Thursday, 3 April 2014

ದುರಂತ ಸುದ್ದಿಗಳ ಪಟ್ಟಿಯಲ್ಲಿ ಮಕ್ಕಳು ಕಾಣಿಸಿಕೊಳ್ಳದಿರಲಿ


   ಒಂದು ಕಾಲದಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷÀಕರಿಗೆ ಮಾತ್ರ ಸೀಮಿತವಾಗಿದ್ದ ಪರೀಕ್ಷೆಯು ಇವತ್ತು ತನ್ನ ವ್ಯಾಪ್ತಿಯನ್ನು ಸಾಕಷ್ಟು ವಿಸ್ತರಿಸಿಕೊಂಡಿದೆ. ಈ ವ್ಯಾಪ್ತಿಯೊಳಗೆ ಹೆತ್ತವರು, ಸರಕಾರ, ಸಿನಿಮಾ ನಿರ್ಮಾಪಕರು... ಮುಂತಾದವರೆಲ್ಲ ಸೇರಿಕೊಂಡಿದ್ದಾರೆ. ಪರೀಕ್ಷೆ ಹತ್ತಿರವಾಗುತ್ತಿರುವಂತೆಯೇ ಮಕ್ಕಳಷ್ಟೇ ಗಂಭೀರವಾಗಿ ಹೆತ್ತವರೂ ಸಿದ್ಧಗೊಳ್ಳುತ್ತಾರೆ. ಮನೆಯಲ್ಲಿ ಟಿ.ವಿ. ನೋಡುವ, ಊಟ ಮಾಡುವ, ಮದುವೆ-ಮುಂಜಿ ಮುಂತಾದ ಕಾರ್ಯಕ್ರಮಗಳಿಗೆ ಹೋಗುವ ಬಗ್ಗೆ ವೇಳಾಪಟ್ಟಿ ತಯಾರಾಗುತ್ತದೆ. ಮಕ್ಕಳ ಪರೀಕ್ಷಾ ತಯಾರಿಗೆ ತೊಂದರೆಯಾಗದಂತೆ ಇವೆಲ್ಲಕ್ಕೂ ಜಾಗರೂಕತೆಯಿಂದ ಸಮಯ ಹೊಂದಿಸಲಾಗುತ್ತದೆ. ಆವರೆಗೆ ಬಿಝಿಯಾಗಿದ್ದ ಅಪ್ಪ ಬಿಡುವು ಮಾಡಿಕೊಳ್ಳುತ್ತಾನೆ. ತಾಯಿಯೇ ಮಾರುಕಟ್ಟೆಗೆ ಹೋಗುತ್ತಾಳೆ. ಸಮಯ ಸಮಯಕ್ಕೆ ಮಕ್ಕಳಿಗೆ ಕುಳಿತಲ್ಲಿಗೇ ಆಹಾರ ಸರಬರಾಜು ಮಾಡುವಲ್ಲಿ ಕಾಳಜಿ ವಹಿಸಲಾಗುತ್ತದೆ. ಇನ್ನು, ಈ ಸಮಯದಲ್ಲಿ ಸಿನಿಮಾಗಳು ಬಿಡುಗಡೆಯಾಗುವುದು ಕಡಿಮೆ. ಸರಕಾರವಂತೂ ವಿದ್ಯಾರ್ಥಿಗಳ ಬಗ್ಗೆ ವಿಪರೀತ ಕಾಳಜಿಯನ್ನು ವ್ಯಕ್ತಪಡಿಸುತ್ತದೆ. ರೈತರಿಗೆ ಕೊಡದ ವಿದ್ಯುತನ್ನು ವಿದ್ಯಾರ್ಥಿಗಳಿಗೆ ಕೊಡುವಷ್ಟು ಅದು ಉದಾರಿಯಾಗಿ ಬಿಡುತ್ತದೆ. ವಿಶೇಷ ಏನೆಂದರೆ, ಪರೀಕ್ಷೆ ಮುಗಿದಂತೆಯೇ ಈ ಎಲ್ಲ ಕಾಳಜಿಗಳೂ ಹೊರಟು ಹೋಗುತ್ತವೆ ಎಂಬುದು. ವಿದ್ಯಾರ್ಥಿಗಳು ಹಗುರವಾಗುತ್ತಾರೆ. ಬ್ಯಾಟು, ಬಾಲ್‍ಗಳು ಅಡಗುತಾಣದಿಂದ ಹೊರಬರುತ್ತವೆ. ಆವರೆಗೆ ಮನೆಯಲ್ಲೇ ಇದ್ದ ಮಕ್ಕಳೆಲ್ಲ ಮೈದಾನದಲ್ಲೇ ಠಿಕಾಣಿ ಹೂಡುತ್ತಾರೆ. ಕರೆಂಟ್ ಕೈ ಕೊಡತೊಡಗುತ್ತದೆ. ಸಿನಿಮಾಗಳು ಭರಪೂರ ಬಿಡುಗಡೆಯಾಗುತ್ತವೆ. ಆದರೆ, ಹೆತ್ತವರು ಮಾತ್ರ ಹಗುರವಾಗುವುದಿಲ್ಲ. ಅದರ ಬದಲು ಒಂದಷ್ಟು ಹೆಚ್ಚೇ ಒತ್ತಡಕ್ಕೆ ಒಳಗಾಗುತ್ತಾರೆ.  ಯಾಕೆಂದರೆ, ಪರೀಕ್ಷೆಯ ಜಾಗದಲ್ಲಿ ರಜೆ ಬಂದು ಕೂತಿರುತ್ತದೆ.
 ಪತ್ರಿಕೆಗಳು ಪ್ರಕಟಿಸುವ ದುರಂತ ಸುದ್ದಿಗಳ ಪುಟಗಳಲ್ಲಿ ಈಗಾಗಲೇ ಮಕ್ಕಳು ಕಾಣಿಸಿಕೊಳ್ಳತೊಡಗಿದ್ದಾರೆ. ರಜೆಯ ಮಜವನ್ನು ಅನುಭವಿಸುವ ತುರ್ತಿನಲ್ಲಿ ಮಕ್ಕಳು ಅಪಾಯಕ್ಕೆ ಸಿಲುಕುತ್ತಿದ್ದಾರೆ. ಇನ್ನು ಕೆಲವು ದಿನಗಳು ಕಳೆದರೆ ವಿದ್ಯಾರ್ಥಿಗಳ ದೊಡ್ಡದೊಂದು ಗುಂಪು ಪರೀಕ್ಷೆ ಮುಗಿಸಿಕೊಂಡು ಹೊರಬರಲಿದೆ. ನಿಜವಾಗಿ, ಹೆತ್ತವರು ಮತ್ತು ಮಕ್ಕಳನ್ನು ಅತ್ಯಂತ ಹೆಚ್ಚು ಪರೀಕ್ಷೆಗೆ ಒಡ್ಡುವ ಸಂದರ್ಭ ಇದು. ಪರೀಕ್ಷಾ ತಯಾರಿಯ ಸಂದರ್ಭದಲ್ಲಾದರೋ ಮಕ್ಕಳು ಹೆಚ್ಚಿನ ಸಮಯವನ್ನು ಮನೆಯ ಒಳಗೆಯೇ ಕಳೆಯುತ್ತಾರೆ. ಮಕ್ಕಳಿಗೆ ಓದುವುದಕ್ಕೆ ಉತ್ತಮ ವಾತಾವರಣ ನಿರ್ಮಿಸಿಕೊಡುವ ಒತ್ತಡವಷ್ಟೇ ಹೆತ್ತವರ ಮೇಲಿರುತ್ತದೆ. ಅಲ್ಲದೇ, ಆ ಸಂದರ್ಭದಲ್ಲಿ ಮಕ್ಕಳ ಒತ್ತಡವನ್ನು ಹೇಗೆ ನಿವಾರಿಸಬೇಕು, ಯಾವ ರೀತಿಯ ವಾತಾವರಣವನ್ನು ಮನೆಯಲ್ಲಿ ನಿರ್ಮಿಸಬೇಕು... ಎಂಬಿತ್ಯಾದಿಗಳ ಬಗ್ಗೆ ಪತ್ರಿಕೆಗಳು ಮತ್ತು ಟಿ.ವಿ.ಗಳಲ್ಲಿ ತಜ್ಞರು ಹೇಳುತ್ತಿರುತ್ತಾರೆ. ಆದರೆ, ಪರೀಕ್ಷೆ ಮುಗಿದೊಡನೇ ಮಕ್ಕಳು ಬಂಧನದಿಂದ ಬಿಡುಗಡೆಗೊಂಡಂಥ ಮನಸ್ಥಿತಿಗೆ ತಲುಪುತ್ತಾರೆ. ಆ ಬಳಿಕ ಮಕ್ಕಳು ಹೆಚ್ಚಿನ ವೇಳೆಯನ್ನು ಕಳೆಯುವುದು ಮನೆಯ ಹೊರಗೆಯೇ. ಆದ್ದರಿಂದ ಹೆತ್ತವರಿಗೆ ಅವರ ಮೇಲಿನ ಹಿಡಿತ ಬಹುತೇಕ ತಪ್ಪಿ ಹೋಗುತ್ತದೆ. ಮಕ್ಕಳು ಅಲ್ಲಿ  ಏನು ಮಾಡುತ್ತಾರೆ, ಗೆಳೆಯರೊಂದಿಗೆ ಯಾವ ಯೋಜನೆ ಹಾಕಿರುತ್ತಾರೆ, ಎಲ್ಲೆಲ್ಲಿಗೆ ಹೋಗುತ್ತಾರೆ.. ಎಂಬುದೆಲ್ಲಾ ಹೆತ್ತವರಿಗೆ ಗೊತ್ತಾಗುವುದು ಕಡಿಮೆ. ಒಂದು ರೀತಿಯಲ್ಲಿ, ಪರೀಕ್ಷಾ ತಯಾರಿಯ ಸಂದರ್ಭಕ್ಕಿಂತ ಹೆಚ್ಚಿನ ಆತಂಕವನ್ನು ಹೆತ್ತವರಲ್ಲಿ ಉಂಟು ಮಾಡುವುದು ರಜೆಯ ವೇಳೆಯೇ. ಹೊರಗೆ ಹೋದ ಮಕ್ಕಳು ಮಧ್ಯಾಹ್ನ ಊಟಕ್ಕೆ ಬಂದರೂ ಆಯಿತು, ಇಲ್ಲದಿದ್ದರೂ ಆಯಿತು.. ಅನ್ನುವ ಸಂದರ್ಭವೊಂದು ಸೃಷ್ಟಿಯಾಗುವುದನ್ನು ಯಾವ ಹೆತ್ತವರು ಸಹಿಸುತ್ತಾರೆ ಹೇಳಿ? ಈಜಲು, ಜಾಲಿ ರೈಡ್ ಮಾಡಲು ಮಕ್ಕಳು ಬಳಸುವುದು ರಜೆಯ ದಿನಗಳನ್ನೇ. ‘ಅಪಘಾತ: ವಿದ್ಯಾರ್ಥಿ ಸಾವು', ‘ವಿದ್ಯಾರ್ಥಿ ಮುಳುಗಿ ಸಾವು..' ಮುಂತಾದ ಸುದ್ದಿಗಳು ಹೆಚ್ಚು ಕಾಣಿಸಿಕೊಳ್ಳುವುದೂ ರಜೆಯ ದಿನಗಳಲ್ಲೇ. ಆದ್ದರಿಂದಲೇ ಹೆತ್ತವರು ಪ್ರತಿದಿನಗಳನ್ನೂ ಆತಂಕದಲ್ಲೇ ಕಳೆದು ಬಿಡುವುದಿದೆ. ಮಕ್ಕಳಿಗೆ ಎಷ್ಟೇ ಸಲಹೆ-ಸೂಚನೆಗಳನ್ನು ಕೊಟ್ಟರೂ ಅದನ್ನು ಪಾಲಿಸುತ್ತಾರೋ ಇಲ್ಲವೋ ಎಂಬುದನ್ನು ನೋಡುವುದಕ್ಕೆ ಹೆತ್ತವರಿಗೆ ಸಾಧ್ಯವಿಲ್ಲವಲ್ಲ. ತನ್ನ ಮಗನಿಗೆ ಬೈಕ್ ಚಲಾಯಿಸಲು ಬರುತ್ತದೆ ಎಂದು ಎಷ್ಟೋ ಹೆತ್ತವರಿಗೆ ಗೊತ್ತಾಗುವುದೇ ಆತ ಗೆಳೆಯನ ಬೈಕ್ ಚಲಾಯಿಸಿಕೊಂಡು ಮನೆಗೆ ಬಂದಾಗ. ಮಕ್ಕಳು ಹೆತ್ತವರ ಗಮನಕ್ಕೆ ತಾರದೆಯೇ ಕೆಲವಾರು ಯೋಜನೆಗಳನ್ನು ಹಾಕಿಕೊಳ್ಳುವುದಿದೆ. ಹೆತ್ತವರೊಂದಿಗೆ ಹೇಳಿಕೊಂಡರೆ ಎಲ್ಲಿ ಅನುಮತಿ ಸಿಗುವುದಿಲ್ಲವೋ ಎಂಬ ಭಯ. ಹೀಗೆ ಹೆತ್ತವರಿಗೆ ತಿಳಿಸದೇ ಸಾಹಸಕ್ಕೆ ಧುಮುಕುವ ಮಕ್ಕಳು ಬಳಿಕ ಹೆತ್ತವರ ಕಣ್ಣೀರಿಗೆ ಕಾರಣವಾದ ಘಟನೆಗಳು ಧಾರಾಳ ನಡೆದಿವೆ.
