Wednesday 27 May 2015

ಮುಕುಂದ್, ಓಂಕಾರ್‍ರ ಸಂಖ್ಯೆ ಅಸಂಖ್ಯವಾಗಲಿ...

ಝೀಶಾನ್ ಅಲಿ ಖಾನ್
    ಕೋಮುವಾದಿ ಸಿದ್ಧಾಂತವನ್ನು ಎದೆಯೊಳಗಿಟ್ಟುಕೊಂಡು ಬದುಕುತ್ತಿರುವ ಸರ್ವರನ್ನೂ ಓಂಕಾರ್ ಬಾನ್‍ಸೋಡೆ ಮತ್ತು ಮುಕುಂದ್ ಪಾಂಡೆ ಎಂಬಿಬ್ಬರು ಯುವಕರು ತರಾಟೆಗೆ ಎತ್ತಿಕೊಂಡಿದ್ದಾರೆ. ಅಂಥವರ ಆತ್ಮಸಾಕ್ಷಿಗೆ ತಮ್ಮ ಮನುಷ್ಯ ಪ್ರೇಮಿ ನಡೆಯ ಮೂಲಕ ಬಲವಾಗಿ ಚುಚ್ಚಿದ್ದಾರೆ. ಘಟನೆ ನಡೆದಿರುವುದು ಕಳೆದ ವಾರ. ವಜ್ರವನ್ನು ರಫ್ತು ಮಾಡುವ ಹರೇಕೃಷ್ಣ ಎಕ್ಸ್ ಪೋರ್ಟ್ (HKE) ಎಂಬ ಪ್ರಭಾವಿ ಕಂಪೆನಿಗೆ ಝೀಶಾನ್ ಅಲಿ ಖಾನ್ ಎಂಬ ಮುಂಬೈಯ ಎಂಬಿಎ ಪದವೀಧರ ಯುವಕ ಉದ್ಯೋಗಕ್ಕಾಗಿ ಅರ್ಜಿ ಹಾಕಿದ್ದ. ಆತನ ಅರ್ಜಿ ತಿರಸ್ಕೃತಗೊಂಡ ಬಗ್ಗೆ ಕಳೆದ ವಾರ ಕಂಪೆನಿಯಿಂದ  ಇಮೇಲ್ ಬರುತ್ತದೆ. ‘ಮುಸ್ಲಿಮರನ್ನು ಕಂಪೆನಿ ಪರಿಗಣಿಸುವುದಿಲ್ಲ' ಎಂಬುದನ್ನು ಅದಕ್ಕೆ ಕಾರಣವಾಗಿ ಉಲ್ಲೇಖಿಸುತ್ತದೆ. ಈ ಇಮೇಲ್ ಅನ್ನು ಝೀಶನ್ ತನ್ನ ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡುತ್ತಾನೆ. ವಿಶೇಷ ಏನೆಂದರೆ, ಈತನ ಜೊತೆಯಲ್ಲೇ ಓಂಕಾರ್ ಮತ್ತು ಮುಕುಂದ್‍ರು ಈ ಕಂಪೆನಿಗೆ ಅರ್ಜಿ ಹಾಕಿದ್ದರು. ಆ ಪ್ರಕಾರ ಅವರಿಗೆ ಇಂಟರ್‍ವ್ಯೂವ್‍ಗಾಗಿ ಕರೆ ಬಂದಿತ್ತು. ಉದ್ಯೋಗಿಯಾಗಿ ನೇಮಕಗೊಳ್ಳುವುದಕ್ಕೆ ಬೇಕಾದ ಆರಂಭಿಕ ಪರೀಕ್ಷೆಗಳಲ್ಲೂ ಅವರು ಉತ್ತೀರ್ಣರಾಗಿದ್ದರು. ಆದರೆ ಝೀಶನ್ ಅಲಿಯ ಪ್ರಕರಣ ಅವರ ಗಮನಕ್ಕೆ ಬಂದದ್ದೇ ತಡ ಅವರು ಕಂಪೆನಿಯ ಉದ್ಯೋಗದ ಆಫರ್ ಅನ್ನೇ ತಿರಸ್ಕರಿಸಿದರು. ಝೀಶನ್ ಅಲಿಯ ಮೇಲಾದ ಪಕ್ಷಪಾತವನ್ನು ಅವರು ಬಹಿರಂಗವಾಗಿಯೇ ಖಂಡಿಸಿದರು. ಅಲ್ಲದೇ ಮುಂಬೈಯಲ್ಲಿರುವ ಕಂಪೆನಿಯ ಕಚೇರಿಗೆ ಭೇಟಿ ಕೊಟ್ಟು ಅಲ್ಲಿನ ವಾತಾವರಣವನ್ನು ಅರಿತುಕೊಳ್ಳಲು ಪ್ರಯತ್ನಿಸಿದರು. ಹಿಂದೂಗಳಿಗೆ ಮಾತ್ರ ಪ್ರಾಶಸ್ತ್ಯ ಇರುವ ಮತ್ತು ಸಸ್ಯಾಹಾರದ ಪರ ಕಟ್ಟುನಿಟ್ಟಿನ ನಿಯಮಗಳಿರುವ ಕಂಪೆನಿಯ ಬಗ್ಗೆ ಅವರು ತಮ್ಮ ತೀವ್ರ ಅಸಹನೆಯನ್ನು ವ್ಯಕ್ತಪಡಿಸಿದರು. ನಿಜವಾಗಿ, ಓಂಕಾರ್ ಮತ್ತು ಮುಕುಂದ್ ಕಳೆದ ವಾರದ ಹೀರೋಗಳು. ಮಾನವ ಪ್ರೇಮದ ಬಗ್ಗೆ ಅವರಿಗಿರುವ ಖಚಿತ ವಿಶ್ವಾಸಕ್ಕಾಗಿ ನಾವು ಅವರನ್ನು ಮನಃಪೂರ್ವಕ ಅಭಿನಂದಿಸಬೇಕಾಗಿದೆ.
 ಇವತ್ತಿನ ಸುದ್ದಿಗಳ ಮಾರುಕಟ್ಟೆಯಲ್ಲಿ ನಕಾರಾತ್ಮಕ ಸುದ್ದಿಗಳಿಗೆ ಬಹುಬೇಡಿಕೆಯಿದೆ. ಮಾನಭಂಗ- ಬ್ರೇಕಿಂಗ್ ನ್ಯೂಸ್. ದರೋಡೆ- ಮುಖಪುಟದ ಸುದ್ದಿ. ಕೊಲೆ, ಅತ್ಯಾಚಾರ, ಕ್ರೌರ್ಯಗಳೆಲ್ಲ ವಾರಗಟ್ಟಲೆ ಚರ್ಚಿಸಬಹುದಾದ ಸುದ್ದಿಗಳು. ಹಾಗಂತ ಇವು ಪ್ರಮುಖ ಸುದ್ದಿಗಳಲ್ಲ ಎಂದು ಅರ್ಥವಲ್ಲ. ಆದರೆ ಈ ಸುದ್ದಿಗಳ ನಡುವೆಯೇ ನೂರಾರು ಓಂಕಾರ್‍ಗಳು, ಮುಕುಂದ್‍ರು ಬದುಕುತ್ತಿರುತ್ತಾರೆ. ಅವರು ಮಾನಭಂಗವನ್ನು ಪ್ರಶ್ನಿಸಿರುತ್ತಾರೆ. ಅತ್ಯಾಚಾರವನ್ನು ತಡೆದಿರುತ್ತಾರೆ. ಹತ್ಯಾಕಾಂಡ, ಕ್ರೌರ್ಯಗಳ ವಿರುದ್ಧ ಪ್ರಾಣದ ಹಂಗು ತೊರೆದು ಪ್ರತಿಭಟಿಸಿರುತ್ತಾರೆ. ಆದರೆ ನಕಾರಾತ್ಮಕ ಸುದ್ದಿಗಳ ಮೇಲಿರುವ ನಮ್ಮ ಒಲವು ಅನೇಕ ಬಾರಿ ಇಂಥವರು ಹೀರೋ ಆಗುವುದನ್ನು ತಪ್ಪಿಸಿಬಿಡುತ್ತದೆ. ಈ ದೇಶದಲ್ಲಿ ಕೋಮುಗಲಭೆಗಳು, ಹತ್ಯಾಕಾಂಡಗಳಷ್ಟೇ ನಡೆದಿರುವುದಲ್ಲ. ಅಂಥ ಸಂದರ್ಭದಲ್ಲಿ ಮಾನವೀಯತೆಯ ಅಸಂಖ್ಯ ಘಟನೆಗಳೂ ನಡೆಯುತ್ತಿರುತ್ತವೆ. ಮುಸ್ಲಿಮರನ್ನು ತನ್ನ ಮನೆಯೊಳಗೆ ಕೂರಿಸಿ ರಕ್ಷಿಸಿದ ಹಿಂದೂಗಳಿದ್ದಾರೆ. ಹಿಂದೂಗಳನ್ನು ರಕ್ಷಿಸಿದ ಮುಸ್ಲಿಮರಿದ್ದಾರೆ. ಮುಸ್ಲಿಮರ ಮನೆಗೆ ನೀರು ಒದಗಿಸುವ ಹಿಂದೂ, ಹಿಂದೂಗಳನ್ನು ಮನೆಯ ಸದಸ್ಯರಂತೆ ಪ್ರೀತಿಸುವ ಮುಸ್ಲಿಮ್ ಈ ಸಮಾಜದಲ್ಲಿ ಇವತ್ತೂ ಬದುಕುತ್ತಿದ್ದಾರೆ. ಅವರು ಪರಸ್ಪರ ಮದುವೆ, ಮುಂಜಿ, ಹಬ್ಬಗಳನ್ನು ಹಿಂದೂ-ಮುಸ್ಲಿಮ್ ವಿಭಜನೆಯಿಲ್ಲದೇ ಆಚರಿಸುತ್ತಾರೆ, ಅನುಭವಿಸುತ್ತಾರೆ. ಅವರ ಮೇಲೆ ಮನುಷ್ಯ ವಿರೋಧಿ ಪ್ರಚಾರಗಳು ಪ್ರಭಾವ ಬೀರಿಲ್ಲ. ‘ಲವ್ ಜಿಹಾದ್', ‘ಘರ್ ವಾಪ್‍ಸಿ', ‘ಟೆರರಿಸಂಗಳು ಅವರ ಅನ್ಯೋನ್ಯತೆಯನ್ನು ಕಡಿದು ಬಿಡಲು ಯಶಸ್ವಿಯಾಗಿಲ್ಲ. ನಿಜವಾಗಿ, ಇಂಥ ಮಾನವೀಯ ಘಟನೆಗಳು ಸಮಾಜದ ಮುಂದೆ ಮತ್ತೆ ಮತ್ತೆ ಬರಬೇಕು. ಅವು ಚರ್ಚೆಗೆ ಒಳಪಡಬೇಕು. ಇಂಥವುಗಳಿಗೆ ಹೆಚ್ಚೆಚ್ಚು ಪ್ರಾಮುಖ್ಯತೆ ಲಭಿಸಿದಂತೆಯೇ ಹರೇ ಕೃಷ್ಣ ಎಕ್ಸ್ ಪೋರ್ಟ್ ನಂಥ ಕಂಪೆನಿಗಳು ಮುಜುಗರಕ್ಕೆ ಒಳಗಾಗುತ್ತಲೇ ಹೋಗುತ್ತವೆ. ಅಷ್ಟಕ್ಕೂ, ಮನುಷ್ಯ ವಿರೋಧಿಯಾದ ಕಂಪೆನಿಯನ್ನೋ ವ್ಯಕ್ತಿಯನ್ನೋ ಮುಖ ಮುಚ್ಚಿ ಬದುಕುವಂತೆ ಮಾಡುವುದಕ್ಕೆ ನಾವು ಪ್ರತಿಭಟನೆಯೊಂದನ್ನೇ ಆಶ್ರಯಿಸಿಕೊಳ್ಳಬೇಕಿಲ್ಲ. ಇಂಥ ಮನುಷ್ಯ ಪ್ರೇಮಿ ಮುಖಗಳನ್ನು ಸಾರ್ವಜನಿಕವಾಗಿ ಚರ್ಚೆಗೆ ಒಳಪಡಿಸಿಬಿಟ್ಟರೂ ಸಾಕಾಗುತ್ತದೆ.
