Friday 8 May 2015

ಬೇಟಿ ಹಠಾವೋ ಬೀಜ ತಯಾರಿಸಿದ ರಾಮ್‍ದೇವ್

    6 ವರ್ಷದೊಳಗಿನ 1000 ಗಂಡು ಮಕ್ಕಳಿಗೆ 914 ಹೆಣ್ಣು ಮಕ್ಕಳಿರುವ ದೇಶವೊಂದರಲ್ಲಿ ಸುದ್ದಿಗೀಡಾಗಬೇಕಾದ ಮದ್ದು ಯಾವುದು - ಪುತ್ರ ಜೀವಕ್ ಬೀಜವೋ ಅಥವಾ ಪುತ್ರಿ ಜೀವಕ್ ಬೀಜವೋ? ಬಾಬಾ ರಾಮ್‍ದೇವ್ ಇಂಥದ್ದೊಂದು ಚರ್ಚೆಯ ಕೇಂದ್ರವಾಗಿದ್ದಾರೆ. ಪುತ್ರ ಸಂತಾನ ಪ್ರಾಪ್ತಿಗಾಗಿರುವ ಪುತ್ರ ಜೀವಕ್ ಬೀಜವನ್ನು ಅವರು ಮಾರುಕಟ್ಟೆಗೆ ಬಿಡುಗಡೆಗೊಳಿಸಿದ್ದಾರೆ. ಇದು ವಿವಾದಕ್ಕೆ ಕಾರಣವಾದಾಗ ಅದನ್ನು ಸಂಸ್ಕೃತ ಪದವೆಂದು ಸಮರ್ಥಿಸಲು ಹೋಗಿ ಮತ್ತಷ್ಟು ನಗೆಪಾಟಲಿಗೆ ಗುರಿಯಾಗಿದ್ದಾರೆ. ಒಂದು ಕಡೆ, ಹರ್ಯಾಣ ಸರಕಾರದ ಬೇಟಿ ಪಡಾವೋ ಬೇಟಿ ಬಚಾವೋ ಎಂಬ ಕಾರ್ಯಕ್ರಮದ ಬ್ರಾಂಡ್ ಅಂಬಾಸಡರ್ ಇವರು. ಇನ್ನೊಂದು ಕಡೆ, ಪುತ್ರ ಪ್ರಾಪ್ತಿಗಾಗಿ ಮಾತ್ರೆಗಳನ್ನು ಮಾರುತ್ತಿರುವುದೂ ಇವರೇ. ಈ ದ್ವಂದ್ವಕ್ಕೆ ಏನೆನ್ನಬೇಕು? ಹಾಗಂತ, ಇದು ರಾಮ್‍ದೇವ್ ಒಬ್ಬರ ಸಮಸ್ಯೆಯಲ್ಲ. ಇಂಥ ದ್ವಂದ್ವಗಳುಳ್ಳ ತಂಡವೇ ಈ ದೇಶದಲ್ಲಿದೆ. ಹಿಂದುಗಳು ಮೂರು, ನಾಲ್ಕು, ಐದು.. ಹೀಗೆ ಮಕ್ಕಳನ್ನು ಹೊಂದಬೇಕೆಂದು ಆಗ್ರಹಿಸುತ್ತಿರುವುದು ಈ ತಂಡದ ಮಂದಿಯೇ.ಆದರೆ ಅವರು ಸ್ವತಃ ಹೆರುವುದನ್ನೇ ನಿಷೇಧಿಸಿಕೊಂಡಿದ್ದಾರೆ. ಕಾಂಗ್ರೆಸ್ ಸರಕಾರ ಇದ್ದಾಗ ಪ್ರತಿದಿನ ಬೆಳಗ್ಗೆದ್ದು 'ಕಪ್ಪು ಹಣ' ಎಂದು ಕೂಗಿಯೇ ಈ ತಂಡದ ಮಂದಿ ಬ್ರಶ್ ಮಾಡುತ್ತಿದ್ದರು. ಮೋದಿ ಪ್ರಧಾನ ಮಂತ್ರಿಯಾದ ಬಳಿಕ ಅವರು ಆ ವಿಷಯದಲ್ಲಿ ಮಾತಾಡುವುದನ್ನೇ ನಿಲ್ಲಿಸಿದ್ದಾರೆ. ಬಾಂಗ್ಲಾದೇಶಿ ನುಸುಳುಕೋರರಿಗೂ ಆಧಾರ್ ಕಾರ್ಡ್ ಸಿಗುತ್ತಿದ್ದು, ಅದನ್ನು ನಿಷೇಧಿಸಬೇಕೆಂದು ಆಗ್ರಹಿಸಿದ್ದೂ ಈ ತಂಡದವರೇ. ಇದೀಗ ಹಿಂದಿಗಿಂತಲೂ ನಿಷ್ಠುರವಾಗಿ ಆಧಾರ್ ಕಾರ್ಡನ್ನು ಜಾರಿಗೊಳಿಸುತ್ತಿರುವುದೂ ಇವರೇ. ಮುಸ್ಲಿಮರ ವಿಶ್ವಾಸ ಬೆಳೆಸುವುದಕ್ಕಾಗಿ ಸದ್ಭಾವನಾ ಯಾತ್ರೆ ಕೈಗೊಂಡವರು ಈ ತಂಡದ ಬೆಂಬಲಿಗರೇ ಆಗಿದ್ದರು. ಇದೀಗ ಮುಸ್ಲಿಮರ ಓಟಿನ ಹಕ್ಕನ್ನೇ ಕಸಿಯಬೇಕೆಂದೂ ಸಂತಾನ ಹರಣ ಚಿಕಿತ್ಸೆಗೆ ಅವರನ್ನು ಗುರಿಪಡಿಸಬೇಕೆಂದೂ ಒತ್ತಾಯಿಸುತ್ತಿರುವವರೂ ಈ ಮಂದಿಯೇ. ಒಂದು ರೀತಿಯಲ್ಲಿ, ಈ ತಂಡದ ಐಡೆಂಟಿಟಿಯೇ ‘ದ್ವಂದ್ವ' ಆಗಿಬಿಟ್ಟಿದೆ. ಪುತ್ರ ಜೀವಕ್ ಬೀಜದ ಮೂಲಕ ರಾಮ್‍ದೇವ್‍ರು ಈ 'ದ್ವಂದ್ವ'ಗಳಿಗೆ ಅಧಿಕೃತ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ.
 ನಿಜವಾಗಿ, ಈ ದೇಶದಲ್ಲಿ ತಯಾರಾಗಬೇಕಾದ ಔಷಧಿ ಯಾವುದು ಎಂಬುದನ್ನು ತೀರ್ಮಾನಿಸುವುದಕ್ಕೆ ಪಂಜಾಬ್-ಹರ್ಯಾಣಗಳಂಥ ರಾಜ್ಯಗಳ ಹೆಣ್ಣು-ಗಂಡು ಅನುಪಾತವೇ ಧಾರಾಳ ಸಾಕು. ಹರ್ಯಾಣವನ್ನು ವಧುಗಳ ಕೊರತೆ ಎಷ್ಟರ ಮಟ್ಟಿಗೆ ಬಾಧಿಸಿಬಿಟ್ಟಿದೆಯೆಂದರೆ ಬಿಹಾರದಿಂದ ಯುವತಿಯರನ್ನು ಹರ್ಯಾಣಕ್ಕೆ ಕರೆತಂದು ಮದುವೆ ಮಾಡಿಕೊಳ್ಳಲಾಗುತ್ತದೆ. ಈ ಎರಡು ರಾಜ್ಯಗಳಲ್ಲಿ ಗಣನೀಯ ಪ್ರಮಾಣದಲ್ಲಿ ಪುತ್ರಿಯರು ಕಾಣೆಯಾಗತೊಡಗಿದ್ದಾರೆ. ಎಲ್ಲರಿಗೂ 'ಪುತ್ರ ಜೀವಕ್ ಬೀಜ' ಬೇಕು ಅಥವಾ ಪುತ್ರ ಸಂತಾನ ಬೇಕು. ರಾಮ್‍ದೇವ್‍ರಿಗೆ ಇದು ಗೊತ್ತಿಲ್ಲ ಎಂದಲ್ಲ. ‘ಬೇಟಿ ಪಡಾವೋ ಬೇಟಿ ಬಚಾವೋ' ಎಂಬ ಯೋಜನೆ ಹರ್ಯಾಣದಲ್ಲಿ ಹುಟ್ಟಿಕೊಂಡದ್ದೇ ಈ ಕಾರಣದಿಂದ. ಹೀಗಿದ್ದೂ ಅವರು ಪುತ್ರ ಸಂತಾನ ಪ್ರಾಪ್ತಿಗಾಗಿ ಮಾತ್ರೆಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸುತ್ತಾರೆಂದರೆ ಒಂದೋ ಅವರು ಪಕ್ಕಾ ವ್ಯಾಪಾರಿಯಾಗಿರಬೇಕು ಅಥವಾ ಹೆಣ್ಣು ಸಂತಾನದ ಬಗ್ಗೆ ಕೀಳರಿಮೆ ಬೆಳೆಸಿಕೊಂಡಿರಬೇಕು. ಪುತ್ರರನ್ನು ಬಯಸುವ ಸಮಾಜವೊಂದರಲ್ಲಿ ಪುತ್ರ ಜೀವಕ್ ಬೀಜಕ್ಕೆ ಇರುವ ಮಾರುಕಟ್ಟೆ ಎಷ್ಟು ದೊಡ್ಡದು ಎಂಬುದು ವ್ಯಾಪಾರಿಯಾಗಿ ರಾಮ್‍ದೇವ್‍ರಿಗೆ ಚೆನ್ನಾಗಿಯೇ ತಿಳಿದಿರುತ್ತದೆ. ಯೋಗವನ್ನು ಮಾರಬಲ್ಲ ರಾಮ್‍ದೇವ್‍ರಿಗೆ ಮಾತ್ರೆಯನ್ನು ಉತ್ಪಾದಿಸುವುದು ಮತ್ತು ಮಾರುಕಟ್ಟೆ ಕಂಡುಕೊಳ್ಳುವುದು ಕಷ್ಟವಲ್ಲ. ಸದ್ಯ ಅವರು ಸಮಾಜದ ಪುತ್ರ ದೌರ್ಬಲ್ಯವನ್ನು ತನ್ನ ವ್ಯಾಪಾರಕ್ಕಾಗಿ ಚೆನ್ನಾಗಿ ಬಳಸಿಕೊಂಡಿದ್ದಾರೆ. ಆದರೆ ಬೇಟಿ ಪಡಾವೋ ಬೇಟಿ ಬಚಾವೋ ಯೋಜನೆಯ ರಾಯಭಾರಿಯಾದ ಬಳಿಕವೂ ಅವರು ಇಂಥದ್ದೊಂದು ಔಷಧವನ್ನು ಮಾರುತ್ತಾರೆಂದರೆ, ಅವರದು ಬೇಟಿ ಹಠಾವೋ ಮನಸ್ಥಿತಿ ಎಂದೂ ಹೇಳಬೇಕಾಗುತ್ತದೆ. ನಿಜವಾಗಿ, ಓರ್ವ ವ್ಯಾಪಾರಿ ಎಷ್ಟೇ ಕಟುಕನಾಗಿದ್ದರೂ ಆತ ಸಮಾಜ ಸೇವಕನಾಗಿ ಗುರುತಿಸಿಕೊಳ್ಳಬಯಸುತ್ತಾನೆ. ಸಮಾಜದ ಕೆಂಗಣ್ಣಿಗೆ ಗುರಿಯಾಗಬಲ್ಲ ಅಥವಾ ಮನ್ನಣೆ ಸಿಗದಂಥ ಕಾರ್ಯದಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಸಮಾಜಕ್ಕೆ ಏನಾದರೂ ನೀಡುತ್ತಲಿರಬೇಕು ಮತ್ತು ಅದನ್ನು ಸಮಾಜ ಎತ್ತಿ ಹೇಳಬೇಕೆಂಬ ಒಳ ಆಸೆಯೂ ಅವನಲ್ಲಿರುತ್ತದೆ. ಇಂಥ ಆಸೆಗಳಿಂದ ಸಮಾಜಕ್ಕಾಗುವ ಲಾಭ ಏನೆಂದರೆ, ಸಮಾಜ ಅಷ್ಟರ ಮಟ್ಟಿಗೆ ಇಂಥ ವ್ಯಕ್ತಿತ್ವಗಳ ಕಿರುಕುಳಗಳಿಂದ ಮುಕ್ತವಾಗಿರುವುದು. ಅವರು ಸಮಾಜಕ್ಕೇನೂ ಕೊಡದಿದ್ದರೂ ತೊಂದರೆ ಮಾಡುವುದಿಲ್ಲವಲ್ಲ ಎಂಬ ನಿರಾಳಭಾವದಿಂದ ಬದುಕುವುದು. ಆದರೆ, ರಾಮ್‍ದೇವ್‍ರು ಕಟುಕ ವ್ಯಾಪಾರಿಗಳನ್ನೂ ವಿೂರಿಸುವ ಆತಂಕಕಾರಿ ಮನಸ್ಥಿತಿಯನ್ನು ಪುತ್ರ ಬೀಜದ ಮೂಲಕ ತೆರೆದಿಟ್ಟಿದ್ದಾರೆ. ಅವರು ವ್ಯಾಪಾರಕ್ಕಾಗಿ ಆಯ್ಕೆ ಮಾಡಿಕೊಂಡದ್ದು ಭತ್ತ, ಅಳಸಂಡೆ, ಬದನೆ, ಕುಂಬಳಕಾಯಿ, ತೊಂಡೆಕಾಯಿಯಂಥ ಬೀಜಗಳನ್ನಲ್ಲ, ಪುತ್ರ ಬೀಜವನ್ನು. ಈ ಬೀಜ ಮಣ್ಣಿನಲ್ಲಿ ಬೆಳೆಯುವುದಿಲ್ಲ. ಮನುಷ್ಯರ ಹೊಟ್ಟೆಯಲ್ಲಿ ಬೆಳೆಯುತ್ತದೆ. ನಿಜವಾಗಿ, ಹೊಟ್ಟೆಯಲ್ಲಿ ಗಂಡು ಬೆಳೆಯಬೇಕೋ ಹೆಣ್ಣು ಬೆಳೆಯಬೇಕೋ ಎಂದು ತೀರ್ಮಾನಿಸಬೇಕಾದದ್ದು ಮನುಷ್ಯ ಅಲ್ಲ, ಪ್ರಕೃತಿ. ಪ್ರಕೃತಿಯ ತೀರ್ಮಾನಕ್ಕೆ ಮನುಷ್ಯ ಎಲ್ಲಿಯ ವರೆಗೆ ಬದ್ಧವಾಗಿರುತ್ತಾನೋ ಅಲ್ಲಿಯ ವರೆಗೆ ಭೂಮಿಯ ಸಮತೋಲನದಲ್ಲಿ ವ್ಯತ್ಯಾಸ ಉಂಟಾಗುವುದಿಲ್ಲ. ಇದು ಎಲ್ಲರಿಗೂ ಗೊತ್ತು. ಆದರೆ ಆಸೆಬುರುಕ ಮನುಷ್ಯ ಕೆಲವೊಮ್ಮೆ ಅಧಿಕ ಇಳುವರಿಯ ಆಸೆಯಿಂದ ಅಥವಾ ದುಡ್ಡು ದುಪ್ಪಟಾಗುವ ದುರಾಸೆಯಿಂದ ನಕಲಿ ಬೀಜಗಳನ್ನು ಖರೀದಿಸುವುದಿದೆ ಅಥವಾ ವಂಚಕರನ್ನು ಸವಿೂಪಿಸುವುದಿದೆ. ರಾಮ್‍ದೇವ್‍ರ ಪುತ್ರಬೀಜ ಇಂಥ ವಂಚಕರನ್ನು ನೆನಪಿಸುತ್ತದೆ. ಸಮಾಜದ ಆಸೆಬುರುಕ ಮನುಷ್ಯರನ್ನು ಗುರಿಯಿರಿಸಿಕೊಂಡೇ ಅವರು ಪುತ್ರ ಬೀಜವನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದ್ದಾರೆ. ಹೀಗೆ ಮಾಡುವಾಗ ತಾನು ಪ್ರಕೃತಿಗೆ ಮೋಸ ಮಾಡುತ್ತಿದ್ದೇನೆಂಬ ಅರಿವು ಅವರಿಗೆ ಇದ್ದಿರಲಿಲ್ಲ ಎಂದು ಹೇಳುವಂತಿಲ್ಲ. ಪ್ರಕೃತಿ, ಆಧ್ಯಾತ್ಮ, ಶಾಸ್ತ್ರ, ಪುರಾಣಗಳ ಬಗ್ಗೆ ತನ್ನ ಯೋಗ ಶಿಬಿರದಲ್ಲಿ ಬಾಯ್ತುಂಬ ಹೇಳುವ ರಾಮ್‍ದೇವ್‍ರಿಗೆ ತನ್ನ ಪುತ್ರ ಬೀಜವು ಪ್ರಕೃತಿಯ ಹೆಣ್ಣು-ಗಂಡು ಸಮತೋಲನಕ್ಕೆ ಸಡ್ಡು ಹೊಡೆಯುತ್ತದೆ ಎಂಬುದಾಗಿ ಅರಿತಿರುವುದಿಲ್ಲ ಎಂದು ವಾದಿಸುವುದು ನಮ್ಮ ಮೂರ್ಖತನವಾಗುತ್ತದೆ. ಸಮಾಜದ ಒಳಿತಿನ ಬಗ್ಗೆ ಯಾವ ಕಾಳಜಿಯೂ ಇಲ್ಲದ ಮತ್ತು ಪ್ರಕೃತಿಯ ಕುರಿತಂತೆ ತೀವ್ರ ಅಗೌರವ ಇರುವ ವ್ಯಕ್ತಿಯಿಂದ ಮಾತ್ರ ಇಂಥ ವ್ಯಾಪಾರ ಸಾಧ್ಯ. ಆದ್ದರಿಂದ ನಕಲಿ ಭತ್ತ, ಅಳಸಂಡೆ, ತೊಂಡೆ, ಬದನೆ.. ಬೀಜಗಳಿಗಿಂತ ಎಷ್ಟೋ ಅಪಾಯಕಾರಿಯಾಗಿ ರಾಮ್‍ದೇವ್‍ರ ಪುತ್ರಬೀಜ ಗೋಚರಿಸುತ್ತದೆ.  ಅವರ ಬೀಜದಿಂದ ಪುತ್ರ ಸಂತಾನ ಪ್ರಾಪ್ತಿಯಾಗುತ್ತದೋ ಇಲ್ಲವೋ ಆದರೆ ಪುತ್ರಿ ಸಂತಾನದ ಕಡೆಗಣನೆಗಂತೂ ಕರೆ ಕೊಡುತ್ತದೆ. ಆದ್ದರಿಂದಲೇ ಇದು ಮನುಷ್ಯ ವಿರೋಧಿ. ಮಾನವತೆಗೆ ವಿರುದ್ಧವಾದ ಈ ಪುತ್ರಬೀಜದ ವಿರುದ್ಧ ಸಮಾಜ ಮುಖ್ಯವಾಗಿ ಮಹಿಳೆಯರು ಧ್ವನಿಯೆತ್ತಬೇಕು. ಹೆಣ್ಣು ಕೀಳಲ್ಲ ಮತ್ತು ಅಮುಖ್ಯಳೂ ಅಲ್ಲ. ಆಕೆಯನ್ನು ಕೀಳಾಗಿಸುವ ರಾಮ್‍ದೇವ್‍ರ ಬೀಜ ಈ ದೇಶಕ್ಕೆ ಅಗತ್ಯವೂ ಇಲ್ಲ. ಬೇಕಾದರೆ ರಾಮ್‍ದೇವ್‍ರು ಅಳಸಂಡೆ, ಮಾವು, ತೊಂಡೆ, ಮುಳ್ಳುಸೌತೆ ಬೀಜಗಳನ್ನು ಮಾರಲಿ. ಆದರೆ ಪುತ್ರಿಯರನ್ನು ಅವಮಾನಿಸದಿರಲಿ.

No comments:

Post a Comment