕಳೆದಿವೆ. ‘ಮಾಧ್ಯಮ ಪ್ರಜಾತಂತ್ರದ ನಾಲ್ಕನೇ ಆಧಾರ ಸ್ತಂಭ, ಅವು ಕಾವಲುನಾಯಿಯ ಪಾತ್ರವನ್ನು ನಿಭಾಯಿಸಬೇಕು..’ ಎಂದು ಯಾರಾದರೂ ವೇದಿಕೆಯಿಂದ ಇವತ್ತು ಕರೆ ಕೊಟ್ಟರೆ ಚಪ್ಪಾಳೆಯ ಬದಲು ವ್ಯಂಗ್ಯ ಭರಿತ ನಗುವೇ ಪ್ರತಿಕ್ರಿಯೆಯಾಗುವ ಪರಿಸ್ಥಿತಿಯಿದೆ. ನಾಯಿ ತನ್ನ ಜನ್ಮಜಾತ ಗುಣವನ್ನು ಕಳಕೊಂಡಿದೆ (ಕೆಲವೊಂದು ಅಪವಾದಗಳನ್ನು ಹೊರತುಪಡಿಸಿ). ಮಾತ್ರವಲ್ಲ, ತನ್ನ ಗುರುತಿಗೆ ತಕ್ಕುದಲ್ಲದ ಗುಣವನ್ನು ಬೆಳೆಸಿಕೊಳ್ಳುತ್ತಲೂ ಇದೆ. ಇದೀಗ ಝೀ ನ್ಯೂಸ್ ಚಾನೆಲ್‍ನ ನಿರ್ಮಾಪಕ ವಿಶ್ವ ದೀಪಕ್ ಅವರು ‘ಕಾವಲು ನಾಯಿ’ಯ ಈ ದೌರ್ಬಲ್ಯವನ್ನು ಪ್ರತಿಭಟಿಸಿ ತನ್ನ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಹಾಗಂತ, ಪತ್ರಿಕೆ ಮತ್ತು ಟಿ.ವಿ. ಚಾನೆಲ್‍ಗಳಲ್ಲಿ ರಾಜೀನಾಮೆ ಮತ್ತು ಸೇರ್ಪಡೆಗಳು ಹೊಸತಲ್ಲವಾದರೂ ವಿಶ್ವ ದೀಪಕ್‍ನ ಪ್ರಕರಣ ಅವುಗಳಿಗಿಂತ ತೀರಾ ಭಿನ್ನ. ಅವರು ವೇತನವನ್ನು ತನ್ನ ರಾಜೀನಾಮೆಗೆ ಕಾರಣವಾಗಿ ಕೊಟ್ಟಿಲ್ಲ. ವೃತ್ತಿ ತಾರತಮ್ಯ, ವರ್ಣ ತಾರತಮ್ಯ ಮತ್ತು ಶೋಷಣೆಗಳಂತಹ ಸಹಜ ಕಾರಣಗಳನ್ನು ಅವರು ಪಟ್ಟಿ ಮಾಡಿಲ್ಲ. ಅವರು ವೃತ್ತಿ ಮೌಲ್ಯವನ್ನು ಕಾರಣವಾಗಿ ಕೊಟ್ಟಿದ್ದಾರೆ. ಝೀ ನ್ಯೂಸ್ ಚಾನೆಲ್‍ನ ಸುದ್ದಿ ಮನೆಯಲ್ಲಿ (Newsroom) ‘ಕಾವಲು ನಾಯಿಯ ದಫನವಾಗುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದಕ್ಕೆ ತಾಜಾ ಉದಾಹರಣೆಯಾಗಿ ಜವಾಹರ್‍ಲಾಲ್ ನೆಹರೂ ವಿಶ್ವವಿದ್ಯಾಲಯದ (JNU) ಪ್ರಕರಣವನ್ನು ಉಲ್ಲೇಖಿಸಿದ್ದಾರೆ. ಆ ಇಡೀ ಪ್ರಕರಣವನ್ನು ಝೀ ನ್ಯೂಸ್ ಚಾನೆಲ್ ಅತ್ಯಂತ ಪಕ್ಷಪಾತಿಯಾಗಿ ಮತ್ತು ABVP ಪರವಾಗಿ ನಿರ್ಲಜ್ಜೆಯಿಂದ ತಿರುಚಿ ಪ್ರಸಾರ ಮಾಡಿದೆ ಎಂದು ಅವರು ಆರೋಪಿಸಿದ್ದಾರೆ. ಇಂಥದ್ದೊಂದು ಚಾನೆಲ್‍ನ ಭಾಗವಾಗಲು ತನ್ನ ವೃತ್ತಿ ಧರ್ಮ ಒಪ್ಪುತ್ತಿಲ್ಲ ಎಂದು ಚಾನೆಲ್‍ನ ಮುಖ್ಯ ನಿರೂಪಕ ರೋಹಿತ್ ಸರ್ದಾನರಿಗೆ ಬರೆದ ರಾಜೀನಾಮೆ ಪತ್ರದಲ್ಲಿ ಅವರು ಹೇಳಿಕೊಂಡಿದ್ದಾರೆ. ನರೇಂದ್ರ ಮೋದಿಯವರು ಪ್ರಧಾನಿ ಪದ ಸ್ವೀಕರಿಸಿದ ಬಳಿಕ ತನ್ನ ಚಾನೆಲ್ ಹೇಗೆ ಮೋದಿ ಮೇನಿಯಾದಿಂದ ಪ್ರಭಾವಿತವಾಯಿತು ಮತ್ತು ಮೋದಿಯವರ ರಾಯಭಾರಿಯಂತೆ ಹೇಗೆ ಕೆಲಸ ಮಾಡಿತು ಎಂಬುದನ್ನೂ ಆತ ವಿವರಿಸಿದ್ದಾರೆ. ನಿಜವಾಗಿ, ವಿಶ್ವ ದೀಪಕ್‍ರ ಆರೋಪವನ್ನು ಇಂಚಿಂಚಾಗಿ ಸಾಬೀತುಪಡಿಸುವುದಕ್ಕೆ JNU ಪ್ರಕರಣವೊಂದೇ ಧಾರಾಳ ಸಾಕು. ದೆಹಲಿಯ ಪೊಲೀಸರು ಕನ್ಹರ್ಯ ಕುಮಾರ್ ವಿರುದ್ಧ FIR (ಪ್ರಥಮ ಮಾಹಿತಿ ವರದಿ) ಸಿದ್ಧಪಡಿಸಿದುದೇ ಝೀ ನ್ಯೂಸ್ ಚಾನೆಲ್‍ನ ವರದಿಯನ್ನು ಆಧರಿಸಿ! ಝೀ ನ್ಯೂಸ್ ಪ್ರಸಾರ ಮಾಡಿದ ವೀಡಿಯೋ ಕ್ಲಿಪ್ ಅನ್ನು FIRನಲ್ಲಿ ಪುರಾವೆಯಾಗಿ ಮಂಡಿಸಲಾಗಿದೆ! ಅಷ್ಟಕ್ಕೂ, ಒಂದು ನಿರ್ದಿಷ್ಟ ಟಿ.ವಿ. ಚಾನೆಲ್ ಅನ್ನು ದೆಹಲಿ ಪೊಲೀಸರು ಈ ಮಟ್ಟದಲ್ಲಿ ಆಶ್ರಯಿಸಿಕೊಂಡದ್ದೇಕೆ? JNU ವಿದ್ಯಾರ್ಥಿಗಳ ಪ್ರತಿಭಟನೆಯ ವೇಳೆ ದೆಹಲಿ ಪೊಲೀಸ್ ಇಲಾಖೆಯ ಸಾಕಷ್ಟು ಪೊಲೀಸರು ಮತ್ತು ಕಾನ್‍ಸ್ಟೇಬಲ್‍ಗಳು ಸ್ಥಳದಲ್ಲಿ ಉಪಸ್ಥಿತರಿದ್ದರು. ಅಲ್ಲಿಯ ಭಾಷಣ ಮತ್ತು ಘೋಷಣೆಗಳಿಗೆ ಅವರು ದೃಕ್‍ಸಾಕ್ಷಿಯೂ ಆಗಿದ್ದರು. ಹೀಗಿದ್ದೂ FIR ಸಿದ್ಧಪಡಿಸಲು ಝೀ ನ್ಯೂಸ್ ಚಾನೆಲ್ ಪ್ರಸಾರ ಮಾಡಿದ ಸುದ್ದಿಯನ್ನು ಪೊಲೀಸರು ಆಧಾರವಾಗಿ ಪರಿಗಣಿಸಿದ್ದೇಕೆ? ಕಾನ್‍ಸ್ಟೇಬಲ್‍ಗಳ ಮತ್ತು ಪೊಲೀಸರ ಬದಲು ಚಾನೆಲ್ ಅನ್ನು ನಂಬಲರ್ಹ ಸಾಕ್ಷವಾಗಿ ಅವರು