Tuesday 12 May 2015

ನಕಲಿ ಪ್ರಣಾಳಿಕೆಯನ್ನು ಬಹಿರಂಗಕ್ಕೆ ತಂದ ಬಿಜೆಪಿಯ ‘ರಾಮ’

   ಬಿಜೆಪಿ ಮತ್ತೆ ಮಾತು ಮರೆತಿದೆ. ಕಳೆದ ಲೋಕಸಭಾ ಚುನಾವಣೆಯ ವೇಳೆ ಅದು ಇತರ ಪಕ್ಷಗಳು ನೀಡದ ಕೆಲವು ವಿಶೇಷ ಭರವಸೆಗಳನ್ನು ಭಾರತೀಯರ ಮುಂದಿಟ್ಟಿತ್ತು. ಅದರಲ್ಲಿ ರಾಮ ಮಂದಿರ ನಿರ್ಮಾಣವೂ ಒಂದು. ಅದಕ್ಕೆಷ್ಟು ಒತ್ತು ನೀಡಲಾಗಿತ್ತೆಂದರೆ, ಪೂರ್ಣ ಬಹುಮತ ಸಿಕ್ಕರೆ ಅಧಿಕಾರಕ್ಕೇರಿದ ದಿನವೇ ಮಂದಿರ ನಿರ್ಮಾಣಕ್ಕಾಗಿ ಪ್ರಯತ್ನಿಸಲಾಗುತ್ತದೆ ಎಂಬಷ್ಟು. ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ 370ನೇ ವಿಧಿಯ ರದ್ಧತಿ, ಸಮಾನ ನಾಗರಿಕ ಸಂಹಿತೆ, ಗೋಹತ್ಯಾ ನಿಷೇಧ.. ಮುಂತಾದುವುಗಳಿಗೂ ಚುನಾವಣಾ ಪ್ರಣಾಳಿಕೆಯಲ್ಲಿ ವಿಶೇಷ ಒತ್ತು ನೀಡಲಾಗಿತ್ತು. ಆದರೆ ಇದೀಗ ‘ರಾಮಮಂದಿರ ನಿರ್ಮಾಣಕ್ಕೆ ಕಾನೂನು ರಚಿಸುವುದಿಲ್ಲ' ಎಂದು ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಇದಕ್ಕೆ, ‘ರಾಜ್ಯಸಭೆಯಲ್ಲಿ ಬಹುಮತವಿಲ್ಲ’ ಎಂಬುದನ್ನು ಕಾರಣವಾಗಿ ಕೊಟ್ಟಿದ್ದಾರೆ. ಅಲ್ಲದೇ, ಬಹುಮತ ಸಿಕ್ಕರೂ ಕಾನೂನು ರಚಿಸುವ ಬಗ್ಗೆ ಅವರು ಭರವಸೆ ಕೊಟ್ಟಿಲ್ಲ. ರಾಮಮಂದಿರ ನಿರ್ಮಾಣದ ವಿಷಯದಲ್ಲಿ ಒಂದು ಬಗೆಯ ನಿರಾಸಕ್ತಿ ಅವರ ಮಾತಿನಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ. ಅಷ್ಟಕ್ಕೂ, ರಾಜ್ಯಸಭೆಯಲ್ಲಿ ಬಹುಮತ ಇಲ್ಲದೆಯೂ ವಿವಾದಾತ್ಮಕ ಭೂ ಮಸೂದೆಯನ್ನು ಸುಗ್ರೀವಾಜ್ಞೆಯ ಮೂಲಕ ಜಾರಿಗೊಳಿಸಲು ಹೊರಟಿರುವ ಪಕ್ಷವೊಂದು ಅದೇ ರಾಜ್ಯಸಭೆಯನ್ನು ತೋರಿಸಿ ರಾಮಮಂದಿರ ನಿರ್ಮಾಣದ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುತ್ತಿರುವುದಕ್ಕೆ ಏನೆನ್ನಬೇಕು? ಭೂಮಸೂದೆಗೆ ವಿರೋಧ ಪಕ್ಷಗಳು ಬಿಡಿ, ಬಿಜೆಪಿ ಮಿತ್ರಕೂಟದಲ್ಲಿಯೇ ಅಪಸ್ವರ ಇದೆ. ಸಂಘಪರಿವಾರದ ಕಿಸಾನ್ ಮೋರ್ಚಾ ಆಕ್ಷೇಪ ವ್ಯಕ್ತಪಡಿಸಿದೆ. ಅಣ್ಣಾ ಹಜಾರೆಯಿಂದ ತೊಡಗಿ ಅನೇಕಾರು ರೈತ ಸಂಘಟನೆಗಳು, ಸಾಮಾಜಿಕ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಈ ಭೂ ಮಸೂದೆಯನ್ನು ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಬಿಜೆಪಿ ಪ್ರಸ್ತಾಪಿಸಿಯೂ ಇರಲಿಲ್ಲ. ಇಷ್ಟಿದ್ದೂ, ಈ ಭೂ ಮಸೂದೆಗಾಗಿ ಸುಗ್ರೀವಾಜ್ಞೆಯ ಮೊರೆ ಹೋಗುವ ಬಿಜೆಪಿಯು ರಾಮಮಂದಿರ ವಿಷಯದಲ್ಲಿ ಬಹುಮತದ ಕೊರತೆಯನ್ನು ತೋರಿಸುತ್ತಿರುವುದು ಎಷ್ಟು ಪ್ರಾಮಾಣಿಕ? ನಿಜವಾಗಿ, ಬಿಜೆಪಿಗೆ ವರ್ಚಸ್ಸು ಪ್ರಾಪ್ತವಾದದ್ದೇ ರಾಮಮಂದಿರ ಚಳವಳಿಯಿಂದ. ಪ್ರಧಾನಿ ವಿ.ಪಿ. ಸಿಂಗ್‍ರ ಮಂಡಲ್ ವರದಿಗೆ ವಿರುದ್ಧವಾಗಿ ಬಿಜೆಪಿ ಕಮಂಡಲ್ (ರಾಮಮಂದಿರ) ಅನ್ನು ಎತ್ತಿಕೊಂಡ ಬಳಿಕ ಈ ದೇಶದಲ್ಲಿ ಧಾರಾಳ ರಕ್ತ ಹರಿದಿದೆ. ಒಂದಂಕಿಯಲ್ಲಿದ್ದ ಬಿಜೆಪಿಯ ಲೋಕಸಭಾ ಸೀಟುಗಳು ನೂರನ್ನು ದಾಟಿವೆ. ಒಂದು ರೀತಿಯಲ್ಲಿ, ಬಿಜೆಪಿಯ ರಾಮಮಂದಿರ ಚಳವಳಿಯೇ ಭಾರತೀಯರನ್ನು ಹಿಂದೂ-ಮುಸ್ಲಿಮ್ ಆಗಿ ವಿಭಜಿಸಿದ್ದು. ಅದು ರಾಮಮಂದಿರ ನಿರ್ಮಾಣದ ಹೆಸರಲ್ಲಿ ಇಟ್ಟಿಗೆಯನ್ನು ಸಂಗ್ರಹಿಸಿತು. ದುಡ್ಡನ್ನು ಒಟ್ಟು ಸೇರಿಸಿತು. ಈ ದೇಶದ ಉದ್ದಗಲಕ್ಕೂ ಸಭೆ-ಸಮಾರಂಭಗಳನ್ನು ಏರ್ಪಡಿಸಿ ‘ನಾವು’ ಮತ್ತು ‘ಅವರು’ ಎಂಬ ಎರಡು ಪ್ರತಿಕೃತಿಗಳನ್ನು ರಚಿಸಿತು. ‘ನಾವು' ಸಂತ್ರಸ್ತರು ಮತ್ತು ‘ಅವರು' ಆಕ್ರಮಣಕೋರರು. ಈ ಆಕ್ರಮಣಕೋರರಿಂದ ಮಂದಿರವನ್ನು ಉಳಿಸಿಕೊಳ್ಳಬೇಕಾದ ಜವಾಬ್ದಾರಿಯನ್ನು ಬಿಜೆಪಿ ಹೊತ್ತುಕೊಂಡಿದೆ ಎಂಬ ಧಾಟಿಯಲ್ಲಿ ಅದು ಮಾತಾಡಿತು. ಹೀಗೆ ರಾಮಮಂದಿರದ ಹೆಸರಲ್ಲಿ ಒಂದು ಭಾವುಕ ಸನ್ನಿವೇಶವನ್ನು ನಿರ್ಮಾಣ ಮಾಡಲು 90ರ ದಶಕದಲ್ಲಿ ಬಿಜೆಪಿ ಯಶಸ್ವಿಯಾಗಿತ್ತು. ಅಂದಿನಿಂದ ಕಳೆದ ಲೋಕಸಭಾ ಚುನಾವಣೆಯ ವರೆಗೆ ಸನ್ನಿವೇಶದ ಆರ್ದ್ರತೆಯನ್ನು ಉಳಿಸಿಕೊಂಡು ಬರಲು ಬಿಜೆಪಿ ಉದ್ದಕ್ಕೂ ಪ್ರಯತ್ನಿಸಿದೆ. ವಾಜಪೇಯಿ ನೇತೃತ್ವದ ಸಮ್ಮಿಶ್ರ ಸರಕಾರ ರಚನೆಗೊಂಡಾಗಲೂ ಬಿಜೆಪಿಯ ‘ರಾಮ ಬದ್ಧತೆ' ಪ್ರಶ್ನೆಗೀಡಾಗಿದೆ. ಆದರೆ ಲೋಕಸಭೆಯಲ್ಲಿ ಪೂರ್ಣ ಬಹುಮತವಿಲ್ಲದಿರುವುದನ್ನು ಆಗ ಕಾರಣವಾಗಿ ಕೊಡಲಾಗಿತ್ತು. ಇದೀಗ ಪೂರ್ಣ ಬಹುಮತ ಲಭಿಸಿಯೂ ಬಿಜೆಪಿ ತನ್ನ ಭರವಸೆಯಿಂದ ನುಣುಚಿಕೊಳ್ಳಲು ಯತ್ನಿಸುತ್ತಿದೆ. ಇದಕ್ಕೆ ಏನೆನ್ನಬೇಕು? ಭೂ ಮಸೂದೆಯ ಮೇಲಿರುವ ಆಸಕ್ತಿಯ ಒಂದಂಶವಾದರೂ ರಾಮಮಂದಿರದ ಮೇಲಿಲ್ಲ ಎಂಬುದರ ಹೊರತು ಬೇರೆ ಯಾವ ಕಾರಣವನ್ನು ಇದಕ್ಕೆ ಕೊಡಬಹುದು?
 ನಿಜವಾಗಿ, ಬಿಜೆಪಿಯಲ್ಲಿ ಎರಡು ಪ್ರಣಾಳಿಕೆಗಳಿವೆ. ಒಂದು ಜನರಿಗೆ ತೋರಿಸಲು ಇರುವುದಾದರೆ ಇನ್ನೊಂದು ಜಾರಿಗೊಳಿಸಲು. ತೋರಿಸುವ ಪ್ರಣಾಳಿಕೆಯಲ್ಲಿ ಭಾವ ತೀವ್ರತೆಯಿರುತ್ತದೆ. ಆರ್ದ್ರರತೆಯಿರುತ್ತದೆ. ಧರ್ಮ, ಸಂಸ್ಕøತಿ, ಮಠ, ಮಂದಿರಗಳ ಬಗ್ಗೆ ಅಪಾರ ಮಿಡಿತಗಳಿರುತ್ತವೆ. ಹಿಂದೂ ಧರ್ಮ ಅಪಾಯದಲ್ಲಿದೆ ಎಂದು ವಾದಿಸುವುದು ಈ ಪ್ರಣಾಳಿಕೆಯೇ. ಮುಸ್ಲಿಮರ ಜನಸಂಖ್ಯೆಯ ಬಗ್ಗೆ, ತಲಾಕ್‍ನ ಬಗ್ಗೆ, ಬುರ್ಖಾ-ಬಹುಪತ್ನಿತ್ವದ ಬಗ್ಗೆ ಭೀತಿಕಾರಕ ಪದಗಳೊಂದಿಗೆ ವಿವರಿಸುವುದೂ ಈ ಪ್ರಣಾಳಿಕೆಯೇ. ಮುಸ್ಲಿಮ್ ‘ತುಷ್ಠೀಕರಣ’, ‘ಹಿಂದೂ ಸಂತ್ರಸ್ತರು’ ಎಂಬೆಲ್ಲ ಪದಗಳನ್ನು ಈ ಪ್ರಣಾಳಿಕೆಯಲ್ಲಿ ಧಾರಾಳ ಉಲ್ಲೇಖಿಸಲಾಗುತ್ತದೆ. ಲವ್ ಜಿಹಾದ್, ಮತಾಂತರ ಮುಂತಾದುವು ಈ ಪ್ರಣಾಳಿಕೆಯಲ್ಲಿ ಅನೇಕ ಬಾರಿ ಕಾಣಸಿಗುತ್ತದೆ. ರಾಮ ಮಂದಿರ, ಸೋಮನಾಥ ದೇವಾಲಯ, ಗೋಹತ್ಯೆ, 370ನೇ ವಿಧಿ ರದ್ಧತಿ.. ಮುಂತಾದುವುಗಳು ಈ ಪ್ರಣಾಳಿಕೆಯಲ್ಲಿನ ಖಾಯಂ ಸಂಗತಿಗಳು. ಆದರೆ ಇನ್ನೊಂದು ಪ್ರಣಾಳಿಕೆಯಲ್ಲಿ ಇವಾವುವೂ ಇರುವುದಿಲ್ಲ. ಅಲ್ಲಿರುವುದು ಕಾರ್ಪೋರೇಟ್, ಕಾರ್ಪೋರೇಟ್ ಮತ್ತು ಕಾರ್ಪೋರೇಟ್ ಮಾತ್ರ. ಆದ್ದರಿಂದಲೇ, ಭೂಸ್ವಾಧೀನ ಮಸೂದೆಗಾಗಿ ಸುಗ್ರೀವಾಜ್ಞೆಯನ್ನೂ ರಾಮಮಂದಿರಕ್ಕಾಗಿ ಬಹುಮತದ ಕೊರತೆಯನ್ನೂ ಅದು ತೋರಿಸುತ್ತಿರುವುದು. ರಾಮಮಂದಿರವೆಂಬುದು ನಕಲಿ ಪ್ರಣಾಳಿಕೆ. ಕಾರ್ಪೋರೇಟರ್‍ಗಳನ್ನು ಸಂತೃಪ್ತಿಪಡಿಸುವುದು ಅಸಲಿ ಪ್ರಣಾಳಿಕೆ. ಒಂದು ರೀತಿಯಲ್ಲಿ, ಬಿಜೆಪಿಗೂ ಕಾಂಗ್ರೆಸ್‍ಗೂ ಪ್ರಣಾಳಿಕೆಯ ವಿಷಯದಲ್ಲಿ ದೊಡ್ಡ ವ್ಯತ್ಯಾಸವೇನೂ ಇಲ್ಲ. ಎರಡೂ ಪಕ್ಷಕ್ಕೂ ಅಮೇರಿಕನ್ ಪ್ರಣೀತ ಅರ್ಥವ್ಯವಸ್ಥೆ ಇಷ್ಟ. ಬಂಡವಾಳಶಾಹಿ ಸಿದ್ಧಾಂತಕ್ಕೆ ಸಂಬಂಧಿಸಿ ಎರಡೂ ಪಕ್ಷಗಳಲ್ಲಿ ದೊಡ್ಡ ವ್ಯತ್ಯಾಸ ಏನಿಲ್ಲ. ಕಾರ್ಪೋರೇಟ್ ಕುಳಗಳನ್ನು ಓಲೈಸುವುದರಲ್ಲಿ ಕಾಂಗ್ರೆಸ್‍ಗಿಂತ ಬಿಜೆಪಿ ಒಂದು ಹೆಜ್ಜೆ ಮುಂದೇ ಇದೆ. ಬಂಡವಾಳ ಹೂಡಿಕೆ, ಮುಕ್ತ ಮಾರುಕಟ್ಟೆ, ವಿಮೆ, ರಕ್ಷಣೆ, ತೈಲ, ಬ್ಯಾಂಕಿಂಗ್ ಮುಂತಾದ ಕ್ಷೇತ್ರಗಳನ್ನೆಲ್ಲ ವಿದೇಶಿ ಹೂಡಿಕೆಗೆ ತೆರೆದಿಡುವಲ್ಲಿ ಬಿಜೆಪಿಯಲ್ಲಿರುವ ಉಮೇದು ಕಾಂಗ್ರೆಸ್‍ಗಿಂತ ಹೆಚ್ಚೇ ಇದೆ. ವ್ಯತ್ಯಾಸ ಏನೆಂದರೆ, ಜನರಿಗೆ ತೋರಿಸುವುದಕ್ಕೆಂದೇ ಕಾಂಗ್ರೆಸ್ ಪಕ್ಷವು ಪ್ರತ್ಯೇಕ ಪ್ರಣಾಳಿಕೆಯನ್ನು ಸಿದ್ಧಪಡಿಸುವುದಿಲ್ಲ. ಹಾಗಂತ, ಇಂಥ ನಕಲಿ ಪ್ರಣಾಳಿಕೆಯ ಅಗತ್ಯ ಅದರ ಪಾಲಿಗೆ ಬಂದಿಲ್ಲ ಎಂದಲ್ಲ. ಸೈದ್ಧಾಂತಿಕ ಸಂಘರ್ಷ ಮತ್ತು ಒಂದು ಬಗೆಯ ಅಂಜಿಕೆ ಹಾಗೆ ಮಾಡುವುದರಿಂದ ಅದನ್ನು ತಡೆ ಹಿಡಿದಿದೆ. ಆದರೂ ಅನೇಕ ಬಾರಿ ಅದು ಬಿಜೆಪಿಯ ನಕಲಿ ಪ್ರಣಾಳಿಕೆಯಂತೆ ಕಾರ್ಯಾಚರಿಸಿದೆ. ಬಿಜೆಪಿಗಿಂತಲೂ ತೀವ್ರವಾಗಿ ನಕಲಿ ಪ್ರಣಾಳಿಕೆಯ ಮೇಲೆ ಬದ್ಧತೆ ವ್ಯಕ್ತಪಡಿಸಿದೆ. ಆದರೂ ಬಿಜೆಪಿ ಮತ್ತು ಕಾಂಗ್ರೆಸನ್ನು ಮುಖಾಮುಖಿಗೊಳಿಸಿದರೆ ನಕಲಿ ಪ್ರಣಾಳಿಕೆಯನ್ನು ಪರಿಣಾಮಕಾರಿಯಾಗಿ ಜನರಿಗೆ ತಲುಪಿಸಿದ ಶ್ರೇಯಸ್ಸು ಬಿಜೆಪಿಗೇ ಸಲ್ಲುತ್ತದೆ.
 ಏನೇ ಆಗಲಿ, ರಾಮಮಂದಿರ ನಿರ್ಮಾಣದ ಹೊಣೆಗಾರಿಕೆಯಿಂದ ಹಿಂಜರಿಯುವ ಮೂಲಕ ರಾಮಮಂದಿರವು ಜನರನ್ನು ಭಾವನಾತ್ಮಕವಾಗಿ ಒಗ್ಗೂಡಿಸುವುದಕ್ಕಿರುವ ಒಂದು ಅಸ್ತ್ರ ಮಾತ್ರ ಎಂಬುದನ್ನು ಮೋದಿ ಸರಕಾರವು ಪರೋಕ್ಷವಾಗಿ ಜನರ ಮುಂದೆ ಒಪ್ಪಿಕೊಂಡಂತಾಗಿದೆ. ರಾಮಮಂದಿರವನ್ನು ನಿರ್ಮಿಸುವ ಮೂಲಕ ಈ ಅಸ್ತ್ರವನ್ನು ಕಳಕೊಳ್ಳಲು ಅದು ಸಿದ್ಧವಿಲ್ಲ. ರಾಜನಾಥ್ ಸಿಂಗ್‍ರ ಮಾತು ಇದನ್ನೇ ಸೂಚಿಸುತ್ತದೆ.

No comments:

Post a Comment