 ಅಂದಹಾಗೆ, ಝೀಶನ್ ಅಲಿ ಒಂಟಿಯಲ್ಲ. ಆತನಂತೆ ಧರ್ಮದ ಕಾರಣಕ್ಕಾಗಿ ತಿರಸ್ಕೃತಗೊಂಡವರ ದೊಡ್ಡದೊಂದು ಪಟ್ಟಿಯೇ ಈ ದೇಶದಲ್ಲಿದೆ. ಅವರಲ್ಲಿ ಪ್ರತಿಭೆಯಿದೆ, ಶೈಕ್ಷಣಿಕ ಅರ್ಹತೆಯಿದೆ, ದೈಹಿಕವಾದ ಸಾಮರ್ಥ್ಯವೂ ಇದೆ. ಆದರೂ ಅವರು ಸಮಾಜದ ಮುಖ್ಯ ವಾಹಿನಿಯಿಂದ ಆಗಾಗ ತಿರಸ್ಕೃತಗೊಳ್ಳುತ್ತಲೇ ಇರುತ್ತಾರೆ. ಹರೇಕೃಷ್ಣ ಎಕ್ಸ್ ಪೋರ್ಟ್ ಕಂಪೆನಿಯೇನೋ ತನ್ನ ಮನುಷ್ಯ ವಿರೋಧಿ ರೋಗವನ್ನು ಇಮೇಲ್ ಮೂಲಕ ಬಹಿರಂಗವಾಗಿಯೇ ಹೇಳಿಕೊಂಡಿತು. ಆದರೆ ಹೆಚ್ಚಿನೆಲ್ಲ ಸಂಸ್ಥೆಗಳು ಹೀಗೆ ಹೇಳಿಕೊಳ್ಳುವುದಿಲ್ಲ. ಅವು ರೋಗವನ್ನು ಒಳಗೊಳಗೇ ಬಚ್ಚಿಟ್ಟುಕೊಂಡು ಹೊರಗಡೆ ಮನುಷ್ಯ ಪ್ರೇಮದ ಮುಖವಾಡವನ್ನು ಹಾಕಿಕೊಂಡಿರುತ್ತವೆ. ತಮಗೆ ಬಂದ ಅರ್ಜಿಯನ್ನು ದಲಿತರು, ಶೂದ್ರರು, ಮಾದಿಗರು, ಮುಸ್ಲಿಮರು, ಕ್ರೈಸ್ತರು, ಬ್ರಾಹ್ಮಣರು.. ಎಂದು ವಿಭಜಿಸುತ್ತಾ ಪ್ರತಿಭೆಯನ್ನು ಹುಟ್ಟಿನ ಆಧಾರದಲ್ಲಿ ಅವು ವಿಂಗಡಿಸಿಬಿಡುತ್ತವೆ. ನಿಜವಾಗಿ, ಒಂದು ಸಮಾಜದ ಆಲೋಚನಾ ಕ್ರಮವನ್ನೇ ಬದಲಿಸಿಬಿಡಲು ಪ್ರಚೋದನೆ ನೀಡಬಹುದಾದ ಅಪಾಯಕಾರಿ ವರ್ತನೆಗಳಿವು. ಅನೇಕ ಬಾರಿ ಇಂಥ ಪಕ್ಷಪಾತಿ ನಿಲುವುಗಳೇ ವ್ಯಕ್ತಿಯನ್ನು ಕೋಮುವಾದಿಯನ್ನಾಗಿ ಮಾಡಿಬಿಡುತ್ತದೆ. ಉಗ್ರ ಚಿಂತನೆಯೆಡೆಗೆ ದೂಡಿ ಬಿಡುತ್ತದೆ. ದುರಂತ ಏನೆಂದರೆ, ಹೊರನೋಟಕ್ಕೆ ಇಂಥ ಸಂಸ್ಥೆಗಳ ನಿಲುವುಗಳು ಗೋಚರಕ್ಕೆ ಬರುವುದಿಲ್ಲವಾದ್ದರಿಂದ ವ್ಯಕ್ತಿಯ ಕೋಮುವಾದಕ್ಕಾಗಿ ನಾವು ಆತನ ಧರ್ಮವನ್ನು ಹೊಣೆ ಮಾಡುತ್ತೇವೆ. ಆತನ ಉಗ್ರ ಚಿಂತನೆಗೆ ಆತನ ಧರ್ಮದ ವಿಚಾರಧಾರೆಗಳೇ ಕಾರಣ ಅನ್ನುತ್ತೇವೆ. ಆದರೆ ಇವರನ್ನು ಉತ್ಪಾದಿಸುವ ಹರೇಕೃಷ್ಣ ಎಕ್ಸ್ ಪೋರ್ಟ್‍ನಂಥ ಕಂಪೆನಿಗಳು ಯಾವ ಸಂದರ್ಭದಲ್ಲೂ ಕಾನೂನಿನ ವ್ಯಾಪ್ತಿಯೊಳಗೇ ನಿಲ್ಲುವುದೇ ಇಲ್ಲ. ಅವು ಸಮಾಜಕ್ಕೆ ಮತ್ತೆ ಮತ್ತೆ
