Wednesday, 23 April 2014

ಕಬೀರ್ ನಿಗೆ ಗುಂಡಿಕ್ಕಿದ ಮನುಷ್ಯ ವಿರೋಧಿಗಳ ಪರಮ ಸುಳ್ಳುಗಳು

   ಕಾಡಿನಿಂದ ನಾಡಿಗೆ ಬಂದು ಭೀತಿ ಹುಟ್ಟಿಸುವ ಹುಲಿಯನ್ನೋ ಚಿರತೆಯನ್ನೋ ಜೀವಂತ ಹಿಡಿಯುವುದಕ್ಕೆ ವಿವಿಧ ರೀತಿಯ ಕಾರ್ಯಾಚರಣೆಗಳನ್ನು ಕೈಗೊಳ್ಳಲಾಗುವ ಇಂದಿನ ದಿನಗಳಲ್ಲಿ; ಮನುಷ್ಯರ ಮೇಲೆ ಕನಿಷ್ಠ ಈ ಮಟ್ಟದ ಸೌಜನ್ಯವನ್ನು ತೋರುಲೂ ನಮ್ಮ ವ್ಯವಸ್ಥೆಗೆ ಸಾಧ್ಯವಾಗುವುದಿಲ್ಲವೆಂದರೆ, ಏನೆನ್ನಬೇಕು? ಕಬೀರ್; ನರಹಂತಕ ಹುಲಿಯೋ ಚಿರತೆಯೋ ಆಗಿರಲಿಲ್ಲ. ನಕ್ಸಲ್ ನಿಗ್ರಹ ಪಡೆಯ ಮೇಲೆ ಎರಗಿ ಹತ್ಯೆ ಮಾಡಬಲ್ಲಂತಹ ಕೋರೆ ಹಲ್ಲುಗಳೋ, ಉಗುರುಗಳೋ ಅಥವಾ ಆಯುಧಗಳೋ ಆತನಲ್ಲಿರಲಿಲ್ಲ. ಆತನ ಮೇಲೆ ಭಯೋತ್ಪಾದನೆಯ ಯಾವ ಆರೋಪಗಳೂ ಇರಲಿಲ್ಲ. ಮನುಷ್ಯರೆಂಬ ನೆಲೆಯಲ್ಲಿ ನಕ್ಸಲ್ ನಿಗ್ರಹ ಪಡೆಗೂ ಕಬೀರ್‍ನಿಗೂ ನಡುವೆ ಇದ್ದ ವ್ಯತ್ಯಾಸ ಅಂದರೆ, ಆತ ಜಾನುವಾರುಗಳ ಜೊತೆಗಿದ್ದ. ಇವರು ಬಂದೂಕುಗಳ ಜೊತೆಗಿದ್ದರು. ಜಾನುವಾರುಗಳ ಜೊತೆಗಿರುವುದು ಓರ್ವ ವ್ಯಕ್ತಿಯ ಹತ್ಯೆಗೆ ಕಾರಣವಾಗುವಷ್ಟು ಭೀಕರ ಅಪರಾಧವೇ? ಅದು ಅಕ್ರಮ ಜಾನುವಾರು ಸಾಗಾಟ ಎಂದೇ ಇಟ್ಟುಕೊಳ್ಳೋಣ. ಆದರೆ ಅದಕ್ಕಿರುವ ಶಿಕ್ಷೆ ಯಾವುದು? ಅದನ್ನು ಜಾರಿ ಮಾಡಬೇಕಾದವರು ಯಾರು? ಅಷ್ಟಕ್ಕೂ, ನಿರಾಯುಧನಾದ ಓರ್ವ ಯುವಕನನ್ನು ಗುಂಡಿಟ್ಟು ಕೊಲ್ಲುವಷ್ಟು ನಕ್ಸಲ್ ನಿಗ್ರಹ ಪಡೆಯಲ್ಲಿರುವವರ ಮನಸ್ಸು ದ್ವೇಷಮಯವಾಗಿದೆಯೆಂದರೆ, ಇನ್ನು ಅಯುಧಧಾರಿಗಳಾದ ನಕ್ಸಲರನ್ನು ಇವರು ಹೇಗೆ ನಡೆಸಿಕೊಂಡಾರು?
