Monday, 18 May 2015

ಐನ್‍ಸ್ಟಿನ್‍ರ ಪತ್ರ ಮತ್ತು ಹರ್ಮನ್‍ ಸಿಂಗ್ ರ ಟರ್ಬನ್

   
 ಕಳೆದವಾರ ಎರಡು ಪ್ರಮುಖ ಸುದ್ದಿಗಳು ಪ್ರಕಟವಾದುವು. ಒಂದು ಖ್ಯಾತ ವಿಜ್ಞಾನಿ ಐನ್‍ಸ್ಟಿನ್‍ಗೆ ಸಂಬಂಧಿಸಿದ್ದಾದರೆ ಇನ್ನೊಂದು ಹರ್ಮನ್ ಸಿಂಗ್ ಎಂಬ 22ರ ಯುವಕನಿಗೆ ಸಂಬಂಧಿಸಿದ್ದು. ದೇವ ಮತ್ತು ಧರ್ಮಕ್ಕೆ ಸಂಬಂಧಿಸಿದ ಚಿಂತನೆಗಳೂ ಸೇರಿದಂತೆ ಐನ್‍ಸ್ಟಿನ್‍ರ ವಿವಿಧ ಬರಹಗಳು ಜೂನ್ 11ರಂದು ಏಲಂ ಆಗಲಿವೆ ಅನ್ನುವುದು ಮೊದಲ ಸುದ್ದಿ. `ತಾನು ಎಂದೆಂದೂ ನಾಸ್ತಿಕ' ಎಂದು ಹೇಳಿಕೊಂಡು 1945 ಜುಲೈನಲ್ಲಿ ಐನ್‍ಸ್ಟಿನ್‍ರು ತನ್ನ ಗೆಳೆಯ ಕ್ಯಾನರ್‍ಗೆ ಪತ್ರ ಬರೆದಿದ್ದರು. ಅಲ್ಲದೆ, 1949ರಲ್ಲಿ ಮತ್ತೆ ತನ್ನ `ನಾಸ್ತಿಕ' ನಿಲುವನ್ನು ಸಮರ್ಥಿಸಿಕೊಂಡು ಅದೇ ಗೆಳೆಯನಿಗೆ ಮತ್ತೊಂದು ಪತ್ರ ಬರೆದಿದ್ದರು. ಇವಲ್ಲದೇ ತನ್ನ ಮಾಜಿ ಪತ್ನಿ ಮಿಲೆವಾ ಮ್ಯಾರಿಕ್ ಹಾಗೂ ಮಕ್ಕಳಾದ ಹ್ಯಾನ್ಸ್ ಮತ್ತು ಎಡ್ವರ್ಡ್ ಐನ್‍ಸ್ಟಿನ್‍ರಿಗೆ ಬರೆದ ಪತ್ರಗಳೂ ಈ ಏಲಂನಲ್ಲಿ ಒಳಗೊಳ್ಳಲಿವೆ ಎಂದು ಹೇಳಲಾಗಿದೆ. ಈ ಸುದ್ದಿಗಿಂತ ಒಂದು ದಿನ ಮೊದಲು ನ್ಯೂಝಿಲ್ಯಾಂಡ್‍ನಲ್ಲಿರುವ ಹರ್ಮನ್‍ಸಿಂಗ್ ಸುದ್ದಿಗೀಡಾಗಿದ್ದಾನೆ. ತನ್ನ ಅಕ್ಕನ ಜೊತೆ ಶಾಲೆಗೆ ಹೋಗುತ್ತಿದ್ದ ಐದರ ಹುಡುಗನಿಗೆ ಕಾರು ಢಿಕ್ಕಿಯಾಗಿ ತಲೆಯಿಂದ ರಕ್ತಸ್ರಾವವಾಗುತ್ತದೆ. ಅಲ್ಲೇ ಇದ್ದ ಹರ್ಮನ್ ಸಿಂಗ್ ತನ್ನ ತಲೆಯ ಟರ್ಬನ್ ಅನ್ನು ಕಳಚಿ ಮಗುವಿನ ತಲೆಗೆ ಕಟ್ಟುತ್ತಾನೆ. ಸಿಖ್ಖರಲ್ಲಿ ಟರ್ಬನ್ ಕಳಚುವುದಕ್ಕೆ ಕೆಲವು ಕಠಿಣ ನಿಬಂಧನೆಗಳಿವೆ. ಅಪರೂಪಕ್ಕೊಮ್ಮೆ ಅದನ್ನು ಕಳಚಲಾಗುತ್ತದೆ. ಆದ್ದರಿಂದಲೇ ಹರ್ಮನ್ ಸಿಂಗ್‍ನ ಟರ್ಬನ್ ಪ್ರಕರಣವು ನ್ಯೂಝಿಲ್ಯಾಂಡ್ ಮತ್ತು ಪಕ್ಕದ ಆಸ್ಟ್ರೇಲಿಯಾಗಳಲ್ಲಿ ದೊಡ್ಡ ಮಟ್ಟದ ಸುದ್ದಿಗೆ ಮತ್ತು ಶ್ಲಾಘನೆಗೆ ಪಾತ್ರವಾಗುತ್ತದೆ.
