Thursday 15 December 2016

ಭ್ರೂಣ ಎತ್ತಿರುವ ಪ್ರಶ್ನೆ

       ಕೇರಳದ ಕಾಸರಗೋಡು ಜಿಲ್ಲೆಯ ಯುವತಿಯೋರ್ವಳು ಅತ್ಯಾಚಾರದ ಇನ್ನೊಂದು ಮುಖವನ್ನು ಮತ್ತೊಮ್ಮೆ ನಮ್ಮ ಮುಂದೆ ತೆರೆದಿಟ್ಟಿದ್ದಾಳೆ. ಆ ಮುಖ ಅತ್ಯಂತ ಭಾವಾನಾತ್ಮಕವಾದುದು. `ಜೀವಿಸುವ ಹಕ್ಕು' ಎಂಬ ಸಹಜ ಸ್ವಾತಂತ್ರ್ಯದ ಅಸ್ತಿತ್ವವನ್ನೇ ಅಲುಗಾಡಿಸುವಂಥದ್ದು. ಇನ್ನಷ್ಟೇ ಕಣ್ಣು ಬಿಡಬೇಕಿರುವ ಮತ್ತು ಈ ಜಗತ್ತಿನಲ್ಲಿ ಬಾಳಿ-ಬದುಕುವುದಕ್ಕೆ ಸಕಲ ಹಕ್ಕುಗಳನ್ನೂ ಹೊಂದಿರುವ ಮಗುವನ್ನು (ಭ್ರೂಣ) ಉಳಿಸಿಕೊಳ್ಳಬೇಕೋ ಅಳಿಸಿಹಾಕಬೇಕೋ ಎಂಬುದಕ್ಕೆ ಸಂಬಂಧಿಸಿದ್ದು. ಕೇರಳದ ಹೈಕೋರ್ಟ್ ಕಳೆದವಾರ ಈ ಕುರಿತಂತೆ ತೀರ್ಪೊಂದನ್ನು ನೀಡಿದೆ. ಯುವತಿಯ ಮನವಿಯನ್ನು ಗೌರವಿಸುವ ಮೂಲಕ ಮಗುವಿಗೆ (ಭ್ರೂಣ) ಜೀವಿಸುವ ಹಕ್ಕನ್ನು ಅದು ನಿರಾಕರಿಸಿದೆ. ಹಾಗಂತ, ಇದು ಮೊಟ್ಟ ಮೊದಲ ಪ್ರಕರಣವೇನೂ ಅಲ್ಲ. ಕಳೆದ ವರ್ಷ ಗುಜರಾತ್‍ನ ಸಬರಕಾಂತ್ ಜಿಲ್ಲೆಯ ಪ್ರೌಢಶಾಲೆಯ ಹುಡುಗಿಯೊಬ್ಬಳು ಇದೇ ಪ್ರಶ್ನೆಯೊಂದಿಗೆ ಸುಪ್ರೀಮ್ ಕೋರ್ಟ್‍ನ ಮೆಟ್ಟಲೇರಿದ್ದಳು. ಆಕೆಯ ಮೇಲೆ ವೈದ್ಯನೋರ್ವ ಅತ್ಯಾಚಾರ ಎಸಗಿದ್ದ. ಯಾರಲ್ಲೂ ಬಾಯಿ ಬಿಡಬಾರದೆಂದು ಬೆದರಿಸಿದ್ದ. ಮಲ ಹೊರುವ ಕಾರ್ಮಿಕನ ಮಗಳಾದ ಆ ಹುಡುಗಿ ಅತ್ಯಾಚಾರ ಮತ್ತು ಬೆದರಿಕೆ ಎಂಬ ಎರಡು ಅಲಗಿನ ಕತ್ತಿಯನ್ನು ಎದುರಿಸಲಾಗದೇ ಮೌನವಾಗಿದ್ದಳು. ಆ ಬಸಿರು ಆ ಅಪ್ಪನಿಗೂ ಗೊತ್ತಾಗಲಿಲ್ಲ. ಗೊತ್ತಾಗುವಾಗ ಭ್ರೂಣಕ್ಕೆ 24 ವಾರಗಳೇ ಸಂದಿದ್ದುವು. ಗರ್ಭಕ್ಕೆ ಸಂಬಂಧಿಸಿ 1971ರ ವೈದ್ಯಕೀಯ ಕಾಯ್ದೆಯ ಪ್ರಕಾರ, 20 ವಾರಗಳೊಳಗಿನ ಭ್ರೂಣವನ್ನಷ್ಟೇ ಕಿತ್ತು ಹಾಕಲು (ಅಬಾರ್ಷನ್) ಅನುಮತಿ ಇದೆ. ಈ ಅನುಮತಿಯೂ ಬೇಕಾಬಿಟ್ಟಿಯಲ್ಲ. ಗರ್ಭಿಣಿಯ ಆರೋಗ್ಯಕ್ಕೆ ಅಪಾಯವಿರುವುದಾದರೆ ಅಥವಾ ಭ್ರೂಣದ ಬೆಳವಣಿಗೆಯಲ್ಲಿ ತೊಂದರೆಗಳಿದ್ದರೆ ಮಾತ್ರ ಅಬಾರ್ಷನ್ ಮಾಡಬಹುದು. ಆದರೆ ಆ ಹುಡುಗಿಗೆ ಸಂಬಂಧಿಸಿ ಈ ಯಾವ ತೊಂದರೆಯೂ ಇರಲಿಲ್ಲ. ಹುಡುಗಿಯೂ ಆರೋಗ್ಯದಿಂದಿದ್ದಳು. ಭ್ರೂಣವೂ ಆರೋಗ್ಯದಿಂದಿತ್ತು. ಆದ್ದರಿಂದಲೇ, ಭ್ರೂಣವನ್ನು ಕಿತ್ತು ಹಾಕಲು ಆಕೆ ಮಾಡಿಕೊಂಡ ಮನವಿಯನ್ನು ಮಧ್ಯಪ್ರದೇಶದ ಹೈಕೋರ್ಟ್ ತಳ್ಳಿಹಾಕಿತ್ತು. ಹುಡುಗಿ ಸುಪ್ರೀಮ್ ಕೋರ್ಟ್‍ನ ಮೆಟ್ಟಲೇರಿದಳು. ಆಗ ಸುಪ್ರೀಮ್ ಕೋರ್ಟು ಆ ಹುಡುಗಿಯ ಮನವಿಯನ್ನು ಪುರಸ್ಕರಿಸಿತ್ತು. ಕಳೆದವಾರ ಸುದ್ದಿಗೀಡಾದ ಕಾಸರಗೋಡಿನ ಪ್ರಕರಣವು ಈ ಕುರಿತಂತೆ ಎರಡನೆಯದ್ದು. ಈಕೆಯೂ ಕಾಸರಗೋಡಿನ ಸರಕಾರಿ ಆಸ್ಪತ್ರೆಗೆ ಹೋಗಿದ್ದಳು. ತನ್ನ ಹೊಟ್ಟೆಯೊಳಗಿನ ಭ್ರೂಣವನ್ನು ಕಿತ್ತು ಹಾಕುವಂತೆ ವಿನಂತಿಸಿದ್ದಳು. ಆದರೆ, ಭ್ರೂಣಕ್ಕೆ 20 ವಾರಗಳಿಗಿಂತ ಹೆಚ್ಚು ಪ್ರಾಯವಾಗಿದೆ ಎಂಬ ಕಾರಣವನ್ನು ಮುಂದಿಟ್ಟು ಆಸ್ಪತ್ರೆಯು ಅಬಾರ್ಷನ್‍ಗೆ ನಿರಾಕರಿಸಿತ್ತು. ಆಕೆ ಕೇರಳ ಹೈಕೋರ್ಟಿನ ಬಾಗಿಲು ತಟ್ಟಿದಳು. ಹೈಕೋರ್ಟು ಆಕೆಯ ಮನವಿಯನ್ನು ಪುರಸ್ಕರಿಸಿತು.
       ಇಲ್ಲೊಂದು ಮುಖ್ಯ ಪ್ರಶ್ನೆಯಿದೆ. ಯುವತಿಯ ಹೊಟ್ಟೆಯೊಳಗಿನ ಭ್ರೂಣದ ಹೊಣೆಗಾರಿಕೆಯನ್ನು ಯಾರು ವಹಿಸಿಕೊಳ್ಳಬೇಕು ಎಂಬುದು. ಕಾಸರಗೋಡಿನ ಈ ಯುವತಿಯ ಮೇಲೆ ಅತ್ಯಾಚಾರ ನಡೆಯಿತು. ಅತ್ಯಾಚಾರಿ ಮದುವೆಯಾಗುವುದಾಗಿ ಒಪ್ಪಿಕೊಂಡ. ಬಳಿಕ ಮಾತಿಗೆ ತಪ್ಪಿದ. ಆದರೆ ಭ್ರೂಣ ಬೆಳೆಯುತ್ತಿತ್ತು. ನಿಜವಾಗಿ, ಇಬ್ಬರು ಪ್ರೌಢ ವ್ಯಕ್ತಿಗಳ ನಡುವೆ ನಡೆದ ಪ್ರಕರಣ ಇದು. ಭ್ರೂಣವನ್ನು ಆಕೆ ಇಚ್ಛೆ ಪಟ್ಟು ಪಡೆದಿಲ್ಲದೇ ಇರಬಹುದು. ಅದು ಕ್ರೌರ್ಯವೊಂದು ಬಿಟ್ಟು ಹೋದ ಕುರುಹೇ ಆಗಿರಬಹುದು. ಆದರೆ ಇದರಲ್ಲಿ ಭ್ರೂಣದ ತಪ್ಪೇನಿದೆ? ತನ್ನನ್ನು ಬಸಿರಾಗು ಎಂದು ಆ ಭ್ರೂಣ ಕೇಳಿಕೊಂಡಿಲ್ಲ. ತಾಯಿ ಮುಗ್ಧೆ ಹೌದೋ ಅಲ್ಲವೋ ಭ್ರೂಣವಂತೂ ಮುಗ್ಧ. ಒಂದೊಮ್ಮೆ ಸಂತ್ರಸ್ತೆಯಷ್ಟೇ ಆ ಭ್ರೂಣವೂ ಪವಿತ್ರ. ಬಸಿರಿಗೆ ಕಾರಣ ಏನೇ ಇರಲಿ ಮತ್ತು ಅದರಿಂದಾಗಿ ಸಂತ್ರಸ್ತೆಗಾಗಿರುವ ಆಘಾತದ ಪ್ರಮಾಣವು ಎಷ್ಟೇ ತೀವ್ರವಾಗಿರಲಿ ಅದಕ್ಕೆ ಭ್ರೂಣವನ್ನು ಹೊಣೆಗಾರವನ್ನಾಗಿ ಮಾಡಲು ಸಾಧ್ಯವಿಲ್ಲ. ಒಂದು ಕಡೆ ಭ್ರೂಣ ಬೇಡ ಅನ್ನುವ ಸಂತ್ರಸ್ತೆ ಮತ್ತು ಇನ್ನೊಂದು ಕಡೆ ಸಂತ್ರಸ್ತೆಯ ಜಗತ್ತನ್ನು ನೋಡುವ ಉತ್ಸಾಹದಿಂದ ಕಣ್ಣು ಮಿಟಕಿಸುತ್ತಿರುವ ಭ್ರೂಣ- ಇವುಗಳ ನಡುವಿನ ಈ ಸಂಘರ್ಷದಲ್ಲಿ ಇವತ್ತು ಯುವತಿ ಗೆದ್ದಿರಬಹುದು. ಆದರೆ ಈ ಗೆಲುವು ಒಂದು ಸಾವಿನೊಂದಿಗೆ ಲಭ್ಯವಾಗಿದೆ ಎಂಬಂಶವನ್ನೂ ನಾವು ಅರಿತುಕೊಳ್ಳಬೇಕಿದೆ.
