Thursday, 26 June 2025

11 ವರ್ಷಗಳ ಮೋದಿ ಆಡಳಿತಕ್ಕೆ ಕನ್ನಡಿ ಹಿಡಿದ ಟ್ರಂಪ್ ಮತ್ತು ಎಪಿಸಿಆರ್




ಒಂದೇ ವಾರದೊಳಗೆ ಒಂದು ವರದಿ, ಒಂದು ತನಿಖಾ ವರದಿ ಮತ್ತು ಒಂದು ಹೇಳಿಕೆ ಬಿಡುಗಡೆಗೊಂಡಿದೆ. ಪ್ರಧಾನಿ ನರೇಂದ್ರ ಮೋದಿಯವರ ೧೧ ವರ್ಷಗಳ ಆಡಳಿತವನ್ನು ಅವಲೋಕನಕ್ಕೆ ಒಡ್ಡಬಹುದಾದ ಅತ್ಯಂತ ಮಹತ್ವದ ಬೆಳವಣಿಗೆಯಾಗಿ ಇದನ್ನು ಪರಿಗಣಿಸಬಹುದಾಗಿದೆ.

1. ಸ್ವಿಸ್ ಬ್ಯಾಂಕ್‌ನಲ್ಲಿ ಭಾರತೀಯರ ದುಡ್ಡು ಹಿಂದಿನ ವರ್ಷಗಳಿಗಿಂತ 3 ಪಟ್ಟು ಹೆಚ್ಚಳವಾಗಿದೆ. ೨೦೨೩ರಲ್ಲಿ ಸ್ವಿಸ್ ಬ್ಯಾಂಕ್‌ನಲ್ಲಿ ಭಾರತೀಯರು 9771 ಕೋಟಿ ರೂಪಾಯಿಯನ್ನು ಠೇವಣಿಯಾಗಿ ಇಟ್ಟಿದ್ದರು. 2024ರಲ್ಲಿ ಇದು 37600 ಕೋಟಿ ರೂಪಾಯಿಯಾಗಿ ಏರಿಕೆಯಾಗಿದೆ.

2. ಎ.ಪಿ.ಸಿ.ಆರ್. ಅಥವಾ ಅಸೋಸಿಯೇಶನ್ ಫಾರ್ ಪ್ರೊಟೆಕ್ಷನ್ ಸಿವಿಲ್ ರೈಟ್ಸ್ ಮತ್ತು ಕ್ವಿಲ್ ಫೌಂಡೇಶನ್ ಜಂಟಿಯಾಗಿ ಸಂಗ್ರಹಿಸಿದ ವರದಿಯ ಪ್ರಕಾರ, 2024 ಜೂನ್ 7ರಿಂದ 2025 ಜೂನ್ 7 ವರೆಗಿನ ಈ ಒಂದು ವರ್ಷದಲ್ಲಿ ದೇಶದಲ್ಲಿ 947 ರಷ್ಟು ದ್ವೇಷಾಧಾರಿತ ಘಟನೆಗಳು ನಡೆದಿವೆ. ಇದರಲ್ಲಿ 602ರಷ್ಟು ಅಪರಾಧ ಪ್ರಕರಣಗಳಾದರೆ ೩೪೫ ದ್ವೇಷಭಾಷಣಗಳು ನಡೆದಿವೆ.

3. ಭಾರತದಲ್ಲಿ ಅತ್ಯಾಚಾರ, ಲೈಂಗಿಕ ದೌರ್ಜನ್ಯ ಮತ್ತು ಅಪರಾಧ ಪ್ರಕರಣಗಳು ಹೆಚ್ಚಾಗುತ್ತಾ ಇದೆ. ಅದರಲ್ಲೂ ಲೈಂಗಿಕ ದೌರ್ಜನ್ಯಗಳು ಆತಂಕಕಾರಿ ಮಟ್ಟಕ್ಕೆ ಏರಿದೆ. ಆದ್ದರಿಂದ ಮಹಿಳೆಯರು ಒಂಟಿಯಾಗಿ ಪ್ರಯಾಣಿಸಬಾರದು. ಪ್ರವಾಸದ ಸಮಯದಲ್ಲಿ ಎಲ್ಲರೂ ಜಾಗರೂಕರಾಗಿ ಇರಬೇಕು ಎಂದು ಅಮೇರಿಕ ತನ್ನ ನಾಗರಿಕರಿಗೆ ಎಚ್ಚರಿಕೆ ನೀಡಿದೆ.

ಸ್ವಿಸ್ ಬ್ಯಾಂಕ್‌ನಲ್ಲಿರುವ ಕಪ್ಪು ಹಣವನ್ನು ಭಾರತಕ್ಕೆ ಮರಳಿ ತರುತ್ತೇನೆ ಎಂಬ ವಾಗ್ದಾನದೊಂದಿಗೆ ನರೇಂದ್ರ ಮೋದಿಯವರು 2014ರ ಚುನಾವಣೆಯನ್ನು ಎದುರಿಸಿದ್ದರು. ದೇಶದ ಪ್ರತಿ ರಸ್ತೆಯನ್ನೂ ಚಿನ್ನದ ರಸ್ತೆಯಾಗಿ ಮಾರ್ಪಡಿಸುವಷ್ಟು ದುಡ್ಡು ಸ್ವಿಸ್ ಬ್ಯಾಂಕ್‌ನಲ್ಲಿದೆ ಎಂದು ಅವರ ಬೆಂಬಲಿಗರು ಭಾಷಣ ಮಾಡಿದ್ದರು. ದೇಶ ಮೋದಿಯ ಕೈಗೆ ಚುಕ್ಕಾಣಿಯನ್ನು ಕೊಟ್ಟಿತು. ಕಪ್ಪು ಹಣವನ್ನು ಸ್ವಿಸ್ ಬ್ಯಾಂಕ್‌ ನಿಂದ  ತಂದು ಭಾರತದ ಪ್ರತಿ ನಾಗರಿಕರಿಗೂ ಹಂಚುತ್ತಾರೆ ಎಂಬ ನಿರೀಕ್ಷೆಯಿಂದ ಕಾಯತೊಡಗಿತು. ಮುಂದಿನ 2 ವರ್ಷಗಳ ವರೆಗೆ ಮೌನವಾದ ಅವರು 2016ರಲ್ಲಿ ಮತ್ತೊಮ್ಮೆ ಕಪ್ಪು ಹಣದ ಬಗ್ಗೆ ಮಾತನಾಡಿದರು. ನೋಟ್ ಬ್ಯಾನ್ ಮಾಡುವ ಮೂಲಕ ದೇಶದೊಳಗಿರುವ ಎಲ್ಲ ಕಪ್ಪು ಹಣವನ್ನೂ ನಿರ್ನಾಮ ಮಾಡುತ್ತಿರುವುದಾಗಿ ಘೋಷಿಸಿದರು. ಇದೀಗ 11 ವರ್ಷಗಳೇ ಕಳೆದು ಹೋಗಿವೆ. 2010ರಲ್ಲಿ ಸ್ವಿಸ್ ಬ್ಯಾಂಕ್‌ನಲ್ಲಿದ್ದುದು ಬರೇ 8500  ಕೋಟಿ ರೂಪಾಯಿ. ಆದರೆ ಈಗ ಅದು 37600  ಕೋಟಿ ರೂಪಾಯಿಯಾಗಿ ಏರಿಕೆಯಾಗಿದೆ. ಇನ್ನೊಂದು ಕಡೆ ಬ್ಯಾನ್ ಮಾಡಲಾದ ನೋಟುಗಳ ಪೈಕಿ 99% ನೋಟುಗಳೂ ಮರಳಿ ಬ್ಯಾಂಕ್‌ಗೆ ಸೇರಿವೆ ಎಂದು ಆರ್‌ಬಿಐ ವರದಿಗಳೇ ಹೇಳುತ್ತವೆ. ಅಂದರೆ ನೋಟ್ ಬ್ಯಾನ್‌ನಿಂದ ಯಾವ ಪ್ರಯೋಜನವೂ ಆಗಿಲ್ಲ ಎಂದೇ ಅರ್ಥ. ಹಾಗಿದ್ದರೆ,

ಕಪ್ಪು ಹಣದ ಹೆಸರಲ್ಲಿ ದೇಶದ ನಾಗರಿಕರನ್ನು ನರೇಂದ್ರ ಮೋದಿ ವಂಚಿಸಿದ್ದಾರೆ ಎಂದೇ ಅರ್ಥವಲ್ಲವೇ? ಮನ್‌ಮೋಹನ್ ಸಿಂಗ್ ಅವಧಿಯಲ್ಲಿ ಸ್ವಿಸ್ ಬ್ಯಾಂಕ್‌ನಲ್ಲಿ 8500 ಕೋಟಿಯಷ್ಟಿದ್ದ ದುಡ್ಡು ಈ 11  ವರ್ಷಗಳ ಅವಧಿಯಲ್ಲಿ 37600  ಕೋಟಿ ರೂಪಾಯಿಯಷ್ಟು ಏರಿಕೆಯಾಗಿದೆ ಎಂದಾದರೆ ಅದಕ್ಕೆ ಯಾರು ಹೊಣೆ? ಕನಿಷ್ಠ ಸ್ವಿಸ್ ಬ್ಯಾಂಕ್‌ನಿAದ ಹಣವನ್ನು ಹಿಂದಕ್ಕೆ ತರುವುದು ಬಿಡಿ, ಅಲ್ಲಿ ಭಾರತೀಯರು ಹಣ ಠೇವಣಿಯಾಗಿ ಇರಿಸದಂತೆ ಈ 11 ವರ್ಷಗಳಲ್ಲಿ ತಡೆಯಲೂ ನರೇಂದ್ರ ಮೋದಿಗೆ ಆಗಿಲ್ಲ ಎಂದಾದರೆ ಇವರು ದುರ್ಬಲರು ಎಂದೇ ಅರ್ಥ ಅಲ್ಲವೇ? ಕಪ್ಪು ಹಣದ ಹೆಸರಲ್ಲಿ ಈ ದೇಶದ ನಾಗರಿಕರನ್ನು ವಂಚಿಸಿದ ಮೋದಿಯವರು ಭಾರತೀಯರ ಕ್ಷಮೆ ಯಾಚಿಸಬೇಡವೇ? ಇದೇವೇಳೆ,

ತನ್ನ ನಾಗರಿಕರಿಗೆ ಅಮೇರಿಕ ನೀಡಿರುವ ಸೂಚನೆಯು ನರೇಂದ್ರ ಮೋದಿ ಸರಕಾರದ 11 ವರ್ಷಗಳ ಆಡಳಿತಕ್ಕೆ ನೀಡಿರುವ ಸರ್ಟಿಫಿಕೇಟ್ ಎಂದೇ ಹೇಳಬಹುದು. ಭಾರತದಲ್ಲಿ ಮಹಿಳೆಯರು ಒಂಟಿಯಾಗಿ ಪ್ರಯಾಣಿಸುವುದು ಅಪಾಯಕಾರಿ, ಇಲ್ಲಿ ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರಗಳು ಆತಂಕಕಾರಿ ಮಟ್ಟದಲ್ಲಿದೆ ಎಂದು ಅದು ಬಹಿರಂಗ ಘೋಷಣೆ ಮಾಡಿದೆ. ಒಂದುಕಡೆ ನರೇಂದ್ರ ಮೋದಿ ಬೆಂಬಲಿಗರು ಇಸ್ರೇಲ್ ಮತ್ತು ಅಮೇರಿಕವನ್ನು ಬೆಂಬಲಿಸುತ್ತಾ ಮತ್ತು ಇರಾನನ್ನು ನಾಶವಾಗಬೇಕಾದ ರಾಷ್ಟ್ರ  ಎನ್ನುತ್ತಾ ವಾದಿಸುತ್ತಿರುವಾಗಲೇ ಅಮೇರಿಕದಿಂದ ಈ ಸರ್ಟಿಫಿಕೇಟ್ ಲಭ್ಯವಾಗಿದೆ. ಮಹಿಳೆಯರಿಗೆ ಸುರಕ್ಷಿತತೆಯನ್ನು ಖಾತರಿಪಡಿಸದ ಆಡಳಿತ ಮೋದಿಯವರದ್ದು ಎಂದು ಅಮೇರಿಕ ಪರೋಕ್ಷವಾಗಿ ಹೇಳಿಕೆ ನೀಡಿದಂತಾಗಿದೆ. ಇದೇ ಸಂದರ್ಭದಲ್ಲಿ,

