Tuesday, 20 December 2016

ಲಿಂಗಸುಗೂರಿನ ಗಂಗಮ್ಮ ಮತ್ತು ಕಾಡುವ ಪ್ರಶ್ನೆ

       ಕಳೆದವಾರ ಎರಡು ಘಟನೆಗಳು ನಡೆದುವು. ಎರಡೂ ಘಟನೆಗಳು ತಂದೆ ಮತ್ತು ಮಕ್ಕಳಿಗೆ ಸಂಬಂಧಿಸಿದ್ದು. ಒಂದು ಘಟನೆ ದೆಹಲಿಯ ಹೈಕೋರ್ಟ್‍ನಲ್ಲಿ ನಡೆದರೆ ಇನ್ನೊಂದು ರಾಯಚೂರು ಜಿಲ್ಲೆಯ ಲಿಂಗಸುಗೂರಿನ ಬಸ್ ನಿಲ್ದಾಣದಲ್ಲಿ ನಡೆಯಿತು. ಲಿಂಗಸುಗೂರಿನ ಬಸ್ ನಿಲ್ದಾಣದಲ್ಲಿ ವೃದ್ಧೆ ಗಂಗಮ್ಮಳನ್ನು ಏಕೈಕ ಮಗ ಬಿಟ್ಟು ಹೋಗಿದ್ದ. ಎಂಟು ತಿಂಗಳ ಹಿಂದೆ ಬಿದ್ದು ಆಕೆಯ ಕಾಲು ಮುರಿದಿತ್ತು. ನಡೆಯುವುದಕ್ಕಾಗುತ್ತಿರಲಿಲ್ಲ. ತೆವಳಿಕೊಂಡು ಹೋಗಿ ಶೌಚ ಮತ್ತಿತರ ಕರ್ಮಗಳನ್ನು ಮಾಡಬೇಕಿತ್ತು. ತಾಯಿ ಮನೆಯೊಳಗೆ ಹೊಲಸು ಮಾಡುತ್ತಾಳೆಂಬ ಸಿಟ್ಟು ಮಗನಿಗೆ. ಏಕೈಕ ಮಗ ಎಂಬ ನೆಲೆಯಲ್ಲಿ ಮುದ್ದಿನಿಂದ ಬೆಳೆಸಿದ್ದ ಆಕೆ ತನ್ನ 5 ಎಕರೆ ಭೂಮಿಯನ್ನು ಮಗನ ಹೆಸರಲ್ಲಿ ಬರೆಸಿದ್ದಳು. ಇದೀಗ ಮಗ ಆಸ್ಪತ್ರೆಗೆಂದು ಹೇಳಿ ಕರಕೊಂಡು ಬಂದು ಬಸ್ ನಿಲ್ದಾಣದಲ್ಲಿ ಬಿಟ್ಟು ಪರಾರಿಯಾಗಿದ್ದ. ಆಕೆ ತನ್ನನ್ನು ವೃದ್ಧಾಶ್ರಮಕ್ಕೆ ಸೇರಿಸಿ ಎಂದು ಕಂಡಕಂಡವರಲ್ಲಿ ಅಂಗಲಾಚುತ್ತಿದ್ದಳು. ಇಂಥದ್ದೇ ಕರುಣ ಕತೆಯೊಂದು ದಿಲ್ಲಿಯಲ್ಲಿ ಸಾರ್ವಜನಿಕರ ಗಮನ ಸೆಳೆಯಿತು. ವೃದ್ಧ ಹೆತ್ತವರು ತಮ್ಮ ಮಗ ಮತ್ತು ಸೊಸೆಯ ವಿರುದ್ಧ ಕೋರ್ಟ್‍ಗೆ ದೂರು ಸಲ್ಲಿಸಿದ್ದರು. ತಮ್ಮ ಬದುಕನ್ನು ಮಗ ಮತ್ತು ಸೊಸೆ ನರಕವನ್ನಾಗಿ ಮಾಡಿದ್ದಾರೆ. ಕನಿಷ್ಠ ಮನೆಯ ವಿದ್ಯುತ್ ಬಿಲ್ ಅನ್ನು ಪಾವತಿಸುವುದಕ್ಕೂ ಅವರು ನಿರಾಕರಿಸುತ್ತಿದ್ದಾರೆ. ಆದ್ದರಿಂದ ತಮ್ಮ ಮನೆಯ ಪ್ರಥಮ ಅಂತಸ್ತಿನಲ್ಲಿ  ಬಿಡಾರ ಹೂಡಿರುವ ಮಗ ಮತ್ತು ಕುಟುಂಬವನ್ನು ಮನೆಯಿಂದ ಹೊರಹೋಗುವಂತೆ ಆದೇಶಿಸಬೇಕು ಎಂದು ವಿನಂತಿಸಿದ್ದರು. ದೆಹಲಿಯ ಕೆಳ ಕೋರ್ಟು ಈ ಮನವಿಯನ್ನು ಪುರಸ್ಕರಿಸಿತು. ಅದರ ವಿರುದ್ಧ ಮಗ ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಿದ. ಹೈಕೋರ್ಟ್ ಕಳೆದವಾರ ಮಗನನ್ನು ತರಾಟೆಗೆ ತೆಗೆದುಕೊಂಡಿತಲ್ಲದೇ, ಪೋಷಕರ ಮನೆಯಲ್ಲಿ ವಾಸಿಸುವುದು ಪುತ್ರನ ಹಕ್ಕಲ್ಲ ಎಂದು ತೀರ್ಪಿತ್ತಿತು. ಮನೆ ಖಾಲಿ ಮಾಡು ಎಂದೂ ಆದೇಶಿಸಿತು.
