Monday 4 July 2016

ಕುದಿಯುವ ಜೋಡಿಗಳು ಮತ್ತು ನಿಡುಸುಯ್ಯುವ ರಸ್ತೆಗಳು

      ವಿವಾಹ ವಿಚ್ಛೇದನ ಮತ್ತು ರಸ್ತೆ ಅಪಘಾತ ಎಂಬೆರಡು ಪದಗಳಿಗೆ ಪಾರಂಪಾರಿಕ ನಂಟೇನೂ ಇಲ್ಲ. ಅಲ್ಲದೇ ಇವೆರಡೂ ಪದಗಳು ಪ್ರತಿನಿಧಿಸುವ ಕ್ಷೇತ್ರಗಳೇ ಬೇರೆ ಮತ್ತು ಇವು ಸಾಮಾಜಿಕವಾಗಿ ಬೀರುವ ಪರಿಣಾಮಗಳೇ ಬೇರೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಇವೆರಡೂ ಎಷ್ಟು ಹತ್ತಿರದ ಸಂಬಂಧವನ್ನು ಹೊಂದಿವೆಯೆಂದರೆ, ಇವು ಒಂದೇ ಮನೆಯ ಸದಸ್ಯರೋ ಎಂದು ಅನುಮಾನಿಸುವಷ್ಟೂ ನಿಕಟವಾಗಿವೆ. ಮಾಧ್ಯಮಗಳ ಒಂದು ಪುಟದಲ್ಲಿ ಅಪಘಾತದ ಸುದ್ದಿಯಿದ್ದರೆ ಇನ್ನೊಂದು ಪುಟದಲ್ಲಿ ವಿವಾಹ ವಿಚ್ಛೇದನಕ್ಕೆ ಅರ್ಜಿ ಹಾಕಿದ ಅಥವಾ ವಿವಾಹ ವಿಚ್ಛೇದನ ಪಡಕೊಂಡ ಸುದ್ದಿಯಿರುತ್ತದೆ. ಸದ್ಯ ಟೊಮೆಟೊ, ಬೇಳೆಕಾಳುಗಳ ಬೆಲೆ ಏರಿಕೆಗಳಿಗಿಂತಲೂ ವೇಗವಾಗಿ ಇವೆರಡರ ಅಂಕಿ-ಸಂಖ್ಯೆಗಳಲ್ಲಿ ತೀವ್ರ ಏರಿಕೆಯಾಗುತ್ತಿದೆ. ಅತ್ಯಂತ ಹೆಚ್ಚು ಪ್ರಗತಿ ದರವನ್ನು ದಾಖಲಿಸುತ್ತಿರುವ ಎರಡು ಕ್ಷೇತ್ರಗಳಿವು. 2015ರಲ್ಲಿ ಒಟ್ಟು 1,46,133 ಮಂದಿ ರಸ್ತೆ ಅಪಘಾತದಿಂದಾಗಿ ಸಾವಿಗೀಡಾಗಿದ್ದಾರೆ ಎಂದು ಕೇಂದ್ರ ಸರಕಾರದ ರಸ್ತೆ ಸಾರಿಗೆ ಮಂತ್ರಾಲಯ ಬಿಡುಗಡೆಗೊಳಿಸಿದ ವಿವರಗಳೇ ಹೇಳುತ್ತವೆ. 2014ರಲ್ಲಿ ಈ ಸಾವುಗಳ ಸಂಖ್ಯೆ 1,39,671. ಅಂದರೆ, ಒಂದೇ ವರ್ಷದಲ್ಲಿ 1462 ಮಂದಿ ಈ ಸಾವಿನ ಪಟ್ಟಿಗೆ ಹೆಚ್ಚುವರಿಯಾಗಿ ಸೇರ್ಪಡೆಗೊಂಡಿದ್ದಾ ರೆ. ಪ್ರತಿದಿನ ಸುಮಾರು 400ರಷ್ಟು ಮಂದಿ ಅಪಘಾತಗಳಿಂದ ಸಾವನ್ನಪ್ಪುತ್ತಿದ್ದಾರೆ. ಪ್ರತಿ 10ರಲ್ಲಿ 8 ಅಪಘಾತಗಳಿಗೆ ಚಾಲಕರೇ ಕಾರಣ ಎಂದು ವರದಿ ಹೇಳುತ್ತಿದೆ. ಇದರಲ್ಲಿ 62% ಅಪಘಾತಗಳಿಗೆ ಅತೀ ವೇಗವೇ ಕಾರಣವಾಗಿದೆ. ಹಾಗಂತ, ಈ ರಸ್ತೆ ಅಪಘಾತಕ್ಕೆ ಹೋಲಿಸಿದರೆ ಕೌಟುಂಬಿಕ ಅಪಘಾತ(ವಿಚ್ಛೇದನ)ಗಳ ವಿವರ ಕಡಿಮೆ ಆಘಾತಕಾರಿಯೇನೂ ಅಲ್ಲ. ಕೇವಲ ಕೇರಳ ರಾಜ್ಯವೊಂದರಲ್ಲಿಯೇ ವರ್ಷಕ್ಕೆ 47,525 ವಿಚ್ಛೇದನಗಳು ನಡೆಯುತ್ತಿವೆ ಎಂದು ಸ್ವತಃ ಕೇಂದ್ರ ಸರಕಾರವೇ ಲೋಕಸಭೆಗೆ ಮಾಹಿತಿ ನೀಡಿದೆ. ಅಲ್ಲಿ ಪ್ರತಿ ಗಂಟೆಗೆ 5 ವಿಚ್ಛೇದನ ಪ್ರಕರಣಗಳು ನಡೆಯುತ್ತವೆ. ದಿನಕ್ಕೆ 130 ವಿಚ್ಛೇದನ ಪ್ರಕರಣಗಳು!