ಎಪಿಸಿಆರ್ ಮತ್ತು ಕ್ವಿಲ್ ಫೌಂಡೇಶನ್ ಜಂಟಿಯಾಗಿ ಬಿಡುಗಡೆಗೊಳಿಸಿರುವ ವರದಿಯಲ್ಲೂ ಆತಂಕಕಾರಿ ಸಂಗತಿಗಳಿವೆ. ಕೇವಲ ಒಂದೇ ವರ್ಷದೊಳಗೆ ದ್ವೇಷಾಧಾರಿತ 947 ರಷ್ಟು ಪ್ರಕರಣಗಳು ಈ ದೇಶದಲ್ಲಿ ನಡೆದಿವೆ ಎಂಬುದು ನಿಜಕ್ಕೂ ಆಘಾತಕಾರಿ ಬೆಳವಣಿಗೆ. ಮುಸ್ಲಿಮ್ ದ್ವೇಷವನ್ನೇ ರಾಜಕೀಯ ಅಧಿಕಾರದ ಮೆಟ್ಟಿಲನ್ನಾಗಿ ಮಾಡಿಕೊಂಡಿರುವ ಬಿಜೆಪಿಯು ಈ ದೇಶಕ್ಕೆ ನೀಡಿರುವ ಕೊಡುಗೆ ಇದು ಎಂದೇ ಹೇಳಬೇಕು. ಅತ್ಯಾಚಾರಗಳಾಗಲಿ, ಅಪರಾಧ ಪ್ರಕರಣಗಳಾಗಲಿ ಎಲ್ಲವೂ ದ್ವೇಷ ಪ್ರಚಾರದ ಫಲಿತಾಂಶಗಳಾಗಿವೆ. ಮುಸ್ಲಿಮರನ್ನು ಹಿಂದೂ ಧರ್ಮದ ಶತ್ರುಗಳಂತೆ ಬಿಂಬಿಸುವುದರಿಂದ  ಬಿಜೆಪಿ ರಾಜಕೀಯ ಲಾಭವನ್ನೇನೋ ಪಡೆಯುತ್ತಿದೆ. ಆದರೆ, ಬಿಜೆಪಿಯ ಪ್ರಚೋದನೆಯಿಂದ ಪ್ರೇರಣೆ ಪಡೆದ ಬಿಸಿರಕ್ತದ ಯುವ ತಲೆಮಾರು ಮುಸ್ಲಿಮರ ಮೇಲೆ ಹಲ್ಲೆ ನಡೆಸಿ ಯಶಸ್ವಿಯಾದ ಧೈರ್ಯದಿಂದ ಇನ್ನಿತರ ಕ್ರಿಮಿನಲ್ ಕೃತ್ಯಗಳಿಗೂ ಧೈರ್ಯ ತೋರುತ್ತಾರೆ. ಆರಂಭದಲ್ಲಿ ಇಂಥ ಯುವಕರ ಗುರಿ ಮುಸ್ಲಿಮರೇ ಆಗಿದ್ದರೂ ಆ ಬಳಿಕ ಅವರು ತಮ್ಮ ಗಮನವನ್ನು ಇನ್ನಿತರ ಕಡೆಗಳಿಗೂ ಹರಿಸುತ್ತಾರೆ. ರಾಜಕಾರಣಿಗಳ ಪ್ರಭಾವ ಬಳಸಿ ಮುಸ್ಲಿಮ್ ಹಿಂಸೆಯ ಆರೋಪದಿಂದ ಸುಲಭದಲ್ಲೇ  ಹೊರಬರುವ ಸನ್ನಿವೇಶವು ಅವರನ್ನು ಹಫ್ತಾ ವಸೂಲಿ, ಬೆದರಿಕೆ, ಸುಪಾರಿ ಹತ್ಯೆಗಳಂಥ ಕ್ರಿಮಿನಲ್ ಕೃತ್ಯಗಳಲ್ಲೂ ಭಾಗಿಯಾಗುವಂತೆ ಮಾಡುತ್ತಿದೆ. ನಿಧಾನಕ್ಕೆ ಇಂಥವರು ಆಯಾ ಊರಿನ ಡಾನ್‌ಗಳಂತೆ ವರ್ತಿಸತೊಡಗುತ್ತಾರೆ. ಅಪರಾಧ ಕೃತ್ಯಗಳಲ್ಲಿ ಸಹಜವೆಂಬAತೆ ಭಾಗಿಯಾಗತೊಡಗುತ್ತಾರೆ. ಹೆಣ್ಣಿನ ಅಪಹರಣ, ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರಗಳಂಥ ಕೃತ್ಯಗಳಲ್ಲೂ ಇವರು ಭಾಗಿಯಾಗುತ್ತಾರೆ. ಅಂದಹಾಗೆ,

ನಿರ್ದಿಷ್ಟ ಉದ್ಯೋಗ ಇಲ್ಲದ ಇವರಿಗೆ ಆದಾಯ ಮೂಲವಾಗಿ ಇವುಗಳಲ್ಲಿ ಭಾಗಿಯಾಗಲೇಬೇಕಾದ ಅನಿವಾರ್ಯತೆಯೂ ಎದುರಾಗುತ್ತದೆ. ಇಂಥವರನ್ನೇ ಈ ದ್ವೇಷ ರಾಜಕೀಯದ ಮಂದಿ ತಮ್ಮ ಲಾಭಕ್ಕಾಗಿ ಆಗಾಗ್ಗೆ ಬಳಸಿಕೊಳ್ಳುತ್ತಾ ಇರುತ್ತಾರೆ. ಮಾತ್ರವಲ್ಲ, ಇವರನ್ನು ಸಾಕುವುದು ಕಷ್ಟ ಎಂದು ಅನಿಸಿದಾಗ ಕೈ ಕೊಡುತ್ತಾರೆ. ನಿಜವಾಗಿ,

ಒಂಟಿ ಮಹಿಳೆಯರು ಪ್ರಯಾಣಿಸಲಾಗದ ದೇಶ ಎಂದು ಟ್ರಂಪ್ ಸರಕಾರ ಭಾರತವನ್ನು ಅವಮಾನಿಸಿರುವುದರ ಸಂಪೂರ್ಣ ಹೊಣೆಯನ್ನು ಮೋದಿ ಸರಕಾರವೇ ಹೊತ್ತುಕೊಳ್ಳಬೇಕು. ಹೆಣ್ಣನ್ನು ದೇವತೆ ಎಂದು ಗುರುತಿಸುವ ದೇಶದಲ್ಲಿ ಹೆಣ್ಣು ಸುರಕ್ಷಿತವಲ್ಲ ಎಂದು ಟ್ರಂಪ್ ಸರಕಾರ ಘೋಷಿಸಿರುವುದು 140 ಕೋಟಿ ಭಾರತೀಯರಿಗೆ ಮಾಡಲಾದ ಅವಮಾನ. ಇಂಥದ್ದೊಂದು  ಅವಮಾನಕರ ಪರಿಸ್ಥಿತಿ ದೇಶದಲ್ಲಿ ಯಾಕಿದೆ ಎಂಬುದನ್ನು ದೇಶದ ನಾಗರಿಕರು ಅವಲೋಕನ ನಡೆಸಬೇಕು. ಬಿಜೆಪಿ ತನ್ನ ರಾಜಕೀಯ ಅಧಿಕಾರಕ್ಕೆ ನೆಟ್ಟು ಬೆಳೆಸಿದ ಮುಸ್ಲಿಮ್ ದ್ವೇಷಕ್ಕೆ ಇದರಲ್ಲಿ ಎಷ್ಟು ಪಾತ್ರ ಇದೆ ಎಂಬುದಾಗಿಯೂ ವಿಶ್ಲೇಷಣೆ ನಡೆಸಬೇಕು.

ನೀವು ಒಂದು ಬಾರಿ ಜನರಿಗೆ ದ್ವೇಷಿಸಲು ಕಲಿಸಿದರೆ ಆ ಬಳಿಕ ಅವರು ನೀವು ಸೂಚಿಸಿದವರನ್ನೇ ದ್ವೇಷಿಸುವುದಲ್ಲ, ನೀವು ಪ್ರೀತಿಸಬೇಕು ಎಂದವರನ್ನೂ ದ್ವೇಷಿಸತೊಡಗುತ್ತಾರೆ. ದ್ವೇಷ ಎಂಬುದು ಜನರನ್ನು ಕ್ರಿಮಿನಲ್ ಕೃತ್ಯದತ್ತ ಕೊಂಡೊಯ್ಯುವ ಅಫೀಮು. ಒಮ್ಮೆ ಈ ಅಫೀಮನ್ನು ತಿನ್ನಿಸಿದರೆ ಆ ಬಳಿಕ ಅದರ ಅಡ್ಡಪರಿಣಾಮದಿಂದ ಹೆಣ್ಣೂ ಸುರಕ್ಷಿತಳಲ್ಲ. ದೇಶವೂ ಸುರಕ್ಷಿತವಲ್ಲ. ಎಪಿಸಿಆರ್ ವರದಿಗೆ ಮತ್ತು ಅಮೇರಿಕದ ಘೋಷಣೆಗೆ ಈ ಅಫೀಮು ತಿಂದವರು ಮತ್ತು ತಿನ್ನಿಸಿದವರೇ ನೇರ ಹೊಣೆ.

Wednesday, 18 June 2025

ಶರೀಫ್ ಸಾಬ್‌ರನ್ನು ಸ್ಮರಿಸುತ್ತಾ...




ಜಮಾಅತೆ ಇಸ್ಲಾಮೀ ಹಿಂದ್ ರಾಜ್ಯ ಘಟಕದ ಸಲಹಾ ಸಮಿತಿಯ ಸದಸ್ಯರಾಗಿ, ಸನ್ಮಾರ್ಗ, ಅನುಪಮ ಮತ್ತು ಶಾಂತಿ ಪ್ರಕಾಶನಗಳ ಸ್ಥಾಪನೆಯಲ್ಲಿ ಬಹುಮುಖ್ಯ ಪಾತ್ರಧಾರಿಯಾಗಿ, ಹಿರಾ ಸಹಿತ ವಿವಿಧ ಶಿಕ್ಷಣ ಸಂಸ್ಥೆಗಳ ರೂವಾರಿಯಾಗಿ, ಜಮಾಅತ್ ಮಂಗಳೂರು ಸ್ಥಾನೀಯ ಘಟಕವನ್ನು 2 ದಶಕಗಳ ಕಾಲ ಮುನ್ನಡೆಸಿ, ಬಡ್ಡಿರಹಿತ ಬ್ಯಾಂಕಿಂಗ್  ವ್ಯವಸ್ಥೆಯಾದ ಕಾರುಣ್ಯದ ಬೆನ್ನೆಲುಬಾಗಿ ಮತ್ತು ಹತ್ತು ಹಲವು ಬಡವರು ಮತ್ತು ದುರ್ಬಲರಿಗೆ ಆಸರೆಯಾಗಿದ್ದ ಶರೀಫ್ ಸಾಬ್ ಅವರು ಪತ್ರಕರ್ತರೂ ಆಗಿರಲಿಲ್ಲ. ಪದವಿಗಳ ಮೇಲೆ ಪದವಿಗಳನ್ನು ಪಡೆದ ಶಿಕ್ಷಣ ತಜ್ಞರೂ ಆಗಿರಲಿಲ್ಲ. ಹಲವು ಕೃತಿಗಳನ್ನು ರಚಿಸಿದ ಸಾಹಿತಿಯೂ ಆಗಿರಲಿಲ್ಲ. ಬಿರುದಾಂಕಿತ ಆರ್ಥಿಕ ತಜ್ಞರೂ ಆಗಿರಲಿಲ್ಲ. ಆದ್ದರಿಂದಲೇ ಅವರ ಸಾಧನೆ ಮಹತ್ವದ್ದಾಗುತ್ತದೆ. 85 ವರ್ಷಗಳ ತುಂಬು ಜೀವನವನ್ನು ಸವೆಸಿ ಅವರು ಇಹಲೋಕಕ್ಕೆ ವಿದಾಯ ಕೋರಿ ಹೊರಟು ಹೋಗುವಾಗ ಈ ಮೇಲೆ ಉಲ್ಲೇಖಿತವಾದವುಗಳ ಹೊರತಾಗಿ ಅವರ ಖಾತೆಗೆ ಸೇರಿಸುವುದಕ್ಕೆ ಇನ್ನೂ ಅನೇಕ ಸಂಗತಿಗಳಿವೆ.

ಒಮ್ಮೆ ಅವರು ಸನ್ಮಾರ್ಗ ಕಚೇರಿಯಾದ ಹಿದಾಯತ್ ಸೆಂಟರ್‌ನ ಕೂಗಳತೆಯ ದೂರದಲ್ಲಿರುವ ಕಚ್ಚೀ ಮೇಮನ್ ಮಸೀದಿಯಲ್ಲಿ ನಮಾಜ್  ನಿರ್ವಹಿಸಿ ಕಚೇರಿಗೆ ಬಂದು ಸಿಬಂದಿಯನ್ನು ಕರೆದರು. ನಾನು ಮಸೀದಿ ಪಕ್ಕದ ಬಾಂಬೆ ಹೊಟೇಲ್‌ಗೆ ಹೋಗಿದ್ದೆ. ಹೊರ ಬರುವಾಗ ಒಬ್ಬರು ಹೊಟೇಲ್ ಹೊರಗಡೆ ನಿಂತಿದ್ರು. ಹಸಿವಾಗ್ತಾ ಇದೆ ಎಂದರು. ನಾನು ಅನುಮಾನದಿಂದ ಸೀದಾ ಬಂದೆ. ಆದರೆ, ನನಗೀಗ ಆ ವ್ಯಕ್ತಿಯ ಹಸಿವು ನಿಜವೂ ಆಗಿರಬಹುದು ಎಂದು ಅನಿಸ್ತಾ ಇದೆ. ಆದ್ದರಿಂದ ನೀವೊಂದು ಕೆಲಸ ಮಾಡಬೇಕು. ಆ ವ್ಯಕ್ತಿಗೆ ಊಟ ಕೊಟ್ಟು ಮತ್ತು ಕಿಸೆಗೊಂದಿಷ್ಟು ಹಣ ಹಾಕಿ ಬರಬೇಕು ಎಂದು ಹೇಳಿ ದುಡ್ಡು ಕೊಟ್ಟರು. ವ್ಯಕ್ತಿ ಇಂತಿಂಥ  ಬಣ್ಣದ ಶರ್ಟ್ ಮತ್ತು ಲುಂಗಿ ಉಟ್ಟಿದ್ದಾರೆ ಎಂದೂ ಹೇಳಿದರು. ನಿಜವಾಗಿ,

ಹಸಿದವರಿಗೆ ಉಣಿಸುವವರಿಗೇನೂ ನಮ್ಮಲ್ಲಿ ಕಡಿಮೆ ಇಲ್ಲ. ಆದರೆ ಹಸಿದವನನ್ನು ಆ ಹೊಟೇಲ್‌ನಿಂದ ಕಚೇರಿಯವರೆಗೆ ಮನಸೊಳಗೆ ತುಂಬಿಕೊಂಡು  ಪಾಪಭಾವದಿಂದ ತಳಮಳಗೊಳ್ಳುವವರು ಕಡಿಮೆ. ಇದಕ್ಕೆ ತಾಯಿ ಹೃದಯ ಅನ್ನುತ್ತೇವೆ. ಆ ವ್ಯಕ್ತಿಗೆ ಇವರು ಉಣಿಸದೇ ಇರುತ್ತಿದ್ದರೆ ಅಪರಾಧಿಯೇನೂ ಆಗುತ್ತಿರಲಿಲ್ಲ. ಯಾಕೆಂದರೆ, ಹೀಗೆ ಹಸಿವು ಎಂದು ಹೇಳಿ ಯಾಮಾರಿಸುವವರೇ ಇವತ್ತು ಹೆಚ್ಚಿದ್ದಾರೆ ಮತ್ತು ಆ ವ್ಯಕ್ತಿ ಶರೀಫ್ ಸಾಬ್‌ರಿಗೆ ಪರಿಚಿತರೂ ಅಲ್ಲ. ಕುಟುಂಬಸ್ತರೂ ಅಲ್ಲ. ಆದ್ದರಿಂದ ಆ ವ್ಯಕ್ತಿಯನ್ನು ಅಲ್ಲೇ  ಮರೆತು ಮುಂದೆ ಹೋಗಬಹುದಿತ್ತು. ಆದರೆ ತಾಯಿ ಮನಸ್ಸು ಅದನ್ನು ಒಪ್ಪಿಕೊಳ್ಳಲಿಲ್ಲ. ಅಂದಹಾಗೆ,

ಸನ್ಮಾರ್ಗ ಟ್ರಸ್ಟ್ ಗೆ  ದೀರ್ಘಕಾಲ ಚೇರ್ಮನ್ ಆಗಿದ್ದವರು ಶರೀಫ್ ಸಾಬ್. 1978 ಎಪ್ರಿಲ್ 23ರಂದು ಸನ್ಮಾರ್ಗ ಪತ್ರಿಕೆಯ ಮೊದಲ ಸಂಚಿಕೆ ಬಿಡುಗಡೆಗೊಳ್ಳುವಾಗ ಇಬ್ರಾಹೀಮ್ ಸಈದ್ ಸಂಪಾದಕರಾಗಿದ್ದರೆ, ಈ ಶರೀಫ್ ಸಾಬ್ ಅದರ ಬೆವರಾಗಿದ್ದರು. ಮುಸ್ಲಿಮರಲ್ಲಿ ಮುಖ್ಯವಾಗಿ ಕರಾವಳಿಯ ಮುಸ್ಲಿಮರಲ್ಲಿ ಕನ್ನಡ ಎಂಬುದು ‘ಅನ್ಯ’ ಭಾಷೆಯಾಗಿ ಮತ್ತು ಒಂದು ರೀತಿಯಲ್ಲಿ ಅಲಿಖಿತ ಬಹಿಷ್ಕಾರಕ್ಕೆ ಒಳಗಾದ ಭಾಷೆಯಾಗಿ ಮಾರ್ಪಟ್ಟಿದ್ದ ವೇಳೆ ಅದೇ ಕನ್ನಡದಲ್ಲಿ ಪತ್ರಿಕೆಯನ್ನು ಪ್ರಾರಂಭಿಸುವುದೆಂದರೆ ಆಕಾಶಕ್ಕೆ ಏಣಿ ಇಟ್ಟಷ್ಟೇ ಸವಾಲಿನದ್ದು. ಒಂದು ಕಡೆ ಆರ್ಥಿಕ ಸವಾಲು ಎದುರಿದ್ದರೆ, ಕನ್ನಡದ ಬಗ್ಗೆ ಮುಸ್ಲಿಮರಲ್ಲಿರುವ ನಕಾರಾತ್ಮಕ ಭಾವ ಇನ್ನೊಂದು ಕಡೆಯಿತ್ತು. ಇದರ ಜೊತೆಗೆ ಕರಾವಳಿಯಿಂದ ಹೊರಬಂದು ರಾಜ್ಯದಾದ್ಯಂತ ಕನ್ನಡಿಗರಿಗೆ ಈ ಪತ್ರಿಕೆಯನ್ನು ತಲುಪಿಸಬೇಕಿತ್ತು. ಇಸ್ಲಾಮ್ ಮತ್ತು ಮುಸ್ಲಿಮರ ಬಗ್ಗೆ ಜನರಲ್ಲಿದ್ದ ಪ್ರಶ್ನೆಗಳಿಗೆ ಉತ್ತರಿಸುವುದು ಮತ್ತು ಅವರಲ್ಲಿರುವ ತಪ್ಪು ಭಾವನೆಗಳನ್ನು ಹೋಗಲಾಡಿಸುವುದು ಪತ್ರಿಕೆಯ ಗುರಿಯಾಗಿತ್ತು. ಇದರ ಜೊತೆಗೇ ಇಸ್ಲಾಮ್‌ನ ಹೆಸರಲ್ಲಿ ನಡೆಯುತ್ತಿದ್ದ ಹತ್ತು-ಹಲವು ತಪ್ಪು ಆಚರಣೆಗಳನ್ನು ತಿದ್ದುವುದೂ ಪತ್ರಿಕೆಯ ಉದ್ದೇಶವಾಗಿತ್ತು. ಆದರೆ,

ಶರೀಫ್ ಸಾಬ್‌ರ ನೇತೃತ್ವದಲ್ಲಿದ್ದ ಉತ್ಸಾಹಿ ತಂಡ ಬರಹದ ಹೊಣೆಯನ್ನು ಸಂಪಾದಕೀಯ ಮಂಡಳಿಗೆ ವಹಿಸಿಕೊಟ್ಟು ಪತ್ರಿಕೆಯ ಪ್ರಸಾರ ಮತ್ತು ಆರ್ಥಿಕ ಹೊಣೆಗಾರಿಕೆಯನ್ನು ಸ್ವಯಂ ವಹಿಸಿಕೊಂಡಿತು. ಈ ಪತ್ರಿಕೆಯನ್ನು ರಾಜ್ಯದ ಮೂಲೆಮೂಲೆಗೂ ತಲುಪಿಸುವುದಕ್ಕಾಗಿ ಊರೂರು ಸುತ್ತಿತು. ಒಂದು ಕಡೆ ಆರ್ಥಿಕ ಸಂಕಷ್ಟ ಎದುರಾಗದಂತೆ ನೋಡಿಕೊಳ್ಳುವುದು ಮತ್ತು ಇನ್ನೊಂದು ಕಡೆ ಪತ್ರಿಕೆ ನಿರಂತರ ಪ್ರಕಟವಾಗುವಂತೆ ನೋಡಿಕೊಳ್ಳುವುದಕ್ಕೆ ಆದ್ಯತೆ ನೀಡಿತು. ಸನ್ಮಾರ್ಗ ಕಳೆದ 48 ವರ್ಷಗಳಿಂದ ನಿರಂತರವಾಗಿ ಪ್ರಕಟವಾಗುತ್ತಾ ಬಂದಿದ್ದರೆ ಅದರ ಹಿಂದೆ ಶರೀಫ್ ಸಾಬ್‌ರ ದೂರದೃಷ್ಟಿ, ಬುದ್ಧಿವಂತಿಕೆ, ತಂತ್ರಗಾರಿಕೆ ಮತ್ತು ಪ್ರಾಮಾಣಿಕತೆಗೆ ಬಹುದೊಡ್ಡ ಪಾತ್ರವಿದೆ. ಅವರು ಹಿದಾಯತ್ ಸೆಂಟರನ್ನು ಅತಿಯಾಗಿ ಪ್ರೀತಿಸಿದ್ದರು. ವೇತನ ಆಗಿದೆಯೇ ಎಂದು ಸಿಬಂದಿಗಳಲ್ಲಿ ವಿಚಾರಿಸುವುದು ರೂಢಿಯಾಗಿತ್ತು. ಯಾವುದೇ ಸಂಸ್ಥೆ ನಿಂತ ನೀರಾಗಬಾರದು ಎಂಬುದು ಅವರ ನೀತಿಯಾಗಿತ್ತು. ಆದ್ದರಿಂದಲೇ,

ಆಧುನಿಕ ತಂತ್ರಜ್ಞಾನಗಳನ್ನು ಬಳಸುವಲ್ಲೂ ಮತ್ತು ಅದರ ಉಪಯೋಗದಿಂದ ಸಂಸ್ಥೆಯನ್ನು ವಿಸ್ತರಿಸುವಲ್ಲೂ ಅವರು ಮುಂಚೂಣಿ ವಕ್ತಾರರಾದರು. ಶಾಂತಿ ಪ್ರಕಾಶನದ ಪುಸ್ತಕಗಳನ್ನು ಊರೂರು ತಲುಪಿಸುವುದಕ್ಕಾಗಿ ಮೊಬೈಲ್ ಪುಸ್ತಕಾಲಯದ ಪರ ನಿಂತರು. ಸಣ್ಣದೊಂದು ಕಚೇರಿಗೆ ಸೀಮಿತಗೊಂಡಿದ್ದ ಬಡ್ಡಿರಹಿತ ಬ್ಯಾಂಕಿಂಗ್  ವ್ಯವಸ್ಥೆಗೆ ವಿಸ್ಟ್ರತ ರೂಪವನ್ನು ಕೊಟ್ಟು ದೊಡ್ಡ ಸಂಖ್ಯೆಯಲ್ಲಿ ಜನರನ್ನು ಆಕರ್ಷಿಸುವುದರ ಪರ ನಿಂತರು. ಸಣ್ಣ ಕಟ್ಟಡದಲ್ಲಿ ಆರಂಭವಾಗಿದ್ದ ಹಿರಾ ಕಾಲೇಜನ್ನು ದ.ಕ. ಜಿಲ್ಲೆಯಲ್ಲೇ  ಮಹತ್ವದ ಹಿರಾ ಸಮೂಹ ಶಿಕ್ಷಣ ಸಂಸ್ಥೆಯಾಗಿ ಮಾರ್ಪಡಿಸುವಲ್ಲಿ ಅವರ ದೂರದೃಷ್ಟಿ ಮತ್ತು ತಂತ್ರಗಾರಿಕೆಯ ಪಾತ್ರ ಬಹಳ ಹಿರಿದು. 