ಕಂಪೆನಿಯಿಂದ ಬಂದ  ಇಮೇಲ್
ಕೋಮುವಾದಿಗಳನ್ನೋ ಟಿರರಿಸ್ಟ್ ಗಳನ್ನೋ ಉತ್ಪಾದಿಸಿ ಬಿಡುಗಡೆ ಮಾಡುತ್ತಲೇ ಇರುತ್ತವೆ. ನಾವು ಮುಕುಂದ್ ಮತ್ತು ಓಂಕಾರ್‍ರನ್ನು ಅಭಿನಂದಿಸಬೇಕಾದದ್ದು ಈ ಬಹುಮುಖ್ಯ  ಕಾರಣಕ್ಕಾಗಿ. ಅವರು ಈ ಪಕ್ಷಪಾತಿ ಮನೋಭಾವವನ್ನು ಪ್ರಶ್ನಿಸಿದ್ದಾರೆ. ಹಾಗಂತ, ಅವರು ಪ್ರಶ್ನಿಸಲೇಬೇಕಾದ ಅಗತ್ಯವೇನೂ ಇರಲಿಲ್ಲ. ತಮಗೆ ಸಿಕ್ಕ ಉದ್ಯೋಗವನ್ನು ಅನುಭವಿಸಿಕೊಂಡು ಸುಮ್ಮನಿರಬಹುದಾದ ಎಲ್ಲ ಅವಕಾಶಗಳೂ ಅವರಿಗಿದ್ದುವು. ಝೀಶನ್ ಅಲಿ ಅವರ ಧರ್ಮದವನಲ್ಲ. ಓರಗೆಯವನೂ ಅಲ್ಲ. ಆದರೆ ಆ ಯುವಕರಿಬ್ಬರು ನಿಜವಾದ ಹಿಂದೂಗಳಾಗಿದ್ದರು. ನಿಜವಾದ ಹಿಂದೂವೊಬ್ಬ ಕೋಮುವಾದಿ, ಪಕ್ಷಪಾತಿಯಾಗುವುದಕ್ಕೆ ಸಾಧ್ಯವಿಲ್ಲ ಎಂಬುದಾಗಿ ತೋರಿಸಿಕೊಟ್ಟರು. ಇದು ಅತ್ಯಂತ ಶ್ಲಾಘನೀಯ ಮತ್ತು ಅನುಕರಣೀಯ. ಸಮಾಜವನ್ನು ನಕಾರಾತ್ಮಕ ಮತ್ತು ಕೋಮುವಾದಿ ಚಿಂತನೆಗಳಿಂದ ಹೊರತರಬೇಕಾದರೆ ಇಂಥ ಮನುಷ್ಯ ಪ್ರೇಮದ ಘಟನೆಗಳು ಹೆಚ್ಚೆಚ್ಚು ನಡೆಯಬೇಕು ಮತ್ತು ಅವುಗಳಿಗೆ ಪ್ರಚಾರ ಸಿಗಬೇಕು. ಮುಕುಂದ್ ಮತ್ತು ಓಂಕಾರ್ ಈ ಸಮಾಜದ ಭರವಸೆಗಳು. ಅವರ ಬೆಲೆ ಹರೇಕೃಷ್ಣ ಎಕ್ಸ್ ಪೋರ್ಟ್ ಸಂಸ್ಥೆಯ ವಜ್ರಕ್ಕಿಂತ ಮಿಗಿಲಾದುದು. ಇಂಥವರ ಸಂಖ್ಯೆ ಅಸಂಖ್ಯವಾಗಲಿ ಎಂದು ಹಾರೈಸೋಣ. ಅವರ ಧೈರ್ಯದ ನಿಲುವಿಗಾಗಿ ಅಭಿನಂದಿಸೋಣ.

.

No comments:

Post a Comment