ಗುರುತಿಸಿದ್ದೇಕೆ? ವಿಶ್ವ ದೀಪಕ್ ವ್ಯಕ್ತಪಡಿಸಿದ ಅನುಮಾನವೂ ಇದುವೇ. ಝೀ ನ್ಯೂಸ್ ಚಾನೆಲ್ ಮತ್ತು ಉನ್ನತ ಪೊಲೀಸ್ ಅಧಿಕಾರಿಗಳ ಮಧ್ಯೆ ಪೂರ್ವ ನಿರ್ಧರಿತ ತಿಳುವಳಿಕೆ ನಡೆದಿರಬಹುದೇ? ಆ ಪ್ರತಿಭಟನಾ ಸಭೆಯನ್ನು ‘ದೇಶ ವಿರೋಧಿ’ಯಾಗಿಸುವ ಹುನ್ನಾರವೊಂದಕ್ಕೆ ತೆರೆಮರೆಯಲ್ಲಿ ಸಂಚು ಏರ್ಪಟ್ಟಿರಬಹುದೇ? ನರೇಂದ್ರ ಮೋದಿಯವರು ಪ್ರಧಾನಿಯಾದಂದಿನಿಂದ ತಾನಿರುವ ‘ಸುದ್ದಿಮನೆ’ಯು ಕಾವಲು ನಾಯಿ ಹೊಣೆಗಾರಿಕೆಯಿಂದ ಹೊರಬಂದು ಮೋದಿಯ ‘ಕಾವಲು’ ಕಾಯುವ ಹೊಣೆಗಾರಿಕೆ ವಹಿಸಿಕೊಂಡದ್ದನ್ನು ನೋಡುತ್ತ ಬಂದಿರುವ ವಿಶ್ವ ದೀಪಕ್‍ನ ಈ ಅನುಮಾನ ತೀರಾ ಗಂಭೀರವಾದದ್ದು.
  ಅಂದಹಾಗೆ, ಪ್ರಜಾತಂತ್ರವನ್ನು ರಾಜಕಾರಣಿಗಳ ಕೈಗೆ ಒಪ್ಪಿಸಿ ಬಿಟ್ಟು ಸುಮ್ಮನಾದರೆ ಏನೆಲ್ಲ ಅನಾಹುತಗಳಾಗಬಹುದು ಎಂಬುದಕ್ಕೆ ತುರ್ತುಸ್ಥಿತಿಯೂ ಸೇರಿದಂತೆ ಸ್ವತಂತ್ರ ಭಾರತದಲ್ಲಿ ಅನೇಕಾರು ಉದಾಹರಣೆಗಳಿವೆ. ಹತ್ತಾರು ಹತ್ಯಾಕಾಂಡಗಳು, ಕೋಮುಗಲಭೆಗಳು ಮತ್ತು ಅದರ ನಂತರದ ಬೆಳವಣಿಗೆಗಳು ಮತ್ತೆ ಮತ್ತೆ ರಾಜಕಾರಣದ ಅಪಾಯವನ್ನು ವಿವರಿಸುತ್ತಲೇ ಇದೆ. ಇಂಥ ಸಂದರ್ಭಗಳಲ್ಲೆಲ್ಲ ನಾಗರಿಕರು ಭರವಸೆಯಾಗಿ ಆಯ್ಕೆ ಮಾಡಿಕೊಳ್ಳುವುದು ಮಾಧ್ಯಮವನ್ನು. ಅದು ಸತ್ಯ ಸುದ್ದಿಯನ್ನು ಒದಗಿಸಲಿ ಎಂದು ಜನರು ಕಾಯುತ್ತಾರೆ. ಪ್ರಭುತ್ವದ ಸುಳ್ಳುಗಳನ್ನು ಬೆತ್ತಲೆ ಮಾಡಲಿ ಎಂದು ಹಾರೈಸುತ್ತಾರೆ. ಅಷ್ಟಕ್ಕೂ, ಪ್ರಭುತ್ವಕ್ಕೆ ಹೋಲಿಸಿದರೆ ಪತ್ರಕರ್ತರು ತೀರಾ ದುರ್ಬಲರು. ಅವರಿಗೆ ಕಾವಲು ಭಟರಿಲ್ಲ. ಪೆನ್ನು, ಕ್ಯಾಮರಾಗಳೇ ಅವರ ಆಯುಧ. ಪ್ರಭುತ್ವದ ಬಂದೂಕಿನ ಎದುರು ಈ ಆಯುಧಗಳು ಏನೇನೂ ಅಲ್ಲ ಎಂಬುದು ಎಲ್ಲರಿಗೂ ಗೊತ್ತು. ಆದರೂ ಪೆನ್ನು ಮತ್ತು ಕ್ಯಾಮರಾಗಳು ಈ ದೇಶದಲ್ಲಿ ಬಂದೂಕುಗಳನ್ನು ಅನೇಕಾರು ಬಾರಿ ಮೆಟ್ಟಿ ನಿಂತಿವೆ. ಈ ಬಂದೂಕುಗಳ ಕಣ್ತಪ್ಪಿಸಿ ಪ್ರಭುತ್ವವನ್ನು ಬೆತ್ತಲೆಗೊಳಿಸುವ ಶ್ರಮ ನಡೆಸಿವೆ ಮತ್ತು ಯಶಸ್ವಿಯಾಗಿವೆ. ಆದ್ದರಿಂದಲೇ ಇವತ್ತೂ ಜನರು ರಾಜಕಾರಣಿಗಳಿಗಿಂತ ಪತ್ರಕರ್ತರನ್ನು ಹೆಚ್ಚು ನಂಬುತ್ತಾರೆ. JNU ಪ್ರಕರಣದಲ್ಲಿ BJP ಮತ್ತು ABVPಗಳು ನೀಡುತ್ತಿರುವ ಹೇಳಿಕೆಗಳು ಮತ್ತು ಉದುರಿಸುತ್ತಿರುವ ‘ದೇಶಪ್ರೇಮ’ದ ಅಣಿಮುತ್ತುಗಳನ್ನೆಲ್ಲ ಜಾಲಾಡಿ, ಒಂದೊಂದನ್ನೇ ಒಡೆದು, ಕಾಳೆಷ್ಟು-ಜೊಳ್ಳೆಷ್ಟು ಎಂದು ಪ್ರತ್ಯೇಕಿಸಿ ದೇಶವನ್ನು ಜಾಗೃತಗೊಳಿಸಿದ್ದು ಮಾಧ್ಯಮವೇ. ಮಾಧ್ಯಮ ಎಚ್ಚರಿಕೆ ಇಲ್ಲದೇ ಇರುತ್ತಿದ್ದರೆ ಇವತ್ತು ಉಮರ್ ಖಾಲಿದ್ ಪಾಕಿಸ್ತಾನಿ ಟೆರರಿಸ್ಟ್ ಆಗಿರುತ್ತಿದ್ದ. ಶೆಹ್ಲಾ ಮಾನವ ಬಾಂಬ್ ಆಗಿರುತ್ತಿದ್ದಳು. ಕನ್ಹಯ್ಯನನ್ನು ಅಫ್ಝಲ್ ಗುರುವಿನ ಸ್ಥಾನದಲ್ಲಿ ಕೂರಿಸಿ ‘ಯಾವಾಗ ಗಲ್ಲು’ ಎಂದು ರಾಜಕಾರಣಿಗಳು ಪ್ರಶ್ನಿಸುತ್ತಿದ್ದರು. ಆದರೆ BJP ಮತ್ತು ಅದರ ಬೆಂಬಲಿಗರ ಹುಸಿ ದೇಶಪ್ರೇಮ ಬಣ್ಣವನ್ನು ಮಾಧ್ಯಮದ ಒಂದು ಗುಂಪು ಪರಿಣಾಮಕಾರಿಯಾಗಿಯೇ ಬಯಲಿಗೆಳೆಯುತ್ತಿದೆ. ವಿದ್ಯಾರ್ಥಿಗಳ ಮೇಲೆ ಹೊರಿಸಲಾಗುತ್ತಿರುವ ಪ್ರತಿ ಆರೋಪಗಳನ್ನೂ ಅಧಿಕಾರಯುತವಾಗಿ ಪ್ರಶ್ನಿಸುತ್ತಿದೆ. ಈ ಬೆಳವಣಿಗೆಯನ್ನು ಖುಷಿಯಿಂದ ವೀಕ್ಷಿಸುತ್ತಿರುವ ಈ ಸಂದರ್ಭದಲ್ಲಿಯೇ ಮಾಧ್ಯಮಗಳ ಕೆಲವು ಸುದ್ದಿ ಮನೆಗಳು ಹೇಗೆ ಪ್ರಭುತ್ವದ ತುತ್ತೂರಿಗಳಾಗಿ ವರ್ತಿಸುತ್ತಿವೆ ಎಂಬುದರತ್ತ ವಿಶ್ವ ದೀಪಕ್ ಬೆಳಕು ಚೆಲ್ಲಿದ್ದಾರೆ. ಸುದ್ದಿ ಮನೆಯೊಳಗಿದ್ದು ಅಲ್ಲಿನ ಪ್ರತಿಯೊಂದು ಚಟುವಟಿಕೆಯನ್ನು ಹತ್ತಿರದಿಂದ ನೋಡುತ್ತಾ ಬೆಳೆದವರಾದ ಕಾರಣ ವಿಶ್ವದೀಪಕ್‍ರ ಮಾತನ್ನು ಮಾಧ್ಯಮ ಜಗತ್ತು ಮತ್ತು ಓದುಗ ವಲಯ ಗಂಭೀರವಾಗಿ ಸ್ವೀಕರಿಸಬೇಕಿದೆ. ನೀವು ವೀಕ್ಷಿಸುತ್ತಿರುವ ಮತ್ತು ಓದುತ್ತಿರುವ ಸುದ್ದಿಗಳು ಅಥವಾ ವೀಡಿಯೋಗಳು ಸಂಪೂರ್ಣ ಪಾರದರ್ಶಕವಾಗಿರಬೇಕಿಲ್ಲ ಎಂದವರು ಮುನ್ನೆಚ್ಚರಿಕೆ ನೀಡಿದ್ದಾರೆ. ಇದು ತೀರಾ ಕ್ಷುಲ್ಲಕವಲ್ಲ. ಮಾಧ್ಯಮ ರಂಗವು ಆಳುವವರ ‘ಹೊಗಳುಭಟ’ವಾಗಿ ಪರಿವರ್ತನೆಗೊಳ್ಳುತ್ತಿದೆ ಎಂಬುದು ಪ್ರಜಾತಂತ್ರದ ಪಾಲಿಗೆ ಅಪಾಯದ ಮುನ್ಸೂಚನೆ. ಗುಜರಾತ್ ಹತ್ಯಾಕಾಂಡದ ಸಂದರ್ಭದಲ್ಲಿ ಅಲ್ಲಿನ ಪತ್ರಿಕೆ ಮತ್ತು ಟಿ.ವಿ. ಚಾನೆಲ್‍ಗಳ ಮೇಲೆ ಇಂಥ ಆರೋಪ ಜೋರಾಗಿಯೇ ಕೇಳಿ ಬಂದಿತ್ತು. ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾವು ಈ ಆರೋಪವನ್ನು ದೃಢೀಕರಿಸುವಷ್ಟು ಅಲ್ಲಿನ ಮಾಧ್ಯಮ ರಂಗದ ಕಾರ್ಯನಿರ್ವಹಣೆ ಚಿಂತಾಜನಕವಾಗಿತ್ತು.
  ಪ್ರಭುತ್ವದ ಓಲೈಕೆಯಲ್ಲಿ ಸುದ್ದಿ ಮನೆಯೊಂದು ನಿರತವಾಗುತ್ತದೆಂದರೆ ಸತ್ಯದ ದಫನವಾಗಲು ಪ್ರಾರಂಭವಾಗಿದೆ ಎಂದರ್ಥ. ಈಗಾಗಲೇ ಕೆಲವು ನಿರ್ದಿಷ್ಟ ‘ಸುದ್ದಿ ಮನೆ’ಗಳು ಈ ದಫನ ಕಾರ್ಯವನ್ನು ಯಶಸ್ವಿಯಾಗಿ ಮುಗಿಸಿವೆ. ಅವುಗಳಿಗೆ ಈಗಿನ ಪ್ರಭುತ್ವ ಹೇಳುತ್ತಿರುವುದೆಲ್ಲ ಪರಮ ಪವಿತ್ರ ಸುದ್ದಿಗಳಾಗುತ್ತಿವೆ. ಅದಕ್ಕಾಗಿ ಅವು ಪುರಾವೆಗಳನ್ನು ಉತ್ಪಾದಿಸುತ್ತಿವೆ. ವಿಶ್ವದೀಪಕ್ ಈ ಬೆಳವಣಿಗೆಯನ್ನೇ ಪ್ರಶ್ನಿಸಿದ್ದಾರೆ. ಅವರ ಈ ಬಂಡಾಯವು ಸುದ್ದಿಮನೆಗಳನ್ನು ಸ್ವಚ್ಛಗೊಳಿಸುವಲ್ಲಿ ಅಥವಾ ದಫನ ಕಾರ್ಯದಲ್ಲಿ ನಿರತವಾಗಿರುವ ಸುದ್ದಿ ಮನೆಗಳನ್ನು ಎಚ್ಚರಗೊಳಿಸುವಲ್ಲಿ ಯಶಸ್ವಿಯಾಗಲಿ ಎಂದು ಹಾರೈಸೋಣ.

No comments:

Post a Comment