  ಅಷ್ಟಕ್ಕೂ, ವಿವಾಹವಾಗುವುದೇ ವಿಚ್ಛೇದನ ಪಡಕೊಳ್ಳುವುದಕ್ಕೆ ಎಂಬ ರೀತಿಯ ವಾತಾವರಣ ನಿರ್ಮಾಣಗೊಂಡಿರುವುದಕ್ಕೆ ಏನು ಕಾರಣ? ನರಮೇಧವೇ ರಸ್ತೆಗಳ ಪ್ರಮುಖ ಉದ್ದೇಶವಾಗಿರುವುದೇಕೆ? ಕಳೆದವಾರ ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ 8 ಪುಟ್ಟ ಶಾಲಾ ಮಕ್ಕಳ ‘ರಸ್ತೆಮೇಧ’ ನಡೆಯಿತು. ರಸ್ತೆಗಂಟಿದ ರಕ್ತದ ಕಲೆಗಳು, ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಟಿಫಿನು, ಬ್ಯಾಗುಗಳ ಬರೇ ಚಿತ್ರವನ್ನು ನೋಡಿದವರ ಕಣ್ಣುಗಳೂ ಆದ್ರ್ರವಾದುವು. ಹಾಗಂತ, ರಸ್ತೆಯನ್ನು ಶಿಕ್ಷಿಸಲು ಸಾಧ್ಯವಿಲ್ಲವಲ್ಲ. ಆದ್ದರಿಂದಲೇ, ಕುಂದಾಪುರದ ನಾಗರಿಕರು ಒಂದು ದಿನ ಬಂದ್ ಆಚರಿಸುವ ಮೂಲಕ ಸ್ವಯಂ ತಮ್ಮನ್ನೇ ಶಿಕ್ಷಿಸಿಕೊಂಡರು. ಈಗ ಎಲ್ಲವೂ ಸಹಜವಾಗಿದೆ. ರಸ್ತೆ ಇದ್ದಲ್ಲಿಯೇ ಇದೆ ಮತ್ತು ಇದ್ದಂತೆಯೇ ಇದೆ. ಮಕ್ಕಳು ಶಾಲೆಗೆ ಹೋಗತೊಡಗಿದ್ದಾರೆ. ವಾಹನಗಳ ವೇಗವೂ ಏರತೊಡಗಿದೆ. ಮಕ್ಕಳನ್ನು ಕಳಕೊಂಡ ಹೆತ್ತವರಿಗೆ ಸಕಲ ಸಂಕಟವನ್ನೂ ವರ್ಗಾಯಿಸಿ ಎಲ್ಲರೂ ಮುಂದೆ ಸಾಗುತ್ತಿದ್ದಾರೆ. ಒಂದು ರೀತಿಯಲ್ಲಿ ಅಪಘಾತ ಮತ್ತು ವಿಚ್ಛೇದನಗಳ ನಡುವೆ ಇರುವ ದೊಡ್ಡ ಸಾಮ್ಯತೆ ಇದು. ಎರಡರಲ್ಲೂ ಅತೀವ ವೇದನೆಯಿದೆ. ಅಷ್ಟೇ ದೂರುಗಳೂ ಇವೆ. ಇವೆರಡೂ ಮನೆಯ ಸಂತಸವನ್ನು ಕಿತ್ತುಕೊಳ್ಳುತ್ತದೆ. ಒಂದಷ್ಟು ಮಂದಿಯನ್ನು ಅನಾಥರಾಗಿಸುತ್ತದೆ. ಆಸ್ಪತ್ರೆ-ಕೋರ್ಟು ಎಂದೆಲ್ಲಾ ಅಲೆದಾಡಿಸುತ್ತದೆ. ದುಡ್ಡಿನ ಜೊತೆಗೆ ನೆಮ್ಮದಿಯನ್ನೂ ಕಿತ್ತುಕೊಳ್ಳುತ್ತದೆ.
  ಭಾರತದಲ್ಲಿ ಮದುವೆಯನ್ನು ಜನ್ಮಾಂತರಗಳ ಸಂಬಂಧವಾಗಿ ಗೌರವಿಸಲಾಗುತ್ತದೆ. ಮದುವೆ ಬರೇ ಹೆಣ್ಣು-ಗಂಡಿನ ನಡುವಿನ ಖಾಸಗಿ ವ್ಯವಹಾರವಲ್ಲ. ಅದಕ್ಕೊಂದು ಸಾಮಾಜಿಕ ಆಯಾಮವಿದೆ. ಗಂಡು-ಹೆಣ್ಣಿಗೆ ಒಂದಷ್ಟು ಜವಾಬ್ದಾರಿಯನ್ನು ಅದು ವಹಿಸಿಕೊಡುತ್ತದೆ. ಅಪರಿಚಿತರಾಗಿರುವ ಎರಡು ಕುಟುಂಬಗಳನ್ನು ಪರಿಚಿತ ಮತ್ತು ಅನ್ಯೋನ್ಯಗೊಳಿಸುತ್ತದೆ. ಪರಸ್ಪರರಿಗಾಗಿ ಮರುಗುವ ಮತ್ತು ಸ್ಪಂದಿಸುವ ಸನ್ನಿವೇಶವನ್ನು ನಿರ್ಮಿಸುತ್ತದೆ. ಮದುವೆಯು ತನ್ನ ಒಡಲಲ್ಲಿ ಹುದುಗಿಸಿರುವ ಸಾಮಾಜಿಕ ಅಗತ್ಯಗಳನ್ನು ಪಟ್ಟಿ ಮಾಡುವುದಾದರೆ ಅದರಲ್ಲಿ ಹೆಣ್ಣು-ಗಂಡಿನ ದೈಹಿಕ ಆಕರ್ಷಣೆಗೆ ಮೊದಲ ಸ್ಥಾನ ಸಿಗುವ ಸಾಧ್ಯತೆಯೇನೂ ಇಲ್ಲ. ಪ್ರಾಯ ಸಹಜವಾದ ಆಕರ್ಷಣೆ ಎಂಬ ಕವಚದೊಳಗೆ ಹತ್ತಾರು ಜವಾಬ್ದಾರಿಗಳನ್ನು ತುಂಬಿ ಪ್ರಕೃತಿ ಹೆಣ್ಣು-ಗಂಡನ್ನು ಒಂದಾಗಿಸುತ್ತದೆ. ಆದರೆ ಇವತ್ತಿನ ಆಧುನಿಕ ಜೀವನ ಕ್ರಮಗಳು ಈ ಸೂತ್ರವನ್ನು ನಿರ್ಲಕ್ಷಿಸಲು ಪ್ರಚೋದಿಸುತ್ತಿವೆಯೇನೋ ಎಂಬ ಅನುಮಾನ ಮೂಡುತ್ತಿದೆ. ಇಲ್ಲಿ ಜವಾಬ್ದಾರಿಗಿಂತ ದೈಹಿಕ ಆಕರ್ಷಣೆಯೇ ಪ್ರಾಮುಖ್ಯತೆಯನ್ನು ಪಡೆಯುತ್ತಿರುವಂತೆ ತೋರುತ್ತಿದೆ. 2005ರಿಂದ 2010ರ ವರೆಗೆ ಕೌಟುಂಬಿಕ ನ್ಯಾಯಾಲಯಗಳು ವಿಚ್ಛೇದನ ಅರ್ಜಿಗಳನ್ನು ತುರ್ತಾಗಿ ಬಗೆಹರಿಸುತ್ತಿರಲಿಲ್ಲ. ಮನವೊಲಿಸುವಿಕೆ, ಆಪ್ತ ಸಮಾಲೋಚನೆ ಮುಂತಾದುವುಗಳ ಮೂಲಕ ಪರಸ್ಪರರನ್ನು ಹತ್ತಿರ ತರಿಸುವ ಪ್ರಯತ್ನಗಳಿಗೆ ಆದ್ಯತೆಯನ್ನು ನೀಡುತ್ತಿತ್ತು. ಆದರೆ ಇವತ್ತು ಹೀಗೆ ಕಾಯುವ ಸಹನೆಯನ್ನು ಪತಿ-ಪತ್ನಿ ತೋರುತ್ತಿಲ್ಲ ಎಂಬ ದೂರಿದೆ. ತಾಳ್ಮೆಯೇ ಇಲ್ಲದ ಮತ್ತು ಕಾಯುವಿಕೆಗೆ ಒಪ್ಪದ ಎರಡು ಸಿಡಿಯುವ ಜೀವಗಳನ್ನು ಹೆಚ್ಚಿನ ಕುಟುಂಬ ನ್ಯಾಯಾಲಯಗಳು