   ರಜೆ ಎಂಬುದು ಮಕ್ಕಳಿಗೆ ಎಷ್ಟು ಖುಷಿಯ ಸಂಗತಿಯೋ ಅಷ್ಟೇ ಹೆತ್ತವರಿಗೂ ಖುಷಿಯ ಸಂಗತಿಯಾಗುವಂಥ ವಾತಾವರಣವೊಂದು ನಿರ್ಮಾಣವಾಗಬೇಕಾದ ತುರ್ತು ಅಗತ್ಯ ಇದೆ. ಕೈ-ಕಾಲು ಮುರಿತಕ್ಕೊಳಗಾಗಿ ರಜೆಯನ್ನು ಸಜೆಯಾಗಿ ಪರಿವರ್ತಿಸಿಕೊಂಡ ಮಕ್ಕಳ ವಿವರಗಳು ಈಗಾಗಲೇ ಬರುತ್ತಿರುವುದರಿಂದ ಈ ಬಗ್ಗೆ ಗಂಭೀರ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಪರೀಕ್ಷೆಯ ಬಗ್ಗೆ ಮತ್ತು ಒತ್ತಡ ನಿವಾರಿಸಿಕೊಳ್ಳುವ ಬಗ್ಗೆ ಮಾಧ್ಯಮಗಳಲ್ಲಿ ಸಾಕಷ್ಟು ವಿವರಗಳು ಆಗಾಗ ಬರುತ್ತಿರುತ್ತವೆ. ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಕೊಟ್ಟು ವಿದ್ಯಾರ್ಥಿಗಳ ಒತ್ತಡವನ್ನು ಕಡಿಮೆಗೊಳಿಸುವ ಪ್ರಯತ್ನಗಳನ್ನೂ ಮಾಧ್ಯಮಗಳು ಮಾಡುತ್ತಿವೆ. ಪರೀಕ್ಷೆಯ ಪ್ರಾರಂಭದ ದಿನದಂದು ಹೆಚ್ಚಿನ ಪತ್ರಿಕೆಗಳು ವಿದ್ಯಾರ್ಥಿಗಳನ್ನು ಹುರಿದುಂಬಿಸುವ ಬರಹಗಳನ್ನು ಪ್ರಕಟಿಸುತ್ತವೆ. ಆದರೆ ಪರೀಕ್ಷೆ ಮುಗಿದ ಬಳಿಕ ಈ ವಿದ್ಯಾರ್ಥಿಗಳಿಗೆ ಅದೇ ಮಟ್ಟದ ಮಾರ್ಗದರ್ಶನವನ್ನು ಮಾಧ್ಯಮಗಳು ಮಾಡುವುದು ಕಡಿಮೆ. ಕೋಚಿಂಗ್ ಕ್ಲಾಸ್‍ಗಳು, ಕ್ಯಾಂಪ್‍ಗಳ ಬಗ್ಗೆ ಮಾಹಿತಿ ಇರುತ್ತದೆಯೇ ಹೊರತು ರಜೆಯಲ್ಲಿ ಮಕ್ಕಳು ಮಾಡಿಕೊಳ್ಳಬಹುದಾದ ಅನಾಹುತಗಳ ಕಡೆಗೆ ಬೆಳಕು ಚೆಲ್ಲುವ ಬರಹಗಳು ಪ್ರಕಟವಾಗುತ್ತಿಲ್ಲ. ನಿಜವಾಗಿ, ಪರೀಕ್ಷೆಗೆ ಮಕ್ಕಳನ್ನು ತಯಾರುಗೊಳಿಸುವ ಸಂದರ್ಭ ಎಷ್ಟು ಸೂಕ್ಷ್ಮವಾದದ್ದೋ ಅಷ್ಟೇ ರಜೆಯ ಬಳಿಕ ಮಕ್ಕಳನ್ನು ಕಾಪಾಡಿಕೊಳ್ಳುವುದೂ ಸೂಕ್ಷ್ಮವಾದದ್ದೇ. ಪರೀಕ್ಷೆಯ ಮುಕ್ತಾಯ ಬದುಕಿನ ಮುಕ್ತಾಯ ಆಗದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಸಮಾಜದ ಮೇಲಿದೆ. ಫಲಿತಾಂಶಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಳ್ಳುವ ಮಕ್ಕಳು ಒಂದು ಕಡೆಯಾದರೆ ರಜೆಯ ಮಜವನ್ನು ಅನುಭವಿಸುವ ಧಾವಂತದಲ್ಲಿ ಬದುಕನ್ನು ಕಳಕೊಳ್ಳುವ ಮಕ್ಕಳು ಇನ್ನೊಂದು ಕಡೆ. ಇವತ್ತು ವಿದ್ಯಾರ್ಥಿ ಆತ್ಮಹತ್ಯೆಯ ವಿರುದ್ಧ ಜಾಗೃತಿ ಮೂಡಿಸುವಂಥ ಪ್ರಯತ್ನಗಳು ಸಾಕಷ್ಟು ಪ್ರಮಾಣದಲ್ಲಿ ನಡೆಯುತ್ತಿವೆ. ‘ಫಲಿತಾಂಶವೇ ಕೊನೆಯಲ್ಲ' ಎಂದು ವಿದ್ಯಾರ್ಥಿಗಳಲ್ಲಿ ಧೈರ್ಯ ತುಂಬುವ ಕಾರ್ಯಕ್ರಮಗಳು ನಡೆಯುತ್ತಿವೆ. ಆದರೆ, ರಜೆಯಲ್ಲಾಗುವ ಜೀವಹಾನಿಯ ಬಗ್ಗೆ ಈ ಮಟ್ಟದ ಜಾಗೃತಿ ಕಾರ್ಯಕ್ರಮಗಳು ಅಷ್ಟಾಗಿ ನಡೆಯುತ್ತಿಲ್ಲ. ಸಮುದ್ರ ಪಾಲಾಗುವ ಮಕ್ಕಳ ಬಗ್ಗೆ, ವಾಹನಾಪಘಾತದಲ್ಲಿ ಮೃತಪಡುವ ಮಕ್ಕಳು ಕುರಿತು ಗಂಭೀರ ಚರ್ಚೆಗಳು ನಡೆಯುತ್ತಿಲ್ಲ. ಆತ್ಮಹತ್ಯೆ ಮಾಡುವ ವಿದ್ಯಾರ್ಥಿಗಳು ಎಷ್ಟು ದುರ್ಬಲರೋ ರಜೆಯಿಂದಾಗಿ ಕಳೆದು ಹೋಗುವ ಮಕ್ಕಳೂ ಅಷ್ಟೇ ದುರ್ಬಲರು. ಆದ್ದರಿಂದಲೇ ಈ ಬಗ್ಗೆ ವಿದ್ಯಾರ್ಥಿಗಳ ಗಮನ ಸೆಳೆಯಬಲ್ಲ ಕಾರ್ಯಕ್ರಮಗಳು ಏರ್ಪಡಬೇಕಾಗಿದೆ. ರಜೆಯು ಹೆತ್ತವರ ಪಾಲಿಗೆ ಸಜೆಯಾಗದಿರಲು ಮಾಧ್ಯಮಗಳೂ ಕೈ ಜೋಡಿಸಬೇಕಾಗಿದೆ. ಆ ಮೂಲಕ ಸಾವಿನ ಪುಟಗಳಲ್ಲಿ ಮಕ್ಕಳ ಹೆಸರು ಕಾಣಿಸಿಕೊಳ್ಳದಂತೆ ತಡೆಯುವುದಕ್ಕೆ ತಮ್ಮ ಕಾಣಿಕೆಯನ್ನು ನೀಡಬೇಕಾಗಿದೆ.

No comments:

Post a Comment