    ನಿಜವಾಗಿ, ಈ ಜಗತ್ತು ಕಂಡ ಅಪರೂಪದ ವಿಜ್ಞಾನಿ ಐನ್‍ಸ್ಟಿನ್. ಅಣ್ವಸ್ತ್ರಗಳ ತಯಾರಿಕೆಯಲ್ಲಿ ಅವರ ಥಿಯರಿಗೆ ಮಹತ್ವದ ಪಾತ್ರವಿದೆ ಎಂಬುದು ಎಲ್ಲರಿಗೂ ಗೊತ್ತು. ಜಪಾನಿನ ಹಿರೋಶಿಮ ಮತ್ತು ನಾಗಸಾಕಿಗೆ ಅಮೇರಿಕವು ಬಾಂಬ್ ಹಾಕಿದ ಒಂದು ತಿಂಗಳ ಬಳಿಕ ಅವರು ತನ್ನ ಮಗನಿಗೆ ಬರೆದ ಪತ್ರದಲ್ಲಿ ತನ್ನ ರಿಲೇಟಿವಿಟಿ ಥಿಯರಿಗೂ ಅಣುಬಾಂಬ್‍ಗೂ ನಡುವೆ ಇರುವ ಸಂಬಂಧವನ್ನು ಚರ್ಚಿಸಿದ್ದರು. ಅಂದಹಾಗೆ, ಧರ್ಮ ಮತ್ತು ದೇವರ ಬಗ್ಗೆ ಅವರ ಅಭಿಪ್ರಾಯಗಳು ಎಷ್ಟೇ ನಕಾರಾತ್ಮಕವಾಗಿರಲಿ, ಲಕ್ಷಾಂತರ ಮಂದಿಯ ಸಾವಿನಲ್ಲಿ ಅವರ ಚಿಂತನೆಗಳಿಗೂ ಪಾತ್ರವಿತ್ತು ಎಂಬುದನ್ನು ನಿರಾಕರಿಸುವ ಹಾಗಿಲ್ಲ. ದೇವರನ್ನು ಮತ್ತು ಧರ್ಮವನ್ನು ನಂಬುವ ಮನುಷ್ಯರ ಕೊಲೆಗೆ ಅವರ ಚಿಂತನೆಗಳನ್ನು ಬಳಸಲಾಗಿದೆ. ಅಷ್ಟಕ್ಕೂ, ನಾಸ್ತಿಕ ಎಂಬುದು ಆಸ್ತಿಕ ಎಂಬುದರ ವಿರೋಧ ಪದವೇನೂ ಆಗಬೇಕಿಲ್ಲ. ಒಂದು ಶ್ರೇಷ್ಠ ಇನ್ನೊಂದು ಕನಿಷ್ಠ ಎಂಬ ವಿಭಜನೆಯೂ ಬೇಕಿಲ್ಲ. ಹಿಟ್ಲರ್ ಆಸ್ತಿಕನಾಗಿದ್ದ, ಜಪಾನ್‍ಗೆ ಅಣುಬಾಂಬ್ ಹಾಕಿದವರೂ ಆಸ್ತಿಕರಾಗಿದ್ದರು, ಮುಸೋಲೋನಿ ಆಸ್ತಿಕನಾಗಿದ್ದ...  ಎಂದೆಲ್ಲಾ ಹೇಳಿ ಅಸ್ತಿಕರನ್ನು ಕ್ರೂರಿಗಳೆಂದು ಹೇಳುವಾಗ ಈ ಬಾಂಬ್‍ಗಳ ತಯಾರಿಯಲ್ಲಿ ನಾಸ್ತಿಕರೆನಿಸಿದ ಐನ್‍ಸ್ಟಿನ್‍ನಂಥ ವಿಜ್ಞಾನಿಗಳಿದ್ದಾರೆ ಎಂದೂ ಹೇಳಬೇಕಾಗುತ್ತದೆ. ಧರ್ಮ ಎಂಬುದು ಮಾನವೀಯ ಎಂಬ ಪದಕ್ಕೆ ಅನ್ವರ್ಥವಾದುದು. ಅದು ಮನುಷ್ಯರಿಗಾಗಿ ಇರುವಂಥದ್ದು. ಆದ್ದರಿಂದಲೇ ಹರ್ಮನ್ ಸಿಂಗ್‍ಗೆ ತನ್ನ ಟರ್ಬನ್ ಅನ್ನು ಕಳಚಲು ಸಾಧ್ಯವಾದದ್ದು. ಅದು ಧರ್ಮ. ಟರ್ಬನ್ ಅಸ್ತಿಕವಾದದ ಸಂಕೇತವೇ ಹೊರತು ಕ್ರೌರ್ಯದ ಸಂಕೇತ ಅಲ್ಲ.
 ಒಂದು ವ್ಯಕ್ತಿತ್ವವಾಗಿ ಐನ್‍ಸ್ಟಿನ್‍ರ ಮುಂದೆ ಹರ್ಮನ್ ಸಿಂಗ್ ಏನೂ ಅಲ್ಲ. ಅವರಿಬ್ಬರ ನಡುವೆ ಯಾವ ನೆಲೆಯಲ್ಲೂ ಹೋಲಿಕೆಗಳಲ್ಲ. ಆದರೆ ಎರಡು ವಾದಗಳನ್ನು ಪ್ರತಿನಿಧಿಸುವವರೆಂಬ ನೆಲೆಯಲ್ಲಿ ಐನ್‍ಸ್ಟಿನ್ ಮತ್ತು ಹರ್ಮನ್ ಸಿಂಗ್‍ರನ್ನು ನಾವು ಎದುರು-ಬದುರು ನಿಲ್ಲಿಸಬಹುದು. ಹಾಗಂತ, ಒಂದನ್ನು ಸರಿ ಮತ್ತು ಇನ್ನೊಂದನ್ನು ತಪ್ಪು ಎಂದು ಸಾಬೀತು ಪಡಿಸುವುದು ಇಂಥ ಮುಖಾಮುಖಿಗಳ ಉದ್ದೇಶ ಆಗಬೇಕಿಲ್ಲ. ಅಷ್ಟಕ್ಕೂ, ಧರ್ಮ ಅಫೀಮು ಎಂದು ಹೇಳುವವರಲ್ಲಿ ಅದನ್ನು ಸಮರ್ಥಿಸುವುದಕ್ಕೆ ಉದ್ದದ ಪಟ್ಟಿಯಿದೆ. ಜಗತ್ತಿನಲ್ಲಾದ ಯುದ್ಧ, ಹತ್ಯೆ, ಹತ್ಯಾಕಾಂಡಗಳ ವಿವರವನ್ನು ಅವರು ಅದರ ಸಮರ್ಥನೆಗಾಗಿ ಮುಂದಿಡಬಲ್ಲರು. ನಾಸ್ತಿಕವಾದವನ್ನು ಪ್ರಶ್ನಿಸುವವರಲ್ಲೂ ಇಂಥದ್ದೇ ಉದ್ದದ ಪಟ್ಟಿಯಿದೆ. ನಿಜವಾಗಿ, ಧರ್ಮ ಎಂಬುದು ನಾವು ನಾಸ್ತಿಕ-ಆಸ್ತಿಕ ಎಂಬ ಸೀಮಿತ ಪರಿಧಿಯೊಳಗಿಟ್ಟು ನೋಡುವುದಕ್ಕಿಂತ ವಿಶಾಲವಾದದ್ದು. ನಾಗಸಾಕಿಗೆ ಬಾಂಬ್ ಹಾಕಿದವರು ಅದನ್ನು ಧರ್ಮದ ಕಾರಣಕ್ಕಾಗಿ ಎಸಗಿರುವ ಸಾಧ್ಯತೆಯಿಲ್ಲ. ನಾಸ್ತಿಕವಾದವನ್ನು ಪ್ರತಿಪಾದಿಸಿದ ಸ್ಟಾಲಿನ್ ಮಾನವ ಹತ್ಯಾಕಾಂಡದ ಆರೋಪವನ್ನು ಹೊತ್ತುಕೊಂಡಿದ್ದಾರೆ. ತನ್ನ ಪತ್ನಿಯನ್ನೇ ಗುಂಡಿಟ್ಟು ಕೊಂದ ಆರೋಪ ಸ್ಟಾಲಿನ್ ಮೇಲಿದೆ. ಹಾಗಂತ, ಸ್ಟಾಲಿನ್ ಎಸಗಿದ ಹತ್ಯಾಕಾಂಡ ಮತ್ತು ಹತ್ಯೆಗಳಿಗೆ ಅವರ ನಾಸ್ತಿಕ ವಾದವೇ ಕಾರಣ ಎಂದು ವಾದಿಸುವುದು ಅಸಾಧುವಾಗುತ್ತದೆ. ಧರ್ಮ ಕ್ರೌರ್ಯದ ವಿರೋಧ ಪದ. ಆದ್ದರಿಂದಲೇ ಹರ್ಮನ್ ಸಿಂಗ್‍ನ ಮನಸ್ಸು ಮಗುವಿನ ರಕ್ತಕ್ಕೆ ಸ್ಪಂಧಿಸಿತು. ನಮಾಝ್ ನಡೆಯುತ್ತಿರುವ ಪಕ್ಕದಲ್ಲೇ ಮನೆ ಉರಿಯುತ್ತಿದ್ದರೆ ನಮಾಜ್ ಬಿಟ್ಟು ಮನೆಯ ಬೆಂಕಿಯನ್ನು ನಂದಿಸುವುದನ್ನೇ ಇಸ್ಲಾಮ್ ಧರ್ಮ ಎಂದು ಹೇಳುತ್ತದೆ. ನಮಾಝ್ ದೇವನಿಗೆ ಅತೀ ಹತ್ತಿರ ಮತ್ತು ಬಹು ಪ್ರಾಮುಖ್ಯತೆ ಇರುವ ಆರಾಧನೆಯೇ ಆಗಿರಬಹುದು. ಆದರೆ ಮನುಷ್ಯರ ಸಂಕಟ ಆ ಆರಾಧನೆಗಿಂತ ಮಿಗಿಲು. ನಮಾಝ್‍ನ ವೇಳೆ ಮಗುವಿನ ಅಳು ಕೇಳಿಸಿದರೆ ನಮಾಝನ್ನು ತ್ವರಿತಗೊಳಿಸುವುದು ಧರ್ಮ. ಒಬ್ಬನ ಹತ್ಯೆಯನ್ನು ಸರ್ವ ಮಾನವರ ಹತ್ಯೆಗೆ ಸಮನಾಗಿಸುವುದು ಧರ್ಮ. ಈ ಹಿನ್ನೆಲೆಯಲ್ಲಿ ಧರ್ಮವನ್ನು ಅಧ್ಯಯನ ನಡೆಸಿದರೆ ಹರ್ಮನ್ ಸಿಂಗ್ ಮತ್ತು ಆತ ಪ್ರತಿಪಾದಿಸಿದ ಧರ್ಮ ಅರ್ಥವಾಗುತ್ತದೆ. ಒಂದು ವೇಳೆ ಸ್ಟಾಲಿನ್‍ರ ಹತ್ಯಾಕಾಂಡವನ್ನು ಎದುರಿಟ್ಟುಕೊಂಡು ನಾಸ್ತಿಕವಾದವನ್ನು ಓದಲು ಹೊರಟರೆ ಅದು ‘ಕ್ರೌರ್ಯಗಳ ವಾದ’ ಎಂದು ಹೇಳಬೇಕಾಗುತ್ತದೆ. ಆದರೆ ಇದು ತಪ್ಪು. ವ್ಯಕ್ತಿಗತ ತಪ್ಪುಗಳನ್ನು ‘ವಾದ’ಕ್ಕೆ ಜೋಡಿಸಿ ನೋಡಬಾರದು.
