
ತನಗೊಬ್ಬಳು ಪತ್ನಿಯಿದ್ದಾಳೆ ಎಂದು 45 ವರ್ಷಗಳ ಬಳಿಕ ಇದೇ ಮೊದಲ ಬಾರಿ ಮೋದಿ ಒಪ್ಪಿಕೊಂಡದ್ದನ್ನು ಯಾಕೆ ಚರ್ಚೆಗೆ ಎತ್ತಿಕೊಳ್ಳಬೇಕಾಯಿತೆಂದರೆ, ಅವರು ಪ್ರಧಾನಿ ಅಭ್ಯರ್ಥಿ ಎಂಬುದರಿಂದ ಮತ್ತು ‘ತಾನು ಮಾದರಿ ದೇಶವನ್ನು ನಿರ್ಮಿಸುತ್ತೇನೆ’ ಎಂದು ವಾದಿಸುತ್ತಿರುವುದರಿಂದ. ದೇಶ ಅಂದರೆ ಗೋವು, ಗುಜರಾತ್‍ನ ಹುಲಿ, ರಸ್ತೆಗಳಷ್ಟೇ ಅಲ್ಲವಲ್ಲ. ಕುಟುಂಬ ಅದರ ಬಹುಮುಖ್ಯ ಭಾಗ ತಾನೇ. ಆದರೆ ಮೋದಿ ಈ ಅತ್ಯಮೂಲ್ಯ ಭಾಗದ ಬಗ್ಗೆಯೇ ತೀರಾ ಉಡಾಫೆಯ ನಿಲುವನ್ನು ತಾಳಿದ್ದಾರೆ. ದೇಶ ಸೇವೆಯ ನೆಪದಲ್ಲಿ ಓರ್ವ ಹೆಣ್ಣಿನ ಭಾವನೆಗಳನ್ನು ಕ್ಷುಲ್ಲಕಗೊಳಿಸಿದ್ದಾರೆ. 45 ವರ್ಷಗಳ ಹಿಂದೆ ಮೋದಿಯವರನ್ನು ಮದುವೆಯಾಗುವಾಗ ಜಶೋದಾಬೆನ್‍ಗೆ 17 ವರ್ಷ. ಇಂದಿನಂತೆ ಟಿ.ವಿ., ಇಂಟರ್‍ನೆಟ್ ಮುಂತಾದ ಆಧುನಿಕ ಸೌಲಭ್ಯಗಳಿಲ್ಲದ ಆ ಕಾಲದಲ್ಲಿ ಜಶೋದಾಬೆನ್ ನಿಜವಾಗಿಯೂ ಅಪ್ರಾಪ್ತೆ. ಪತಿ-ಪತ್ನಿ ಸಂಬಂಧದ ಬಗ್ಗೆ, ಮದುವೆಯ ಪಾವಿತ್ರ್ಯದ ಕುರಿತಂತೆ ಅವರಿವರಿಂದ ತಿಳಿದಿರುವುದರ ಹೊರತಾಗಿ ಹೆಚ್ಚಿನದೇನನ್ನೂ ಆ ಪ್ರಾಯದಲ್ಲಿ ಅವರು ಅರಿತುಕೊಂಡಿರುವ ಸಾಧ್ಯತೆ ಇಲ್ಲ. ಅದಾಗಲೇ ಮದುವೆಯಾಗಿರುವ ತನ್ನ ಗೆಳತಿಯರನ್ನು ನೋಡಿ ಜಶೋದಾಬೆನ್ ಹಲವಾರು ಕನಸುಗಳನ್ನು ಕಂಡಿರಬಹುದು. ಗೆಳತಿಯರು ತವರು ಮನೆಗೊಮ್ಮೆ- ಪತಿ ಮನೆಗೊಮ್ಮೆ ಬಂದು ಹೋಗುತ್ತಿರುವುದು, ಪತಿಯ ಜೊತೆ ತಿರುಗಾಡುವುದು, ಮಕ್ಕಳೊಂದಿಗೆ ಆಡುವುದು... ಎಲ್ಲವನ್ನೂ ನೋಡಿರಬಹುದು. ಅವರೊಂದಿಗೆ ಕೌಟುಂಬಿಕ ಬದುಕಿನ ಬಗ್ಗೆ ವಿಚಾರ ವಿನಿಮಯ ಮಾಡಿರಬಹುದು. ನರೇಂದ್ರ ಮೋದಿಯವರೊಂದಿಗೆ ವಿವಾಹ ನಿಶ್ಚಿತಗೊಂಡಾಗ ಜಶೋದಾ ತನ್ನ ಗೆಳತಿಯರಂಥ ಒಂದು ಸುಂದರ ಕುಟುಂಬ ಜೀವನದ ಕನಸು ಕಂಡಿರಬಹುದು. ತನ್ನ ಪತಿಯಾದ ಮೋದಿಯರೊಂದಿಗೆ ಸುತ್ತಾಡುವ, ಮಕ್ಕಳನ್ನು ಹೊಂದುವ ಕುರಿತಂತೆ ನೀಲ ನಕ್ಷೆ ರೂಪಿಸಿರಬಹುದು. ಸಾಮಾನ್ಯವಾಗಿ, ಕೌಟುಂಬಿಕ ಜೀವನದ ಬಗ್ಗೆ ಪುರುಷನಿಗಿಂತ ಹೆಚ್ಚು ಗಂಭೀರವಾಗಿರುವುದು ಮಹಿಳೆಯೇ. ಪತಿಯೊಂದಿಗೆ ಎಷ್ಟೇ ಮುನಿಸಿದ್ದರೂ ಹೊರಗೆ ಆಕೆ ನಗು ನಗುತ್ತಲೇ ಇರುತ್ತಾಳೆ. ಕೌಟುಂಬಿಕ ಜೀವನದ ಯಾವ ಸಮಸ್ಯೆಗಳೂ ಮನೆಯ ನಾಲ್ಕು ಗೋಡೆ ದಾಟದಂತೆ ಎಚ್ಚರ ವಹಿಸುತ್ತಾಳೆ. ಪತಿಯ ದೌರ್ಬಲ್ಯಗಳನ್ನು ತವರು ಮನೆಯಿಂದಲೂ ಮುಚ್ಚಿಡುತ್ತಾಳೆ. ಹೀಗಿರುವಾಗ, 45 ವರ್ಷಗಳ ಹಿಂದೆ ನರೇಂದ್ರ ಮೋದಿ ಎಂಬ ಪತಿಯ ಸುತ್ತ ಜಶೋದಾಬೆನ್ ಇಂಥದ್ದೊಂದು ರಮ್ಯ ಕನಸನ್ನು ಕಟ್ಟಿರಲಾರರು ಎಂದು ಹೇಳುವುದಕ್ಕೆ ಯಾವ ಆಧಾರವೂ ಇಲ್ಲ. ಅದರೆ, ಕಳೆದ 45 ವರ್ಷಗಳಲ್ಲಿ ಮೋದಿ ತನ್ನ ಪತ್ನಿಯನ್ನು ಒಮ್ಮೆಯೂ ಸಂಪರ್ಕಿಸಿಲ್ಲ. ಕ್ಷೇಮ ಸಮಾಚಾರ ವಿಚಾರಿಸಿಲ್ಲ. ಮಾತ್ರವಲ್ಲ, 45 ವರ್ಷಗಳ ಬಳಿಕ ಇದೀಗ, ‘ತನಗೋರ್ವ ಪತ್ನಿ ಇದ್ದಾಳೆ’ ಎಂದು ಅನಿವಾರ್ಯವಾಗಿ ಒಪ್ಪಿಕೊಳ್ಳುವಾಗಲೂ ಅವರಲ್ಲಿ ಯಾವ ಪಾಪಭಾವವೂ ಇಣುಕುತ್ತಿಲ್ಲ. ದೇಶಸೇವೆಯು ಓರ್ವ ವ್ಯಕ್ತಿಯನ್ನು ಈ ಮಟ್ಟಕ್ಕೆ ಮುಟ್ಟಿಸುತ್ತದೆಂದರೆ ಅಂಥ ಸೇವೆಯು ಎಂಥ ಕುಟುಂಬವನ್ನು ನಿರ್ಮಿಸೀತು? ನಿಜವಾಗಿ, ಮೋದಿ ಮೊಟ್ಟಮೊದಲು ಜಶೋದಾಬೆನ್‍ರ ಕ್ಷಮೆಯಾಚಿಸಬೇಕಿತ್ತು. 45 ವರ್ಷಗಳಲ್ಲಿ ಒಮ್ಮೆಯೂ ಸಂಪರ್ಕಿಸದ ತಪ್ಪಿಗಾಗಿ, ಪಶ್ಚಾತ್ತಾಪ ಪಡಬೇಕಿತ್ತು. ನಾಮಪತ್ರ ಸಲ್ಲಿಸುವಾಗ ಪತ್ನಿಯನ್ನು ಜೊತೆ ಸೇರಿಸಿ ಪತಿ ಧರ್ಮವನ್ನು ಪಾಲಿಸಬೇಕಿತ್ತು. ಪತ್ನಿಯನ್ನು ತ್ಯಜಿಸಿ ದೇಶಸೇವೆ ಮಾಡುವ ತನ್ನ ನಿರ್ಧಾರ ಪತ್ನಿಗೆ ಮಾಡಿದ ದ್ರೋಹ ಮತ್ತು ತಪ್ಪು ಮಾದರಿ ಎಂದು ಘೋಷಿಸಬೇಕಿತ್ತು. 