Friday 4 March 2016

ನಾಶವಾಗಬೇಕಾದದ್ದು ಧರ್ಮವೋ?

       ಸಂಸದರೋರ್ವರ ಮತಿಗೆಟ್ಟ ಹೇಳಿಕೆಯನ್ನು ಸಂಪಾದಕೀಯಕ್ಕೆ  ವಸ್ತುವಾಗಿ ಆಯ್ಕೆ ಮಾಡಿಕೊಳ್ಳುವುದು ಉಚಿತವೋ ಅಥವಾ ಹಾಗೆ ಮಾಡುವುದು ಸಂಪಾದಕೀಯದ
ಘನತೆಗೆ ಕಳಂಕವೋ ಎಂಬ ಬಗ್ಗೆ ಒಂದಕ್ಕಿಂತ ಹೆಚ್ಚು ಬಾರಿ ಆಲೋಚಿಸಿ ಕೊನೆಗೆ ಅವರೆತ್ತಿದ ವಿಷಯವು ಅವರ ಸಡಿಲ ನಾಲಗೆಯಷ್ಟು ಹಗುರವಲ್ಲವಾದುದರಿಂದ ಆ ಬಗ್ಗೆ ಪ್ರತಿಕ್ರಿಯಿಸಲೇಬೇಕಾದ ಅಗತ್ಯ ತಲೆದೋರಿತು. ಭಯೋತ್ಪಾದನೆಗೂ ಧರ್ಮಕ್ಕೂ ನಂಟಿದೆಯೇ? ಇದ್ದರೆ ಆ ನಂಟು ಯಾವ ಬಗೆಯದು? ಅಂಥದ್ದೊಂದು ನಂಟನ್ನು ಏರ್ಪಡಿಸಿದವರು ಯಾರು? ಧಾರ್ಮಿಕ ವಿದ್ವಾಂಸರೇ, ಧರ್ಮಗ್ರಂಥಗಳೇ ಅಥವಾ ಸ್ವತಃ ಭಯೋತ್ಪಾದಕರೇ? ಅಷ್ಟಕ್ಕೂ, ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆಯವರು ಭಯೋತ್ಪಾದನೆಯನ್ನು ನೋಡುವ ಬಗೆ ಹೇಗೆ? ಬಾಂಬ್ ಸ್ಫೋಟ, ಹತ್ಯೆ, ಅತ್ಯಾಚಾರ, ಹಿಂಸೆ.. ಇತ್ಯಾದಿ ಇತ್ಯಾದಿಗಳನ್ನೇ ಅವರು ಭಯೋತ್ಪಾದನೆ ಅನ್ನುತ್ತಾರಾದರೆ, ಇವೇನು ಇವತ್ತು ಯಾವುದಾದರೊಂದು ನಿರ್ದಿಷ್ಟ ಧರ್ಮದ ಸೊತ್ತಾಗಿಯಷ್ಟೇ ಉಳಿದಿದೆಯೇ? ಹಿಂಸೆ, ಅತ್ಯಾಚಾರ, ಹತ್ಯೆ ಯಾವ ಧರ್ಮದ ಗುರುತು? ಇಸ್ಲಾಮ್‍ನದ್ದೇ, ಹಿಂದೂ ಧರ್ಮದ್ದೇ ಅಥವಾ ಕ್ರೈಸ್ತ-ಬೌದ್ಧ, ಯಹೂದಿ ಧರ್ಮದ್ದೇ? ಮೀಸಲಾತಿಯನ್ನು ಆಗ್ರಹಿಸಿ ಜಾಟ್ ಸಮುದಾಯದವರು ಕಳೆದ ವಾರ ಹರ್ಯಾಣದಲ್ಲಿ ನಡೆಸಿದ ಪ್ರತಿಭಟನೆಯಲ್ಲಿ 17 ಸಾವಿರ ಮರಗಳ ಮಾರಣ ಹೋಮ ನಡೆದಿದೆ ಎಂದು ಜಿಂದ್, ಬಿವಾನಿ, ಹಿಸ್ಸಾರ್, ಜಜ್ಜಾರ್, ಸೋನಿಪತ್‍ನ ಅರಣ್ಯಾಧಿಕಾರಿಗಳು ಹೇಳಿರುವುದಾಗಿ ಮಾಧ್ಯಮಗಳು ವರದಿ ಮಾಡಿದ್ದುವು. ಮರಗಳನ್ನು ಕಡಿದು ರಸ್ತೆಗೆ ಹಾಕಲಾಗಿತ್ತು. ಇದಕ್ಕಿಂತಲೂ ಭೀಭತ್ಸಕರ ಸಂಗತಿ ಏನೆಂದರೆ, ಹೀಗೆ ರಸ್ತೆಯಲ್ಲಿ ಸಿಕ್ಕಿ ಹಾಕಿಕೊಂಡ ವಾಹನಗಳಿಂದ ಅನೇಕ ಮಹಿಳೆಯರನ್ನು ಪಕ್ಕದ ಹೊಲಗಳಿಗೆ ಎತ್ತಿಕೊಂಡು ಹೋಗಿ ಅತ್ಯಾಚಾರ ನಡೆಸಲಾಗಿದೆ ಎಂಬುದು. ಅನಂತ ಕುಮಾರ್ ಹೆಗಡೆಯವರ ಪ್ರಕಾರ ಇದು ಯಾವ ಕೆಟಗರಿಯಲ್ಲಿ ಬರುತ್ತದೆ? ಈ ಕೃತ್ಯವನ್ನು ಎಸಗಿದವರ ಧರ್ಮವನ್ನು ನೋಡಿಕೊಂಡು, ‘ಆ ಧರ್ಮದ ನಾಶವೇ ಇಂಥ ಕೃತ್ಯಗಳಿಗಿರುವ ಪರಿಹಾರ’ ಎಂದು ಹೇಳಬಹುದೇ? ಹೆಗಡೆ ಅವರ ಜಾತಿಯನ್ನು ನೇಪಾಳದಲ್ಲಿ ಪ್ರತಿನಿಧಿಸುವ ‘ಮಾಧೇಶಿ’ಗಳು ಎರಡು ತಿಂಗಳುಗಳ ಕಾಲ ಭಾರತ-ನೇಪಾಳದ ಗಡಿಯಲ್ಲಿ ರಸ್ತೆ ತಡೆ ನಿರ್ಮಿಸಿದ್ದರು. ಭಾರತದಿಂದ ನೇಪಾಳಕ್ಕೆ ಆಹಾರ, ತೈಲ ಸಹಿತ ದಿನ ಬಳಕೆಯ ಪ್ರತಿಯೊಂದು ವಸ್ತುವೂ ಸರಬರಾಜಾಗುವ ಏಕೈಕ ರಸ್ತೆಯನ್ನು ಮುಚ್ಚಿದ್ದರು. ಇದರಿಂದಾಗಿ ನೇಪಾಳದ ಮಾರುಕಟ್ಟೆ ಬಹುತೇಕ ಹದಗೆಟ್ಟಿತ್ತು. ನೇಪಾಳೀಯರು ಆಹಾರ ಮತ್ತಿತರ ವಸ್ತುಗಳ ತೀವ್ರ ಕೊರತೆಯನ್ನು ಎದುರಿಸಿದರು. ಅಲ್ಲಿನ ಜನರು ಪ್ರಸಕ್ತ ಸಂವಿಧಾನಕ್ಕೆ ಬೆಂಬಲ ಸೂಚಿಸಿದುದೇ ಈ ಪ್ರತಿಭಟನೆಗೆ ಕಾರಣವಾಗಿತ್ತು. ನರೇಂದ್ರ ಮೋದಿ ಸರಕಾರದ ಪರೋಕ್ಷ ಬೆಂಬಲದಿಂದಾಗಿಯೇ ಇಷ್ಟು ದೀರ್ಘ ಅವಧಿಯ ರಸ್ತೆ ತಡೆ ನಿರ್ಮಿಸಲು ಮಾಧೇಶಿಗಳಿಗೆ ಸಾಧ್ಯವಾಗಿದೆ ಎಂದು ನೇಪಾಳ ಸರಕಾರವೇ ಆರೋಪಿಸಿತ್ತು. ಇದರ ದೃಢೀಕರಣವೆಂಬಂತೆ ಮಾಧೇಶಿ ನಾಯಕರು ಭಾರತಕ್ಕೆ ಬಂದು ವಿದೇಶಾಂಗ ಸಚಿವೆ ಸುಶ್ಮಾ ಸ್ವರಾಜ್‍ರನ್ನು ಭೇಟಿಯಾದರು. ಒಂದು ಜನತೆಯ ಮೇಲೆ ಎರಡು ತಿಂಗಳ ಕಾಲ ಆಹಾರ ಭಯೋತ್ಪಾದನೆಯನ್ನು ಹೇರಿದ ಬಗ್ಗೆ ಅನಂತ ಕುಮಾರ್ ಅವರ ನಿಲುವೇನು? ಈ ಕೃತ್ಯ ಅವರ ಪ್ರಕಾರ ಯಾವ ವಿಭಾಗದಲ್ಲಿ ಬರುತ್ತದೆ? ಮಾಧೇಶಿಗಳ ಧರ್ಮವನ್ನು ನೋಡಿಕೊಂಡು, ‘ಆ ಧರ್ಮದ ನಾಶವೇ ಇಂಥ ಭಯೋತ್ಪಾದನೆಗಿರುವ ಪರಿಹಾರ’ ಎಂದು ಹೇಳುತ್ತಾರಾ? ದಾದ್ರಿ, ಮುಝಫ್ಫರ್ ನಗರ್, ಗುಜರಾತ್‍ಗಳಲ್ಲಿ ನಡೆದಿರುವುದೇನೆಂಬುದು ಹೆಗಡೆಯವರಿಗೆ ಚೆನ್ನಾಗಿ ಗೊತ್ತು. ಅಲ್ಲಿ ಯಾವ ಬಗೆಯ ಭಯದ ವಾತಾವರಣವನ್ನು ಹುಟ್ಟು ಹಾಕಲಾಗಿತ್ತು ಮತ್ತು ಅದರ ರೂವಾರಿಗಳು ಯಾರು ಎಂಬುದನ್ನು ವಿವರಿಸಬೇಕಾದ ಅಗತ್ಯವೂ ಇಲ್ಲ. ಮಾಯಾ ಕೊಡ್ನಾನಿ, ಬಾಬು ಭಜರಂಗಿ ಸಹಿತ ಗುಜರಾತ್  ಭಯೋತ್ಪಾದನಾ ಕೃತ್ಯಗಳಲ್ಲಿ ಪಾಲುದಾರರಾದ ದೊಡ್ಡದೊಂದು ಗುಂಪು ಇವತ್ತು ಯಾವ್ಯಾವ ಜೈಲುಗಳಲ್ಲಿವೆ ಮತ್ತು ಇವರ ಬಗ್ಗೆ ನ್ಯಾಯಾಲಯಗಳು ಏನೇನು ಹೇಳಿವೆ ಎಂಬುದನ್ನೂ ಪ್ರತ್ಯೇಕವಾಗಿ ಹೇಳಬೇಕಿಲ್ಲ. ಸಾದ್ವಿ ಪ್ರಜ್ಞಾಸಿಂಗ್, ಪುರೋಹಿತ್, ಆಸೀಮಾನಂದರುಗಳು ಕಳೆದ ನಾಲ್ಕೈದು ವರ್ಷಗಳಿಂದ ಆರೋಪವನ್ನು ಹೊತ್ತು ಜೈಲಲ್ಲಿದ್ದಾರೆ ಎಂಬುದನ್ನು ಹೆಗಡೆಯವರು ಚೆನ್ನಾಗಿಯೇ ಬಲ್ಲರು. ಇಷ್ಟಿದ್ದೂ ಹೆಗಡೆಯವರು ತೀರಾ ಅಜ್ಞಾನಿಯಂತೆ ಮತ್ತು ಎಲ್‍ಕೆಜಿ ಮಗುವಿನಂತೆ ಮಾತಾಡಿರುವುದಕ್ಕೆ ಕಾರಣ ಏನು? ಸಿರಿಯಾ, ಇರಾಕ್, ಯಮನ್ ಮತ್ತಿತರ ಕಡೆ ನಡೆಯುತ್ತಿರುವ ಹಿಂಸೆ, ಹತ್ಯೆ, ಸಾಮೂಹಿಕ ವಲಸೆಗಳನ್ನು ನೋಡಿ ಹೆಗಡೆಯವರು ಈ ನಿರ್ಧಾರಕ್ಕೆ ಬಂದಿರುವರಾದರೆ, ತಮ್ಮ ಅರಿವಿನ ಮಟ್ಟವನ್ನು ಹೆಚ್ಚಿಸಿಕೊಳ್ಳಬೇಕಾದ ಅಗತ್ಯವಿದೆಯೆಂದು ಅವರಿಗೆ ಹೇಳಬೇಕಾಗುತ್ತದೆ. ಅರಬ್ ವಲಯದ ಹಿಂಸಾಚಾರಗಳಿಗೆ ಭೌಗೋಳಿಕವಾದ ಕಾರಣ ಇದೆ. ರಾಜ ಪ್ರಭುತ್ವದ ವಿರುದ್ಧ ಸಿಡಿದೆದ್ದ ಪ್ರಜಾ ಚಳವಳಿಯು ಕ್ರಮೇಣ ಹಳಿತಪ್ಪಿ ವಿಧ್ವಂಸಕ ಶಕ್ತಿಗಳು ಆಪೋಶನ ಪಡೆದುದರ ಫಲಿತಾಂಶ ಅದು. ಅಲ್ಲಿನ ಸಂಘರ್ಷವೇ ಗೋಜಲುಗಳ ಗುಢಾಣ. ಯಾರು ಸಾಚಾ ಯಾರು ನಕಲಿ ಎಂಬುದನ್ನು ತಕ್ಷಣಕ್ಕೆ ತೀರ್ಮಾನಿಸದಷ್ಟು ಆ ‘ರಣಾಂಗಣ’ ಮನುಷ್ಯ ವಿರೋಧಿಯಾಗಿ ಬಿಟ್ಟಿದೆ. ಬಾಹ್ಯನೋಟಕ್ಕೆ, ರಶ್ಯಾವು ಅಸದ್‍ರ ಪರ ಮತ್ತು ಐಸಿಸ್‍ನ ವಿರುದ್ಧ ಹೋರಾಡುತ್ತಿದೆ. ಅಮೇರಿಕವಾದರೋ ಅಸದ್‍ರ ವಿರುದ್ಧ ಮತ್ತು ಐಸಿಸ್‍ನೊಂದಿಗೆ ಮೃದುವಾಗಿ ವರ್ತಿಸುತ್ತಿದೆ. ಸಂಪೂರ್ಣ ಆಂತರಿಕವಾಗಿರುವ ಯಮನ್ ಸಂಘರ್ಷದಲ್ಲಿ ಸೌದಿ ಒಂದು ಪಕ್ಷವನ್ನು ಬೆಂಬಲಿಸುತ್ತಿದೆ. ಅಷ್ಟಕ್ಕೂ ಐಸಿಸ್‍ಗೆ, ಯಮನ್‍ನ ಆಡಳಿತ ವಿರೋಧಿ ಗುಂಪಿಗೆ, ಕುರ್ದ್‍ಗಳಿಗೆ, ಶಿಯಾ-ಸುನ್ನಿ ಜಗಳಕೋರರಿಗೆ ಶಸ್ತ್ರಾಸ್ತ್ರ ಸರಬರಾಜು ಎಲ್ಲಿಂದ? ಅವರ ಆದಾಯ ಮೂಲ ಯಾವುದು? ಒಂದು ರಾಷ್ಟ್ರಕ್ಕೇ ಸವಾಲು ಒಡ್ಡಬಹುದಾದಷ್ಟು ಆಧುನಿಕ ಶಸ್ತ್ರಾಗಳು ಈ ಸಾಮಾನ್ಯ ಜನರ ಗುಂಪಿಗೆ ಸರಬರಾಜು ಮಾಡುತ್ತಿರುವವರು ಯಾರು, ಅವರ ಉದ್ದೇಶವೇನು ಎಂಬುದನ್ನೆಲ್ಲ ಸಂಸದರಾಗಿರುವ ಅನಂತ ಹೆಗಡೆಯವರಿಗೆ ವಿವರಿಸಬೇಕಿಲ್ಲ. ಅರಬ್ ವಲಯ ಸಂಘರ್ಷ ಪೀಡಿತವಾಗಿರುವಷ್ಟೂ ದಿನ ಅಮೆರಿಕ ಸಹಿತ ಯುರೋಪಿಯನ್ ರಾಷ್ಟ್ರಗಳು ಸುಖವಾಗಿರುತ್ತವೆ. ಅವುಗಳ ಅರ್ಥವ್ಯವಸ್ಥೆ ಸುಸ್ಥಿತಿಯಲ್ಲಿರುತ್ತದೆ. ಶಸ್ತ್ರಾಸ್ತ್ರಗಳ ಉತ್ಪಾದನೆ ಮತ್ತು ಮಾರಾಟ ಭರ್ಜರಿಯಾಗಿ ನಡೆಯುತ್ತಿರುತ್ತದೆ. ಬಹುಶಃ ಇಸ್ರೇಲ್‍ನ್ನು ಅರಬ್ ಜಗತ್ತಿನ ನಡುವೆ ಹುಟ್ಟು ಹಾಕಿರುವುದರ ಹಿಂದಿನ ಉದ್ದೇಶ ಇದುವೇ ಇರಬೇಕು. ಎಲ್ಲಿಯವರೆಗೆ ಇಸ್ರೇಲ್‍ನ ಅಸ್ತಿತ್ವ ಇರುತ್ತದೋ ಅಲ್ಲಿಯವರೆಗೆ ಅರಬ್ ಜಗತ್ತಿನಲ್ಲಿ ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ. ಇಸ್ರೇಲ್ ಪರ, ವಿರುದ್ಧ ಮತ್ತು ತಟಸ್ಥ ಎಂಬುದಾಗಿ ಅರಬ್ ಜಗತ್ತು ವಿಭಜನೆಗೊಳ್ಳುವುದು ಮತ್ತು ಆ ಕಾರಣದಿಂದಾಗಿಯೇ ಪರಸ್ಪರ ಸದಾ ಸಂದೇಹದಿಂದಲೇ ಬದುಕುವುದು ಅನಿವಾರ್ಯವಾಗುತ್ತದೆ. ಈ ವಾತಾವರಣವು ಶಸ್ತ್ರಾಸ್ತ್ರ ಖರೀದಿಗೆ ಪೈಪೋಟಿಯನ್ನು ಪ್ರಚೋದಿಸುತ್ತದೆ. ಈ ವಾತಾವರಣವನ್ನು ಒಪ್ಪದ ಮಂದಿ ಪ್ರತಿಭಟನೆಗಿಳಿಯುತ್ತಾರೆ. ಈ ಪ್ರತಿಭಟನೆಯನ್ನು ಇನ್ನಾರೋ ಹೈಜಾಕ್ ಮಾಡುತ್ತಾರೆ. ಅವರ ಕೈಗೆ ಆಧುನಿಕ ಶಸ್ತ್ರಾಸ್ತ್ರಗಳು ಬರುತ್ತವೆ. ಅಂದಹಾಗೆ, ಈ ಪ್ರಕ್ರಿಯೆಯನ್ನು ನಾವು ಅರಬ್ ಜಗತ್ತಿಗೆ ಮಾತ್ರ ಸೀಮಿತಗೊಳಿಸಬೇಕಿಲ್ಲ. ಮುಂದೊಂದು ದಿನ ಭಾರತೀಯ ಉಪಭೂಖಂಡದಲ್ಲೂ ಇಸ್ರೇಲ್‍ನಂಥ ಖೊಟ್ಟಿ ರಾಷ್ಟ್ರವೊಂದನ್ನು ಅಮೇರಿಕ ಸಹಿತ ಬಲಾಢ್ಯ ರಾಷ್ಟ್ರಗಳು ಹುಟ್ಟು ಹಾಕಬಹುದು. ಪಾಕ್‍ನ ಭಾಗವಾಗಿರುವ ಬಲೂಚಿಸ್ತಾನ ಮತ್ತು ಅದರ ವಶದಲ್ಲಿರುವ ಕಾಶ್ಮೀರವನ್ನು ಒಟ್ಟು ಸೇರಿಸಿ ಪ್ರತ್ಯೇಕ ರಾಷ್ಟ್ರ ಕಟ್ಟುವ ಯೋಜನೆ ರೂಪಿಸಬಹುದು. ಈ ಎರಡೂ ಪ್ರದೇಶಗಳು ಚೀನಾದ ಗಡಿಯನ್ನು ಹಂಚಿಕೊಂಡಿದ್ದು, ಇಂಥದ್ದೊಂದು ರಾಷ್ಟ್ರ ಅಸ್ತಿತ್ವಕ್ಕೆ ಬಂದರೆ ಭಾರತಕ್ಕೆ ಚೀನಾದ ಭೀತಿ ಕಡಿಮೆಯಾಗುತ್ತದೆ, ಚೀನಾದೊಂದಿಗೆ ಗಡಿ ಹಂಚುವಿಕೆಯೂ ತಪ್ಪುತ್ತದೆ ಎಂದು ಅದು ನಂಬಿಸಬಹುದು. ಆ ಬಳಿಕ ಈ ‘ಕೂಸ’ನ್ನು ಇಟ್ಟುಕೊಂಡು ಭಾರತ-ಪಾಕ್-ಚೀನಾಗಳ ಮಧ್ಯೆ ಸಂದೇಹವನ್ನು ಹುಟ್ಟಿಸಿ ಶಸ್ತ್ರಾಸ್ತ್ರ ಮಾರಾಟಕ್ಕೆ ಚಾಲನೆ ಕೊಡಬಹುದು. ಬಹುಶಃ ಇಂಥದ್ದೊಂದು ಸಮೀಕರಣವನ್ನು ಅನಂತ ಹೆಗಡೆಯವರು ಮಾಡಿರುವರೋ ಇಲ್ಲವೋ ಆದರೆ, ಇದು ಅಸಂಭವವಲ್ಲ. ಜಾಗತಿಕ ವಿದ್ಯಮಾನಗಳ ಹಿನ್ನೆಲೆಯಲ್ಲಿ ನೋಡುವುದಾದರೆ ಇಂಥದ್ದೊಂದು ಸಂಭವನೀಯತೆಯನ್ನು ಉಡಾಫೆಯಿಂದ ನಿರ್ಲಕ್ಷಿಸಬೇಕಾಗಿಯೂ ಇಲ್ಲ. ಒಂದು ವೇಳೆ, ಆ ಸಂದರ್ಭದಲ್ಲಿ ಇಲ್ಲಿ ಹುಟ್ಟಿಕೊಳ್ಳಬಹುದಾದ ಪ್ರತಿಭಟನೆ ಮತ್ತು ಆ ಪ್ರತಿಭಟನೆಯನ್ನು ಶಸ್ತ್ರಾಸ್ತ್ರ ವ್ಯಾಪಾರಿಗಳು ಹೈಜಾಕ್ ಮಾಡಿ ಹಿಂಸಾತ್ಮಕಗೊಳಿಸಿದರೆ ಏನಾಗಬಹುದು? ಆ ಖರೀದಿಗೊಂಡ ಪ್ರತಿಭಟನಾಕಾರರ ಉಡುಪು, ಧಾರ್ಮಿಕ ಚಿಹ್ನೆ, ಭಾಷೆಯನ್ನು ನೋಡಿಕೊಂಡು ಅವರ ಧರ್ಮದ ಮೇಲೆ ಆ ಹಿಂಸೆಯ ಆರೋಪವನ್ನು ಹೊರಿಸಬಹುದೇ? ಅವರ ಧರ್ಮವೇ ಅದಕ್ಕೆ ಕಾರಣ ಎಂದು ಹೇಳಬಹುದೇ?
        ಹಿಂಸಾನಿರತರು ಪೈಜಾಮ, ಗಡ್ಡ ಧರಿಸಿದ್ದಾರೆಂದೂ ಅಲ್ಲಾಹು ಅಕ್ಬರ್ ಹೇಳುತ್ತಾರೆಂದೂ ವಾದಿಸಿ, ಅವರ ಕೃತ್ಯಗಳಿಗೆ ಇಸ್ಲಾಮೇ ಕಾರಣ ಎಂದು ಹೇಳುವುದು ಅತ್ಯಂತ ಬೇಜವಾಬ್ದಾರಿ ನಿಲುವಾಗುತ್ತದೆ. ಅತ್ಯಾಚಾರ ನಡೆಸುವ ಮತ್ತು ಭ್ರೂಣವನ್ನು ಕತ್ತಿಯ ಮೊನೆಗೆ ಸಿಕ್ಕಿಸಿ ಸಂಭ್ರಮಿಸುವ ವ್ಯಕ್ತಿ ‘ಹರಹರ ಮಹಾದೇವ್’ ಎಂದು ಘೋಷಿಸುವುದರಿಂದ ಅದು ಹಿಂದೂ ಧರ್ಮದ ಕೃತ್ಯವಾಗುತ್ತದೆಯೇ? ಆ ಕಾರಣಕ್ಕಾಗಿ ಹಿಂದೂ ಧರ್ಮವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಬಹುದೇ?  ಆದ್ದರಿಂದ ಅನಂತ ಕುಮಾರ್ ಹೆಗಡೆಯವರ ಮಾತು ಅತ್ಯಂತ ಖಂಡನೀಯ. ಓರ್ವ ಸಂಸದರಾಗಿ ಅವರ ಹೇಳಿಕೆ ಅತ್ಯಂತ ಬೇಜವಾಬ್ದಾರಿತನದ್ದು. ನಿಜವಾಗಿ, ನಾಶ ಮಾಡಬೇಕಾದದ್ದು ಧರ್ಮವನ್ನಲ್ಲ, ಧರ್ಮಾಂಧತೆಯನ್ನು. ಈ ಧರ್ಮಾಂಧತೆ ಎಲ್ಲ ಧರ್ಮಾನುಯಾಯಿಗಳಲ್ಲೂ ಇವೆ. ‘ಹೆಗಡೆ’ ತನ್ನ ಬಣ್ಣದ ಕನ್ನಡಕವನ್ನು ಕಳಚಿಟ್ಟು ನೋಡಲಿ.

No comments:

Post a Comment