 ಹಿಟ್ಲರ್‍ನಿಂದ ತೊಂದರೆಗೆ ಗುರಿಯಾದ ಐನ್‍ಸ್ಟೀನ್‍ರು ನಾಸ್ತಿಕವಾದವನ್ನು ಪ್ರತಿಪಾದಿಸುವುದರಲ್ಲಿ ಒಂದು ತರ್ಕವಿದೆ. ಹಿಟ್ಲರ್ ತಾನು ಆರ್ಯ ವಂಶಸ್ಥ ಅನ್ನುತ್ತಿದ್ದ. ‘ಧರ್ಮಿಷ್ಠ’ ಎಂದೂ ಗುರುತಿಸಿಕೊಳ್ಳುತ್ತಿದ್ದ. ಆದ್ದರಿಂದ ಆತನ ಅಮಾನವೀಯ ವರ್ತನೆಗಳು ಐನ್‍ಸ್ಟೀನ್‍ರನ್ನು ನಾಸ್ತಿಕವಾದಿಯಾಗಿ ಮಾಡಿರಲೂ ಬಹುದು. ಆದರೆ ಅವರ ನಾಸ್ತಿಕವಾದದ ಪ್ರತಿಪಾದನೆಯುಳ್ಳ ಪತ್ರದ ಏಲಂನ ಸಂದರ್ಭದಲ್ಲಿಯೇ ಹರ್ಮನ್ ಸಿಂಗ್ ತನ್ನ ಟರ್ಬನ್ ಅನ್ನು ಕಳಚಿ ಮಗುವನ್ನು ಉಳಿಸುವ ಪ್ರಯತ್ನ ಮಾಡಿದ್ದಾನೆ. ಈ ಮೂಲಕ ಧರ್ಮ ಮಾನವೀಯವಾದುದು ಮತ್ತು ಅದರ ಮೇಲಿರುವ ಕ್ರೌರ್ಯಗಳ ಆರೋಪ ಅಸಾಧುವಾದುದು ಎಂದು ಸಾರಿದ್ದಾನೆ. ಜೂನ್ 11ರ ಏಲಂನಲ್ಲಿ ಐನ್‍ಸ್ಟೀನ್ ರ ‘ನಾಸ್ತಿಕ' ಪತ್ರಗಳು ಎಷ್ಟು ಬೆಲೆಗೆ ಮಾರಾಟವಾಗುತ್ತದೋ ಏನೋ ಆದರೆ ಬೆಲೆ ಕಟ್ಟಲಾಗದ ಸಂದೇಶವೊಂದನ್ನು ಹರ್ಮನ್ ಸಿಂಗ್ ರವಾನಿಸಿದ್ದಾನೆ. ಮಾನವೀಯತೆಯೇ ಧರ್ಮ ಎಂದ ಆತನನ್ನು ಅಭಿನಂದಿಸೋಣ.

No comments:

Post a Comment