Wednesday 30 April 2014

ದೇವೀಶ್ರೀಯ ಜ್ಯೋತಿಷ್ಯಕ್ಕೆ ಕ್ಷಿಪಣಿ ಹಾರಿಸಿದ ವಿಜ್ಞಾನಿಗಳು

    ಕಳೆದ ಆದಿತ್ಯವಾರ (ಎಪ್ರಿಲ್ 27)ದಂದು ಪತ್ರಿಕೆಗಳಲ್ಲಿ ಎರಡು ಪ್ರಮುಖ ಸುದ್ದಿಗಳು ಪ್ರಕಟವಾದುವು. ಬಹುತೇಕ ಎಲ್ಲ ಪತ್ರಿಕೆಗಳೂ ಈ ಎರಡೂ ಸುದ್ದಿಗಳಿಗೆ ಹೆಚ್ಚು ಒತ್ತು ಕೊಟ್ಟಿದ್ದಲ್ಲದೇ, ಓದುಗರ ಗಮನ ಸೆಳೆಯಬಲ್ಲ ಪುಟಗಳಲ್ಲಿ ಅವನ್ನು ಮುದ್ರಿಸಿದ್ದುವು. ದೇವಿಶ್ರೀ ಎಂಬ ಬೆಂಗಳೂರಿನ ಸ್ವಾಮಿಯೋರ್ವರು, ‘ಜ್ಯೋತಿಷ್ಯ' ಕೇಳಿ ಬರುವ ಮಹಿಳೆಯರನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿರುವ ಪ್ರಕರಣ ಇವುಗಳಲ್ಲಿ ಒಂದಾದರೆ; ಆಕಾಶ್ ಮಾದರಿಯ ಪೈಲಟ್ ರಹಿತ ಎರಡು ಕ್ಷಿಪಣಿಗಳನ್ನು ಈ ದೇಶ ಯಶಸ್ವಿಯಾಗಿ ಪರೀಕ್ಷಿಸಿದ್ದು ಇನ್ನೊಂದು. ಒಂದು ಸುದ್ದಿ ವಿಜ್ಞಾನಕ್ಕೆ ಸಂಬಂಧಿಸಿದ್ದಾದರೆ ಇನ್ನೊಂದು ಜ್ಯೋತಿಷ್ಯಕ್ಕೆ ಸಂಬಂಧಿಸಿದ್ದು. ಖುಷಿಯ ಸಂಗತಿ ಏನೆಂದರೆ, ಜ್ಯೋತಿಷಿ ನಾಪತ್ತೆಯಾಗಿದ್ದಾನೆ. ಆದರೆ ಕ್ಷಿಪಣಿ ಪರೀಕ್ಷೆಯು ಯಶಸ್ವಿಯಾಗಿದೆ. ಕ್ಷಿಪಣಿ ನಿರ್ಮಾಣ ಕಾರ್ಯದ ನಿರ್ದೇಶಕರಾದ ಚಂದ್ರಮೌಳಿಯವರು ಪತ್ರಿಕಾಗೋಷ್ಠಿಯಲ್ಲಿ ಒಟ್ಟು ಕಾರ್ಯ ಯೋಜನೆಯ ಬಗ್ಗೆ ಹೆಮ್ಮೆಯಿಂದ ವಿವರಿಸುತ್ತಿದ್ದರೆ, ಅತ್ತ ಪೊಲೀಸ್ ಅಧಿಕಾರಿಗಳು ದೇವಿಶ್ರೀಯ ವಂಚನೆಗಳನ್ನು ಮಾಧ್ಯಮಗಳೊಂದಿಗೆ ಹಂಚಿಕೊಳ್ಳುತ್ತಿದ್ದರು. ರಕ್ಷಣಾ ಸಚಿವರ ವೈಜ್ಞಾನಿಕ ಸಲಹೆಗಾರ ಅವಿನಾಶ್ ಚಂದರ್ ಸೇರಿದಂತೆ ಹಲವು ಪ್ರಮುಖರು ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸುತ್ತಿರುವ ಹೊತ್ತಲ್ಲೇ ಅಸಂಖ್ಯ ಮಂದಿ ದೇವಿಶ್ರೀಗೆ ಹಿಡಿಶಾಪ ಹಾಕುತ್ತಿದ್ದರು. ಒಂದು ವೇಳೆ ಆತ ಕೈಗೆ ಸಿಕ್ಕರೆ ಸಾಯಿಸಿಬಿಡುವಷ್ಟು ಆಕ್ರೋಶ ಪ್ರತಿಭಟನಾಕಾರರಲ್ಲಿತ್ತು.
 ಕೆಲವು ತಿಂಗಳುಗಳ ಹಿಂದೆ ರಾಜ್ಯದಲ್ಲಿ ಮೂಢನಂಬಿಕೆಯ ಸುತ್ತ ಗಂಭೀರ ಚರ್ಚೆ ನಡೆದಿತ್ತು. ಯಾವುದು ನಂಬಿಕೆ ಮತ್ತು ಯಾವುದು ಮೂಢನಂಬಿಕೆ ಎನ್ನುವ ಬಗ್ಗೆ ಪತ್ರಿಕೆ ಮತ್ತು ಟಿವಿ ಚಾನೆಲ್‍ಗಳಲ್ಲಿ ಅನೇಕರು ತಮ್ಮ ವಾದವನ್ನು ಮಂಡಿಸಿದ್ದರು. ಸರಕಾರವು ತರಲುದ್ದೇಶಿಸಿರುವ ‘ಮೂಢನಂಬಿಕೆ ಪ್ರತಿಬಂಧಕ ಕಾಯ್ದೆ'ಯನ್ನು ಸಾರಾಸಗಟು ಖಂಡಿಸಿ, ಈ ಕಾಯ್ದೆಯು ನಿರ್ದಿಷ್ಟ ಧರ್ಮವೊಂದರ ಮೇಲೆ ಮಾಡುವ ಸವಾರಿಯಾಗುತ್ತದೆಂದು ಹಲವರು ವಾದಿಸಿದ್ದರು. ಆ ಸಂದರ್ಭಗಳಲ್ಲೆಲ್ಲಾ ಜ್ಯೋತಿಷ್ಯದ ಪ್ರಸ್ತಾಪ ಆಗುತ್ತಲೇ ಇತ್ತು. ಸಮಾಜದ ಒಂದು ದೊಡ್ಡ ಗುಂಪು ಜ್ಯೋತಿಷ್ಯವನ್ನು ಪ್ರಬಲವಾಗಿ ವಿರೋಧಿಸುತ್ತಿರುವುದರ ಹೊರತಾಗಿಯೂ ಅದು ಜನಪ್ರಿಯವಾಗಿದ್ದರೆ ಅದಕ್ಕೆ ಟಿ.ವಿ. ಚಾನೆಲ್‍ಗಳೇ ಕಾರಣ ಎಂದು ಆರೋಪಿಸಿದವರು ಧಾರಾಳ ಮಂದಿ ಇದ್ದರು. ಇವತ್ತು ಬಹುತೇಕ ಎಲ್ಲ ಕನ್ನಡ ಚಾನೆಲ್‍ಗಳೂ ಬೆಳಗ್ಗೆ ಜ್ಯೋತಿಷ್ಯ ಕಾರ್ಯಕ್ರಮವನ್ನು ಪ್ರಸಾರ ಮಾಡುತ್ತವೆ. ‘ಗೂಬೆ ಅನಿಷ್ಟ, ಗೂಬೆ ಹೊಕ್ಕ ಮನೆ ತೊರೆಯಬೇಕು’ ಎಂದು ಒಂದು ಚಾನೆಲ್‍ನಲ್ಲಿ ಜ್ಯೋತಿಷಿಯೋರ್ವ ಹೇಳಿದರೆ, ‘ಬೆಳಗ್ಗೆ ಎದ್ದ ತಕ್ಷಣ ಗೂಬೆಯ ಮುಖ ನೋಡುವುದರಿಂದ ಶುಭವಾಗುತ್ತದೆ' ಎಂದು ಇನ್ನೊಂದು ಚಾನೆಲ್‍ನಲ್ಲಿ ಇನ್ನೋರ್ವ ಜ್ಯೋತಿಷಿ ಹೇಳುತ್ತಾನೆ. ಮನೆಯ ಬಾಗಿಲು ಯಾವ ಕಡೆಗಿದ್ದರೆ ಶುಭ, ಯಾವ ಕಡೆಗಿದ್ದರೆ ಸಾವು ಬರುತ್ತದೆ, ಪತಿ-ಪತ್ನಿ ವಿರಸಕ್ಕೆ ಯಾವ ಕುಂಡಲಿ ಕಾರಣ, ಅತ್ತೆಯನ್ನು ಪಳಗಿಸುವುದಕ್ಕೆ ಏನು ತಂತ್ರ, ಗಂಡನನ್ನು ಒಲಿಸಿಕೊಳ್ಳುವುದಕ್ಕೆ ಯಾವ ಹರಕೆ.. ಎಂಬುದನ್ನೆಲ್ಲಾ ಚಾನೆಲ್‍ನ ಜ್ಯೋತಿಷಿಗಳು ಎಷ್ಟು ನಿರ್ಲಜ್ಜೆಯಿಂದ ಹೇಳುತ್ತಾರೆಂದರೆ ಒಂದು ವೇಳೆ ಅದೇ ಮಾತನ್ನು ಸಾಮಾನ್ಯ ವ್ಯಕ್ತಿಯೊಬ್ಬ ವೇದಿಕೆಯೇರಿ ಹೇಳಿದರೆ, ಆತನ ಮೇಲೆ ಸಾರ್ವಜನಿಕ ಶಾಂತಿಯನ್ನು ಕದಡಿದ ಆರೋಪದಲ್ಲಿ ಪೊಲೀಸರು ಮೊಕದ್ದಮೆ ಹೂಡಬಹುದು. ದುರಂತ ಏನೆಂದರೆ, ದೇವಿಶ್ರೀ ಕೂಡ ಒಂದು ಕನ್ನಡ ಚಾನೆಲ್‍ನಲ್ಲಿ ಜ್ಯೋತಿಷ್ಯ ಹೇಳುತ್ತಿದ್ದ!
 ಅಂಧಶ್ರದ್ಧೆಗಳನ್ನು ಸಮಾಜದಿಂದ ಒದ್ದೋಡಿಸಲು ಪ್ರಭಾವಿ ಪಾತ್ರವನ್ನು ನಿರ್ವಹಿಸಬಹುದಾದ ಮಾಧ್ಯಮಗಳೇ ಜ್ಯೋತಿಷಿಗಳಿಗೆ ವೇದಿಕೆ ಕೊಡುವಾಗ ತಪ್ಪಿತಸ್ಥನಾಗಿ ನಾವು ಕೇವಲ ದೇವಿಶ್ರೀಯನ್ನು ಮಾತ್ರ ಯಾಕೆ ನೋಡಬೇಕು? ಇಂಥವರಿಗೆ ವೇದಿಕೆ ಒದಗಿಸುವ ಮಾಧ್ಯಮಗಳನ್ನೂ  ಯಾಕೆ ಈ ಪಟ್ಟಿಗೆ ಸೇರಿಸಬಾರದು? ಇಷ್ಟಕ್ಕೂ ಜ್ಯೋತಿಷ್ಯ ಎಷ್ಟರ ಮಟ್ಟಿಗೆ ಧರ್ಮಬದ್ಧ? ಹುಲು ಮಾನವ ಇನ್ನೋರ್ವ ಮಾನವನ ಭವಿಷ್ಯವನ್ನು ಹೇಳುವುದಕ್ಕೆ ಸಮರ್ಥನಾಗುವುದು ಹೇಗೆ? ಅದಕ್ಕಿರುವ ಆಧಾರಗಳೇನು? ಓರ್ವನನ್ನು ಅಸಲಿ ಜ್ಯೋತಿಷಿ ಎಂದು ಪರಿಗಣಿಸುವುದಕ್ಕೆ ಯಾವುದು ಮಾನದಂಡ? ಅಸಲಿ ಮತ್ತು ನಕಲಿಗಳನ್ನು ವಿಭಜಿಸುವುದಕ್ಕೆ ಏನಿವೆ ಮಾನದಂಡಗಳು? ಜ್ಯೋತಿಷಿಗೆ ಭವಿಷ್ಯದ ಆಗು-ಹೋಗುಗಳ ಬಗ್ಗೆ ಸ್ಪಷ್ಟ ಜ್ಞಾನ ಇರುತ್ತದೆಂದಾದರೆ ಸದ್ಯ ನಡೆಯುತ್ತಿರುವ ಲೋಕಸಭಾ ಚುನಾವಣೆಯ ಫಲಿತಾಂಶವನ್ನು ಈಗಾಗಲೇ ಘೋಷಿಸಿ ಬಿಡಬಹುದಲ್ಲವೇ? ಯಾವ ಪಕ್ಷಕ್ಕೆ ಎಷ್ಟು ಸ್ಥಾನ ಮತ್ತು ಯಾರ್ಯಾರು ಎಲ್ಲೆಲ್ಲಿ ಗೆಲ್ಲುತ್ತಾರೆ ಎಂದು ಹೇಳಬಹುದಲ್ಲವೇ? ಪಾರ್ಲಿಮೆಂಟ್ ಆಕ್ರಮಣ, ಕಾರ್ಗಿಲ್ ಸಂಘರ್ಷ, ಮುಂಬೈ ದಾಳಿಯಂಥ ಗಂಭೀರ ಪ್ರಕರಣಗಳು ನಡೆದಾಗ ನಮ್ಮ ಜ್ಯೋತಿಷಿಗಳೆಲ್ಲ ಯಾಕೆ ಅದನ್ನು ಮುಂಚಿತವಾಗಿ ಕಂಡುಕೊಂಡು ದೇಶವನ್ನು ಎಚ್ಚರಿಸಲಿಲ್ಲ? ದೇಶದ ಮೇಲೆ ಆಗಬಹುದಾದ ಆಕ್ರಮಣವನ್ನು ತಿಳಿದೂ ಸತ್ಯ ಮುಚ್ಚಿಡುವುದು ದೇಶದ್ರೋಹವಲ್ಲವೇ? ಒಂದು ವೇಳೆ, ಈ ಮಂದಿ ಕಾರ್ಗಿಲ್ ಆಕ್ರಮಣದ ಬಗ್ಗೆ ಮೊದಲೇ ತಿಳಿಸಿರುತ್ತಿದ್ದರೆ ನೂರಾರು ಯೋಧರ ಪ್ರಾಣ ಉಳಿಯುತ್ತಿತ್ತು. ಮುಂಬೈ ದಾಳಿಗೆ ಬಲಿಯಾದ 150ರಷ್ಟು ನಾಗರಿಕರು ಬದುಕಿ ಉಳಿಯುತ್ತಿದ್ದರು. ಕಳೆದ ವಾರ ಜಾತಿ ಭೂತಕ್ಕೆ ಬಲಿಯಾದ ಮಂಡ್ಯದ ಶಿಲ್ಪಾ ನಾಯಕ್ ಎಂಬ ಯುವತಿಯನ್ನು ಉಳಿಸಿಕೊಳ್ಳಬಹುದಿತ್ತು. ಜ್ಯೋತಿಷ್ಯದ ಪರ ವಾದಿಸುವವರೆಲ್ಲ ಯಾಕೆ ಇಂಥ ಸಂದರ್ಭಗಳಲ್ಲಿ ಮೌನವಿರುತ್ತಾರೆ? ಅಷ್ಟೇ ಅಲ್ಲ, ಜ್ಯೋತಿಷ್ಯದಲ್ಲಿ ತೊಡಗಿಸಿಕೊಂಡವರಲ್ಲಿ ಬಹುತೇಕ ಎಲ್ಲರೂ ಪುರುಷರೇ. ಅಲ್ಲದೇ, ಜ್ಯೋತಿಷಿಗಳ ದುರ್ಬಳಕೆಗೆ ಒಳಗಾಗುವವರಲ್ಲಿ ಹೆಚ್ಚಿನವರೂ ಮಹಿಳೆಯರೇ. ಏನಿವೆಲ್ಲ? ಜ್ಯೋತಿಷ್ಯ ಧರ್ಮಬದ್ಧ ಕಾರ್ಯ ಎಂದಾದರೆ, ಯಾಕೆ ಈ ಕ್ಷೇತ್ರದಲ್ಲಿ ಈ ಮಟ್ಟದ ಅಸಮಾನತೆಗಳಿವೆ? ಮಹಿಳೆಯರು ಜ್ಯೋತಿಷ್ಯ ಹೇಳುವುದಕ್ಕೆ ಧರ್ಮದಲ್ಲಿ ತೊಡಕುಗಳಿವೆಯೇ? ಇಲ್ಲ ಎಂದಾದರೆ ಯಾಕೆ ಈ ಕ್ಷೇತ್ರದಲ್ಲಿ ಪುರುಷರೇ ತುಂಬಿಕೊಂಡಿದ್ದಾರೆ? ನಿಜವಾಗಿ, ಧರ್ಮಕ್ಕೂ ಜ್ಯೋತಿಷ್ಯಕ್ಕೂ ಸಂಬಂಧವೇ ಇಲ್ಲ ಎಂಬುದಕ್ಕೆ ಈ ಅಸಮಾನತೆಗಳೇ ಅತಿ ಪ್ರಬಲ ಪುರಾವೆ. ಮಹಿಳೆಯರನ್ನು ಮತ್ತು ಮುಗ್ಧ ಪುರುಷರನ್ನು ವಂಚಿಸುವುದಕ್ಕಾಗಿಯೇ ಇದನ್ನು ಹುಟ್ಟು ಹಾಕಲಾಗಿದೆ. ಯಾವಾಗೆಲ್ಲ ಇದರ ವಿರುದ್ಧ ಧ್ವನಿಗಳೇಳುತ್ತವೋ ಆಗೆಲ್ಲ ಇದಕ್ಕೆ ಧಾರ್ಮಿಕ ವೇಶವನ್ನು ತೊಡಿಸಲಾಗುತ್ತದೆ.
