
ಯಾಕೂಬ್ ಮೇಮನ್‍ನು ಜೈಲಿನಲ್ಲಿ ಪವಿತ್ರ ಕುರ್‍ಆನನ್ನು ಇಂಗ್ಲಿಷ್‍ಗೆ ಅನುವಾದಿಸಿದ್ದ, ಆತನಿಗೆ ಮರಣದಂಡನೆ ವಿಧಿಸದಂತೆ ಒತ್ತಾಯಿಸಿ ಆತನಿರುವ ನಾಗ್ಪುರ ಜೈಲಿನ ಇತರ ಕೈದಿಗಳು ಒಂದು ದಿನದ ಉಪವಾಸ ಆಚರಿಸಿ ರಾಷ್ಟ್ರಪತಿಗಳಿಗೆ ಪತ್ರ ಬರೆದಿದ್ದರು, ಜೈಲಿನಲ್ಲಿ ಆತನ ನಡವಳಿಕೆ ಅತ್ಯುತ್ತಮವಾಗಿತ್ತು, ಕಳೆದ ವರ್ಷ ನಕ್ಸಲೀಯ ನಂಟಿನ ಆರೋಪದಲ್ಲಿ ಬಂಧನಕ್ಕೀಡಾಗಿದ್ದ ಉಪನ್ಯಾಸಕ ಸಾಯಿಬಾಬರಿಗೆ ಆತ ಉರ್ದು ಕಲಿಸಿದ್ದ.. ಮುಂತಾದುವುಗಳೆಲ್ಲ ಯಾಕೂಬ್‍ನನ್ನು ನಿರಪರಾಧಿಯೆಂದು ಸಾಬೀತುಪಡಿಸುವುದಿಲ್ಲ, ನಿಜ. ಆದರೂ ಯಾಕೂಬ್ ಮೇಮನನ್ನು ಗಲ್ಲಿಗೇರಿಸಲು ನಮ್ಮ ವ್ಯವಸ್ಥೆ ತೋರುವ ಅವಸರವನ್ನು ನೋಡುವಾಗ ಹೀಗೇಕೆ ಎಂಬ ಪ್ರಶ್ನೆ ಸಹಜವಾಗಿಯೇ ಕಾಡುತ್ತದೆ. ಯಾಕೂಬ್ ಶರಣಾಗತನಾದದ್ದು 1994ರಲ್ಲಿ. ಆದರೆ ಇದಕ್ಕಿಂತ 5 ವರ್ಷಗಳ ಮೊದಲೇ ರಾಜೀವ್ ಗಾಂಧಿಯನ್ನು ಹತ್ಯೆ ಮಾಡಲಾಗಿದೆ. ಪಂಜಾಬ್‍ನ ಮುಖ್ಯಮಂತ್ರಿಯಾಗಿದ್ದ ಬಿಯಂತ್ ಸಿಂಗ್‍ರನ್ನು ಕೊಲ್ಲಲಾಗಿದೆ. ಪಂಜಾಬ್‍ನ ಖಾಲಿಸ್ತಾನ್ ಹೋರಾಟವೂ ತುಂಬಾ ಹಳೆಯದು. ಆದರೆ ಈ ಭಯೋತ್ಪಾದನಾ ಕೃತ್ಯಗಳಲ್ಲಿ ಭಾಗಿಯಾದವರಿಗೆ ವಿಧಿಸಲಾಗಿರುವ ಮರಣದಂಡನೆಯನ್ನು ನಮ್ಮ ವ್ಯವಸ್ಥೆ ಈವರೆಗೂ ಜಾರಿಗೊಳಿಸಿಲ್ಲ. ರಾಷ್ಟ್ರಪತಿಯವರಿಂದ ಕ್ಷಮಾದಾನದ ಅರ್ಜಿಯು ತಿರಸ್ಕರಿಸಲ್ಪಟ್ಟ ಬಳಿಕವೂ ಅವರ ಸಹಿತ ಸುಮಾರು 25 ಮಂದಿ ಕೈದಿಗಳು ಇನ್ನೂ ಜೀವಂತವಾಗಿಯೇ ಇದ್ದಾರೆ. ಹೀಗಿರುವಾಗ ಸರದಿಯನ್ನು ತಪ್ಪಿಸಿ ಹಿಂದಿನವರನ್ನು ಹಾಗೆಯೇ ಉಳಿಸಿಕೊಂಡು ಈತನನ್ನು ಗಲ್ಲಿಗೆ ಕೊಡುವ ಆಸಕ್ತಿಯನ್ನು ಮಹಾರಾಷ್ಟ್ರದ ಸರಕಾರ ತೋರಲು ಏನು ಕಾರಣ? ಇತರ ಪ್ರಕರಣಗಳಲ್ಲಿ ಇಲ್ಲದ ಅವಸರವೊಂದು ಈ ಪ್ರಕರಣದಲ್ಲಿ ದಿಢೀರ್ ಆಗಿ ಕಾಣಿಸಿಕೊಂಡಿರುವುದೇಕೆ? ಗಲ್ಲಿಗೇರಿಸುವುದನ್ನು ತಡ ಮಾಡಿದರೆ ಯಾಕೂಬ್‍ನಿಗೆ ಮುಂದೊಂದು ದಿನ ಕ್ಷಮಾದಾನ ಸಿಗಬಹುದೆಂಬ ಲೆಕ್ಕಾಚಾರವೊಂದು ಇದರ ಹಿಂದಿರಬಹುದೇ? ರಾಜಕೀಯ ನಾಯಕರ ವೈಯಕ್ತಿಕ ಹಿತಾಸಕ್ತಿಗಳು ಈ ಗಲ್ಲು ಪ್ರಕರಣದಲ್ಲಿ ಪಾತ್ರ ವಹಿಸಿವೆಯೇ? ಅಪರಾಧಿಗಳಿಗೆ ಧರ್ಮವಿಲ್ಲ ಎಂದು ಎಷ್ಟೇ ವಾದಿಸಿದರೂ ಮತ್ತು ಅಪರಾಧಕ್ಕೆ ಧರ್ಮವನ್ನು ಜೋಡಿಸುವುದನ್ನು ನಾವೆಷ್ಟೇ ಬಲವಾಗಿ ಖಂಡಿಸಿದರೂ ನಮ್ಮನ್ನಾಳುವವರ ನಡವಳಿಕೆಗಳು ನಮ್ಮ ಅಂತರಾತ್ಮವನ್ನು ಚುಚ್ಚುತ್ತಲೇ ಇವೆ.
ಸಾವಿರಾರು ಮಂದಿಯ ಸಾವಿಗೆ ಕಾರಣವಾದ ಕೋಮುಗಲಭೆಗಳ ರೂವಾರಿಗಳು ಈ ದೇಶದಲ್ಲಿ ಈ ವರೆಗೂ ನೇಣುಗಂಭದ ಹತ್ತಿರವೂ ಸುಳಿದಿಲ್ಲ. ಗುಜರಾತ್‍ನ ನರೋಡಾ ಪಾಟಿಯಾದಲ್ಲಿ 97 ಮಂದಿಯ ಹತ್ಯೆಗೆ ನೇತೃತ್ವ ನೀಡಿದ್ದ ಮಾಯಾ ಕೊಡ್ನಾನಿಯ ಮರಣ ದಂಡನೆಯು ಜೀವಾವಧಿಯಾಗಿ ಪರಿವರ್ತನೆಯಾಗಿದೆ. ಮುಂಬೈ ಬಾಂಬ್ ಸ್ಫೋಟಕ್ಕಿಂತ ಮೊದಲು ನಡೆದ ಮುಂಬೈ ಕೋಮು ಗಲಭೆಯಲ್ಲಿ ಸಾವಿರಕ್ಕಿಂತ ಅಧಿಕ ಮಂದಿ ಸಾವಿಗೀಡಾಗಿದ್ದರು. ಈ ಗಲಭೆಯಲ್ಲಿ ಶಿವಸೇನೆ ಮತ್ತು ಬಿಜೆಪಿಯು