      ಒಂದು ರೀತಿಯಲ್ಲಿ ದೆಹಲಿ ಮತ್ತು ಲಿಂಗಸುಗೂರಿನ ಘಟನೆಗಳ ಪಾತ್ರಧಾರಿಗಳ ಮಧ್ಯೆ ಯಾವ ಸಂಬಂಧವೂ ಇಲ್ಲ. ಅವರು ಪರಸ್ಪರ ಪರಿಚಿತರಲ್ಲ. ಭಾಷೆ ಬೇರೆ. ಅಂತಸ್ತು ಬೇರೆ. ದೆಹಲಿಯ ಹೆತ್ತವರಿಗೆ ಎರಡಂತಸ್ತಿನ ಮನೆಯಿದೆ. ಲಿಂಗಸುಗೂರಿನ ಗಂಗವ್ವ ಮುಗ್ಧೆ. ಆಸ್ತಿಯನ್ನೂ ಮಗನಿಗೆ ಬರೆದುಕೊಟ್ಟಾಕೆ. ಆದರೆ ಎರಡಂತಸ್ತಿನ ಮನೆಯ ಹೆತ್ತವರ ದೂರಿನಲ್ಲೂ ಬಡಪಾಯಿ ಗಂಗವ್ವನ ದೂರಿನಲ್ಲೂ ಭಾರೀ ವ್ಯತ್ಯಾಸವೇನೂ ಇಲ್ಲ. ಇಬ್ಬರಲ್ಲೂ ತಮ್ಮ ಮಕ್ಕಳ ಮೇಲೆಯೇ ಆರೋಪಗಳಿವೆ. ಆ ಕಾರಣದಿಂದಲೇ ಇದು ವಿಶ್ಲೇಷಣೆಗೆ ಅರ್ಹವೆನಿಸುತ್ತದೆ. ಇದರಲ್ಲಿ ಹೆತ್ತವರ ಪಾತ್ರವೇನು? ಮಕ್ಕಳ ಪಾತ್ರ ಏನು? ಆಧುನಿಕ ಜೀವನ ಕ್ರಮಗಳ ಕೊಡುಗೆ ಏನು? ಹಾಗಂತ, ಮಕ್ಕಳ ಮೇಲೆ ಸಕಲ ಆರೋಪವನ್ನೂ ಹೊರಿಸಿ ಪ್ರಕರಣಕ್ಕೆ ಇತಿಶ್ರೀ ಹಾಡುವುದು ಸುಲಭ. ಆದರೆ ಹೀಗೆ ಮಾಡುವುದು ನಿಜಕ್ಕೂ ನ್ಯಾಯಪೂರ್ಣವೇ? ಈ ಮಕ್ಕಳ ಬೆಳವಣಿಗೆಯಲ್ಲಿ ಹೆತ್ತವರು ಯಾವ ರೀತಿಯ ಪಾತ್ರವನ್ನು ನಿರ್ವಹಿಸಿದ್ದಾರೆಂಬ ಅಂಶವನ್ನೂ ಇಲ್ಲಿ ಪರಿಗಣಿಸಬೇಡವೇ? ಮಕ್ಕಳಾಗದೇ ಹರಕೆ ಹೊತ್ತೂ ಹೊತ್ತೂ ಕೊನೆಗೆ ಹುಟ್ಟಿದ ಮಗನೇ ಹೀಗೆ ಬಸ್ಸು ನಿಲ್ದಾಣದಲ್ಲಿ ಎಸೆದು ಹೋದ ಎಂಬ ಕೊರಗು ಗಂಗಮ್ಮಳದ್ದು. ಆದರೆ ಹರಕೆ ಹೊತ್ತು ಸಿಕ್ಕ ಮಗನನ್ನು ಗಂಗಮ್ಮ ಬೆಳೆಸಿದ್ದು ಯಾವ ರೀತಿಯಲ್ಲಿ? ಕೊಟ್ಟ ಶಿಕ್ಷಣ ಯಾವುದು? ಶಿಶು ಪ್ರಾಯದಿಂದ ಹಿಡಿದು ಹದಿಹರೆಯ ಮತ್ತು ಪ್ರೌಢಾವಸ್ಥೆಯ ವರೆಗೆ ಒಂದು ಮಗು ತನ್ನಿಷ್ಟದಂತೆ ಬೆಳೆಯುವುದಕ್ಕೂ ಪ್ರತಿ ಹಂತದಲ್ಲೂ ಹೆತ್ತವರ ನಿಗಾದೊಂದಿಗೆ ಬೆಳೆಯುವುದಕ್ಕೂ ವ್ಯತ್ಯಾಸ ಇದೆ. ಮಗುವಿನ ಆರೋಗ್ಯಪೂರ್ಣ ಬೆಳವಣಿಗೆಯಲ್ಲಿ ಹೆತ್ತವರ ಸದುಪದೇಶಗಳ ಪಾತ್ರ ಬಹಳ ದೊಡ್ಡದು. ಮಗು ಕೇಳಿದ್ದನ್ನೆಲ್ಲ ಕೊಡುವುದಷ್ಟೇ ಹೆತ್ತವರ ಜವಾಬ್ದಾರಿಯಲ್ಲ. ಅದನ್ನು ಓರ್ವ ಪರಿಚಾರಕನೂ ಮಾಡಬಲ್ಲ. ಅದರಾಚೆಗೆ ಮಗು ಕೇಳದೇ ಇರುವ ಆದರೆ ಕೊಡಲೇಬೇಕಾದ ಅನೇಕಾರು ಅಂಶಗಳಿವೆ. ಮಗು ಬೆಳೆದಂತೆಲ್ಲ ಆ ಬೆಳವಣಿಗೆಗೆ ತಕ್ಕಂತೆ ಮೌಲ್ಯವನ್ನು ತುಂಬುತ್ತಾ ಸಾಗುವುದು ಬಹಳ ಮುಖ್ಯ. ಮಗು ಶೂವನ್ನೋ ಫುಟ್ಬಾಲನ್ನೋ ಕ್ರಿಕೆಟ್ ಬ್ಯಾಟ್ ಅನ್ನೋ ಅಥವಾ ಆಟಿಕೆಗಳು, ಸೈಕಲ್, ಉಡುಪುಗಳು.. ಇತ್ಯಾದಿಗಳನ್ನೋ ಖರೀದಿಸಿಕೊಡುವಂತೆ ಒತ್ತಾಯಿಸುವಾಗ, ಅವುಗಳಿಗೆ ತಾನು ವ್ಯಯಿಸುವ ಹಣ ಎಷ್ಟು ಅಮೂಲ್ಯವಾದುದು ಮತ್ತು ಎಷ್ಟು ಬೆವರಿನ ಫಲ ಎಂಬುದನ್ನು ಸಂದರ್ಭಕ್ಕೆ ತಕ್ಕಂತೆ ಹೆತ್ತವರು ಮನವರಿಕೆ ಮಾಡಿಸುತ್ತಿರಬೇಕು. ಹಾಗಂತ, ಪ್ರೀತಿಯನ್ನು ವ್ಯಕ್ತಪಡಿಸುವುದರಲ್ಲಿ ಜಿಪುಣರಾಗಬೇಕಿಲ್ಲ. ಮಕ್ಕಳು ಒಂದಿಷ್ಟು ದೊಡ್ಡವರಾದ ಕೂಡಲೇ ಅವರೊಂದಿಗೆ ಭಾರತ-ಪಾಕ್‍ಗಳಂತೆ ಅಂತರವನ್ನು ಕಾಯ್ದುಕೊಳ್ಳಲೂಬೇಕಿಲ್ಲ. ಆದರೆ, ತಾವು ದುಡಿಯುತ್ತಿರುವುದು ನಿಮ್ಮ ಸಲುವಾಗಿ ಮತ್ತು ನಿಮ್ಮ ಉತ್ತಮ ಭವಿಷ್ಯದ ದೃಷ್ಟಿಯಿಂದ ಎಂಬ ಸಂದೇಶವನ್ನು ಮಕ್ಕಳಿಗೆ ಅರ್ಥವಾಗುವಂತೆ ಆಗಾಗ ರವಾನಿಸುತ್ತಿರಬೇಕು. ಅಷ್ಟಕ್ಕೂ, ಇವತ್ತಿನ ದಿನಗಳಲ್ಲಿ ಎಲ್ಲವನ್ನೂ ಬಾಯಿ ಮಾತಿನಿಂದಲೇ ಹೇಳಬೇಕಿಲ್ಲ. ಪರಿಣಾಮಕಾರಿ ವೀಡಿಯೋಗಳು ಧಾರಾಳ ಲಭ್ಯವಿವೆ. ಮಕ್ಕಳು ಕಂಪ್ಯೂಟರ್, ಮೊಬೈಲ್‍ಗಳಲ್ಲಿ ಹೆತ್ತವರಿಗಿಂತಲೂ ಹೆಚ್ಚು ನಿಪುಣರಾಗಿರುವುದರಿಂದ ಅವರಿಗೆ ಮೌಲ್ಯಯುತ ವೀಡಿಯೋಗಳನ್ನು ತೋರಿಸುವುದು