Wednesday 26 March 2014

ನಮ್ಮ ಸಂವೇದನಾರಹಿತ ಬದುಕಿಗೆ ಕನ್ನಡಿ ಹಿಡಿದ ಕಾರ್ಯಕ್ರಮ

   ಧರ್ಮದ ಆಧಾರದಲ್ಲಿ ಜನರನ್ನು ವಿಭಜಿಸುವ ಮತ್ತು ಪರಸ್ಪರರನ್ನು ಎತ್ತಿ ಕಟ್ಟುವ ವಾತಾವರಣವು ದೇಶದಲ್ಲಿ ಸದ್ಯ ಚಲಾವಣೆಯಲ್ಲಿರುವಾಗಲೇ ಕಳೆದವಾರ ರಾಷ್ಟ್ರಪತಿ ಭವನದಲ್ಲಿ ಒಂದು ಅಪರೂಪದ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮ ಎಷ್ಟು ಭಾವನಾತ್ಮಕ ಮತ್ತು ಆಪ್ತವಾಗಿತ್ತೆಂದರೆ, ‘ಕಡಿ, ಕೊಲ್ಲು, ಮುಗಿಸು..' ಮುಂತಾದ ಭಾಷೆಯಲ್ಲಿ ಮಾತಾಡುವ ಎಲ್ಲರಿಗೂ ಅದರಲ್ಲಿ ಸಾಕಷ್ಟು ಪಾಠವಿತ್ತು. ಆದರೆ, ಹೆಚ್ಚಿನ ಪತ್ರಿಕೆಗಳು ಆ ಕಾರ್ಯಕ್ರಮದ ಸುದ್ದಿಯನ್ನು ಪ್ರಕಟಿಸಲೇ ಇಲ್ಲ. ಬಹುಶಃ, ಪ್ರತಿವರ್ಷ ಇಂಥದ್ದೊಂದು ಕಾರ್ಯಕ್ರಮ ರಾಷ್ಟ್ರಪತಿ ಭವನದಲ್ಲಿ ನಡೆಯುತ್ತದೆ ಅನ್ನುವುದೋ ಅಥವಾ ಸೆಲೆಬ್ರಿಟಿಗಳು ಮತ್ತು ಅವರ ಡ್ಯಾನ್ಸುಗಳು ಇಲ್ಲದ ಸಪ್ಪೆ ಕಾರ್ಯಕ್ರಮ ಅನ್ನುವುದೋ ಯಾವುದು ಇದಕ್ಕೆ ಕಾರಣ ಎಂಬುದನ್ನು ಅವೇ ಹೇಳಬೇಕು.
   ಉತ್ತರಾಖಂಡದ ಪ್ರವಾಹದ ಸಂದರ್ಭದಲ್ಲಿ ಸಂತ್ರಸ್ತರನ್ನು ಸುರಕ್ಷಿತ ಸ್ಥಳಗಳಿಗೆ ತಲುಪಿಸುವುದಕ್ಕಾಗಿ ಮಿಗ್ 17v5 ವಿಮಾನದ ಪೈಲಟ್ ಕ್ಯಾಸ್ಟಲಿನೋ ಎಂಬವರು ಅಪಾಯಕಾರಿ ಸಾಹಸಕ್ಕೆ ಕೈ ಹಾಕಿದ್ದರು. ಬೆಟ್ಟ-ಗುಡ್ಡಗಳಲ್ಲಿ ಚೆಲ್ಲಾಪಿಲ್ಲಿಯಾಗಿದ್ದ ಸುಮಾರು 80 ಸಂತ್ರಸ್ತರನ್ನು ಅವರು ಜೀವದ ಹಂಗು ತೊರೆದು ರಕ್ಷಿಸಿದ್ದರು. ಈ ಸಂದರ್ಭದಲ್ಲಿ ಅವರ ಜೊತೆ ಸಹ ಪೈಲಟ್ ಆಗಿ ಪ್ರವೀಣ್ ಅನ್ನುವವರೂ ಇದ್ದರು. ಆದರೆ, ಈ ಕಾರ್ಯಾಚರಣೆಯ ಸಂದರ್ಭದಲ್ಲೇ ವಿಮಾನ ಪತನಗೊಂಡು ಅವರಿಬ್ಬರೂ ಸಾವಿಗೀಡಾದರು. ಅಸ್ಸಾಮ್‍ನ ಗ್ರಾಮವೊಂದಕ್ಕೆ ತಗುಲಿದ ಬೆಂಕಿಯನ್ನು ನಂದಿಸುವುದಕ್ಕಾಗಿ ಯುವ ಯೋಧನೋರ್ವ ಜೀವ ಪಣಕ್ಕಿಟ್ಟು ಧುಮುಕಿ ಯಶಸ್ವಿಯಾಗಿದ್ದ. ಹಾಗೆಯೇ, ಅಸ್ಸಾಮ್‍ನಲ್ಲಿ ನಡೆದ ಅಪಘಾತವೊಂದರಲ್ಲಿ ತನ್ನ ಮೂವರು ಗೆಳೆಯರನ್ನು ಉಳಿಸುವುದಕ್ಕಾಗಿ ಶ್ರಮಿಸುವ ವೇಳೆ ಯುವ ಇಂಜಿನಿಯರ್ ಮನೀಶ್ ಸಾವಿಗೀಡಾಗಿದ್ದ.. ಇವರೆಲ್ಲರನ್ನು ಗೌರವಿಸುವ ಕಾರ್ಯಕ್ರಮ ಅದಾಗಿತ್ತು. ಆದರೆ ಇವರು ಮತ್ತು ಇಂಥ ಸಾಹಸಗಳನ್ನು ಮೆರೆದ ಇತರರ ಗೌರವಾರ್ಥ ರಾಷ್ಟ್ರಪತಿ ನೀಡಿದ ಕೀರ್ತಿಚಕ್ರ, ಶೌರ್ಯಚಕ್ರ, ವಿಶಿಷ್ಟ ಸೇವಾ ಪದಕಗಳನ್ನು ಪಡಕೊಳ್ಳುವುದಕ್ಕೆ ಇವರಲ್ಲಿ ಬಹುತೇಕರೂ ಜೀವಂತವಿರಲಿಲ್ಲ. ಆದ್ದರಿಂದಲೇ ಅವರ ಪತ್ನಿಯೋ, ಅಮ್ಮನೋ, ಅಪ್ಪನೋ ಭಾವುಕ ಮನಸ್ಸಿನಿಂದ ಸ್ವೀಕರಿಸಿದರು. ಕಣ್ಣೀರು ಮಿಡಿದರು. ಮನುಷ್ಯರನ್ನು ಅವರ ಧರ್ಮ, ಹೆಸರು, ಭಾಷೆಯ ಹಂಗಿಲ್ಲದೇ ಪ್ರೀತಿಸುವ ಮತ್ತು ಇನ್ನೊಬ್ಬರಿಗಾಗಿ ಬದುಕುವ ಅಮೂಲ್ಯ ಮಾದರಿ ಪಾತ್ರಗಳಾಗಿ ಅವರು ನೆರೆದವರನ್ನು ತಟ್ಟಿದರು.
 ಚುನಾವಣೆಯ ಕಾವು ಬಿರುಸು ಪಡೆಯುತ್ತಿರುವ ಈ ದಿನಗಳಲ್ಲಿ ಕ್ಯಾಸ್ಟಲಿನೋ, ಪ್ರವೀಣ್, ಮನೀಶ್.. ಮುಂತಾದ ಪಾತ್ರಗಳು ಮತ್ತೆ ಮತ್ತೆ ಚರ್ಚೆಗೊಳಗಾಗಬೇಕಾದ ತುರ್ತು ಅಗತ್ಯ ಇದೆ. ಉತ್ತರಾಖಂಡದಲ್ಲಿ ದಿಕ್ಕೆಟ್ಟು ನಿಂತ ಯಾತ್ರಾರ್ಥಿಗಳಿಗೂ ಕ್ಯಾಸ್ಟಲಿನೋಗೂ ಯಾವ ಸಂಬಂಧವೂ ಇರಲಿಲ್ಲ. ಆತ ಉತ್ತರಾಖಂಡದವನಲ್ಲ. ಆತನ ಭಾಷೆಗೂ ಉತ್ತರಾಖಂಡಕ್ಕೂ ಸಂಬಂಧ ಇರಲಿಲ್ಲ. ಅಲ್ಲಿ ಆತನಿಗೆ ಬಂಧುಗಳಾರೂ ಇರಲಿಲ್ಲ. ಅಲ್ಲದೇ ಸಂತ್ರಸ್ತರ ಧರ್ಮವನ್ನು ಆತ ಆಚರಿಸುತ್ತಲೂ ಇರಲಿಲ್ಲ. ಒಂದು ರೀತಿಯಲ್ಲಿ, ಪ್ರವಾಹ ಪೀಡಿತ ಪ್ರದೇಶಕ್ಕೆ ಹೋಗದೇ ಇರುವುದಕ್ಕೆ ಇಂಥ ಹತ್ತು-ಹಲವು ಕಾರಣಗಳು ಆತನ ಮುಂದಿದ್ದುವು. ಅಲ್ಲದೇ, ಪ್ರವಾಹ ಪೀಡಿತ ಪ್ರದೇಶವು ಅತ್ಯಂತ ದುರ್ಗಮ ಮತ್ತು ಅಪಾಯಕಾರಿ ವಲಯದಲ್ಲಿತ್ತು. ಆದರೆ, ಕ್ಯಾಸ್ಟಲಿನೋ ಇವಾವುದನ್ನೂ ನೆಪ ಮಾಡಿಕೊಂಡು ಕೂರಲಿಲ್ಲ. ಕೇವಲ ಎರಡೇ ದಿನಗಳಲ್ಲಿ 15 ಸಾವಿರ ಸಂತ್ರಸ್ತರನ್ನು ಉತ್ತರಾಖಂಡದಿಂದ ಗುಜರಾತ್‍ಗೆ ಸಾಗಿಸಿರುವೆ ಎಂದು ಎಲ್ಲೋ ಕುಳಿತು ಸುಳ್ಳು ಸುಳ್ಳೇ ಪ್ರಚಾರ ಮಾಡಿದ ಗುಜರಾತ್‍ನ ಮುಖ್ಯಮಂತ್ರಿ ಮೋದಿ ಮತ್ತು ಕ್ಯಾಸ್ಟಲಿನೋರನ್ನು ಒಮ್ಮೆ ಹೋಲಿಸಿನೋಡಿ. ಇಂದಿನ ದಿನಗಳಲ್ಲಿ ಇಂಥದ್ದೊಂದು ಹೋಲಿಕೆಯ ಅಗತ್ಯ ಯಾಕೆ ಇದೆ ಎಂದರೆ, ಇವತ್ತು ‘ಕ್ಯಾಸ್ಟಲಿನೋ ಮಾದರಿ’ ಕಡಿಮೆ ಆಗುತ್ತಿದೆ. ‘ಮೋದಿ ಮಾದರಿ’ ಜನಪ್ರಿಯವಾಗುತ್ತಿದೆ. ನಿಜವಾಗಿ, ಕ್ಯಾಸ್ಟಲಿನೋ ಓರ್ವ ವ್ಯಕ್ತಿಯಲ್ಲ, ಅದೊಂದು ಪಾತ್ರ. ಈ ದೇಶದ ಕೋಟ್ಯಾಂತರ ಮಂದಿ ಆ ಪಾತ್ರದಂತೆ ಇವತ್ತು ನಿತ್ಯ ಬದುಕುತ್ತಿದ್ದಾರೆ. ಅವರ ಹೆಸರು ಅಬ್ದುಲ್ಲ, ನಾರಾಯಣ, ಡಿಸೋಜ... ಏನೇ ಇರಬಹುದು, ಆದರೆ ಈ ಪಾತ್ರದಂತೆ ಬದುಕುವುದಕ್ಕೆ ಈ ಹೆಸರುಗಳು ಎಂದೂ ಅವರಿಗೆ ಅಡ್ಡಿಯಾಗಿಲ್ಲ. ನೆರೆಯವನ ಮನೆಗೆ ತನ್ನ ಮನೆಯಿಂದ ನೀರು ಕೊಡುವ ಅಬ್ದುಲ್ಲ; ಪಕ್ಕದ ಮನೆಯ ಅನಾರೋಗ್ಯ ಪೀಡಿತ ಯೂಸುಫ್‍ನನ್ನು ಆಸ್ಪತ್ರೆಗೆ ಸೇರಿಸಿ ಬಿಲ್ ಪಾವತಿಸುವ ರಮೇಶ; ನಡು ರಾತ್ರಿ ಫಾತಿಮಾಳ ಹೆರಿಗೆ ನೋವಿಗೆ ಸ್ಪಂದಿಸಿ ನಿದ್ದೆಗೆಟ್ಟು ಕಾಯುವ ಜಯಲಕ್ಷ್ಮಿ; ನೆರೆಯ ವೃದ್ಧೆ ಸೆಲಿನಾ ಬಾಯಿಯನ್ನು ತಾಯಿಯಂತೆ ಉಪಚರಿಸುವ ಲಕ್ಷ್ಮಿ... ಇಂಥ ಪಾತ್ರಗಳು ಈ ಸಮಾಜದಲ್ಲಿ ಧಾರಾಳ ಇವೆ. ಮಾತ್ರವಲ್ಲ, ಇಂಥ ಮನುಷ್ಯ ಪ್ರೀತಿಯೇ ಈ ದೇಶದ ಜೀವಾಳವೂ ಆಗಿದೆ. ಕ್ಯಾಸ್ಟಲಿನೋ ಇದರ ಒಂದು ಬಿಂಬ ಅಷ್ಟೇ. ಆದರೆ ರಾಜಕೀಯವು ಇವತ್ತು ಸಮಾಜದ ಈ ಮಾನವೀಯ ಬೆಸುಗೆಯನ್ನು ತುಂಡರಿಸುವ ಭಾಷೆಯಲ್ಲಿ ಮಾತಾಡುತ್ತಿದೆ. ಒಂದು ಧರ್ಮವನ್ನು ಮತ್ತು ಅದರ ಅನುಯಾಯಿಗಳನ್ನು ಅಸ್ಪ್ರಶ್ಯರಂತೆ ನೋಡುವುದಕ್ಕೆ ಪ್ರಚೋಧನೆ ಕೊಡುತ್ತಿದೆ. ನಿಜವಾಗಿ, ಕೆಲವು ರಾಜಕಾರಣಿಗಳು ಕ್ಯಾಸ್ಟಲಿನೋರಂಥ ಮನುಷ್ಯರನ್ನು ಎಂದೂ ಇಷ್ಟಪಡುವುದಿಲ್ಲ. ಯಾಕೆಂದರೆ, ಇಂಥವರ ಸಂಖ್ಯೆ ಹೆಚ್ಚಿದಂತೆಲ್ಲಾ, ಅವರ ಅಧಿಕಾರ ನಿರೀಕ್ಷೆಗಳು ಕಡಿಮೆಯಾಗುತ್ತಾ ಹೋಗುತ್ತವೆ. ತನ್ನ ಸಾಧನೆಯನ್ನು ಹೇಳಿಕೊಂಡು ಓಟು ಬೇಡುವುದಕ್ಕೂ ಜನರನ್ನು ಧರ್ಮದ ಆಧಾರದಲ್ಲಿ ವಿಭಜಿಸಿ ಓಟು ಪಡೆಯುವುದಕ್ಕೂ ವ್ಯತ್ಯಾಸ ಇದೆ.  ಮೊದಲನೆಯದ್ದು ತೀರಾ ಕಷ್ಟದ್ದಾದರೆ ಎರಡನೆಯದು ತೀರಾ ಸುಲಭ. ಸದ್ಯದ ದಿನಗಳಲ್ಲಿ ಈ ಸುಲಭದ ಆಯ್ಕೆಯನ್ನು ಪರಿಗಣಿಸುವ ರಾಜಕಾರಣಿಗಳ ಒಂದು ದಂಡೇ ನಿರ್ಮಾಣವಾಗುತ್ತಿದೆ. ಅವರ ಭಾಷೆ, ವರ್ತನೆ, ಅವೇಶಗಳೆಲ್ಲ ಕ್ಯಾಸ್ಟಲಿನೋನನ್ನು ಪ್ರತಿನಿಧಿಸುತ್ತಿಲ್ಲ. ಆ ಭಾಷೆಗೆ ಸಂತ್ರಸ್ತರನ್ನು ನಿರ್ಮಾಣ ಮಾಡುವ ಸಾಮರ್ಥ್ಯ  ಇದೆಯೇ ಹೊರತು ಸಂತೃಪ್ತರನ್ನು ತಯಾರಿಸುವುದಲ್ಲ. ಆ ವರ್ತನೆಯಲ್ಲಿ ಮನುಷ್ಯರ ಸಹಾಯಕ್ಕೆ ಧುಮುಕುವ ಇರಾದೆಗಿಂತ ಮನುಷ್ಯರ ಅಸಹಾಯಕತೆಯಿಂದ ಲಾಭ ಎತ್ತುವ ಹುನ್ನಾರ ಕಾಣಿಸುತ್ತದೆ. ಆ  ಆವೇಶಕ್ಕೆ ಜನರನ್ನು ರಕ್ಷಿಸುವ ತುಡಿತಕ್ಕಿಂತ ಅವರನ್ನು ವಿಭಜಿಸಿ ಸಂತ್ರಸ್ತರನ್ನಾಗಿಸುವ ಉಮೇದು ಇದೆ.
