Monday 26 December 2016

ಬಾಟಲಿಯ ಎದುರು ಜಯಗಳಿಸಬೇಕಾದ ಬಟ್ಟಲು

      ಒಂದು ಚೀಟಿಯಲ್ಲಿ ಸಾವು ಮತ್ತು ಇನ್ನೊಂದು ಚೀಟಿಯಲ್ಲಿ ಬದುಕು ಎಂದು ಬರೆದು, ನಿಮ್ಮ ಆಯ್ಕೆಯ ಚೀಟಿಯನ್ನು ಎತ್ತಿಕೊಳ್ಳಿ ಎಂದು ಜನರಲ್ಲಿ ವಿನಂತಿಸಿದರೆ ಸಾವನ್ನು ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಶೂನ್ಯ ಅನ್ನುವಷ್ಟು ಕಡಿಮೆ. ಸಾವು ಯಾರ ಆಯ್ಕೆಯೂ ಅಲ್ಲ ಅಥವಾ ಅದು ಆಯ್ಕೆ ಎಂಬ ಚೌಕಟ್ಟಿನಿಂದ ಹೊರಗಿನದು. ಹೊಟ್ಟೆಯಲ್ಲಿರುವ ಮಗುವನ್ನೇ ಸಾಯಿಸುವ ಸ್ವಾತಂತ್ರ್ಯ ಅದರ ತಾಯಿಗಿಲ್ಲ. ನಿಜವಾಗಿ, ಇನ್ನೂ ಹುಟ್ಟದೇ ಇರುವ ಮಗುವಿನ ಸಾವು-ಬದುಕಿನ ತೀರ್ಮಾನದ ಸ್ವಾತಂತ್ರ್ಯ ತಾಯಿಗೆ ಇರಲೇಬೇಕಿತ್ತು. ಯಾಕೆಂದರೆ, ಆ ಮಗು ಇನ್ನೂ ಭೂಮಿಗೆ ಬಂದಿಲ್ಲ. ಜಗತ್ತು ಆ ಮಗುವನ್ನು ನೋಡಿಯೂ ಇಲ್ಲ. ಹೆಸರು, ಉದ್ಯೋಗ, ಆಧಾರ್ ಕಾರ್ಡ್, ಮತದಾನದ ಗುರುತು ಚೀಟಿ, ಚಾಲನಾ ಪರವಾನಿಗೆ, ಪಾಸ್‍ಪೋರ್ಟ್... ಇತ್ಯಾದಿಗಳೊಂದೂ ಇಲ್ಲದ ಮತ್ತು ಬಾಹ್ಯ ಜಗತ್ತಿಗೆ ಇನ್ನೂ ಬಾರದ ಮಗು.ಆದರೂ  ಮಗುವನ್ನು ಸಾಯಿಸುವ ಹಾಗಿಲ್ಲ. ಒಂದು ವೇಳೆ, ಗರ್ಭ ಧರಿಸಿರುವುದು ನಾನು ಮತ್ತು ಗರ್ಭವನ್ನು ಉಳಿಸಿಕೊಳ್ಳಬೇಕೋ ಅಳಿಸಬೇಕೋ ಎಂಬ ತೀರ್ಮಾನವೂ ನನ್ನದೇ ಎಂದು ಓರ್ವ ಮಹಿಳೆ ವಾದಿಸುವುದಾದರೆ ಅದು ಕಾನೂನು ಪ್ರಕಾರ ಅಪರಾಧವಾಗುತ್ತದೆ. ಬದುಕು ಅಷ್ಟು ಅಮೂಲ್ಯವಾದುದು. ಆದ್ದರಿಂದಲೇ, ಆತ್ಮಹತ್ಯೆಯನ್ನು ಅಪರಾಧದ ಪಟ್ಟಿಯಲ್ಲಿಡಲಾಗಿದೆ. ಈ ಕಾರಣದಿಂದಲೇ ಇಲ್ಲಿ ಪ್ರಶ್ನೆಯೊಂದು ಉದ್ಭವಿಸುತ್ತದೆ. ಬದುಕನ್ನು ನಮ್ಮ ಕಾನೂನು ಇಷ್ಟು ಆಳವಾಗಿ ಪ್ರೀತಿಸುತ್ತಿರುವಾಗಲೂ ಮದ್ಯ ಹೇಗೆ ನಮ್ಮ ನಡುವೆ ಅಸ್ತಿತ್ವವನ್ನು ಉಳಿಸಿಕೊಂಡಿತು? ಮದ್ಯಪಾನ ಆರೋಗ್ಯಕ್ಕೆ ಹಾನಿಕರ ಎಂದು ಯಾವುದಾದರೂ ಜ್ಯೋತಿಷಿಗಳೋ ವಾಸ್ತು ತಜ್ಞರೋ ಹೇಳುವುದಲ್ಲ. ಹೆಂಡ-ಸಾರಾಯಿ ಸಹವಾಸ, ಪತ್ನಿ - ಮಕ್ಕಳ ಉಪವಾಸ... ಎಂಬ ಘೋಷಣೆಯೂ ಅವರದಲ್ಲ. ಸಿನಿಮಾಗಳಲ್ಲಿ ಮದ್ಯಪಾನದ ದೃಶ್ಯ ಪ್ರಸಾರವಾಗುವಾಗಲೆಲ್ಲ `ಮದ್ಯಪಾನ ಆರೋಗ್ಯಕ್ಕೆ ಹಾನಿಕರ’ ಎಂದು ಕಡ್ಡಾಯವಾಗಿ ಸಾರಬೇಕೆಂದು ಹೇಳಿದ್ದೂ ಇವರಲ್ಲ. ಎಲ್ಲವೂ ಸರಕಾರದ್ದೇ ಆದೇಶಗಳು. ಇಷ್ಟಿದ್ದೂ ಮದ್ಯವನ್ನೇಕೆ ನಮ್ಮ ವ್ಯವಸ್ಥೆ ಆಲಂಗಿಸುತ್ತಿದೆ? ಕರ್ನಾಟಕದ ಬೊಕ್ಕಸಕ್ಕೆ ವರ್ಷಕ್ಕೆ 16510 ಕೋಟಿ ರೂಪಾಯಿ ಆದಾಯ ಬರುತ್ತದೆ ಎಂಬುದರ ಹೊರತು ಬೇರೆ ಯಾವ ಸಮರ್ಥನೆ ನಮ್ಮನ್ನಾಳುವವರಿಗಿದೆ? ಬರೇ ಆದಾಯವೊಂದೇ ಮದ್ಯಪಾನವನ್ನು ಕಾನೂನು ಸಮ್ಮತಗೊಳಿಸುವುದಕ್ಕೆ ಸಾಕಾಗಬಹುದೆ? ಓರ್ವರ ಆರೋಗ್ಯವನ್ನು ಕೆಡಿಸಿ ಬೊಕ್ಕಸ ತುಂಬಿಸುವುದು ಎಷ್ಟಂಶ ನೈತಿಕವಾದುದು? ಮದ್ಯಪಾನ ಸಂಬಂಧಿ ರಸ್ತೆ ಅಪಘಾತಗಳಲ್ಲಿ ಪ್ರತಿವರ್ಷ ಸಾಯುವವರ ಸಂಖ್ಯೆ ಒಂದೂವರೆ ಲಕ್ಷಕ್ಕಿಂತ ಅಧಿಕ ಎಂದು ಕಳೆದವಾರ ಸ್ವತಃ ಕೇಂದ್ರ ಸರಕಾರವೇ ಸುಪ್ರೀಮ್ ಕೋರ್ಟ್‍ನಲ್ಲಿ ಒಪ್ಪಿಕೊಂಡಿದೆ. ಮದ್ಯಪಾನ ಮಾಡಿ ವಾಹನ ಚಲಾವಣೆ ಮಾಡುವುದರಿಂದ ಸ್ವತಃ ಮದ್ಯಪಾನಿಯಷ್ಟೇ ಅನಾಹುತಕ್ಕೆ ತುತ್ತಾಗುವುದಲ್ಲ, ಮದ್ಯಪಾನ ಮಾಡದೇ ಇರುವ ಮತ್ತು ಮದ್ಯವನ್ನು ಪ್ರಬಲವಾಗಿ ವಿರೋಧಿಸುವ ಜನರೂ ಅದರ ಅಡ್ಡ ಪರಿಣಾಮವನ್ನು ಎದುರಿಸಬೇಕಾಗುತ್ತದೆ. ಕೇವಲ ಕರ್ನಾಟಕ ರಾಜ್ಯವೊಂದರಲ್ಲೇ 2016ರಲ್ಲಿ 82,049 ಮಂದಿ ಮದ್ಯಪಾನ ಮಾಡಿ ವಾಹನ ಚಲಾಯಿಸಿದ ಕಾರಣಕ್ಕೆ ದಂಡತೆತ್ತಿದ್ದಾರೆ. 2015ರಲ್ಲಿ ಈ ಸಂಖ್ಯೆ 80,479ಕ್ಕೆ ಕುಸಿದರೆ 2016 ಅಕ್ಟೋಬರ್‍ಗಾಗುವಾಗಲೇ ಹೀಗೆ ದಂಡ ತೆತ್ತವರ ಸಂಖ್ಯೆ 91,957ಕ್ಕೇರಿದೆ. ಈ ಕಾರಣದಿಂದಲೇ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳ 500 ಮೀಟರ್ ಒಳಗಡೆ ಇರುವ ಮದ್ಯದಂಗಡಿಗಳನ್ನು ತೆರವುಗೊಳಿಸಬೇಕೆಂಬ ಸುಪ್ರೀಮ್ ಕೋರ್ಟ್‍ನ ಕಳೆದವಾರದ ಆದೇಶ ಮುಖ್ಯವೆನಿಸುವುದು.
      ವಿಶೇಷ ಏನೆಂದರೆ, ಮದ್ಯ ನಿಷೇಧಕ್ಕೆ ಒತ್ತಾಯಿಸಿ ಸುಪ್ರೀಮ್ ಕೋರ್ಟ್‍ನಲ್ಲಿ ಅರ್ಜಿಯನ್ನು ದಾಖಲಿಸಿರುವುದು ಸರಕಾರ ಅಲ್ಲ, ಅಪಘಾತಕ್ಕೀಡಾಗಿ ವೀಲ್‍ಚೇರ್‍ಗೆ ಸೀಮಿತವಾದ ಹರ್ಮಾನ್ ಸಿಂಗ್ ಎಂಬ ವ್ಯಕ್ತಿ. ನಿಜವಾಗಿ ಮದ್ಯಪಾನವು ಚಾಲಕನ ನಿಯಂತ್ರಣವನ್ನು ಮಾತ್ರ ತಪ್ಪಿಸುವುದಲ್ಲ, ಈ ದೇಶದ ಕೋಟ್ಯಂತರ ಜನರ ನಾಡಿ ಬಡಿತವನ್ನೇ ತಪ್ಪಿಸುತ್ತದೆ. ಹಾಗಂತ, ಈ ಕುಡುಕರು ಆಶ್ರಯಿಸಿಕೊಂಡಿರುವುದು ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳ ಅಸುಪಾಸಿನಲ್ಲಿರುವ ಮದ್ಯದಂಗಡಿಗಳನ್ನಲ್ಲ. ಈ ಹೆದ್ದಾರಿಗಳ ತೀರಾ ತೀರಾ ಹೊರಗಡೆ ರಾಜ ಠೀವಿಯಿಂದ ಫೋಸು ಕೊಡುತ್ತಿರುವ ಮದ್ಯದಂಗಡಿಗಳನ್ನು. ದಿನವಹೀ ದುಡಿದ ದುಡ್ಡನ್ನು ಮದ್ಯದಂಗಡಿಗೆ ಸುರಿದು ಮನವನ್ನೂ ಮನೆಯನ್ನೂ ನರಕ್ಕೆ ಮಾಡುವ ಕೋಟ್ಯಂತರ ಕುಡುಕರನ್ನು ತಯಾರಿಸುತ್ತಿರುವುದು ಈ ಮದ್ಯದಂಗಡಿಗಳೇ. ಸರಕಾರಗಳ ಸಚಿವ ಸಂಪುಟದಲ್ಲಿ ಅಬಕಾರಿ ಎಂಬ ಮದ್ಯಪಾನದ ಖಾತೆಯೇ ಇದೆ. ಆ ಖಾತೆಯ ಹೊಣೆಗಾರಿಕೆಯೇ ಜನರಿಗೆ ಕುಡಿತವನ್ನು ಸುಲಭಗೊಳಿಸುವುದು ಮತ್ತು ಆದಾಯವನ್ನು ಲೆಕ್ಕ ಹಾಕುವುದು. ಅಷ್ಟಕ್ಕೂ, ಇಂಥದ್ದೊಂದು ದ್ವಂದ್ವ ಬೇರೆ ಇರಲು ಸಾಧ್ಯವೇ? ಒಂದು ಕಡೆ ಕುಡಿತವನ್ನು ಆರೋಗ್ಯಕ್ಕೆ ಹಾನಿಕರ ಎಂದು ಸರಕಾರ ಘೋಷಿಸುತ್ತಲೇ ಇನ್ನೊಂದು ಕಡೆ ಅದನ್ನು ಮಾರುವುದಕ್ಕೆಂದೇ ಖಾತೆಯೊಂದನ್ನು ಇಟ್ಟುಕೊಳ್ಳುವುದಕ್ಕೆ ಏನೆನ್ನಬೇಕು? ತನ್ನದೇ ಪ್ರಜೆಗಳನ್ನು ಅಂಗವಿಕಲರನ್ನಾಗಿಸಿಯೋ ರೋಗಿಗಳಾಗಿಸಿಯೋ ಅಥವಾ ಸಾವಿಗೆ ದೂಡಿಯೋ ಸರಕಾರವೊಂದು ಅದಾಯ ಗಳಿಸಲು ಶ್ರಮಿಸುತ್ತದೆಂಬುದು ಏನನ್ನು ಸೂಚಿಸುತ್ತದೆ? ಅಂದಹಾಗೆ, ಯಾವುದೇ ಸರಕಾರಿ ನೀತಿಯನ್ನು ಜನಪರವೋ ಜನವಿರೋಧಿಯೋ ಎಂದು ತೀರ್ಮಾನಿಸುವುದಕ್ಕೆ ಒಂದು ಮಾನದಂಡ ಇದೆ. ಅದು ಆದಾಯವನ್ನು ಆಧಾರವಾಗಿಕೊಂಡ ಮಾನದಂಡ ಅಲ್ಲ. ಜನರ ಒಳಿತು ಮತ್ತು ಸಂತೋವನ್ನು ಆ ಮಾನದಂಡ ಅವಲಂಬಿಸಿರುತ್ತದೆ. ಮದ್ಯ ಯಾವ ರೀತಿಯಲ್ಲೂ ಜನರ ಒಳಿತನ್ನು ಬಯಸುತ್ತಿಲ್ಲ. ಅದರ ಚಟಕ್ಕೆ ತುತ್ತಾದವರು ಮನೆ ಮತ್ತು ಸಮಾಜದ ನೆಮ್ಮದಿಯನ್ನು ಕೆಡಿಸಿ ಬಿಡುತ್ತಾರೆ. ಅಂಗವಿಕಲ ಸಮಾಜದ ಹುಟ್ಟಿಗೆ ಕಾರಣರಾಗುತ್ತಾರೆ. ಅಪಘಾತದ ಮೂಲಕ ಸಾಮೂಹಿಕ ಹತ್ಯೆಗೆ ಕಾರಣರಾಗುತ್ತಾರೆ. ಈ ಹಿನ್ನೆಲೆಯಲ್ಲಿ ಹೇಳುವುದಾದರೆ ಹೆದ್ದಾರಿಗಳಿಂದ ಮಾತ್ರ ಅಲ್ಲ, ಭೂಮಿಯಿಂದಲೇ ಮದ್ಯದಂಗಡಿಗಳು ತೆರವುಗೊಳ್ಳಲೇ ಬೇಕಾದ ಸರ್ವ ಅಗತ್ಯ ಇದೆ. ಇದರ ಆರಂಭ ಎಂಬ ನೆಲೆಯಲ್ಲಿ ಸುಪ್ರೀಮ್‍ಕೋರ್ಟ್‍ನ ಆದೇಶವನ್ನು ನಾವು ಸ್ವಾಗತಿಸಬೇಕಾಗಿದೆ. ಈ ಆದೇಶವು ಮುಂದಿನ ದಿನಗಳಲ್ಲಿ ಹೆದ್ದಾರಿಗಳ 500 ಮೀಟರ್ ಫಾಸಲೆಯನ್ನು ಮೀರಿ ಕಿಲೋ ಮೀಟರ್‍ಗಳಾಗಿ ಬಳಿಕ ದೇಶದಿಂದಲೇ ಮದ್ಯದಂಗಡಿಗಳನ್ನು ತೆರವುಗೊಳಿಸುವುದಕ್ಕೆ ಕಾರಣವಾಗಬೇಕಾಗಿದೆ.
       ಅಂದಹಾಗೆ, ಮದ್ಯ ಎಂಬುದು ಅನ್ನದಂತೆ ಅಲ್ಲ. ಅದೊಂದು ನಶೆ. ಅನ್ನ ನಶೆ ಅಲ್ಲ, ಆರೋಗ್ಯವರ್ಧಕ ಆಹಾರ. ಮದ್ಯವಂತೂ ಆರೋಗ್ಯವನ್ನು ಕೆಡಿಸುವ ಮತ್ತು ನಶೆಯಲ್ಲಿ ತೇಲಾಡಿಸುವ ಪಾನೀಯ. ಆದ್ದರಿಂದ ಅನ್ನದ ಬಟ್ಟಲು ಮತ್ತು ಮದ್ಯದ ಬಾಟಲು ಸರಿಸಮಾನವಾಗಿ ಗೌರವಕ್ಕೀಡಾಗಲು ಸಾಧ್ಯವೇ ಇಲ್ಲ. ಅನ್ನವನ್ನು ಗೌರವಿಸುವ ಸಮಾಜ ಆರೋಗ್ಯಪೂರ್ಣವಾಗಿರುತ್ತದೆ. ನಶೆಯನ್ನು ಬೆಂಬಲಿಸುವ ಸಮಾಜ ಅನಾರೋಗ್ಯವನ್ನು ಪ್ರತಿನಿಧಿಸುತ್ತದೆ. ಅನಾರೋಗ್ಯವು ಬಲಿಷ್ಠ ದೇಶವನ್ನು ಮತ್ತು ಆರೋಗ್ಯಪೂರ್ಣ ಚಿಂತನೆಗಳನ್ನು ಹೊಂದಿರಲು ಸಾಧ್ಯವಿಲ್ಲ. ಅತ್ಯಾಚಾರಕ್ಕೂ ಮದ್ಯಕ್ಕೂ ನಡುವೆ ನಂಟಿರುವುದೇ ಅನ್ನ ಮತ್ತು ನಶೆಯಲ್ಲಿ ನಮ್ಮ ಆಯ್ಕೆ ಯಾವುದಾಗಿರಬೇಕೆಂಬುದನ್ನು ಸೂಚಿಸುತ್ತದೆ. ನಶೆ ನಮ್ಮನ್ನು ಮತ್ತು ನಮ್ಮತನವನ್ನು ಕೊಂದರೆ ಅನ್ನ ನಮ್ಮನ್ನು ಮತ್ತು ದೇಶವನ್ನು ಬದುಕಿಸುತ್ತದೆ. ಆದ್ದರಿಂದ ಸಾವನ್ನು ತಿರಸ್ಕರಿಸೋಣ. ಬದುಕನ್ನು ಆರಿಸೋಣ.

No comments:

Post a Comment