ಕಷ್ಟವಲ್ಲ. ಹೆತ್ತವರನ್ನು ವೃದ್ಧಾಶ್ರಮಕ್ಕೆ ಅಟ್ಟುವ ಮಕ್ಕಳ ಬಗ್ಗೆ ಮತ್ತು ಹೆತ್ತವರು ಅದರಿಂದ ಅನುಭವಿಸುವ ನೋವುಗಳ ಬಗ್ಗೆ ಎಳೆ ಪ್ರಾಯದ ಮನಸ್ಸಿನಲ್ಲಿ ಭಾವನಾತ್ಮಕತೆಯನ್ನು ತುಂಬುವುದು ಉತ್ತಮ. ಒಂದು ಪುಟ್ಟ ವೀಡಿಯೋ ಒಂದು ಮಗುವನ್ನು ಜೀವನಪರ್ಯಂತ ಮೌಲ್ಯಯುತವಾಗಿ ಬದುಕುವಂತೆ ಮಾಡುವುದಕ್ಕೆ ಸಾಕಾಗಬಹುದು.
      ಮಕ್ಕಳ ಮನಸ್ಸು ತೀರಾ ಮೃದು. ಆ ಮೃದು ಮನಸ್ಸನ್ನು ಯಾವ ಆಕೃತಿಗೆ ಬೇಕಾದರೂ ಪಳಗಿಸುವ ಸಾಮರ್ಥ್ಯ ಹೆತ್ತವರಿಗಿದೆ. ದುರಂತ ಏನೆಂದರೆ, ಅನೇಕ ಬಾರಿ ಹೆತ್ತವರು ಇಂಥ ಸನ್ನಿವೇಶದಲ್ಲಿ ಎಡವುತ್ತಾರೆ. ಮಕ್ಕಳನ್ನು ಮೌಲ್ಯಯುತವಾಗಿ ಬೆಳೆಸುವ ಬದಲಾಗಿ ಕೇವಲ ಆರೋಗ್ಯಪೂರ್ಣವಾಗಿ ಬೆಳೆಸುವುದಕ್ಕೇ ಆದ್ಯತೆ ನೀಡುತ್ತಾರೆ. ಭವಿಷ್ಯದಲ್ಲಿ ಮಗು ಏನಾಗಬೇಕು ಎಂಬುದನ್ನು ಚರ್ಚಿಸುತ್ತಾ ಮತ್ತು ಚಿಂತಿಸುತ್ತಾ ದುಡ್ಡು ಕೂಡಿಡುತ್ತಾರೆ. ಖರ್ಚು ಮಾಡುತ್ತಾರೆ. ಮಗುವೇನೋ ಹುಲುಸಾಗಿ ಬೆಳೆಯುತ್ತದೆ. ಆದರೆ, ಮೌಲ್ಯಕ್ಕೆ ಸಂಬಂಧಿಸಿ ಟೊಳ್ಳಾಗಿರುತ್ತದೆ. ಹೆತ್ತವರ ಬೆವರಿನ ಅರಿವು ಮಗುವಿಗಿರುವುದಿಲ್ಲ. ನಿದ್ದೆಗೆಟ್ಟು ದುಡಿದು ಸಂಪಾದಿಸಿದ ಹಣದ ಬೆಲೆ ಗೊತ್ತಿರುವುದಿಲ್ಲ. ಬಹುತೇಕ ಬಾರಿ ಹೆತ್ತವರು ಅದನ್ನು ಮಗುವಿನಿಂದ ಅಡಗಿಸಿಡುವುದೂ ಇದೆ. ನಿಜವಾಗಿ, ತನ್ನ ಕೆಲಸ ಏನು, ಒಂದು ದಿನ ದುಡಿಯದಿದ್ದರೆ ಮನೆಯ ಪರಿಸ್ಥಿತಿ ಏನು, ತಾನು ಯಾಕಾಗಿ ದುಡಿಯುತ್ತೇನೆ.. ಎಂಬುದೆಲ್ಲ ಗಂಡ-ಹೆಂಡತಿಯರ ನಡುವಿನ ಖಾಸಗಿ ವಿಷಯಗಳಷ್ಟೇ ಆಗಬೇಕಿಲ್ಲ. ಮಗುವಿಗೂ ಅದು ಗೊತ್ತಿರಬೇಕು. ಆರೋಗ್ಯಪೂರ್ಣ ಮತ್ತು ಮೌಲ್ಯಯುತ, ಕುಟುಂಬದ ಅಡಿಪಾಯ ಇದು.
