Wednesday 23 March 2016

ನಕಾರಾತ್ಮಕತೆಯ ಪ್ರಾಬಲ್ಯ ಮತ್ತು ಒಂದು ಸಂಶೋಧನೆ

       ಕಳೆದವಾರ ಎರಡು ಪ್ರಮುಖ ಘಟನೆಗಳು ಜರುಗಿದುವು. ಇವುಗಳಲ್ಲಿ ಒಂದು ಘಟನೆಗೆ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆಯಲು ಸಾಧ್ಯವಾದರೆ, ಇನ್ನೊಂದು ಘಟನೆ ಹತ್ತಾರು ಸುದ್ದಿಗಳ ಮಧ್ಯೆ ಕೇವಲ ಒಂದು ಸುದ್ದಿಯಾಗುವ ಭಾಗ್ಯವನ್ನಷ್ಟೇ ಕಂಡು ಸತ್ತು ಹೋಯಿತು. ಮಾರ್ಚ್ 15ರಂದು ರಾಜಸ್ಥಾನದ ಮೇವಾರ್ ವಿಶ್ವವಿದ್ಯಾನಿಲಯದಲ್ಲಿ 4 ಮಂದಿ ಕಾಶ್ಮೀರಿ ವಿದ್ಯಾರ್ಥಿಗಳ ಮೇಲೆ ಬಲಪಂಥೀಯ ದುಷ್ಕರ್ಮಿಗಳಿಂದ ಹಲ್ಲೆ ನಡೆಯಿತು. ಇವರು ತಮ್ಮ ಹಾಸ್ಟೆಲ್ ಕೊಠಡಿಯಲ್ಲಿ ಗೋಮಾಂಸವನ್ನು ಬೇಯಿಸುತ್ತಿದ್ದರು ಎಂಬುದು ಈ ಹಲ್ಲೆಗೆ ಕಾರಣವನ್ನಾಗಿ ಕೊಡಲಾಯಿತು. ಪೊಲೀಸರು ಹಲ್ಲೆಗೊಳಗಾದ ವಿದ್ಯಾರ್ಥಿಗಳನ್ನೇ ಬಂಧಿಸಿದರು. ಮರುದಿನ ಅವರಿಗೆ ಜಾಮೀನು ನೀಡುವಾಗ, 'ಆರು ತಿಂಗಳುಗಳ ಕಾಲ ನಿಮ್ಮ ಮೇಲೆ ನಿಗಾ ಇಡಲಾಗುವುದು' ಎಂದು ಕೋರ್ಟು ಎಚ್ಚರಿಸಿತು. ಇದರ ಜೊತೆಜೊತೆಗೇ ಅಲ್ಲಿನ ಪ್ರಾಣಿ ಸಾಕಾಣಿಕಾ ಇಲಾಖೆಯಿಂದ ಹೊರಬಿದ್ದ ಸಂಶೋಧನಾ ವರದಿಯು ಆ ಇಡೀ ಘಟನೆಯು ಪೂರ್ವಗ್ರಹ ಪೀಡಿತವಾದುದು ಎಂಬುದಾಗಿ ಸಾರಿತು. ‘ಅವರು ಬೇಯಿಸುತ್ತಿದ್ದುದು ಗೋಮಾಂಸವಲ್ಲ, ಆಡಿನ ಮಾಂಸ’ ಎಂಬುದಾಗಿ ಅದು ಮಾಂಸ ಪರೀಕ್ಷೆಯ ಬಳಿಕ ಘೋಷಿಸಿತು. ಈ ಎಲ್ಲವೂ ರಾಷ್ಟ್ರಮಟ್ಟದಲ್ಲಿ ಸುದ್ದಿಗೀಡಾಯಿತು. ಟಿ.