   ಆಕಾಶ್  ಕ್ಷಿಪಣಿಯ ಯಶಸ್ವಿ ಉಡಾವಣೆ ಮತ್ತು ಜ್ಯೋತಿಷಿ ದೇವಿಶ್ರೀಯ ನಿಗೂಢ ಪರಾರಿಯು ಜ್ಯೋತಿಷ್ಯದ ಪೊಳ್ಳುತನವನ್ನೂ ವಿಜ್ಞಾನದ ಗೆಲುವನ್ನೂ ಸಾರಿ ಹೇಳಿದೆ. ಅಂದಹಾಗೆ, ಇದು ಈ ಹಿಂದೆ ಮೂಢನಂಬಿಕೆಯ ಸುತ್ತ  ರಾಜ್ಯದಲ್ಲಿ ನಡೆದ ಗಂಭೀರ ಚರ್ಚೆಯ ಬಳಿಕ ಎದುರಾದ ಮೊದಲ ಮುಖಾಮುಖಿ. ವಿಜ್ಞಾನಿಗಳ ಕ್ಷಿಪಣಿ ಮತ್ತು ದೇವಿಶ್ರೀಯ ಜ್ಯೋತಿಷ್ಯದ ನಡುವಿನ ಈ ಮುಖಾಮುಖಿಯಲ್ಲಿ ಜ್ಯೋತಿಷ್ಯವು ದಯನೀಯ ಸೋಲನ್ನು ಒಪ್ಪಿಕೊಂಡಿದೆ. ಜ್ಯೋತಿಷ್ಯವನ್ನು ಪವಿತ್ರವೆಂದು ನಂಬುವವರಿಗೆಲ್ಲ ಈ ಸೋಲು ಪಾಠವಾಗಬೇಕು. ವಿಜ್ಞಾನವು ಶ್ರಮವಾದರೆ ಜ್ಯೋತಿಷ್ಯವು ಅದರ ವಿರುದ್ಧ ಪದ. ಈ ವಿರುದ್ಧ ಪದವನ್ನೇ ವೈಭವೀಕರಿಸಿ ಹೊಟ್ಟೆ ತುಂಬಿಸಿಕೊಳ್ಳುವವರನ್ನು ಪ್ರಶ್ನಿಸುವುದಕ್ಕೆ ದೇವಿಶ್ರೀ ಪ್ರಕರಣವನ್ನು ಜನರು ನೆಪವಾಗಿ ಬಳಸಿಕೊಳ್ಳಬೇಕು. ಈ ದೇಶಕ್ಕೆ ಅಗತ್ಯ ಇರುವುದು ಚಂದ್ರಮೌಳಿಯಂಥ ವಿಜ್ಞಾನಿಗಳೇ ಹೊರತು ಗೂಬೆಯನ್ನೋ ಬಾಗಿಲನ್ನೋ ಶಕುನ-ಅಪಶಕುನಗಳ ಪಟ್ಟಿಯಲ್ಲಿಟ್ಟು ಬೆದರಿಸುವ ಜ್ಯೋತಿಷಿಗಳಲ್ಲ ಎಂದು ಸಾರಿ ಹೇಳಬೇಕು. ಆಕಾಶ್ ಕ್ಷಿಪಣಿಗಾಗಿ ಬೆವರು ಸುರಿಸಿದ ವಿಜ್ಞಾನಿಗಳನ್ನು ಅಭಿನಂದಿಸುತ್ತಲೇ ಮೂಢನಂಬಿಕೆಗೆ ಸಡ್ಡು ಹೊಡೆಯುವ ಇಂಥ ಸಂದರ್ಭಗಳನ್ನು ವಿಜ್ಞಾನ ಕ್ಷೇತ್ರ ಮತ್ತೆ ಮತ್ತೆ ಸೃಷ್ಟಿಸುತ್ತಲೇ ಇರಲಿ ಎಂದೂ ಹಾರೈಸಬೇಕಾಗಿದೆ.

No comments:

Post a Comment