ಎದುರಿಸಬೇಕಾಗುತ್ತವೆ. ಇವತ್ತೇ, ಈಗಲೇ ವಿಚ್ಛೇದನ ಬೇಕೆಂದು ಆಗ್ರಹಿಸಿ ನ್ಯಾಯಾಲಯಗಳ ಬಾಗಿಲು ತಟ್ಟುವ ಪ್ರಕರಣಗಳು ಅಧಿಕವಾಗುತ್ತಿರುವುದರಿಂದ ಒಂದೇ ಸಮನೆ ವಿಚ್ಛೇದನ ತೀರ್ಪುಗಳು ಹೊರಬೀಳುತ್ತಿವೆ ಎಂಬ ವಾದವೂ ಇದೆ. ಗಂಡು-ಹೆಣ್ಣು ಇಬ್ಬರೂ ದುಡಿಯಬೇಕಾದ ಒತ್ತಡ, ಮನೆ ನಿರ್ವಹಣೆಯಲ್ಲಿ ತಲೆದೋರುವ ಭಿನ್ನಾಭಿಪ್ರಾಯ, ವಾಟ್ಸ್ಯಾಪ್‍ನಂತಹ ಆಧುನಿಕ ತಂತ್ರಜ್ಞಾನಗಳ ಬಳಕೆಯಿಂದಾಗಿ ಉಂಟಾಗುವ ಮನಸ್ತಾಪ, ಅಹಂ, ಸ್ವತಂತ್ರವಾಗಿ ಜೀವಿಸಲು ಧೈರ್ಯ ತುಂಬುವ ಉದ್ಯೋಗ ಭದ್ರತೆ.. ಇತ್ಯಾದಿ ಅನೇಕಾರು ಅಂಶಗಳು ಹೆಣ್ಣು-ಗಂಡನ್ನು ಪ್ರತ್ಯೇಕಿಸುವಲ್ಲಿ ಇವತ್ತು ಪ್ರಮುಖ ಪಾತ್ರ ವಹಿಸುತ್ತಿವೆ. ಇಂಥ ಸಂದರ್ಭಗಳಲ್ಲಿ ಅತ್ಯಂತ ಸಂಕಷ್ಟಕ್ಕೆ ಸಿಲುಕುವುದು ಮಕ್ಕಳು. ಅವರು ಈ ಜಗಳದಲ್ಲಿ ಬಹುತೇಕ ಕಾಲ್ಚೆಂಡು ಆಗುವುದೇ ಹೆಚ್ಚು. ವರ್ಷಂಪ್ರತಿ ಆಗುವ ಲಕ್ಷಾಂತರ ವಿಚ್ಛೇದನ ಪ್ರಕರಣಗಳಲ್ಲಿ ಸೃಷ್ಟಿಯಾಗುವ ಇಂಥ ಕಾಲ್ಚೆಂಡು ಮಕ್ಕಳ ಸಂಖ್ಯೆಯನ್ನೊಮ್ಮೆ ಊಹಿಸಿ. ಒಂದೋ ತಾಯಿಯ ಬಳಿ ಅಥವಾ ತಂದೆಯ ಬಳಿ ಅವರು ಇರಬೇಕಾಗುತ್ತದೆ. ತಂದೆ ಕರೆದಾಗ ಅತ್ತ ಹೋಗಬೇಕು. ನಿಗದಿತ ಅವಧಿಯೊಳಗೆ ತಾಯಿ ಬಳಿ ಬರಬೇಕು. ಇಂಥ ವಾತಾವರಣ ಮಗುವನ್ನು ಹೇಗೆ ತಯಾರುಗೊಳಿಸಬಹುದು? ಮಗುವಿನ ಮೇಲೆ ಅದು ಬೀರಬಹುದಾದ ಪರಿಣಾಮಗಳು ಏನೇನು?  