ವಿ. ಚಾನೆಲ್‍ಗಳು ಈ ಸುದ್ದಿಯನ್ನಾಧರಿಸಿ ಚರ್ಚೆಗಳನ್ನು ಏರ್ಪಡಿಸಿದುವು. ಪತ್ರಿಕೆಗಳಲ್ಲೂ ಸಾಕಷ್ಟು ಕವರೇಜ್ ಲಭ್ಯವಾದುವು. ಇದಾಗಿ ಮೂರು ದಿನಗಳ ಬಳಿಕ ಮಾರ್ಚ್ 20ರಂದು ದೆಹಲಿಯ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯ ವಿಶ್ವವಿದ್ಯಾನಿಲಯದ ಮೂವರು ವಿದ್ಯಾರ್ಥಿಗಳು ತಮ್ಮ ವಿಶೇಷ ಪ್ರತಿಭೆಯನ್ನು ಪ್ರದರ್ಶಿಸಿದರು. ರಾಷ್ಟ್ರಪತಿ ಭವನ ಇದಕ್ಕೆ ಸಾಕ್ಷಿಯಾಯಿತು. ವಿಶ್ವವಿದ್ಯಾನಿಲಯಗಳಲ್ಲಿ ಆಗಿರಬಹುದಾದ ಹೊಸ ಸಂಶೋಧನೆಗಳನ್ನು ಪ್ರದರ್ಶಿಸಲು ರಾಷ್ಟ್ರಪತಿ ಭವನವು ಆಹ್ವಾನಿಸಿತ್ತು. ಅದರಂತೆ 114 ಸಂಶೋಧನೆಗಳ ಪಟ್ಟಿಯಲ್ಲಿ 6ನ್ನು ಮಾತ್ರ ಆಯ್ಕೆ ಮಾಡಲಾಗಿತ್ತು. ಐಐಟಿ ಕಾನ್ಪುರ, ಜಮ್ಮು ಕೇಂದ್ರೀಯ ವಿಶ್ವ ವಿದ್ಯಾನಿಲಯ, ಐಐಟಿ ಮದ್ರಾಸ್, ಎನ್ಐಟಿ ತಿರುಚಿನಾಪಳ್ಳಿ, ಐಐಟಿ ದೆಹಲಿ ಮತ್ತು ಜಾಮಿಯಾ ಮಿಲ್ಲಿಯಾ ಇಸ್ಲಾಮಿಯ ವಿಶ್ವವಿದ್ಯಾನಿಲಯಗಳು ಈ ಪ್ರದರ್ಶನಕ್ಕೆ ಆಯ್ಕೆಯಾದುವು. ಜಾಮಿಯಾದ ಹುಮಾ ಪರ್ವೇಝï, ಫೈಝ ಜಮಾಲ್ ಮತ್ತು ಫರಾಜ್  ಖಾನ್ ಎಂಬೀ ವಿದ್ಯಾರ್ಥಿಗಳು 'ಇನ್ನೋಕಾರ್ಟ್' ಎಂಬ ಪರಿಸರ ಸ್ನೇಹಿ ತಳ್ಳುಗಾಡಿಯನ್ನು ಪ್ರದರ್ಶಿಸಿ ವಿಶೇಷ ಗೌರವಕ್ಕೆ ಪಾತ್ರರಾದರು. ಇದು ಆಹಾರ ಮಾರಾಟ ಮಾಡುವ ತಳ್ಳುಗಾಡಿ. ಇದರಲ್ಲಿ ಸೂಕ್ತ ದಾಸ್ತಾನು ವ್ಯವಸ್ಥೆಯಿದೆ. ಮೇಲೆ ಮುಚ್ಚಿಗೆಯ ವ್ಯವಸ್ಥೆ ಇದೆ. ಒಣ ಮತ್ತು ಹಸಿ ತ್ಯಾಜ್ಯವನ್ನು ಸಂಗ್ರಹಿಸಿಡಲು ಎರಡು ಪ್ರತ್ಯೇಕ ವಿಭಾಗಗಳ ಜೊತೆಗೇ ಮುಚ್ಚಿಗೆಯ ಮೇಲೆ ಸೌರ ವಿದ್ಯುತ್ ಉತ್ಪಾದಿಸುವ ವ್ಯವಸ್ಥೆಯನ್ನೂ ಮಾಡಲಾಗಿದೆ. ಈ ‘ಇನ್ನೋಕಾರ್ಟ್’ ಭಾರತದ ಬೀದಿ ಆಹಾರ ಮಾರಾಟ ಪದ್ಧತಿಯಲ್ಲಿ ಕ್ರಾಂತಿಕಾರಿ ಬದಲಾವಣೆ ತರಬಲ್ಲುದು ಎಂಬ ನಿರೀಕ್ಷೆಯನ್ನು ವ್ಯಕ್ತಪಡಿಸಲಾಗಿದೆ. ವಿವಿಯ ಆವರಣದ ರಸ್ತೆಗಳಲ್ಲಿರುವ ಕ್ಯಾಂಟೀನಿನ ಆಹಾರ ಪದಾರ್ಥಗಳ ಮಾರಾಟದಲ್ಲಿ ತೊಡಗಿಸಿ ಈ ತಳ್ಳುಗಾಡಿಯನ್ನು ಪರೀಕ್ಷಿಸುತ್ತೇವೆ ಮತ್ತು ಪೇಟೆಂಟ್‍ಗಾಗಿ ಅರ್ಜಿ ಹಾಕುತ್ತೇವೆ ಎಂದು ಈ ಉತ್ಸಾಹಿ ಮಕ್ಕಳು ಹೇಳಿಕೊಂಡಿದ್ದಾರೆ. ಆದರೆ ಈ ಸಂಶೋಧನೆಯ ಬಗ್ಗೆ ಮಾಧ್ಯಮಗಳು ಬಹುತೇಕ ಶೂನ್ಯ ಕುತೂಹಲವನ್ನು ವ್ಯಕ್ತಪಡಿಸಿದುವು. ತೀರಾ ಸಣ್ಣ ಸುದ್ದಿಯ ಗೌರವವನ್ನಷ್ಟೇ ಅವು ಇದಕ್ಕೆ ಕೊಟ್ಟವು. ಕೆಲವು ಪತ್ರಿಕೆಗಳಂತೂ ಇದಕ್ಕೆ ಸುದ್ದಿಯಾಗುವ ಭಾಗ್ಯವನ್ನೂ ಕರುಣಿಸಲಿಲ್ಲ. ಅಷ್ಟಕ್ಕೂ, ಮಾಧ್ಯಮಗಳ ಮಟ್ಟಿಗೆ ಈ ಸಂಶೋಧನೆಯಲ್ಲಿ ಸೆನ್ಸೇಷನಲ್ ಅನ್ನುವುದು ಏನೂ ಇಲ್ಲ. ಒಂದು ತಳ್ಳುಗಾಡಿ, ಮೂವರು ಮುಸ್ಲಿಮ್ ವಿದ್ಯಾರ್ಥಿಗಳು ಮತ್ತು ಜಾಮಿಯಾ ಮಿಲ್ಲಿಯಾ ವಿಶ್ವವಿದ್ಯಾನಿಲಯ.. ಇಷ್ಟನ್ನು ಬಿಟ್ಟರೆ ಉಳಿದಂತೆ ಈ ಸುದ್ದಿ ಗೊಂಚಲಿನಲ್ಲಿ ಭಾರತ್ ಮಾತಾಕಿ ಜೈ, ಪಾಕಿಸ್ತಾನ್ ಜಿಂದಾಬಾದ್, ಖಾಕಿ ಚಡ್ಡಿ-ಕಂದು ಪ್ಯಾಂಟು, ದೇಶದ್ರೋಹ-ದೇಶಪ್ರೇಮ, ಗೋಮಾಂಸ.. ಮುಂತಾದುವುಗಳಲ್ಲಿರುವ ಆಕರ್ಷಣೆಯೇನೂ ಈ ಸಂಶೋಧನೆಯಲ್ಲಿಲ್ಲವಲ್ಲ.