        ನಿಜವಾಗಿ ಅತ್ಯಾಚಾರ, ಗರ್ಭಧಾರಣೆ, ಅಬಾರ್ಷನ್.. ಮುಂತಾದ ಸಹಜ ಪದಗಳಾಚೆಗೆ ನಮ್ಮನ್ನು ಕೊಂಡೊಯ್ಯಬೇಕಾದ ಪ್ರಕರಣ ಇದು. ಓರ್ವ ಹೆಣ್ಣಿನ ಮೇಲೆ ಬಲಾತ್ಕಾರ ಮಾಡುವಲ್ಲಿಗೆ ಗಂಡಿನ ಹೋರಾಟ ಕೊನೆಗೊಳ್ಳುತ್ತದೆ. ಆದರೆ, ಹೆಣ್ಣಿನ ಸಮಸ್ಯೆ ಆರಂಭಗೊಳ್ಳುವುದೇ ಇಲ್ಲಿಂದ. ಅತ್ಯಾಚಾರವು ಗಂಡಿನ ಪಾಲಿಗೆ ಎಷ್ಟು ಇಚ್ಚಿತವೋ ಹೆಣ್ಣಿನ ಪಾಲಿಗೆ ಅಷ್ಟೇ ಅಇಚ್ಚಿತ. ಆಕೆ ಅದನ್ನು ನಿರೀಕ್ಷಿಸಿಲ್ಲವಾದ್ದರಿಂದ ಅದು ಆಘಾತವನ್ನಷ್ಟೇ ಅಲ್ಲ, ದೈಹಿಕ ಮತ್ತು ಮಾನಸಿಕವಾದ ಹಲವಾರು ಏರು-ಪೇರುಗಳಿಗೂ ಕಾರಣವಾಗುತ್ತದೆ. ಮನೆಯಲ್ಲಿ ಹೇಳಬೇಕೋ ಬೇಡವೋ ಅನ್ನುವ ತೊಳಲಾಟ ಒಂದು ಕಡೆಯಾದರೆ, ಹೇಳಿದರೆ ಏನೇನೆಲ್ಲ ಎದುರಿಸಬೇಕಾದೀತು ಎಂಬ ಭಯ ಇನ್ನೊಂದು ಕಡೆ. ಅತ್ಯಾಚಾರಿಯ ಬೆದರಿಕೆ ಮತ್ತೊಂದು ಕಡೆ. ಒಂದು ವೇಳೆ, ಇವೆಲ್ಲವನ್ನೂ ಮೀರಿ ತನ್ನ ಮೇಲಾದ ಕ್ರೌರ್ಯವನ್ನು ದಿಟ್ಟತನದಿಂದ ಬಹಿರಂಗಪಡಿಸಿದರೂ ಸಮಸ್ಯೆ ಅಲ್ಲಿಗೇ ಮುಗಿಯುವುದಿಲ್ಲ. `ಅತ್ಯಾಚಾರಕ್ಕೊಳಗಾದವಳು' ಎಂಬ ಪಟ್ಟಿಯೊಂದು ಆಕೆಯ ಹಣೆಯ ಮೇಲೆ ಸದಾ ತೂಗುತ್ತಿರುತ್ತದೆ. ಮದುವೆಯ ಸಂದರ್ಭದಲ್ಲಿ ಆ ಪಟ್ಟಿ ಸದ್ದು ಮಾಡಬಹುದು. ನೆರೆಕರೆಯಲ್ಲಿ, ಸಮಾಜದಲ್ಲಿ ಆ ಪಟ್ಟಿಗೆ ಇನ್ನಿಲ್ಲದ ಮಹತ್ವ ಸಿಗಬಹುದು. ಅದರ ಜೊತೆಗೇ ಗರ್ಭಧರಿಸುವ ಸಾಧ್ಯತೆಯೂ ಇರುತ್ತದೆ. ಸಂತ್ರಸ್ತತೆಯು ಅತ್ಯಾಚಾರಿಗೋ, ಮನೆಯವರಿಗೋ ಅಥವಾ ಸಮಾಜಕ್ಕೋ ಹೆದರಿ ಎಲ್ಲವನ್ನೂ ಮುಚ್ಚಿಟ್ಟು ಕೂತರೆ ಅಥವಾ ಅತ್ಯಾಚಾರದ ಪರಿಣಾಮದ ಬಗ್ಗೆ ಅರಿವು ಇಲ್ಲದವಳಾಗಿದ್ದರೆ, ಭ್ರೂಣದ ರೂಪದಲ್ಲಿ ಅತ್ಯಾಚಾರ ಮತ್ತೆ ಕಾಡುತ್ತದೆ. ಕೊನೆಗೊಂದು ದಿನ ಅದು ಸಂತ್ರಸ್ತೆಗೆ ಸವಾಲೆಸೆಯುವ ಹಂತಕ್ಕೂ ತಲುಪುತ್ತದೆ. ಒಂದು ರೀತಿಯಲ್ಲಿ, ‘ಅತ್ಯಾಚಾರದ ಸಂತ್ರಸ್ತೆ’ ಎದುರಿಸುವ ಸವಾಲುಗಳ ಹಲವು ಮಜಲುಗಳಿವು. ಆಕೆ ಮೌನವಾದರೂ ಸಮಸ್ಯೆಯೇ, ಮಾತಾಡಿದರೂ ಸಮಸ್ಯೆಯೇ. ವಿಷಾದ ಏನೆಂದರೆ, ಇವತ್ತು ಅತ್ಯಾಚಾರ ಪ್ರಕರಣಗಳು ಸಹಜ `ಪ್ರಕರಣ'ಗಳ ಪಟ್ಟಿಯಲ್ಲಿ ಸ್ಥಾನ ಪಡೆಯುವಷ್ಟು ಜುಜುಬಿ ಅನ್ನಿಸಿಕೊಳ್ಳುತ್ತಿರುವುದು. ಸಂತ್ರಸ್ತೆಯ ಭಾವನಾತ್ಮಕ ಜಗತ್ತನ್ನು ಸ್ಪರ್ಶಿಸುವುದಕ್ಕೆ ನಮ್ಮ ಲೇಖನಿ, ಮೈಕುಗಳು ಆಸಕ್ತಿ ತೋರದೇ ಇರುವುದು.
      ಅಂದಹಾಗೆ, ಅತ್ಯಾಚಾರವೆಂಬುದು ಕ್ರೌರ್ಯವಷ್ಟೇ ಅಲ್ಲ, ಅದು ಒಂದು ನಿಷ್ಪಾಪಿ ಭ್ರೂಣದ ಹುಟ್ಟು ಮತ್ತು ಅದರ ಸಾವನ್ನು ಅನಿವಾರ್ಯಗೊಳಿಸುವ ಪಾತಕ ಕೂಡ. ಒಂದು ವೇಳೆ ಅತ್ಯಾಚಾರಿಯು ಸಂತ್ರಸ್ತೆಯನ್ನು ಕೊಲೆ ಮಾಡದೆ ಬಿಟ್ಟು ಬಿಡಲೂಬಹುದು. ಆದರೆ, ಅತ್ಯಾಚಾರದಿಂದಾಗಿ ಜೀವ ತಳೆಯಬಹುದಾದ ಭ್ರೂಣ(ಮಗು)ವನ್ನು ಸಂತ್ರಸ್ತೆ ಕೊಲ್ಲಲೇಬೇಕಾಗುತ್ತದೆ. ಅದಕ್ಕೆ ಆಕೆ ಹೊಣೆಗಾರಳಲ್ಲ. ಆದ್ದರಿಂದ, ಆ ಹತ್ಯೆಯ ಸಂಪೂರ್ಣ ಹೊಣೆಯನ್ನು ಅತ್ಯಾಚಾರಿಯೇ ಹೊರಬೇಕು. ಮಾತ್ರವಲ್ಲ, ಕೋರ್ಟಿನ ತೀರ್ಪುಗಳು ಈ ಕುರಿತಂತೆ ಇನ್ನಷ್ಟು ವಿಸ್ತಾರ ಚರ್ಚೆಗೆ ವೇದಿಕೆ ಒದಗಿಸಬೇಕು. ಅತ್ಯಾಚಾರಿಗೆ ಮರಣದಂಡನೆಯೇ ಯಾಕೆ ಸೂಕ್ತ ಎಂಬುದಕ್ಕೆ ಬಲವಾದ ಉತ್ತರವನ್ನು ಪಡೆಯುವುದಕ್ಕಾದರೂ ಇಂಥದ್ದೊಂದು ಮರು ಅವಲೋಕನ ಅನಿವಾರ್ಯ. 


No comments:

Post a Comment