        ವಿಚ್ಛೇದನ ಮತ್ತು ಅಪಘಾತಗಳೆರಡೂ ಅಂತಿಮವಾಗಿ ಉಳಿಸಿ ಹೋಗುವುದು ಕೆಲವು ಕಹಿ ಸ್ಮರಣೆಗಳನ್ನು. ಆರೋಗ್ಯಪೂರ್ಣ ಸಮಾಜದ ದೃಷ್ಟಿಯಿಂದ ನೋಡುವುದಾದರೆ ಇವೆರಡೂ ಅತ್ಯಂತ ಅನಪೇಕ್ಷಿತ ಮತ್ತು ಬಹುತೇಕ ಮಾನವ ನಿರ್ಮಿತ ಸುದ್ದಿಗಳು. ರಸ್ತೆ ಹೇಗೆ ಮನುಷ್ಯರಿಗಾಗಿ ನಿರ್ಮಾಣಗೊಂಡಿದೆಯೋ ಹಾಗೆಯೇ ಮದುವೆ ಕೂಡ ಮನುಷ್ಯರ ಹಿತದೃಷ್ಟಿಯಿಂದಲೇ ರೂಪು ಪಡೆದಿದೆ. ಆದರೆ ಇವತ್ತು ಇವೆರಡೂ ಮನುಷ್ಯರ ನೆಮ್ಮದಿಗೆ ಭಂಗ ತರುವ ಕ್ಷೇತ್ರಗಳಾಗಿ ಮಾರ್ಪಟ್ಟು ಬಿಟ್ಟಿವೆ. ಮನುಷ್ಯರೇ ತಮ್ಮಂತಹ ಇತರರ ‘ರಸ್ತೆಮೇಧ’ ನಡೆಸುತ್ತಿದ್ದಾರೆ. ಮನುಷ್ಯರೇ ತಮ್ಮ ನಡುವಿನ ಮನಸ್ತಾಪಕ್ಕೆ ಮಕ್ಕಳನ್ನು ಬಲಿ ಕೊಡುತ್ತಿದ್ದಾರೆ. ಮನುಷ್ಯ ರಸ್ತೆಯಲ್ಲಿ ಮಾಡುವ ಬೇಜವಾಬ್ದಾರಿಗೆ ಜೀವಗಳೇ ಹರಣವಾದರೆ ವೈವಾಹಿಕ ಜೀವನದಲ್ಲಿ ಮಾಡುವ ತಪ್ಪುಗಳಿಗೆ ಒಂದು ಪೀಳಿಗೆಯ ಭವಿಷ್ಯವೇ ಕಮರಿ ಹೋಗುವುದಕ್ಕೆ ಕಾರಣವಾಗುತ್ತದೆ. ಆದ್ದರಿಂದ ಮನುಷ್ಯರೇ ಹುಟ್ಟು ಹಾಕಿರುವ ಮತ್ತು ಮಾನವ ನಿರ್ಮಿತ ಕಾರಣಗಳೇ ಅಧಿಕವಾಗಿರುವ ಈ ಎರಡೂ ಅಪಘಾತಗಳನ್ನು ತಡೆಗಟ್ಟುವ ಶ್ರಮ ತೀವ್ರಗತಿಯಲ್ಲಿ ನಡೆಯಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಮದುವೆಗೂ ಮತ್ತು ವಾಹನ ಸಂಚಾರಕ್ಕೂ ಜನರು ಹಿಂದೇಟು ಹಾಕುವಂತಹ ಸನ್ನಿವೇಶ ನಿರ್ಮಾಣವಾಗಬಹುದು ಅಥವಾ ಈಗಿನ ಪ್ರಮಾಣಕ್ಕಿಂತಲೂ ಅಧಿಕ ಪ್ರಮಾಣದಲ್ಲಿ ರಸ್ತೆ ಮತ್ತು ಮದುವೆ ಅಪಘಾತಗಳು ನಡೆಯಬಹುದು. ಉತ್ತಮ ಸಮಾಜದ ದೃಷ್ಟಿಯಿಂದ ಇವೆರಡೂ ಅಪಾಯಕಾರಿ.



No comments:

Post a Comment