2019ರವರೆಗೆ ಬರೇ ಮುದ್ರಣ ಮಾಧ್ಯಮವಾಗಿಯಷ್ಟೇ ಗುರುತಿಸಿಕೊಂಡಿದ್ದ ಸನ್ಮಾರ್ಗವನ್ನು ಡಿಜಿಟಲ್ ಯುಗಕ್ಕೆ ಪರಿವರ್ತಿಸುವಲ್ಲೂ ಶರೀಫ್ ಸಾಬ್ ಮುಂಚೂಣಿ ಪಾತ್ರ ನಿರ್ವಹಿಸಿದರು. 2019ರಲ್ಲಿ ಸನ್ಮಾರ್ಗ ವೆಬ್‌ಪೋರ್ಟಲ್ ಪ್ರಾರಂಭಿಸಿದ್ದಲ್ಲದೇ, 2020ರಲ್ಲಿ ಸನ್ಮಾರ್ಗ ನ್ಯೂಸ್ ಚಾನೆಲನ್ನೂ ಆರಂಭಿಸಲಾಯಿತು. ಎರಡು ವರ್ಷಗಳಲ್ಲಿ ತೆಗೆದುಕೊಳ್ಳಲಾದ ಈ ಎರಡು ಮಹತ್ವದ ನಿರ್ಧಾರಗಳ ಹಿಂದೆ ಶರೀಫ್ ಸಾಬ್ ಇದ್ದರು. ನಿರಂತರ ಸಲಹೆ ಮತ್ತು ಮಾರ್ಗದರ್ಶನಗಳ ಮೂಲಕ ಈ ಎರಡನ್ನೂ ಬೆಳೆಸುವಲ್ಲಿ ಅವರು ಕೊಡುಗೆಯನ್ನು ನೀಡಿದರು. ಇದರ ಜೊತೆಗೇ ಜಿಲ್ಲೆಯಲ್ಲಿ ಹತ್ತಕ್ಕಿಂತಲೂ ಅಧಿಕ ಶಿಕ್ಷಣ ಸಂಸ್ಥೆಗಳ ಪ್ರಾರಂಭಕ್ಕೂ ಮತ್ತು ಯಶಸ್ವಿ ನಿರ್ವಹಣೆಗೂ ಮಾರ್ಗದರ್ಶಕರಾದರು. ಅಂದಹಾಗೆ,

ಮುಹಮ್ಮದ್ ಷರೀಫ್  ಎಂಬ ಸಾಮಾನ್ಯ ವ್ಯಕ್ತಿ ಈ ಮಟ್ಟದಲ್ಲಿ ಅಸಾಮಾನ್ಯ ವ್ಯಕ್ತಿಯಾಗಿ ಬೆಳೆದಿರುವುದರ ಹಿಂದೆ ಅವರ ಓದಿನ ಪಾತ್ರ ಇದೆ. ಬಡತನ ಕಲಿಸಿದ ಪಾಠ ಇದೆ. ಉದ್ಯಮಕ್ಕೆ ಕೈ ಹಾಕುವ ಮೂಲಕ ಪಡೆದ ಸಾಹಸ ಪ್ರವೃತ್ತಿಯ ಅನುಭವವಿದೆ. ಮಗನನ್ನೇ ಕಳೆದುಕೊಳ್ಳುವಷ್ಟು ಅತೀವ ದುಃಖದ ಮತ್ತು ಮಕ್ಕಳು ಸ್ಥಿತಿವಂತರಾಗಿ ಪಡೆದ ಸುಖದ ಅನುಭವವೂ ಇದೆ. ಅವರು ಬಡತನದಲ್ಲಿ ಪಡೆದ ಪಾಠ ಅವರನ್ನು ಎಷ್ಟು ಉದಾರಿಯಾಗಿಸಿತೆಂದರೆ, ಬಳಿಕ ಅವರಿಂದ ಆರ್ಥಿಕ ಲಾಭ ಪಡೆದವರ ಸಂಖ್ಯೆ ಸಾಕಷ್ಟಿದೆ. ಅವರು ಕಿರಿಯರೊಂದಿಗೆ ಕಿರಿಯರಾಗಿ ಅಭಿಪ್ರಾಯಗಳನ್ನು ಆಲಿಸುತ್ತಿದ್ದರು. ಹಿರಿಯ ಗುಂಪಿನಲ್ಲಿ ಅಷ್ಟೇ ಗಂಭೀರವಾಗಿಯೂ ನಡಕೊಳ್ಳುತ್ತಿದ್ದರು ಮತ್ತು ವ್ಯಕ್ತವಾದ ಅಭಿಪ್ರಾಯಗಳಲ್ಲಿ ಅತ್ಯುತ್ತಮವಾದುದನ್ನು ಹೆಕ್ಕಿಕೊಳ್ಳುವ ಮತ್ತು ಅದರ ಜಾರಿಗಾಗಿ ಕೊನೆತನಕವೂ ಶ್ರಮಪಡುವ ವಿಶೇಷ ಪ್ರತಿಭೆ ಅವರಲ್ಲಿತ್ತು. ಸನ್ಮಾರ್ಗ ಪಬ್ಲಿಕೇಶನ್ ಟ್ರಸ್ಟ್ ನ  ಚೇರ್ಮನ್ ಆಗಿದ್ದ ಕಾಲದಲ್ಲೂ ಮತ್ತು ಆ ಬಳಿಕವೂ ತನ್ನ ನಿಲುವನ್ನು ಸಂಪಾದಕೀಯ ಮಂಡಳಿಯ ಮೇಲೆ ಹೇರಿದವರಲ್ಲ. ಅದೇವೇಳೆ, ಸನ್ಮಾರ್ಗದ ಮೇಲೆ ಪ್ರಕರಣಗಳು ದಾಖಲಾದಾಗ ವಕೀಲರನ್ನು ನಿಯುಕ್ತಿಗೊಳಿಸುವುದರಿಂದ ಹಿಡಿದು ನ್ಯಾಯಾಲಯದ ವರೆಗೆ ಪ್ರತಿ ಹಂತದಲ್ಲೂ ಸಂಪಾದಕೀಯ ಮಂಡಳಿಯ ಜೊತೆಗೇ ಇದ್ದರು.

 ಅವರೋರ್ವ ಅತ್ಯುತ್ತಮ ನಾಯಕ, ಅತ್ಯುತ್ತಮ ಸಂಘಟಕ, ಅತ್ಯುತ್ತಮ ಪ್ರತಿಭಾ ಪೋಷಕರಾಗಿದ್ದರು. 85 ವರ್ಷಗಳ ತುಂಬು ಜೀವನವನ್ನು ನಡೆಸಿ ವಿದಾಯ ಕೋರಿದಾಗ ನೆನಪಿಸಿಕೊಳ್ಳುವುದಕ್ಕೆ ಅವರು ಧಾರಾಳ ಒಳಿತುಗಳನ್ನು ಉಳಿಸಿ ಹೋಗಿದ್ದಾರೆ.  ಅಲ್ಲಾಹನು ಶರೀಫ್ ಸಾಬ್‌ರಿಗೆ ಸ್ವರ್ಗವನ್ನು ದಯಪಾಲಿಸಲಿ. ಆಮೀನ್.

Monday, 26 May 2025

ಸಂಪುಟಕ್ಕೆ ಬೇಡದ ಮುಸ್ಲಿಮರು ನಿಯೋಗಕ್ಕೆ ಏಕೆ ಬೇಕಾದರು?




ಕಾಶ್ಮೀರದ ಪೆಹಲ್ಗಾಮ್‌ನಲ್ಲಿ ನಡೆದ ಕ್ರೌರ್ಯವು ಭಯೋತ್ಪಾದನೆಯ ಅಪಾಯವನ್ನು ಜಗತ್ತಿನೆದುರು ತೆರೆದಿಟ್ಟರೆ, ಆ ಬಳಿಕದ ಬೆಳವಣಿಗೆಯು ಕೇಂದ್ರ ಸರಕಾರದ ಬೂಟಾಟಿಕೆಯನ್ನೂ ಬೆತ್ತಲೆ ಮಾಡಿದೆ. ಪಾಕಿಸ್ತಾನಿ ಪ್ರೇರಿತ ಭಯೋತ್ಪಾದನೆಯನ್ನು ಜಾಗತಿಕ ರಾಷ್ಟ್ರಗಳಿಗೆ ಮನವರಿಕೆ ಮಾಡುವುದಕ್ಕಾಗಿ ಮೋದಿ ಸರಕಾರ ಸರ್ವ ಪಕ್ಷಗಳ 7 ನಿಯೋಗಗಳನ್ನು ರಚಿಸಿದೆ. ಇದರಲ್ಲಿ ಕಾಂಗ್ರೆಸ್, ಎಡಪಕ್ಷಗಳು, ಎನ್‌ಸಿಪಿ, ಶಿವಸೇನೆ, ಟಿಎಂಸಿ, ಡಿಎಂಕೆ, ಬಿಜೆಪಿ ಸೇರಿದಂತೆ ವಿವಿಧ ಪಕ್ಷಗಳ 59 ಸದಸ್ಯರಿದ್ದಾರೆ. ಈ ನಿಯೋಗಗಳು ಅಮೇರಿಕ, ಯುರೋಪಿಯನ್ ರಾಷ್ಟ್ರಗಳು, ಆಫ್ರಿಕಾ, ಗಲ್ಫ್ ರಾಷ್ಟ್ರಗಳು, ವಿಶ್ವಸಂಸ್ಥೆಗೆ ಭೇಟಿ ನೀಡಿ ಪಾಕಿಸ್ತಾನ ಪ್ರೇರಿತ ಭಯೋತ್ಪಾದನೆಯನ್ನು ಮನವರಿಕೆ ಮಾಡಿಸುವುದು ಮತ್ತು ಜಾಗತಿಕ ರಾಷ್ಟ್ರಗಳನ್ನು ಭಾರತದ ಪರ ಒಲಿಸುವ ಕೆಲಸವನ್ನು ಮಾಡಲಿದೆ. ಈ ನಿಯೋಗಗಳಲ್ಲಿರುವ ಸದಸ್ಯರನ್ನು ನೋಡಿದರೆ ಮೋದಿ ಸರಕಾರವು ಅತ್ಯಂತ ಬುದ್ಧಿವಂತಿಕೆಯಿಂದ  ಈ ತಂಡ ರಚಿಸಿದೆ ಅನ್ನುವುದು ಗೊತ್ತಾಗುತ್ತದೆ. ಬಹುತ್ವದಲ್ಲಿ ಏಕತೆಯನ್ನು ಸಾರುವ ಮತ್ತು ಸಬ್‌ಕಾ ಸಾಥ್ ಘೋಷಣೆಯನ್ನು ಸಮರ್ಥಿಸುವ ರೂಪದಲ್ಲಿ ಈ ತಂಡವನ್ನು ರಚಿಸಲಾಗಿದೆ. ಈ 59 ಸದಸ್ಯರಲ್ಲಿ ಗುಲಾಮ್ ನಬಿ ಆಝಾದ್, ಸಲ್ಮಾನ್ ಖುರ್ಷಿದ್, ಇ.ಬಿ. ಮುಹಮ್ಮದ್ ಬಶೀರ್, ಮಿಯಾ ಅಲ್ತಾಫ್ ಅಹ್ಮದ್, ಎಂ.ಜೆ. ಅಕ್ಬರ್, ಅಸದುದ್ದೀನ್ ಓವೈಸಿ ಸಹಿತ 10 ಮಂದಿ ಮುಸ್ಲಿಮರಿದ್ದಾರೆ. ಪ್ರಶ್ನೆ ಇರೋದೇ ಇಲ್ಲಿ.

ಕೇಂದ್ರ ಸಚಿವ ಸಂಪುಟದಲ್ಲಿ ಒಬ್ಬನೇ ಒಬ್ಬ ಮುಸ್ಲಿಮರನ್ನು ಸೇರಿಸಿಕೊಳ್ಳದ ಮೋದಿ ಸರಕಾರವು ವಿದೇಶಿ ರಾಷ್ಟ್ರಗಳಲ್ಲಿ ಭಾರತದ ವರ್ಚಸ್ಸನ್ನು ಹೆಚ್ಚಿಸುವ ತಂಡಕ್ಕೆ ಮುಸ್ಲಿಮರನ್ನು ಆರಿಸಿದ್ದೇಕೆ? ವಿದೇಶಿಯರನ್ನು ಪ್ರಭಾವಿತಗೊಳಿಸಬಲ್ಲಷ್ಟು ತಜ್ಞರು ಮತ್ತು ನಿಪುಣ ನಾಯಕರು ಮುಸ್ಲಿಮ್ ಸಮುದಾಯದಲ್ಲಿ ಇದ್ದಾರೆ ಎಂದಾದರೆ, ಅವರನ್ನೇಕೆ ಸಚಿವ ಸಂಪುಟದಿಂದ ಹೊರಗಿಡಲಾಗಿದೆ? ಹಾಗಂತ,