     ಅಂದಹಾಗೆ, ದೆಹಲಿಯ ಹೆತ್ತವರು ಮತ್ತು ಲಿಂಗಸುಗೂರಿನ ಗಂಗಮ್ಮ ಈ ವಿಷಯದಲ್ಲಿ ತಮ್ಮ ಪಾತ್ರವನ್ನು ಎಷ್ಟಂಶ ನಿಭಾಯಿಸಿದ್ದಾರೋ ಗೊತ್ತಿಲ್ಲ. ಒಂದು ವೇಳೆ ನಿಭಾಯಿಸಿದ್ದರೂ ಮಕ್ಕಳು ತಪ್ಪು ದಾರಿ ಹಿಡಿಯಬಾರದೆಂದೇನೂ ಇಲ್ಲವಲ್ಲ. ಆದರೂ ಮಕ್ಕಳ ಮೇಲೆಯೇ ಸಂಪೂರ್ಣ ಆರೋಪ ಹೊರಿಸುವ ಮೊದಲು ಹೆತ್ತವರ ಜವಾಬ್ದಾರಿಗಳೂ ಚರ್ಚೆಗೊಳಗಾಗಬೇಕು. ಪವಿತ್ರ ಕುರ್‍ಆನ್ ಅಂತೂ ವೃದ್ಧ ಹೆತ್ತವರ ಬಗ್ಗೆ ಛೆ ಎಂಬ ಪದವನ್ನೂ ಬಳಸಬಾರದು ಎಂದು ಮಕ್ಕಳಿಗೆ ತಾಕೀತು ಮಾಡಿದೆ. ಹೆತ್ತವರ ಅತೃಪ್ತಿಗೆ ಪಾತ್ರವಾದ ಮಕ್ಕಳಿಗೆ ಸ್ವರ್ಗವಿಲ್ಲ ಎಂಬ ಬೆದರಿಕೆಯನ್ನೂ ಒಡ್ಡಿದೆ. ಚಿಕ್ಕಂದಿನಲ್ಲಿ ಅವರು ನಿಮ್ಮನ್ನು ಸಾಕಿದಷ್ಟೇ ಮಮತೆಯಿಂದ ವೃದ್ಧಾಪ್ಯದಲ್ಲಿ ಅವರನ್ನು ನೀವು ಸಾಕಬೇಕೆಂದು ಮಕ್ಕಳಿಗೆ ಅದು ಆದೇಶಿಸಿದೆ. ಹೆತ್ತವರು ಖಂಡಿತ ಇಂಥ ಗೌರವಾದರಗಳಿಗೆ ಅರ್ಹರು. ಆದರೆ ಚಿಕ್ಕಂದಿನಲ್ಲಿ ಮಕ್ಕಳಿಗೆ ಅದನ್ನು ಮನವರಿಕೆ ಮಾಡಿಸುವ ಪ್ರಯತ್ನಗಳು ನಡೆಯಲಿ. ಲಿಂಗಸುಗೂರಿನ ಬಸ್ ನಿಲ್ದಾಣದಲ್ಲಿ ಕಣ್ಣೀರು ಹಾಕಿದ ಗಂಗಮ್ಮ ಎಲ್ಲರ ಹೃದಯವನ್ನೂ ತಟ್ಟಲಿ.

No comments:

Post a Comment