17 ವರ್ಷದ ಅಪ್ರಾಪ್ತೆ ಪತ್ನಿಯ ಕಣ್ಣೀರಿಗೆ ಕಾರಣವಾದ ತನ್ನನ್ನು ಮನ್ನಿಸುವಂತೆ ದೇಶದ ನಾಗರಿಕರೊಂದಿಗೆ ವಿನಂತಿಸಬೇಕಿತ್ತು. ಆದರೆ ಇವಾವುದನ್ನೂ ಮಾಡದ ಮೋದಿ, ಬದಲು ತನ್ನನ್ನೇ ಸಮರ್ಥಿಸಿಕೊಂಡಿದ್ದಾರೆ. ಕಳೆದ 45 ವರ್ಷಗಳಿಂದ ಅತ್ತ ಪತ್ನಿಯೂ ಅಲ್ಲದ ಇತ್ತ ವಿಚ್ಛೇದಿತೆಯೂ ಅಲ್ಲದ ಸ್ಥಿತಿಯಲ್ಲಿ ಬದುಕಿದ ಹೆಣ್ಣು ಮಗಳ ಮಾನಸಿಕ ಹೊಯ್ದಾಟವನ್ನು ತಿಳಿಯದ ವ್ಯಕ್ತಿಯಂತೆ ವರ್ತಿಸಿದ್ದಾರೆ. ‘ತನಗೋರ್ವ ಪತ್ನಿಯಿದ್ದಾಳೆ ಮತ್ತು ಆಕೆಯ ಆಸ್ತಿ ವಿವರ ಗೊತ್ತಿಲ್ಲ..’ ಎಂದು ನಾಮಪತ್ರದಲ್ಲಿ ಉಲ್ಲೇಖಿಸುವ ಪತಿಯನ್ನೊಮ್ಮೆ ಊಹಿಸಿ. ಅವರ ಬಗ್ಗೆ ಪತ್ನಿಯಾದವಳ ಆಂತರಿಕ ಅಭಿಪ್ರಾಯ ಏನಿರಬಹುದು? ಒಂದು ವೇಳೆ ಮದುವೆಯದ ಮೂರೇ ತಿಂಗಳೊಳಗೆ ಮೋದಿಯನ್ನು ತ್ಯಜಿಸಿ ಜಶೋದಾ ಹೊರಟು ಹೋಗಿರುತ್ತಿದ್ದರೆ ಮೋದಿಯ ನಿರ್ಧಾರ ಏನಿರುತ್ತಿತ್ತು?
ನಿಜವಾಗಿ, ಓರ್ವ ವ್ಯಕ್ತಿಯ ಸರಿಯಾದ ಪರೀಕ್ಷೆ ನಡೆಯುವುದೇ ಕೌಟುಂಬಿಕ ಜೀವನದಲ್ಲಿ. ಮನೆಯ ಹೊರಗೆ ಮುಖವಾಡಗಳಿಂದ ಬದುಕಬಹುದು, ಆದರೆ ಮನೆಯ ಒಳಗಲ್ಲ. ಪತ್ನಿ-ಮಕ್ಕಳ ಮುಂದೆ ಮುಖವಾಡಗಳು ಪ್ರಯೋಜನಕ್ಕೆ ಬರುವುದಿಲ್ಲ. ಈ ಹಿನ್ನೆಲೆಯಲ್ಲಿ ಜಶೋದಾಬೆನ್‍ರನ್ನು ನಾವು ಅಭಿನಂದಿಸಬೇಕಾಗಿದೆ. ‘ಮೋದಿ ಪರಿಹಾರ’ ಎಂಬ ಜಾಹೀರಾತು ದೇಶದ ಎಲ್ಲೆಡೆ ಕಾಣಿಸುತ್ತಿರುವಾಗ, ಅ ಪರಿಹಾರ ಎಷ್ಟು ಕ್ರೂರ ಮತ್ತು ನಿರ್ಭಾವುಕ ಎಂಬುದನ್ನು ಆಕೆ ತನ್ನ 45 ವರ್ಷಗಳ ಒಂಟಿ ಬದುಕಿನ ಮೂಲಕ ಸಾರಿ ಹೇಳಿದ್ದಾರೆ. ಮೋದಿಯನ್ನು `ಮಾದರಿ' ಅನ್ನುವವರಿಗೆ ಜಶೋದಾಬೆನ್ ಎಚ್ಚರಿಕೆಯಾಗಲಿ.
12 years of separate life is divorced life according to law..
ReplyDelete