ಬಿಜೆಪಿಯ 240ರಷ್ಟು ಸಂಸದರಲ್ಲಿ ಒಬ್ಬನೇ ಒಬ್ಬ ಮುಸ್ಲಿಮ್ ಸಂಸದ ಇಲ್ಲದೇ ಇರುವುದರಿಂದ ಸಂಪುಟಕ್ಕೆ ಅವರನ್ನು ಆಯ್ಕೆ ಮಾಡಲಾಗಿಲ್ಲ ಎಂದು ವಾದಿಸುವ ಹಾಗೆಯೂ ಇಲ್ಲ. ನಿರ್ಮಲಾ ಸೀತಾರಾಮನ್ ಕೂಡಾ ಪಾರ್ಲಿಮೆಂಟ್‌ಗೆ ಆಯ್ಕೆಯಾಗಿಲ್ಲ. ಜೆಪಿ ನಡ್ಡಾ ಕೂಡಾ ಪಾರ್ಲಿಮೆಂಟ್‌ಗೆ ಚುನಾಯಿತರಾಗಿಲ್ಲ. ಎಸ್. ಜೈಶಂಕರ್, ಅಶ್ವಿನಿ ವೈಷ್ಣವ್, ಹರ್‌ದೀಪ್ ಸಿಂಗ್ ಪುರಿ ಕೂಡಾ ಚುನಾವಣಾ ರಾಜಕೀಯದಲ್ಲಿ ಆಯ್ಕೆಯಾಗಿ ಬಂದವರಲ್ಲ. ಇವರನ್ನೆಲ್ಲ ರಾಜ್ಯಸಭಾ ಸದಸ್ಯರನ್ನಾಗಿ ಮಾಡಿ ಆ ಬಳಿಕ ಕೇಂದ್ರ ಸಚಿವ ಸಂಪುಟದಲ್ಲಿ ಸೇರಿಸಿಕೊಳ್ಳಲಾಗಿದೆ. ಹೀಗಿರುವಾಗ ಮುಸ್ಲಿಮರನ್ನು ಮಾತ್ರ ಇಂಥ ಪ್ರಕ್ರಿಯೆಯಿಂದ ಹೊರಗಿಟ್ಟಿರುವುದೇಕೆ? ಸಮರ್ಥ ಮುಸ್ಲಿಮ್ ನಾಯಕರನ್ನು ರಾಜ್ಯಸಭೆಗೆ ಆಯ್ಕೆ ಮಾಡಿ ಬಳಿಕ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಬಹುದಿತ್ತಲ್ಲವೇ? ಇಂಥ ಅವಕಾಶ ಇದ್ದೂ ಮುಸ್ಲಿಮರನ್ನು ಸೇರಿಸಿಕೊಳ್ಳದ ಮೋದಿ ಸರಕಾರವು ವಿದೇಶಕ್ಕೆ ಕಳುಹಿಸುವ ತಂಡದಲ್ಲಿ ಮುಸ್ಲಿಮರನ್ನು ಸೇರಿಸಿಕೊಂಡಿರುವುದರ ಅರ್ಥ ಏನು? ಜಗತ್ತನ್ನು ಮೂರ್ಖಗೊಳಿಸುವುದೇ? ತನ್ನ ಸರಕಾರವು ಬಹುತ್ವದಲ್ಲಿ ಏಕತೆಯನ್ನು, ಸಾಮಾಜಿಕ ನ್ಯಾಯವನ್ನು, ಸಮಾನ ಪ್ರಾತಿನಿಧ್ಯವನ್ನು ಭಾರತದಲ್ಲಿ ನೀಡುತ್ತಿದೆ ಮತ್ತು ಎಲ್ಲರನ್ನೂ ಒಳಗೊಳಿಸಿಕೊಂಡು ಹೋಗುತ್ತಿದೆ ಎಂಬ ಸಂದೇಶವನ್ನು ಸಾರುವುದೇ? ಇದು ಬೂಟಾಟಿಕೆ ಅಲ್ಲವೇ? ದೇಶದಲ್ಲಿ ಅಂಥದ್ದೊಂದು  ಪರಿಸ್ಥಿತಿ ಇದೆಯೇ? 20 ಕೋಟಿ ಬೃಹತ್ ಜನಸಂಖ್ಯೆಯ ಮುಸ್ಲಿಮ್ ಸಮುದಾಯವನ್ನು ಎಲ್ಲ ರೀತಿಯಿಂದಲೂ ದಬ್ಬಾಳಿಕೆ ಮತ್ತು ಅಂಚಿಗೆ ತಳ್ಳುವ ನೀತಿಯನ್ನು ಪಾಲಿಸುತ್ತಾ ವಿದೇಶಕ್ಕೆ ತೆರಳುವ ತಂಡದಲ್ಲಿ ಮುಸ್ಲಿಮರನ್ನು ಸೇರಿಸಿಕೊಳ್ಳುವುದು ಕಣ್ಣೊರೆಸುವ ತಂತ್ರವಲ್ಲವೇ? ನಿಜವಾಗಿ,

ವಿದೇಶಕ್ಕೆ ತೆರಳುವ ತಂಡದಲ್ಲಿ 10 ಮಂದಿ ಮುಸ್ಲಿಮರನ್ನು ಸೇರಿಸಿಕೊಳ್ಳುವ ಮೂಲಕ ಮೋದಿ ಸರಕಾರ ಮತ್ತು ಬಿಜೆಪಿ ಒಂದನ್ನಂತೂ  ಒಪ್ಪಿಕೊಂಡಂತಾಗಿದೆ. ಅದೇನೆಂದರೆ, ಭಾರತೀಯ ಮುಸ್ಲಿಮರನ್ನು ದೇಶದ್ರೋಹಿಗಳು, ಪಾಕಿಸ್ತಾನಿ ಬೆಂಬಲಿಗರು ಎಂದೆಲ್ಲಾ  ತಾವೇ ಪ್ರಚಾರ ಮಾಡುತ್ತಾ ಬಂದಿರುವುದೆಲ್ಲ ಸುಳ್ಳು ಎಂದು ಬಹಿರಂಗವಾಗಿ ಒಪ್ಪಿಕೊಂಡಂತಾಗಿದೆ. ಅದರಲ್ಲೂ ಹೈದರಾಬಾದ್ ಸಂಸದ ಅಸದುದ್ದೀನ್ ಓವೈಸಿಯನ್ನು ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ಎಂದೂ ದೇಶಪ್ರೇಮಿಯಾಗಿ ಕಂಡದ್ದೇ  ಇಲ್ಲ. ಅವರನ್ನು ಸದಾ ಹಿಂದೂ ವಿರೋಧಿಯಾಗಿ ಮತ್ತು ದೇಶದ್ರೋಹಿಯಾಗಿ ಅದು ಪ್ರತಿಬಿಂಬಿಸಿದೆ. ಹಾಗೆಯೇ ಇಂಡಿಯನ್ ಯೂನಿಯನ್ ಮುಸ್ಲಿಮ್ ಲೀಗ್ ಪಕ್ಷವನ್ನು ಅದು ಭಾರತೀಯ ಎಂದು ಒಪ್ಪಿಕೊಂಡದ್ದೇ  ಕಡಿಮೆ. ಈ ಪಕ್ಷದ ನಿಷ್ಠೆಯನ್ನು ಪಾಕಿಸ್ತಾನದೊಂದಿಗೆ ಜೋಡಿಸಿ ಸದಾ ಅದು ಮಾತಾಡುತ್ತಲೇ ಬಂದಿದೆ. ಅದರ ಹಸಿರು ಧ್ವಜವನ್ನು ಎತ್ತಿಕೊಂಡು ಹಲವು ಬಾರಿ ಪಾಕಿಸ್ತಾನದ ಧ್ವಜ ಎಂದು ಸೋಶಿಯಲ್ ಮೀಡಿಯಾದಲ್ಲಿ ಅಪಪ್ರಚಾರವನ್ನು ನಡೆಸಿದೆ. ಲೀಗ್‌ನ ಜೊತೆ ರಾಜಕೀಯ ಮೈತ್ರಿ ಮಾಡಿಕೊಂಡಿರುವುದಕ್ಕಾಗಿ ಅದು ಕಾಂಗ್ರೆಸನ್ನು ಟೀಕಿಸುತ್ತಲೂ ಇದೆ. ಆದರೆ ವಿದೇಶಕ್ಕೆ ತೆರಳುವ ನಿಯೋಗದಲ್ಲಿ ಅದೇ ಮುಸ್ಲಿಮ್ ಲೀಗ್‌ನ ಇ.ಟಿ. ಮುಹಮ್ಮದ್ ಬಶೀರ್‌ರನ್ನು ಇದೇ ಮೋದಿ ಸರಕಾರ ಸೇರಿಸಿಕೊಂಡಿದೆ. ಒಂದುರೀತಿಯಲ್ಲಿ,

ಬಿಜೆಪಿಗೆ ಮುಸ್ಲಿಮರೆಂದರೆ, ಬಕೆಟ್ ತುಂಬಾ ಹಾಲು ಕೊಡುವ ಕಾಮದೇನು. ಅವರನ್ನು ಬೈದು ದೂರ ಇಟ್ಟರೆ ಓಟು ಸಿಗುತ್ತದೆ. ಸೇರಿಸಿಕೊಂಡರೆ ಅಂತಾರಾಷ್ಟ್ರೀಯವಾಗಿ ಅದರ ವರ್ಚಸ್ಸು ವೃದ್ಧಿಯಾಗುತ್ತದೆ. ಮೋದಿ ಸರಕಾರ ಕಳೆದ 11 ವರ್ಷಗಳಿಂದ ದೇಶವನ್ನು ಆಳುತ್ತಿದೆ. ಕಳೆದ ಲೋಕಸಭಾ ಚುನಾವಣೆಯ ಸಮಯದಲ್ಲಿ ಪ್ರಧಾನಿ ಮೋದಿಯವರು 173 ಚುನಾವಣಾ ಭಾಷಣ ಮಾಡಿದ್ದರು. ಇದರಲ್ಲಿ 110 ಭಾಷಣಗಳೂ ಇಸ್ಲಾಂಫೋಬಿಕ್  (ಇಸ್ಲಾಮ್      ಭೀತಿಯನ್ನು) ಹರಡುವಂಥದ್ದಾಗಿತ್ತು ಎಂದು ಹ್ಯೂಮನ್ ರೈಟ್ಸ್ ವಾಚ್ ಹೇಳಿರುವುದನ್ನು 2024 ಆಗಸ್ಟ್ 14ರಂದು ದಿ ಹಿಂದೂ ಪತ್ರಿಕೆ ಪ್ರಕಟಿಸಿತ್ತು. ಇದು ಓರ್ವ ಪ್ರಧಾನಿಯ ಸ್ಥಿತಿಯಾದರೆ, ಇನ್ನು ಅದರ ಬೆಂಬಲಿಗರ ಸ್ಥಿತಿ ಏನಿರಬಹುದು? ಈ ದೇಶದ 17 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಂದೋ ಬಿಜೆಪಿ ಸರಕಾರವಿದೆ ಅಥವಾ ಸರಕಾರದ ಪಾಲುದಾರ ಪಕ್ಷವಾಗಿ ಅಧಿಕಾರದಲ್ಲಿದೆ. ಈ ಸರಕಾರಗಳಲ್ಲಿ ಮುಸ್ಲಿಮರ ಪ್ರಾತಿನಿಧ್ಯ ಶೂನ್ಯ ಅನ್ನುವಷ್ಟು ಕಡಿಮೆಯಿದೆ. ಮುಸ್ಲಿಮರಿಗೆ ಮಾತ್ರ ಸಂಬಂಧಿಸಿರುವ ಹಜ್ಜ್ ಮತ್ತು ವಕ್ಫ್ ಇತ್ಯಾದಿ ಖಾತೆಗಳನ್ನೂ ಮುಸ್ಲಿಮರಿಗೆ ನೀಡದೇ ಬಹಿರಂಗ ಉದ್ಧಟತನವನ್ನು ಬಿಜೆಪಿ ಸರಕಾರಗಳು ಪ್ರದರ್ಶಿಸುತ್ತಿವೆ. ಇವತ್ತು ಕೇಂದ್ರ ಸಚಿವ ಸಂಪುಟದಲ್ಲಿ ಅಲ್ಪಸಂಖ್ಯಾತ ಖಾತೆಯನ್ನು ನಿಭಾಯಿಸುವುದೂ ಅಲ್ಪಸಂಖ್ಯಾತರೇ ಅಲ್ಲದ ಕಿರಣ್ ರಿಜಿಜು. ಈ ಹಿಂದಿನ ಸರಕಾರದಲ್ಲಿ ಇದೇ ಖಾತೆಯನ್ನು ಸ್ಮೃತಿ ಇರಾನಿ ನಿಭಾಯಿಸಿದ್ದರು. ಹೀಗಿರುವಾಗ ವಿದೇಶಕ್ಕೆ ತೆರಳುವ ನಿಯೋಗಗಳಲ್ಲಿ ಮಾತ್ರ 10 ಮಂದಿ ಮುಸ್ಲಿಮರನ್ನು ಸೇರಿಸಿಕೊಂಡಿರುವುದರ ಅರ್ಥವೇನು? ಕನಿಷ್ಠ ಮುಸ್ಲಿಮರಿಗೆ ಮಾತ್ರ ಸಂಬಂಧೋಇಸಿರುವ ಖಾತೆಗಳಿಗೂ ಮುಸ್ಲಿಮರನ್ನು ನೇಮಿಸಿದ ಮೋದಿ ಸರಕಾರದ ಈ ನಡೆಯಲ್ಲಿ ಪ್ರಾಮಾಣಿಕತೆಯನ್ನು ಹುಡುಕುವುದು ಹೇಗೆ? ನಿಜ ಏನೆಂದರೆ,

ಬಿಜೆಪಿಗೆ ಅಧಿಕಾರ ಬೇಕು. ಅದು ಕೈಗೂಡಬೇಕಾದರೆ ಮುಸ್ಲಿಮರನ್ನು ದ್ವೇಷಿಸಬೇಕು. ಅವರನ್ನು ಹಿಂದೂ ವಿರೋಧಿಗಳಂತೆ, ಪಾಕಿಸ್ತಾನಿಗಳಂತೆ, ದೇಶದ್ರೋಹಿಗಳಂತೆ ಸದಾ ಬಿಂಬಿಸುತ್ತಾ ಅದನ್ನೇ ಚರ್ಚಾ ವಿಷಯವಾಗಿ ಬಳಸಿಕೊಳ್ಳಬೇಕು. ತನ್ನ ಬೆಂಬಲಿಗರನ್ನು ಮುಸ್ಲಿಮರ ವಿರುದ್ಧ ಛೂ ಬಿಡುವುದು ಮತ್ತು ಮುಸ್ಲಿಮರ ಮೇಲಿನ ಹಲ್ಲೆ -ಹತ್ಯೆಗಳಿಗೆ ಪರೋಕ್ಷ ಬೆಂಬಲ ಸಾರುವುದನ್ನೂ ಮಾಡುತ್ತಿರಬೇಕು. ತನ್ನದೇ ಬೆಂಬಲಿಗರ ಒಂದು ತಂಡದಿಂದ  ಮುಸ್ಲಿಮ್ ದ್ವೇಷಭಾಷಣ ಮಾಡಿಸುತ್ತಿರಬೇಕು. ಗೋಹತ್ಯೆ, ಲವ್ ಜಿಹಾದ್, ಲ್ಯಾಂಡ್ ಜಿಹಾದ್, ವ್ಯಾಪಾರ ಬಹಿಷ್ಕಾರ ಇತ್ಯಾದಿ ಇತ್ಯಾದಿಗಳನ್ನು ಆಗಾಗ ಪ್ರಚಾರಕ್ಕೆ ತರುತ್ತಿರಬೇಕು. ಇಂಥ ಅಪಪ್ರಚಾರಗಳನ್ನು ಚಾಲ್ತಿಯಲ್ಲಿಟ್ಟರೆ ತನ್ನ ಬೆಂಬಲಿಗರು ಇತರ ವಿಷಯಗಳತ್ತ ಗಮನ ಹರಿಸುವುದನ್ನು ನಿಲ್ಲಿಸುತ್ತಾರೆ ಎಂಬ ತಂತ್ರ ಅದರದು. ಆದರೆ,

ಆಂತರಿಕವಾಗಿ ಬಿಜೆಪಿ ನಾಯಕತ್ವಕ್ಕೆ ಇವೆಲ್ಲ ಸುಳ್ಳು ಅನ್ನುವುದು ಗೊತ್ತಿದೆ. ಮುಸ್ಲಿಮರು ದೇಶಪ್ರೇಮಿಗಳು, ಹಿಂದೂ ವಿರೋಧಿಗಳಲ್ಲ ಅನ್ನುವುದೂ ತಿಳಿದಿದೆ. ಆದರೆ ಇದನ್ನೆಲ್ಲ ಬಹಿರಂಗವಾಗಿ ಹೇಳಿದರೆ ಎಲ್ಲಿ ತನ್ನ ಅಸ್ತಿತ್ವಕ್ಕೆ ಧಕ್ಕೆಯಾಗುತ್ತದೋ ಎಂಬ ಭೀತಿ ಅದರದು. ಆದ್ದರಿಂದಲೇ, ದೇಶದೊಳಗೆ ಮುಸ್ಲಿಮರನ್ನು ದ್ವೇಷಿಸುತ್ತಾ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುಸ್ಲಿಮರನ್ನು ಒಳಗೊಳಿಸುತ್ತಾ ಬೂಟಾಟಿಕೆಯಿಂದ ಅದು ನಡೆದುಕೊಳ್ಳುತ್ತಿದೆ. ದುರಂತ ಏನೆಂದರೆ, ಬಿಜೆಪಿಯ ತಳಮಟ್ಟದ ಕಾರ್ಯಕರ್ತರಿಗೆ ಈ ಬೂಟಾಟಿಕೆ ಅರ್ಥವೇ ಆಗಿಲ್ಲ. ಅವರು ಸೋಶಿಯಲ್ ಮೀಡಿಯಾದಲ್ಲೂ ಬಹಿರಂಗವಾಗಿಯೂ ಮುಸ್ಲಿಮ್ ದ್ವೇಷವನ್ನು ಹಂಚುತ್ತಾ ತಿರುಗುತ್ತಿದ್ದಾರೆ.

Monday, 5 May 2025

ಧರ್ಮರಾಜಕಾರಣದ ಅಪಾಯವನ್ನು ಬಿಚ್ಚಿಟ್ಟ ದ.ಕ. ಜಿಲ್ಲೆ




ದಕ್ಷಿಣ ಕನ್ನಡ ಜಿಲ್ಲೆ  ಒಂದೇ ವಾರದಲ್ಲಿ ಎರಡು ಕಾರಣಗಳಿಗಾಗಿ ರಾಜ್ಯಮಟ್ಟದಲ್ಲಿ ಸುದ್ದಿಗೀಡಾಗಿದೆ. ಒಂದು- ಹಿಂಸೆಯ ಕಾರಣಕ್ಕಾದರೆ, ಇನ್ನೊಂದು- ಶೈಕ್ಷಣಿಕ ಸಾಧನೆಯ ಕಾರಣಕ್ಕೆ.

ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶದಲ್ಲಿ ದ.ಕ. ಜಿಲ್ಲೆ  ರಾಜ್ಯದಲ್ಲೇ  ಮೊದಲ ಸ್ಥಾನ ಪಡೆದಿದೆ. ಸಾಧಕ ವಿದ್ಯಾರ್ಥಿಗಳ ಶೇಕಡಾವಾರು ಅಂಕಗಳು ಮತ್ತು ಫೋಟೋಗಳು ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿವೆ. ಇನ್ನೊಂದು ಕಡೆ, ಹೆತ್ತವರು ತಮ್ಮ ಮಕ್ಕಳ ಭವಿಷ್ಯ ರೂಪಿಸುವ ಕಾಲೇಜುಗಳ ಹುಡುಕಾಟದಲ್ಲಿದ್ದಾರೆ. ಈ ಫಲಿತಾಂಶಕ್ಕಿಂತ  ನಾಲ್ಕೈದು  ದಿನಗಳ ಮೊದಲು ಇದೇ ಜಿಲ್ಲೆಯಲ್ಲಿ ಎರಡು ಹತ್ಯೆಗಳು ನಡೆದುವು. ಮಾನಸಿಕ ಅಸ್ವಸ್ಥನಾದ ಕೇರಳದ ಅಶ್ರಫ್ ಎಂಬವರನ್ನು ಕ್ರಿಕೆಟ್ ಆಡುತ್ತಿದ್ದ ಗುಂಪು ಥಳಿಸಿ ಹತ್ಯೆ ಮಾಡಿತು. ಈ ದುಷ್ಕರ್ಮಿಗಳಿಗೆ ಈ ಅಶ್ರಫ್‌ನ ಪರಿಚಯವೇ ಇರಲಿಲ್ಲ. ಈ ಅಶ್ರಫ್‌ಗೂ ಈ ಕ್ರಿಕೆಟಿಗರ ಪರಿಚಯವೇ ಇರಲಿಲ್ಲ. ಹೀಗೆ ಪರಸ್ಪರ ಪರಿಚಯವೇ ಇಲ್ಲದ ಮತ್ತು ದ್ವೇಷಭಾವ ಹೊಂದುವುದಕ್ಕೆ ಕಾರಣಗಳೇ ಇಲ್ಲದ ವ್ಯಕ್ತಿಯನ್ನು ಕೊಲೆ ಮಾಡುವುದಕ್ಕೆ ಅಶ್ರಫ್‌ನ ಧರ್ಮದ ಹೊರತಾಗಿ ಬೇರೆ ಯಾವ ಕಾರಣವೂ ಇರಲಿಲ್ಲ. ಈ ಹತ್ಯೆಗಿಂತ ವಾರ ಮೊದಲು ಕಾಶ್ಮೀರದಲ್ಲಿ ಭಯೋತ್ಪಾದಕರು 26 ಮಂದಿಯನ್ನು ಕೊಂದಿದ್ದರು. ಈ ಕ್ರೌರ್ಯದ ಬಳಿಕ ಮುಸ್ಲಿಮ್ ದ್ವೇಷದ ಪ್ರಚಾರವೊಂದು ಸೋಶಿಯಲ್ ಮೀಡಿಯಾದಲ್ಲಿ ಎಗ್ಗಿಲ್ಲದೇ ಹರಿದಾಡಿತ್ತು. ಟಿವಿ. ಚಾನೆಲ್‌ಗಳೂ ಈ ದ್ವೇಷ ಹರಡುವುದರಲ್ಲಿ ಹಿಂದೆ ಬಿದ್ದಿರಲಿಲ್ಲ. ಭಯೋತ್ಪಾದಕರ ಕೃತ್ಯಕ್ಕೆ 20 ಕೋಟಿ ಭಾರತೀಯ ಮುಸ್ಲಿಮರು ಹೊಣೆ ಹೊರಬೇಕು ಎಂಬ ರೀತಿಯ ಅತೀ ಅಪಾಯಕಾರಿ ವಾದವೊಂದನ್ನು ಕೋಮುವಾದಿಗಳು ತೇಲಿಬಿಟ್ಟಿದ್ದರು. ಈ ದ್ವೇಷದ ಪರಿಣಾಮವಾಗಿ ದೇಶದಾದ್ಯಂತ ಕಾಶ್ಮೀರಿಗಳು ಮತ್ತು ಇತರ ಮುಸ್ಲಿಮರು ಹಲ್ಲೆ, ನಿಂದನೆ, ದೌರ್ಜನ್ಯಕ್ಕೆ ತುತ್ತಾಗುತ್ತಿದ್ದಾಗಲೇ ಜಿಲ್ಲೆಯಲ್ಲಿ ಈ ಗುಂಪು ಹತ್ಯೆ ನಡೆದಿತ್ತು. ಆದರೆ,

ಜಿಲ್ಲೆಯಲ್ಲಿ ನಡೆದ ಈ ಮೊಟ್ಟಮೊದಲ ಗುಂಪು ಹತ್ಯೆಯನ್ನು ಮುಸ್ಲಿಮರು ಅತ್ಯಂತ ತಾಳ್ಮೆಂಯಿಂದ  ನಿಭಾಯಿಸಿದರು. ಅವರು ಜಿಲ್ಲಾ  ಬಂದ್‌ಗೆ ಕರೆ ಕೊಡಲಿಲ್ಲ. ಅಶ್ರಫ್ ಹತ್ಯೆಗೆ ಪ್ರತೀಕಾರವಾಗಿ ಹಿಂದೂಗಳ ಮೇಲೆ ಹಲ್ಲೆ  ನಡೆಸಿರಲಿಲ್ಲ. ಶವ ಮೆರವಣಿಗೆ ಮಾಡಲಿಲ್ಲ. ಒಂದೇ ಒಂದು ಪ್ರಚೋದನಕಾರಿ ಭಾಷಣ ಮಾಡಲಿಲ್ಲ. ಪಾಕಿಸ್ತಾನ್ ಝಿಂದಾಬಾದ್ ಎಂದು ಕೂಗಿದ ಕಾರಣಕ್ಕಾಗಿ ಈ ಹತ್ಯೆ ನಡೆಸಲಾಗಿದೆ ಎಂಬ ಅರ್ಥ ಬರುವಂತೆ ಗೃಹಸಚಿವ ಪರಮೇಶ್ವರ್ ಹೇಳಿಕೆ ಕೊಟ್ಟು ಸಮರ್ಥನೆಗಿಳಿದಾಗಲೂ ಮುಸ್ಲಿಮರು ಪ್ರಚೋದನೆಗೆ ಒಳಗಾಗಲಿಲ್ಲ. ಸ್ಥಳೀಯ ಶಾಸಕರಾಗಲಿ ಉಸ್ತುವಾರಿ ಸಚಿವರಾಗಲಿ ಸ್ಥಳಕ್ಕೆ ಆಗಮಿಸದೇ ಇದ್ದಾಗಲೂ ಮುಸ್ಲಿಮರು ಆಕ್ರೋಶದಿಂದ ಕಾನೂನು ಕೈಗೆತ್ತಿಕೊಳ್ಳಲಿಲ್ಲ. ಈ ಇಡೀ ಪ್ರಕರಣವನ್ನು ಮುಚ್ಚಿ ಹಾಕಲು ಸ್ಥಳೀಯ ಠಾಣಾಧಿಕಾರಿ ಪ್ರಯತ್ನಿಸಿದಾಗಲೂ ಮುಸ್ಲಿಮರು ಅಶಾಂತಿಗೆ ಕಾರಣವಾಗುವ ಏನನ್ನೂ ಮಾಡಲಿಲ್ಲ. ಆದರೆ,

ಈ ಹತ್ಯೆ ನಡೆದ ನಾಲ್ಕೈದು  ದಿನಗಳ ಬಳಿಕ ರೌಡಿ ಶೀಟರ್ ಸುಹಾಸ್ ಶೆಟ್ಟಿಯ ಹತ್ಯೆ ಇದೇ ಜಿಲ್ಲೆಯಲ್ಲಿ ನಡೆದಾಗ ಇಡೀ ಚಿತ್ರಣವೇ ಬದಲಾಯಿತು. ಈತ ಫಾಝಿಲ್ ಎಂಬ ಅಮಾಯಕ ಯುವಕನ ಕೊಲೆಯ ನಂಬರ್ ವನ್ ಆರೋಪಿ. ಕೀರ್ತಿ ಎಂಬ ಯುವಕನ ಹತ್ಯೆಯ ಆರೋಪಿ. ಅಲ್ಲದೇ ಐದರಷ್ಟು ಕ್ರಿಮಿನಲ್ ಪ್ರಕರಣಗಳ ಆರೋಪಿ. ಈತನ ವಿರುದ್ಧ ಬಿಜೆಪಿ ಸರಕಾರವೇ ರೌಡಿಶೀಟರ್ ಪಟ್ಟಿ ತೆರೆದಿತ್ತು. ಈಗಿನ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರೇ ಆಗ ಗೃಹಸಚಿವರಾಗಿದ್ದರು. ಆದರೆ, ಸುಹಾಸ್ ಶೆಟ್ಟಿಯ ಹತ್ಯೆಯ ಬೆನ್ನಿಗೇ ಇದೇ ಅಶೋಕ್ ಜಿಲ್ಲೆಗೆ ದೌಡಾಯಿಸಿದರು. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಆಗಮಿಸಿದರು. ಈತ ಇನ್ನೊಂದು ಗ್ಯಾಂಗ್‌ನಿಂದ  ಹತ್ಯೆಗೆ ಒಳಗಾಗಿದ್ದರೂ ಬಿಜೆಪಿ ರಾಜ್ಯಾಧ್ಯಕ್ಷರಿಂದ ಹಿಡಿದು ಸ್ಥಳೀಯ ಬಿಜೆಪಿ ಶಾಸಕರವರೆಗೆ ಎಲ್ಲರೂ ಇದನ್ನು ಜಿಹಾದಿ ಕೃತ್ಯ, ಇಸ್ಲಾಮಿಕ್ ಆತಂಕವಾದ ಎಂದೆಲ್ಲಾ ಹೇಳಿಕೆ ಕೊಟ್ಟರು. ಸಂಘಪರಿವಾರ ಜಿಲ್ಲಾ ಬಂದ್‌ಗೆ ಕರೆ ಕೊಟ್ಟಿತು. ಜಿಲ್ಲೆಯ ನಾಲ್ಕೈದು  ಕಡೆ ಮುಸ್ಲಿಮರನ್ನು ಚೂರಿಯಿಂದ ಇರಿಯಲಾಯಿತು. ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜಾ ಅಂತೂ ಅತ್ಯಂತ ಪ್ರಚೋದನಕಾರಿಯಾಗಿ ಭಾಷಣ ಮಾಡಿದರು. ಮುಸ್ಲಿಮರನ್ನು ಹೀನಾಯವಾಗಿ ನಿಂದಿಸಿದರು.

ನಿಜವಾಗಿ, ಈ ಎರಡೂ ಘಟನೆಗಳಲ್ಲಿ ಒಂದಂತೂ  ಸ್ಪಷ್ಟವಾಗಿದೆ. ಮುಸ್ಲಿಮರು ಶಾಂತಿಭಂಗ  ಮಾಡುವವರು, ಕಾನೂನು ಭಂಜಕರು, ಹಿಂದೂ ವಿರೋಧಿಗಳು ಎಂಬ ಬಿಜೆಪಿ ಮತ್ತು ಅವರ ಬೆಂಬಲಿಗರ ವಾದ ಅಪ್ಪಟ ಸುಳ್ಳು ಅನ್ನುವುದನ್ನು ಈ ಘಟನೆಗಳು ತೋರಿಸಿವೆ. ಸರಕಾರದಿಂದ ಹಿಡಿದು ಸ್ಥಳೀಯ ಪೊಲೀಸರ ವರೆಗೆ ಎಲ್ಲರೂ ನ್ಯಾಯಯುತವಾಗಿ ನಡಕೊಳ್ಳದಿರುವಾಗಲೂ ಮುಸ್ಲಿಮರು ಕಾನೂನನ್ನು ಕೈಗೆತ್ತಿಕೊಳ್ಳಲೇ ಇಲ್ಲ. ಹಿಂಸೆಗೂ ಇಳಿಯಲಿಲ್ಲ. ಇದೇವೇಳೆ, ಸುಹಾಸ್ ಶೆಟ್ಟಿಯ ವಿಷಯದಲ್ಲಿ ಬಿಜೆಪಿ ಮತ್ತು ಅದರ ಬೆಂಬಲಿಗರು ಕಾನೂನುಬಾಹಿರವಾಗಿ ನಡಕೊಂಡರು. ಪ್ರಚೋದನಕಾರಿ ಭಾಷಣ ಮಾಡಿದರು. ಮುಸ್ಲಿಮರು ಇರಿತಕ್ಕೂ ಒಳಗಾದರು. ಆದ್ದರಿಂದ,

ನಾಗರಿಕ ಸಮಾಜ ಈ ಎರಡನ್ನೂ ತಾಳ್ಮೆಯಿಂದ ಅವಲೋಕನಕ್ಕೆ ಒಳಪಡಿಸಬೇಕು. ಸಮಾಜದ ಶಾಂತಿಯನ್ನು ಕದಡಲು ಯಾರು ಶ್ರಮಿಸುತ್ತಿದ್ದಾರೆ ಮತ್ತು ಅವರ ಗುರಿ ಯಾವುದು ಎಂಬುದರ ಬಗ್ಗೆ ನಿಷ್ಪಕ್ಷ ಪಾತವಾಗಿ ಚಿಂತನೆ ನಡೆಸಬೇಕು. ತಮ್ಮ ರಾಜಕೀಯ ದುರುದ್ದೇಶವನ್ನು ಈಡೇರಿಸಿಕೊಳ್ಳುವುದಕ್ಕಾಗಿ ಮತ್ತು ತಮ್ಮ ಕಾನೂನುಬಾಹಿರ ದಂಧೆಗಳನ್ನು ಅಡಗಿಸುವುದಕ್ಕಾಗಿ ಮುಸ್ಲಿಮರನ್ನು ಸದಾ ಕಟಕಟೆಯಲ್ಲಿ ನಿಲ್ಲಿಸುವ ಪ್ರಯತ್ನಗಳು ನಡೆಯುತ್ತಿವೆಯೇ ಎಂಬುದಾಗಿ ಆಲೋಚಿಸಬೇಕು. ಯಾಕೆಂದರೆ,

ಸುಸಜ್ಜಿತ ವಿಮಾನ ನಿಲ್ದಾಣ, ರೈಲ್ವೇ ನಿಲ್ದಾಣ ಮತ್ತು ಬಂದರು ನಿಲ್ದಾಣವನ್ನು ಹೊಂದಿರುವ ಹೊರತಾಗಿಯೂ ದ ಕ ಜಿಲ್ಲೆ   ಉದ್ಯೋಗವನ್ನು ಸೃಷ್ಟಿಸುತ್ತಿಲ್ಲ. ಕಂಪೆನಿಗಳು ಜಿಲ್ಲೆಗೆ ಬರುತ್ತಿಲ್ಲ. ಎಂಜಿನಿಯರಿಂಗ್  ಮತ್ತು ಮೆಡಿಕಲ್ ಕಾಲೇಜುಗಳು ಧಾರಾಳ ಇದ್ದರೂ ಇಲ್ಲಿ ಕಲಿತ ಮಕ್ಕಳು ಉದ್ಯೋಗಕ್ಕಾಗಿ ಹೊರದೇಶಕ್ಕೋ ಹೊರ ರಾಜ್ಯಗಳಿಗೋ ಹೋಗಬೇಕಾದ ಅನಿವಾರ್ಯತೆ ಇದೆ. ವಿದೇಶದಲ್ಲಿ ದುಡಿಯುತ್ತಿರುವ ಮಗ ಅಥವಾ ಮಗಳೊಂದಿಗೆ ದಿನಾ ವೀಡಿಯೋ ಕರೆ ಮೂಲಕ ಮಾತಾಡಿ ತೃಪ್ತಿಪಟ್ಟುಕೊಳ್ಳಬೇಕಾದಂಥ ಹಿರಿಯ ಹೆತ್ತವರು ಜಿಲ್ಲೆಯಲ್ಲಿದ್ದಾರೆ. ಇದಕ್ಕೆ ಧರ್ಮದ ಮುಖವಾಡ ತೊಟ್ಟು ರಾಜಕೀಯ ಗುರಿ ಈಡೇರಿಸಿಕೊಳ್ಳುತ್ತಿರುವ ರಾಜಕಾರಣಿಗಳೇ ಕಾರಣ. ಅವರ ಮಕ್ಕಳಾರೂ ಈ ಹಿಂಸಾಕೃತ್ಯಗಳಲ್ಲಿ ಭಾಗಿಯಾಗುವುದಿಲ್ಲ. ತಮ್ಮ ಮಕ್ಕಳನ್ನು ವಿದೇಶದಲ್ಲೋ  ಹೊರರಾಜ್ಯದಲ್ಲೋ  ಓದಿಸುತ್ತಾ ಮತ್ತು ನೌಕರಿಗಾಗಿ ವಿದೇಶಕ್ಕೆ ಕಳುಹಿಸಿಕೊಡುತ್ತಾ ಜಿಲ್ಲೆಯ ಬಡಪಾಯಿ ಯುವಕರನ್ನು ಅಪರಾಧ ಕೃತ್ಯಗಳಿಗೆ ಈ ರಾಜಕಾರಣಿಗಳು ಬಳಸಿಕೊಳ್ಳುತ್ತಿದ್ದಾರೆ. ಹತ್ಯೆಗೀಡಾದ ಸುಹಾಸ್ ಶೆಟ್ಟಿಯ ಬದುಕಿನಲ್ಲೂ ಇದಕ್ಕೆ ಆಧಾರವಿದೆ. 31 ವರ್ಷವಾಗಿಯೂ ಮದುವೆಯಾಗಿಲ್ಲದ, ಅನಾರೋಗ್ಯ ಪೀಡಿತ ಹೆತ್ತವರೊಂದಿಗೆ ಬಡತನದ ಬದುಕನ್ನೇ ಬದುಕುತ್ತಿದ್ದ ಸುಹಾಸ್ ಶೆಟ್ಟಿಯನ್ನು ಒಂದು ಕಡೆ ತಮ್ಮ ರಾಜಕೀಯ ಗುರಿ ಸಾಧನೆಗಾಗಿ ಬಳಸಿಕೊಳ್ಳುತ್ತಲೇ ಇನ್ನೊಂದು ಕಡೆ ರೌಡಿಶೀಟರ್ ಖಾತೆಯನ್ನೂ ಇವೇ ರಾಜಕಾರಣಿಗಳು ತೆರೆದರು. ಅಪರಾಧ ಜಗತ್ತಿಗೆ ಇಳಿದ ಸುಹಾಸ್ ಶೆಟ್ಟಿಗೆ ಸಹಜವಾಗಿಯೇ ವೈರಿಗಳೂ ಹುಟ್ಟಿಕೊಂಡರು. ರಾಜಕಾರಣಿಗಳ ಮಕ್ಕಳಂತೆ ಚೆನ್ನಾಗಿ ಓದದೆ, ಕೈತುಂಬಾ ಸಂಬಳ ಪಡೆಯುವ ಉದ್ಯೋಗವನ್ನೂ ಮಾಡಲಾಗದೇ ಮತ್ತು ವೃದ್ಧ ಹೆತ್ತವರನ್ನು ಚೆನ್ನಾಗಿ ನೋಡಿಕೊಳ್ಳಲಾಗದೇ ಕೊನೆಗೆ ಎದುರಾಳಿ ಗ್ಯಾಂಗ್‌ನಿಂದ  ಆತ ಹತ್ಯೆಗೀಡಾದ. ಸದ್ಯ,

ಜಿಲ್ಲೆಯ ನಾಗರಿಕರು ಪ್ರಜ್ಞಾವಂತರಾಗಬೇಕಿದೆ. ಧರ್ಮದ ಹೆಸರಲ್ಲಿ ಯುವಕರನ್ನು ಅಪರಾಧ ಜಗತ್ತಿಗೆ ತಳ್ಳುವ ರಾಜಕಾರಣಿಗಳ ಕುತಂತ್ರವನ್ನು ಬಹಿರಂಗವಾಗಿ ಪ್ರಶ್ನಿಸುವ ಧೈರ್ಯವನ್ನು ತೋರಿಸಬೇಕಿದೆ. ನಿಮ್ಮ ಮಕ್ಕಳ ನೇತೃತ್ವದಲ್ಲೇ  ಈ ಧರ್ಮರಕ್ಷಣೆಯ ಕೆಲಸ ಪ್ರಾರಂಭವಾಗಲಿ ಎಂದು ಯಾವಾಗ ನಾಗರಿಕರು ಧ್ವನಿ ಎತ್ತರಿಸಿ ರಾಜಕಾರಣಿಗಳಲ್ಲಿ ಹೇಳಲು ಪ್ರಾರಂಭಿಸುತ್ತಾರೋ ಅಂದಿನಿಂದ  ಜಿಲ್ಲೆಯಲ್ಲಿ ಶಾಂತಿಯ ಪರ್ವ ಆರಂಭವಾಗಬಹುದು. ಮಾತ್ರವಲ್ಲ, ಯಾವಾಗ ಧರ್ಮದ್ವೇಷಿಗಳನ್ನು ಮತ್ತು ಪ್ರಚೋದನಕಾರಿ ಭಾಷಣಗಾರರನ್ನು ಸ್ಥಳದಲ್ಲೇ  ಪ್ರಶ್ನಿಸುವ ಧೈರ್ಯವನ್ನು ಜನರು ತೋರುತ್ತಾರೋ ನಿಧಾನಕ್ಕೆ ಧರ್ಮ ರಾಜಕಾರಣ ಬದಿಗೆ ಸರಿದು ಅಭಿವೃದ್ಧಿ ರಾಜಕಾರಣ ಮುನ್ನೆಲೆಗೆ ಬರಬಹುದು. ಬಡಪಾಯಿ ಯುವಕರ ಜೀವದೊಂದಿಗೆ ಚೆಲ್ಲಾಟ ನಡೆಸುವ ಧರ್ಮ ರಾಜಕಾರಣಕ್ಕೆ ಜನರು ಬೆನ್ನು ತಿರುಗಿಸದ ಹೊರತು ಜಿಲ್ಲೆಯಲ್ಲಿ ಶಾಂತಿ ಸಾಧ್ಯವಿಲ್ಲ. ಶಾಂತಿಯೇ ಇಲ್ಲದ ಜಿಲ್ಲೆಯಲ್ಲಿ ಉದ್ಯೋಗ ಸೃಷ್ಟಿಯೂ ಸಾಧ್ಯವಿಲ್ಲ.