 ಮುಸ್ಲಿಮರನ್ನು ಬೆತ್ತಲೆಗೊಳಿಸಲು, ಹಲ್ಲೆ ನಡೆಸಲು ಮತ್ತು ಹಿಂದೂ ವಿರೋಧಿಗಳಂತೆ ಬಿಂಬಿಸಲು ಜಾನುವಾರುಗಳು ಕರಾವಳಿ ಭಾಗದಲ್ಲಿ ಅಸಂಖ್ಯ ಬಾರಿ ಬಳಕೆಯಾಗಿವೆ. ಈ ದೇಶದಲ್ಲಿ ಬಾಂಬ್ ಭಯೋತ್ಪಾದನೆಯು ಗಂಭೀರ ಚರ್ಚೆಗೆ ಒಳಪಟ್ಟ ಆಸುಪಾಸಿನಲ್ಲೇ ಕರಾವಳಿ ಭಾಗದಲ್ಲಿ ಸ್ಫೋಟಗೊಂಡ ಬಾಂಬ್ ಇದು. ಸುಮಾರು 10 ವರ್ಷಗಳ ಹಿಂದೆ ಉಡುಪಿ ಬಳಿಯ ಹಾಜಬ್ಬ ಮತ್ತು ಹಸನಬ್ಬ ಎಂಬ ಅಪ್ಪ-ಮಗನನ್ನು ಬೆತ್ತಲೆಗೊಳಿಸುವ ಮೂಲಕ ಈ ಬಾಂಬನ್ನು ಅದ್ದೂರಿಯಾಗಿ ಸ್ಫೋಟಿಸಲಾಯಿತು. ಆ ಸ್ಫೋಟ ಎಷ್ಟು ಕ್ರೂರವಾಗಿತ್ತೆಂದರೆ, ಅಪ್ಪ ಮತ್ತು ಮಗ ಬೆತ್ತಲೆಯಾಗಿ ಮೈದಾನಕ್ಕೆ ಸುತ್ತು ಬರುವಷ್ಟು ಮತ್ತು ನೆರೆದ ಜನರು ಅದನ್ನು ಕ್ರೀಡೆಯಂತೆ ವೀಕ್ಷಿಸುವಷ್ಟು. ಆ ಬಳಿಕ, ‘ಅಕ್ರಮ ಗೋಸಾಗಾಟ ಮತ್ತು ಹಲ್ಲೆ’ ಎಂಬ ಶೀರ್ಷಿಕೆಯಲ್ಲಿ ನೂರಾರು ಸುದ್ದಿಗಳು ಮಾಧ್ಯಮಗಳಲ್ಲಿ ಪ್ರಕಟವಾಗಿವೆ. ಇಲ್ಲಿಯ ವಿಶೇಷತೆ ಏನೆಂದರೆ, ಈ ಸುದ್ದಿಗಳ ಕಣ್ಣು, ಕಿವಿ, ಕೈ, ಬಾಯಿ, ಕಾಲು, ಮೂಗು ಎಲ್ಲವೂ ಮುಸ್ಲಿಮರದ್ದೇ ಆಗಿರುವುದು. `ಅಕ್ರಮ ಗೋ ಸಾಗಾಟ' ಎಂಬ ಶೀರ್ಷಿಕೆ ಕಂಡ ಕೂಡಲೇ ಅಪರಾಧಿ ಯಾರು ಎಂದು ತೀರ್ಮಾನವಾಗಿ ಬಿಡುತ್ತದೆ. `ಅಕ್ರಮ' ಎಂಬ ಪದ ಶೀರ್ಷಿಕೆಯಲ್ಲೇ ಇರುವುದರಿಂದ, ‘ಶಿಕ್ಷೆ ಆಗಲೇ ಬೇಕು’ ಎಂಬ ಸಂದೇಶವನ್ನು ಆ ಸುದ್ದಿ ರವಾನಿಸಿ ಬಿಡುತ್ತದೆ. ಆದ್ದರಿಂದಲೇ, ಶಿಕ್ಷೆ ನೀಡುವವರು ಗೌರವಾರ್ಹರಾಗಿ ಮತ್ತು ಶಿಕ್ಷೆಗೀಡಾಗುವವರು ಅಕ್ರಮಿಗಳಾಗಿ ಗುರುತಿಗೀಡಾಗುತ್ತಾರೆ. ಅಂದಹಾಗೆ, ಜಾನುವಾರು ಸಾಗಾಟವು ಅಕ್ರಮವೋ ಸಕ್ರಮವೋ ಎಂಬುದನ್ನು ತೀರ್ಮಾನಿಸುವುದು ಪೊಲೀಸರೋ ಅಥವಾ ಇಲ್ಲಿನ ಕಾನೂನು ವ್ಯವಸ್ಥೆಯೋ ಅಲ್ಲ. ಸ್ವಘೋಷಿತ ಜಾನುವಾರು ರಕ್ಷಕರು ಸ್ಥಳದಲ್ಲೇ ಅದನ್ನು ತೀರ್ಮಾನಿಸುತ್ತಾರೆ. ಆ ತೀರ್ಮಾನವು ಅತ್ಯಂತ ಗೌರವಾರ್ಹ ಪದಗಳೊಂದಿಗೆ ಸುದ್ದಿಯಾಗಿ ಪ್ರಕಟವಾಗುತ್ತದೆ. ಜಾನುವಾರು ಸಾಗಾಟವು ‘ಅಕ್ರಮ’ ಎಂದು ತೀರ್ಮಾನವಾದ ಬಳಿಕ ಹಲ್ಲೆ `ಸಕ್ರಮ'ವಾಗಬೇಕಾದದ್ದು ಸಹಜವಾಗಿ ಬಿಡುತ್ತದೆ. ಹೀಗೆ, ಸರಕಾರವೇ ಪರವಾನಿಗೆ ಕೊಟ್ಟ ಕಸಾಯಿಖಾನೆಗೆ ಸಾಗಿಸಲಾಗುವ ಜಾನುವಾರುಗಳು ಕರುಣಾಮಯಿ ರೂಪವನ್ನು ಪಡೆದು ಸಾಗಿಸುವವರು ಕ್ರೂರಿಗಳಾಗಿ ಹಲ್ಲೆಗೆ, ಬೆತ್ತಲೆಗೆ ಒಳಗಾಗಿ ಬಿಡುತ್ತಾರೆ. ಜಾನುವಾರುಗಳನ್ನು ಸಾಕುವವರು ಹಿಂದೂಗಳು ಮಾತ್ರ ಮತ್ತು ಅದನ್ನು ಕಡಿದು ತಿನ್ನುವವರು ಮುಸ್ಲಿಮರು ಮಾತ್ರ ಎಂಬ ಹಸಿ ಸುಳ್ಳಿಗೆ ಮರುಳಾದವರು ಇಲ್ಲಿ ಇರುವಂತೆಯೇ, ಹಿಂದೂಗಳನ್ನು ಅವಮಾನಿಸುವುದಕ್ಕಾಗಿಯೇ ಮುಸ್ಲಿಮರು ಜಾನುವಾರು ಮಾಂಸವನ್ನು ತಿನ್ನುತ್ತಾರೆ ಎಂಬ ಪರಮ ಸುಳ್ಳನ್ನೂ ನಂಬಿದವರಿದ್ದಾರೆ. ಅಷ್ಟಕ್ಕೂ, ಆಹಾರ ಸೇವಿಸುವುದು ಯಾರನ್ನಾದರೂ ಅವಮಾನಿಸುವುದಕ್ಕೆ ಎಂದಾದರೆ, ಇಲ್ಲಿ ಅವಮಾನಕ್ಕೆ ಒಳಗಾಗದ ಧರ್ಮವಾದರೂ ಯಾವುದಿದ್ದೀತು? ಆದರೆ, ಮುಸ್ಲಿಮರನ್ನು ಹಿಂದೂ ವಿರೋಧಿಗಳಂತೆ ಬಿಂಬಿಸುವ ಮೂಲಕ ರಾಜಕೀಯ ಲಾಭ ಪಡಕೊಳ್ಳುವುದಕ್ಕಾಗಿ ಒಂದು ವರ್ಗವು ಹಬ್ಬಿಸಿರುವ ಈ ಸುದ್ದಿಯು ಹಾಜಬ್ಬ-ಹಸನಬ್ಬ ಪ್ರಕರಣದಿಂದ ಹಿಡಿದು ಕಬೀರ್ ಪ್ರಕರಣದವರೆಗೆ ಸುಳ್ಳಾಗುತ್ತಲೇ ಬಂದಿದೆ. ಹಾಜಬ್ಬರ ಜಾನುವಾರು ಸಾಗಾಟ ಪ್ರಕರಣದಲ್ಲಿಯೂ ಹಿಂದೂ ಸಹೋದರರು ಭಾಗಿಯಾಗಿದ್ದರು. ಕಬೀರ್ ಪ್ರಕರಣದಲ್ಲಿ ವಾಹನದ ಚಾಲಕ ಪ್ರಮೋದ್ ಎಂಬವನಾಗಿದ್ದ. ನಿಜವಾಗಿ, ಸಾಮಾನ್ಯ ಮಂದಿ ಜಾನುವಾರು ಸಾಗಾಟವನ್ನು ಒಂದು ವ್ಯಾಪಾರವಾಗಿ ಪರಿಗಣಿಸಿದ್ದಾರೆಯೇ ಹೊರತು ಹಿಂದೂ-ಮುಸ್ಲಿಮ್ ಆಗಿ ಅಲ್ಲ. ಆದರೆ, ಈ ಕಟು ಸತ್ಯವನ್ನು ಮುಚ್ಚಿಟ್ಟು ಇಡೀ ಪ್ರಕರಣಕ್ಕೆ ಕೋಮು ಬಣ್ಣವನ್ನು ಹಚ್ಚುವಲ್ಲಿ ಒಂದು ಗುಂಪು ತೀವ್ರವಾಗಿ ಶ್ರಮಿಸುತ್ತಿದೆ. 10 ವರ್ಷಗಳ ಹಿಂದೆ ಇದೇ ಕಾರಣಕ್ಕಾಗಿ ಹಾಜಬ್ಬ ಬೆತ್ತಲೆಯಾಗಿದ್ದರೆ ಇದೀಗ ಅದರ ದಶಮಾನೋತ್ಸವ ಎಂಬಂತೆ ಕಬೀರ್‍ನ ಹತ್ಯೆ ನಡೆದಿದೆ.
 ನಿಜ, ಪೊಲೀಸರೂ ಮನುಷ್ಯರೇ. ಉತ್ಪ್ರೇಕ್ಷಿತ ಸುಳ್ಳುಗಳು ಮತ್ತು ಕೋಮುವಾದಿ ವಿಚಾರಧಾರೆಗಳು ನಿರಂತರ ಪ್ರಚಾರದಲ್ಲಿರುವಾಗ ಅವರು ಕಣ್ಣು-ಕಿವಿ ಮುಚ್ಚಿಕೊಂಡು ಇರಬಲ್ಲರೆಂದು ಹೇಳುವಂತಿಲ್ಲ. ಕೆಲವೊಮ್ಮೆ ಇಂಥ ವಿಚಾರಧಾರೆಗಳು ಅವರ ಮೇಲೂ ಪ್ರಭಾವ ಬೀರಬಹುದು. ಕೆಲವೊಮ್ಮೆ ಇಂಥ ವಿಚಾರಧಾರೆಗಳನ್ನು ಹರಡುತ್ತಿರುವವರೇ ಪೊಲೀಸ್ ಇಲಾಖೆಗೆ ಸೇರಿಕೊಳ್ಳಬಹುದು. ಇವು ಏನೇ ಆಗಿದ್ದರೂ ಇಂಥ ಬೆಳವಣಿಗೆಗಳು ಸಮಾಜದ ಪಾಲಿಗೆ ಅಪಾಯಕಾರಿಯೇ. ಕಬೀರ್ ಪ್ರಕರಣ ಮುಸ್ಲಿಮ್ ಸಮಾಜದ ಅನುಮಾನಗಳಿಗೆ ಮತ್ತೊಮ್ಮೆ ಬಲ ನೀಡಿದೆ. ಜಾನುವಾರು ಸಾಗಾಟ, ನೈತಿಕ ಪೊಲೀಸ್‍ಗಿರಿ, ಕೋಮುಗಲಭೆ.. ಮುಂತಾದ ಸಂದರ್ಭಗಳಲ್ಲಿ ಪೊಲೀಸ್ ಇಲಾಖೆ ನಡಕೊಳ್ಳುತ್ತಿರುವ ರೀತಿಯ ಬಗ್ಗೆ ಸಮಾಜದಲ್ಲಿದ್ದ ಅನುಮಾನವನ್ನು ಕಬೀರ್ ಪ್ರಕರಣವು ಬಲಪಡಿಸಿದೆ. 2-3 ವರ್ಷಗಳ ಹಿಂದೆ ನೌಶಾದ್ ಕಾಸಿಮ್‍ಜಿ ಎಂಬ ಯುವ ನ್ಯಾಯವಾದಿಯ ಹತ್ಯೆ ನಡೆದಾಗಲೂ ಇಂಥ ಅನುಮಾನ ದಟ್ಟವಾಗಿತ್ತು. ಆ ಹತ್ಯೆಯ ಹಿಂದೆ ವ್ಯವಸ್ಥೆಯ ಕೈವಾಡವಿದೆ ಎಂಬ ಸಂಶಯವನ್ನು ಅಸಂಖ್ಯ ಮಂದಿ ವ್ಯಕ್ತಪಡಿಸಿದ್ದರು. ಆ ಕುರಿತಾದ ತನಿಖೆ ಎಲ್ಲಿಗೆ ಮುಟ್ಟಿದೆ ಎಂಬುದೇ ಇವತ್ತು ತಿಳಿದಿಲ್ಲ. ಇಂತಹ ಹೊತ್ತಲ್ಲೇ ಕಬೀರ್‍ನ ಹತ್ಯೆ ನಡೆದಿದೆ. ಅದ್ದರಿಂದ ಈ ಪ್ರಕರಣವು ಇನ್ನೊಂದು ಕಾಸಿಮ್‍ಜಿ ಪ್ರಕರಣವಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಸಮಾಜದ ಮೇಲಿರುವಂತೆಯೇ ಸರಕಾರದ ಮೇಲೆಯೂ ಇದೆ. ‘ಮುಖ್ಯಮಂತ್ರಿ ಯಡಿಯೂರಪ್ಪ ಎಂಬ ಜಾಗದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಎಂಬ ಬದಲಾವಣೆಯಷ್ಟೇ ಆಗಿದೆ, ವ್ಯತ್ಯಾಸವೇನೂ ಇಲ್ಲ..’ ಎಂದು ಜನರು ಆಡಿಕೊಳ್ಳುವಂತಹ ಹಂತಕ್ಕೆ ತಲುಪುತ್ತಿದ್ದಾರೆ. ವ್ಯವಸ್ಥೆಯೊಳಗಿನ ಮತ್ತು ಹೊರಗಿನ ಮನುಷ್ಯ ವಿರೋಧಿಗಳ ಬಗ್ಗೆ ಸಿದ್ಧರಾಮಯ್ಯ ಸರಕಾರ ಇನ್ನೂ ಮೃದುಧೋರಣೆಯನ್ನೇ ಅನುಸರಿಸಿದರೆ ಅದು ಸಾರುವ ಸಂದೇಶ ಮತ್ತು ಬೀರುವ ಪರಿಣಾಮ ಅತ್ಯಂತ ದುರಂತಮಯವಾದೀತು.
   ಏನೇ, ಆಗಲಿ, ಹತ್ಯೆಗೊಳಗಾಗುವ ಮೂಲಕ ಕರಾವಳಿ ಭಾಗದಲ್ಲಿ ಕಾರ್ಯಾಚರಣೆಯಲ್ಲಿರುವ ದಬ್ಬಾಳಿಕೆಯೊಂದನ್ನು ಕಬೀರ್ ಮತ್ತೊಮ್ಮೆ ಚರ್ಚೆಗೆ ತಂದಿದ್ದಾನೆ. ಈ ಚರ್ಚೆ ಇಲ್ಲಿಗೇ ಕೊನೆಗೊಳ್ಳಬಾರದು. ಅಕ್ರಮ ಜಾನುವಾರು ಸಾಗಾಟದಲ್ಲಿ ತೊಡಗಿರುವವರ ಮೇಲೆ ವ್ಯವಸ್ಥೆಯು ಕಠಿಣ ಕಾನೂನು ಕ್ರಮ ಕೈಗೊಳ್ಳಲಿ ಎಂದು ಆಗ್ರಹಿಸುತ್ತಲೇ ಕಬೀರ್ ಎತ್ತಿರುವ ಚರ್ಚೆಯನ್ನು ಜೀವಂತವಾಗಿಡಬೇಕಾಗಿದೆ. ಮುಸ್ಲಿಮ್ ಮತ್ತು ಹಿಂದೂಗಳನ್ನು ವಿಭಜಿಸುವ ಸುಳ್ಳಿನ ವಕ್ತಾರರನ್ನು ಸೋಲಿಸಲು ಕಬೀರ್‍ನ ಪ್ರಾಣತ್ಯಾಗಕ್ಕೆ ಸಾಧ್ಯವಾದರೆ, ಈ  ಒಂದು ಪ್ರಾಣತ್ಯಾಗವನ್ನು ಬಲಿದಾನವೆಂದೇ ಪರಿಗಣಿಸಿ ನಾವೆಲ್ಲ ಅಭಿಮಾನ ಪಟ್ಟುಕೊಳ್ಳಬಹುದಾಗಿದೆ.

No comments:

Post a Comment