  ನಿಜವಾಗಿ, ವಿವಾದಾತ್ಮಕವಲ್ಲದ ಮತ್ತು ಸಕಾರಾತ್ಮಕವಾದ ಸುದ್ದಿಗಳಿಗೆ ಪ್ರಾಮುಖ್ಯತೆಯನ್ನು ಕೊಡುವುದು ಮತ್ತು ಅವುಗಳ ಮೇಲೆ ಚರ್ಚೆ-ಸಂವಾದಗಳನ್ನು ಏರ್ಪಾಡು ಮಾಡುವುದು ದಡ್ಡತನ ಎಂದು ಕರೆಸಿಕೊಳ್ಳುವಷ್ಟು ಇವತ್ತು ಅಪ್ರಸ್ತುತ ಅನಿಸಿಕೊಳ್ಳುತ್ತಿದೆ. ರಾಷ್ಟ್ರಮಟ್ಟದಲ್ಲಿ ಇವತ್ತು ಸುದ್ದಿಯೊಂದು ಗಮನ ಸೆಳೆಯಬೇಕಾದರೆ ಅದು ಮುಸ್ಲಿಮರಿಗೆ ಸಂಬಂಧಿಸಿರಬೇಕು ಮತ್ತು ಸಂಘಪರಿವಾರ ಅದರಲ್ಲಿ ಭಾಗಿಯಾಗಿರಬೇಕು ಎಂಬ ಅಲಿಖಿತ ನಿಯಮ ಗೊತ್ತಿದ್ದೋ  ಗೊತ್ತಿಲ್ಲದೆಯೋ ಜಾರಿಯಲ್ಲಿದೆ. ಗೋಸಾಗಾಟ, ಗೋಮಾಂಸ, ದೇಶದ್ರೋಹ, ಭಯೋತ್ಪಾದನೆ ಮುಂತಾದುವುಗಳೇ ಈ ದೇಶದಲ್ಲಿ ಇವತ್ತು ಸದಾ ಬ್ರೇಕಿಂಗ್ ನ್ಯೂಸ್. ಇಲ್ಲೆಲ್ಲಾ  ಮುಸ್ಲಿಮರ ಪಾತ್ರ ಯಾವಾಗಲೂ ನಕಾರಾತ್ಮಕ. ಮುಸ್ಲಿಮರನ್ನು ಅಪರಾಧಿಗಳಂತೆ ಬಿಂಬಿಸಿ ಅವರನ್ನು ಹಲ್ಲೆಗೋ ಹತ್ಯೆಗೋ ಒಳಪಡಿಸುವುದು ಬಲಪಂಥೀಯ ದುಷ್ಕರ್ಮಿಗಳ ತಂತ್ರಗಾರಿಕೆ. ಈ ವಿಷಯವನ್ನೆತ್ತಿಕೊಂಡು ಮಾಧ್ಯಮಗಳು ಆ ಬಳಿಕ ಚರ್ಚೆಯನ್ನೇರ್ಪಡಿಸುತ್ತವೆ. ಜಾತ್ಯತೀತವಾದಿಗಳು ಈ ಚರ್ಚೆಯಲ್ಲಿ ಭಾಗವಹಿಸುತ್ತಾರೆ. ದುಷ್ಕರ್ಮಿಗಳು ಹಸಿ ಹಸಿ ಸುಳ್ಳನ್ನು ಹೇಳಲು ಈ ಚರ್ಚಾ ವೇದಿಕೆಯನ್ನು ದುರುಪಯೋಗಿಸುತ್ತಾರೆ. ಕೊನೆಗೆ ಕೋಣ ಸಾಗಾಟವು ಗೋಸಾಗಾಟವಾಗಿ ಪರಿವರ್ತನೆಯಾಗುತ್ತದೆ. ಆಡಿನ ಮಾಂಸವು ಗೋಮಾಂಸವಾಗುತ್ತದೆ. ಹಸಿರು ಧ್ವಜವು ಪಾಕಿಸ್ತಾನದ ಧ್ವಜವಾಗಿ ಮಾರ್ಪಡುತ್ತದೆ. ಥಳಿತಕ್ಕೊಳಗಾದವರು ಅಪರಾಧಿಗಳಾಗಿಯೂ ಥಳಿಸಿದವರು ನ್ಯಾಯವಂತರಾಗಿಯೂ ಬಿಂಬಿತರಾಗುತ್ತಾರೆ. ಒಂದು ಬಗೆಯ ಕೋಮುಧ್ರುವೀಕರಣಕ್ಕೆ ಇಂಥ ಚರ್ಚೆಗಳು ಬಹುತೇಕ ಬಾರಿ ವೇದಿಕೆಯಾಗುತ್ತಿವೆಯೇ ಹೊರತು, ಸಕಾರಾತ್ಮಕ ಫಲಿತಾಂಶಗಳನ್ನು ತರುವಲ್ಲಿ ವಿಫಲವಾಗುತ್ತಿವೆಯೇನೋ ಎಂದು ಅನಿಸುತ್ತಿದೆ. ಬಹುಶಃ ಸಕಾರಾತ್ಮಕ ಸುದ್ದಿಗಳ ಮೇಲಿನ ಚರ್ಚೆಯನ್ನು ತಡೆಯುವುದಕ್ಕಾಗಿ ಉದ್ದೇಶಪೂರ್ವಕವಾಗಿಯೇ ಬಲಪಂಥೀಯರು ಇಂಥ ಘಟನೆಗಳನ್ನು ಹುಟ್ಟು ಹಾಕುತ್ತಿದ್ದಾರೋ ಎಂಬ ಅನುಮಾನವೂ ಮೂಡುತ್ತಿದೆ. ಹೀಗೆ ಮುಸ್ಲಿಮರೆಂದರೆ ನಕಾರಾತ್ಮಕತೆ, ನಕಾರಾತ್ಮಕತೆಯೆಂದರೆ ಮುಸ್ಲಿಮರು ಎಂಬೊಂದು ವಾತಾವರಣದ ಸೃಷ್ಟಿಗೆ ಒಂದು ಗುಂಪು ತೀವ್ರ ಪರಿಶ್ರಮ ನಡೆಸುತ್ತಿರುವುದರ ಮಧ್ಯೆ, ಸಕಾರಾತ್ಮಕವಾದುದನ್ನು ಚರ್ಚೆಗೆ ಎತ್ತಿಕೊಳ್ಳಬೇಕಾದ ತುರ್ತೊಂದು ಸಮಾಜದ ಮೇಲಿದೆ. ಒಂದು ಕಡೆ ಮೋದಿ ಸರಕಾರವು ಜಾಮಿಯಾ ಮಿಲ್ಲಿಯ ಮತ್ತು ಅಲೀಘಡ ವಿವಿಯ ಅಲ್ಪಸಂಖ್ಯಾತ ಸ್ಥಾನಮಾನವನ್ನು ಕಿತ್ತುಕೊಳ್ಳಲು ಯತ್ನಿಸುತ್ತಿದೆ. ಈ ಕುರಿತಂತೆ ಸುಪ್ರೀಮ್ ಕೋರ್ಟಿನಲ್ಲಿಯೇ ತನ್ನ ಇಂಗಿತವನ್ನು ಅದು ವ್ಯಕ್ತಪಡಿಸಿದೆ. ಇನ್ನೊಂದು ಕಡೆ ಜಾಮಿಯಾದ ಮೂವರು ಮುಸ್ಲಿಮ್ ವಿದ್ಯಾರ್ಥಿಗಳು ದೇಶವೇ ಹೆಮ್ಮೆ ಪಡಬಹುದಾದ ಸಂಶೋಧನೆಯೊಂದನ್ನು ನಡೆಸಿದ್ದಾರೆ. ಈ ಸುದ್ದಿ ಯಾಕೆ ಮಹತ್ವಪೂರ್ಣ ಎಂದರೆ, ಮುಸ್ಲಿಮ್ ಎಂಬ ಐಡೆಂಟಿಟಿಯನ್ನೇ ದೇಶದ್ರೋಹವಾಗಿಯೋ ಅಸಹಿಷ್ಣುವಾಗಿಯೋ ಅಥವಾ ಅನುಮಾನಿತವಾಗಿಯೋ ಕಾಣಲಾಗುತ್ತಿರುವ ಈ ಹೊತ್ತಿನಲ್ಲಿ ಈ ಸಾಧನೆಯನ್ನು ಮಾಡಲಾಗಿದೆ ಎಂಬುದರಿಂದಾಗಿ. ಸಹಜ ವಾತಾವರಣದಲ್ಲಿ ಮಾಡುವ ಸಂಶೋಧನೆಗೂ ತೀರಾ ಕಲುಷಿತಗೊಂಡಿರುವ ವಾತಾವರಣದಲ್ಲಿ ಮಾಡುವ ಸಂಶೋಧನೆಗೂ ತುಂಬಾ ವ್ಯತ್ಯಾಸ ಇದೆ. ಆದ್ದರಿಂದಲೇ ಈ ಸಂಶೋಧನೆಯು ಪ್ರಾಮುಖ್ಯತೆಯನ್ನು ಪಡೆಯಬೇಕಿತ್ತು ಎಂದು ಮಾತ್ರವಲ್ಲ, ಮಾಧ್ಯಮಗಳು ಈ ಸುದ್ದಿಯ ಹಿನ್ನೆಲೆಯಲ್ಲಿ ಸಕಾರಾತ್ಮಕ ಚರ್ಚೆಯೊಂದನ್ನು ಹುಟ್ಟುಹಾಕುವುದಕ್ಕೂ ಪ್ರಯತ್ನಿಸಬೇಕಾಗಿತ್ತು ಎಂದು ಅನಿಸುವುದು. ಇಂದಿನ ಮುಸ್ಲಿಮ್ ಪ್ರತಿಕೂಲ ಪರಿಸ್ಥಿತಿಯಲ್ಲಿ ‘ಇನ್ನೋಕಾರ್ಟ್' ಸುದ್ದಿಯು ಚರ್ಚೆಗೆ ಒಳಗಾಗುತ್ತಿದ್ದರೆ ಅದು ಸಕಾರಾತ್ಮಕ ವಾತಾವರಣಕ್ಕೆ ಕಾರಣವಾಗುವುದಕ್ಕೂ ಅವಕಾಶ ಇತ್ತು. ಅಲ್ಲದೇ ಬಲಪಂಥೀಯರ ಉದ್ದೇಶವನ್ನು ವಿಫಲಗೊಳಿಸುವುದಕ್ಕೂ ಅದು ನೆರವಾಗುತ್ತಿತ್ತು. ದುರಂತ ಏನೆಂದರೆ, ಇವತ್ತು ವಿಷಯವೊಂದು ಚರ್ಚಾಸ್ಪದವಾಗಬೇಕಾದರೆ ಅದರಲ್ಲಿ ನಕಾರಾತ್ಮಕತೆ ಇರಲೇಬೇಕು ಎಂಬ ನಿಯಮವಿದೆ. ಆದ್ದರಿಂದ, ಇದನ್ನು ಮೀರುವ ಸಾಹಸ ಮಾಡಲೇಬೇಕಾಗಿದೆ. ಇಲ್ಲದಿದ್ದರೆ ಮುಂದೊಂದು ದಿನ ಸಮಾಜ ನಕಾರಾತ್ಮಕ ರೋಗಕ್ಕೆ ತುತ್ತಾಗುವ ಸಾಧ್ಯತೆ ಇಲ್ಲದಿಲ್ಲ.

No comments:

Post a Comment