ಪ್ರಮುಖ ಪಾತ್ರ ವಹಿಸಿದ್ದನ್ನು ಶ್ರೀ ಕೃಷ್ಣ ಆಯೋಗ ವಿವರವಾಗಿ ಹೇಳಿತ್ತು. ಆದರೆ ಶಿವಸೇನೆಯ ನಾಯಕ ಮಧುಕರ್ ಸರ್‍ಪೋತೆದಾರ್‍ರಿಗೆ ಕೆಳ ನ್ಯಾಯಾಲಯವು ಜುಜುಬಿ ಒಂದು ವರ್ಷದ ಶಿಕ್ಷೆ ಘೋಷಿಸಿದ್ದನ್ನು ಬಿಟ್ಟರೆ ಇನ್ನಾರೂ ಶಿಕ್ಷೆಯ ಹತ್ತಿರವೇ ಸುಳಿಯಲಿಲ್ಲ. ಅಲ್ಲದೇ ಮಧುಕರ್‍ರನ್ನು ಒಂದು ದಿನದ ಮಟ್ಟಿಗಾದರೂ ಜೈಲಿಗೆ ಕಳುಹಿಸಲು ನಮ್ಮ ವ್ಯವಸ್ಥೆಗೆ ಸಾಧ್ಯವಾಗಲಿಲ್ಲ. ಅವರು ಮೇಲಿನ ಕೋರ್ಟಿಗೆ ಹೋದರು. ತೀರ್ಪು ಬರುವುದಕ್ಕಿಂತ ಮೊದಲೇ ಅವರು ಮೃತಪಟ್ಟರು. ಇದರ ಜೊತೆಗೇ, ಮಾಲೆಗಾಂವ್, ಸಮ್ಜೋತಾ, ಅಜ್ಮೀರ್ ಸ್ಫೋಟಗಳ ಕುರಿತಾದ ನಿಧಾನಗತಿಯ ತನಿಖೆಯನ್ನು ಇಟ್ಟು ನೋಡುವಾಗ ಯಾಕೂಬ್ ಮೇಮನ್ ಪ್ರಕರಣದಲ್ಲಿ ಸರಕಾರ ತೋರಿದ ಅವಸರವು ಅನುಮಾನಕ್ಕೆ ಎಡೆ ಮಾಡಿಕೊಡುತ್ತದೆ. ಯಾಕೂಬ್ ಅಪರಾಧಿಯೇ ಆಗಿರಬಹುದು. ಆದರೂ ಭಾರತೀಯ ನ್ಯಾಯ ವ್ಯವಸ್ಥೆಯಲ್ಲಿ ವಿಶ್ವಾಸ ವ್ಯಕ್ತಪಡಿಸಿ ಆತ ಭಾರತಕ್ಕೆ ಶರಣಾಗಿದ್ದ. ಆತನ ವಿಷಯದಲ್ಲಿ ನ್ಯಾಯಾಲಯದ ನಿಲುವು ಕಠಿಣವಾಯಿತೆಂಬ ಅಭಿಪ್ರಾಯವು ಪ್ರಮುಖ ನ್ಯಾಯತಜ್ಞರಲ್ಲೂ ಇದೆ. ಆದ್ದರಿಂದ, ಈ ಎಲ್ಲವೂ ಸಾವಧಾನವಾಗಿ ಚರ್ಚೆಗೀಡಾಗಬೇಕಿತ್ತು. ತಮ್ಮನ (ಟೈಗರ್ ಮೇಮನ್) ಕೃತ್ಯಕ್ಕೆ ಅಣ್ಣನನ್ನು ಗಲ್ಲಿಗೇರಿಸಲಾಯಿತೆಂಬ ಅಪವಾದವೊಂದು ಭಾರತೀಯ ನ್ಯಾಯಾಂಗದ ಮೇಲೆ ಹೊರಿಸದಿರುವುದಕ್ಕಾಗಿಯಾದರೂ ಈ ಪ್ರಕರಣ ಮರುಪರಿಶೀಲನೆಗೆ ಒಳಪಡಬೇಕಿತ್ತು.