   ಸಾಮಾನ್ಯವಾಗಿ, ಸಿನಿಮಾ ತಾರೆಯರ ಕಾರ್ಯಕ್ರಮಕ್ಕೆ ಮಾಧ್ಯಮಗಳಲ್ಲಿ ವ್ಯಾಪಕ ಪ್ರಚಾರ ಸಿಗುತ್ತದೆ. ಸಿನಿ ಅವಾರ್ಡ್‍ನಂಥ ಕಾರ್ಯಕ್ರಮಗಳು ಟಿ.ವಿ. ಚಾನೆಲ್‍ಗಳನ್ನು ದಿನವಿಡೀ ತುಂಬಿಕೊಂಡಿರುತ್ತವೆ. ತಾರೆಯರ ಮಾತು, ನಗು, ಡ್ಯಾನ್ಸು, ಹಾವಭಾವಗಳನ್ನು ತುಂಬಿಕೊಳ್ಳಲು ಕ್ಯಾಮರಾಗಳು ದಣಿವರಿಯದೇ ಕಾಯುತ್ತವೆ. ಆದರೆ, ಇತರಿಗಾಗಿ ಬದುಕುವ, ಅವರ ಉಳಿವಿಗಾಗಿ ತಾವೇ ಜೀವತ್ಯಾಗ ಮಾಡುವ ಮನುಷ್ಯರ ಬಗ್ಗೆ ಹೇಳುವುದಕ್ಕೆ ನಮ್ಮ ಮಾಧ್ಯಮಗಳು ಉತ್ಸಾಹ ತೋರುತ್ತಿಲ್ಲ. ಅವರನ್ನು ಸ್ಮರಿಸಿಕೊಂಡು ಕಣ್ತುಂಬಿಕೊಳ್ಳುವ ಪತ್ನಿ, ಅಪ್ಪ, ತಾಯಿಯನ್ನು ತುಂಬಿಕೊಳ್ಳಲು ಕ್ಯಾಮರಾಗಳಿಗೆ ಪುರುಸೊತ್ತಿಲ್ಲ. ಅವರನ್ನು ಎದುರಿಟ್ಟುಕೊಂಡು ಒಂದೊಳ್ಳೆಯ ಮನುಷ್ಯ ಪ್ರೇಮಿ ಚಿಂತನೆಯನ್ನು ಸಮಾಜಕ್ಕೆ ಅರ್ಪಿಸುವುದಕ್ಕೆ ಪ್ರಯತ್ನಗಳೂ ನಡೆಯುತ್ತಿಲ್ಲ. ಬಹುಶಃ, ಬರಬರುತ್ತಾ ನಾವೆಲ್ಲ ಸಂವೇದನೆಯನ್ನು ಕಳಕೊಳ್ಳುತ್ತಿರುವುದಕ್ಕೆ ಇವೆಲ್ಲ ಸಾಕ್ಷಿಯಾಗಬಹುದೇನೋ. ಇದು ಬದಲಾಗಬೇಕು. ಕ್ಯಾಸ್ಟಲಿನೋರಂಥ ಪಾತ್ರವನ್ನು ಸಮಾಜದಲ್ಲಿ ಪೋಷಿಸಿ ಬೆಳೆಸುವ ಬರಹ, ಚಿಂತನೆಗಳು ಹರಿದು ಬರಬೇಕು. ಇಲ್ಲದಿದ್ದರೆ ವಿಭಜಿಸುವ ಪಾತ್ರಗಳು ನಮ್ಮ ನಡುವಿನ ಕ್ಯಾಸ್ಟಲಿನೋರನ್ನು ನುಂಗಿಬಿಟ್ಟಾವು.

No comments:

Post a Comment