Tuesday, 22 April 2025

ಧರ್ಮದ್ವೇಷಿಗಳಿಗೆ ಪಾಠ ಹೇಳಿದ ಜನಿವಾರ




ಸಿಇಟಿ ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿಗಳ ಜನಿವಾರವನ್ನು ಕಳಚಿದ ಪ್ರಕರಣಕ್ಕೆ ಸಂಬಂಧಿಸಿ ಬೀದರ್ ಮತ್ತು ಶಿವಮೊಗ್ಗದ ನಾಲ್ವರು ಅಧಿಕಾರಿಗಳ ಮೇಲೆ ಒಂದೇ ದಿನದೊಳಗೆ ಕ್ರಮ ಕೈಗೊಳ್ಳಲಾಗಿದೆ. ಜನಿವಾರ ತೆಗೆದು ಸಿಇಟಿ ಪರೀಕ್ಷೆ ಬರೆಯಲು ಒಪ್ಪಿಕೊಳ್ಳದ ಸುಚಿವೃತ ಕುಲಕರ್ಣಿ ಎಂಬ ವಿದ್ಯಾರ್ಥಿಗೆ ಉಚಿತ ಇಂಜಿನಿಯರಿಂಗ್  ಸೀಟ್ ಕೊಡಿಸುವುದಾಗಿ ಸಚಿವ ಈಶ್ವರ ಖಂಡ್ರೆ ಭರವಸೆ ನೀಡಿದ್ದಾರೆ. ಈ ಪ್ರಕರಣವನ್ನು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಖಂಡಿಸಿದ್ದಾರೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ ಪ್ರಬಲ ವಿರೋಧವನ್ನು ವ್ಯಕ್ತಪಡಿಸಿದ್ದಲ್ಲದೇ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ತಕ್ಷಣ ಕ್ರಮ ಕೈಗೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಬೀದರ್‌ನ ಸಾಯಿ ಸ್ಫೂರ್ತಿ ಕಾಲೇಜಿನ ಮುಖ್ಯಸ್ಥರಿಗೆ ಜಿಲ್ಲಾಧಿಕಾರಿ ಶಿಲ್ಪಾ ಶರ್ಮ ತಕ್ಷಣ ನೋಟೀಸು ಜಾರಿ ಮಾಡಿದ್ದಾರೆ. ಶಿವಮೊಗ್ಗ ಸಾಗರದ ಸರಕಾರಿ ಪದವಿ ಪೂರ್ವ ಕಾಲೇಜಿನ ವಿರುದ್ಧ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತನಿಖೆಗೆ ಆದೇಶಿಸಿದ್ದಾರೆ. ಈ ಎಲ್ಲದರ ನಡುವೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಮಾಜಿ ಗೃಹಸಚಿವ ಆರಗ ಜ್ಞಾನೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಕರಾವಳಿಯ ಶಾಸಕ ಭರತ್ ಶೆಟ್ಟಿ ಸಹಿತ ಹತ್ತು-ಹಲವು ಜನಪ್ರತಿನಿಧಿಗಳು ಘಟನೆಯನ್ನು ಖಂಡಿಸಿ ಹೇಳಿಕೆಗಳನ್ನು ನೀಡಿದ್ದಾರೆ. ರಾಜ್ಯದ ಕಾಂಗ್ರೆಸ್ ಸರಕಾರಕ್ಕೆ ಬ್ರಾಹ್ಮಣರ ಶಾಪ ತಟ್ಟಲಿದೆ ಎಂದು ಶಾಸಕ ಭರತ್ ಶೆಟ್ಟಿ ಹೇಳಿದ್ದಾರೆ. ಈ ನಡುವೆ ಬೆಂಗಳೂರು, ಬೀದರ್ ಮತ್ತು ಕಲಬುರ್ಗಿಯಲ್ಲಿ ಬ್ರಾಹ್ಮಣ ಸಮುದಾಯದಿಂದ ಬೃಹತ್ ಪ್ರತಿಭಟನೆ ನಡೆದಿದೆ. ಕಲಬುರ್ಗಿಯಲ್ಲಿ ಬೈಕ್‌ಗೆ ಬೆಂಕಿ ಹಚ್ಚಿ ಪ್ರತಿಭಟನಾಕಾರರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

2022 ಜನವರಿಯಲ್ಲಿ ಉಡುಪಿಯ ಹೆಣ್ಣು ಮಕ್ಕಳ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಇದಕ್ಕೆ ಸಮಾನವಾದ ಘಟನೆ ನಡೆದಿತ್ತು. ಶಿರವಸ್ಟ್ರ  ಧರಿಸಿದ ಕಾರಣಕ್ಕಾಗಿ ವಿದ್ಯಾರ್ಥಿನಿಯರಿಗೆ ತರಗತಿ ಪ್ರವೇಶ ನಿರಾಕರಿಸಲಾಯಿತು. ಹಾಗಂತ, ಆಗ ರಾಜ್ಯಾದ್ಯಂತ ಹಿಜಾಬ್‌ಗೆ ನಿಷೇಧವೇನೂ ಇರಲಿಲ್ಲ. ಸರಕಾರಿ ಶಾಲೆ-ಕಾಲೇಜುಗಳಲ್ಲಿ ಹಿಜಾಬ್ ಧರಿಸಿ ಹೋಗುವವರಿಗೂ ಅನುಮತಿ ಇತ್ತು. ಕೈನೂಲು, ಹಣೆಗೆ ಕುಂಕುಮ, ಮೂಗುತಿ, ಹಣೆಬೊಟ್ಟು, ಸಿಕ್ಖರ ಪೇಟ ಇತ್ಯಾದಿ ಧಾರ್ಮಿಕ-ಸಾಂಸ್ಕೃತಿಕ ಅಸ್ಮಿತೆಗಳನ್ನು ಧರಿಸುವವರಿಗೂ ತರಗತಿಗೆ ಪ್ರವೇಶವಿತ್ತು. ಆದರೆ,

ಉಡುಪಿಯ ಬಿಜೆಪಿ ಶಾಸಕ ರಘುಪತಿ ಭಟ್ ಅವರ ಅಧ್ಯಕ್ಷತೆಯಲ್ಲಿದ್ದ ಹೆಣ್ಣು ಮಕ್ಕಳ ಸರಕಾರಿ ಕಾಲೇಜು ಹಿಜಾಬ್ ನಿಷೇಧದ ಪರವಾಗಿ ನಿಂತಿತು. ವಿದ್ಯಾರ್ಥಿನಿಯರು ಪರಿಪರಿಯಾಗಿ ವಿನಂತಿಸಿದರೂ ಜಗ್ಗಲಿಲ್ಲ. ಸುಮಾರು ಒಂದು ತಿಂಗಳ ಕಾಲ ಈ ವಿದ್ಯಾರ್ಥಿನಿಯರು ಕಾಲೇಜಿನ ಮೆಟ್ಟಿಲಲ್ಲಿ ಮತ್ತು ವರಾಂಡದಲ್ಲಿ ಕುಳಿತು ಅಭ್ಯಾಸ ಮಾಡಿದರು. ಆಡಳಿತ ಮಂಡಳಿಯ ಒಪ್ಪಿಗೆಗಾಗಿ ಕಾದರು. ಈಗ ಜನಿವಾರ ಪ್ರಕರಣವನ್ನು ಖಂಡಿಸಿರುವ ಇದೇ ಬಸವರಾಜ್ ಬೊಮ್ಮಾಯಿಯವರು ಆಗ ಮುಖ್ಯಮಂತ್ರಿಯಾಗಿದ್ದರೆ, ಇದೇ ಆರಗ ಜ್ಞಾನೇಂದ್ರ ಗೃಹಸಚಿವರಾಗಿದ್ದರು. ಪ್ರಹ್ಲಾದ ಜೋಶಿ ಆಗಲೂ ಕೇಂದ್ರ ಸಚಿವರಾಗಿದ್ದರು. ಆದರೆ, ಇವರೆಲ್ಲ ಆಗ ಈ ವಿದ್ಯಾರ್ಥಿನಿಯರಿಗೆ ತರಗತಿ ಪ್ರವೇಶ ನಿರಾಕರಿಸಿದುದನ್ನು ಸಮರ್ಥಿಸಿಕೊಂಡಿದ್ದರು. ಸರಕಾರಕ್ಕೆ ಬ್ರಾಹ್ಮಣರ ಶಾಪ ತಟ್ಟಲಿದೆ ಎಂದು ಈಗ ಹೇಳುತ್ತಿರುವ ಭರತ್ ಶೆಟ್ಟಿಯವರು ಆಗ ಹಿಜಾಬ್ ನಿಷೇಧಕ್ಕೆ ಬೆಂಬಲ ಸೂಚಿಸಿದ್ದರು. ಹೀಗೆ ತಿಂಗಳ ಕಾಲ ಕಾದ ಬಳಿಕ ಸಾರ್ವಜನಿಕ ಆಕ್ರೋಶ ವ್ಯಕ್ತವಾಯಿತು. ಪ್ರತಿಭಟನೆಗಳು ನಡೆದುವು. ಆ ವಿದ್ಯಾರ್ಥಿನಿಯರು ನ್ಯಾಯವನ್ನು ಅಪೇಕ್ಷಿಸಿ ನ್ಯಾಯಾಲಯದ ಬಾಗಿಲು ಬಡಿದರು. ಆಗಲೂ ಬೊಮ್ಮಾಯಿ ಸರಕಾರ ಹಿಜಾಬ್ ನಿಷೇಧದ ಪರ ನ್ಯಾಯಾಲಯದಲ್ಲಿ ವಾದಿಸಿತು. ನಿಜವಾಗಿ,

ಹಿಜಾಬ್ ಆಗಲಿ, ಜನಿವಾರ, ಬಿಂದಿ, ಕರಿಮಣಿ, ಪೇಟ ಇತ್ಯಾದಿ ಯಾವುವೂ ವಿದ್ಯಾರ್ಥಿಗಳ ಕಲಿಕೆಗೆ ಅಡ್ಡಿ ಎಂದೋ ಅವರ ಬುದ್ಧಿಮತ್ತೆಯನ್ನು ಕುಗ್ಗಿಸುವ ಅಪಾಯಕಾರಿ ಅಸ್ಮಿತೆಗಳೆಂದೋ ಯಾವ ಸಂಶೋಧಕರೂ ಹೇಳಿಲ್ಲ. ಅಂಥದ್ದೊಂದು  ವೈಜ್ಞಾನಿಕ ವರದಿಯೂ ಬಂದಿಲ್ಲ. ತಲೆತಲಾಂತರಗಳಿಂದ  ವಿವಿಧ ಸಮುದಾಯಗಳು ಪಾಲಿಸಿಕೊಂಡು ಬರುತ್ತಿರುವ ಈ ಬಗೆಯ ಧಾರ್ಮಿಕ ಸಂಕೇತಗಳನ್ನು ಆಧುನಿಕತೆಗೆ ಅನ್ಯವಾಗಿಯೋ ವಿದ್ಯಾರ್ಥಿ ಸಮಾನತೆಯ ವಿರೋಧಿಯಾಗಿಯೋ ನೋಡಬೇಕಾಗಿಯೂ ಇಲ್ಲ. ಇವೆಲ್ಲ ಸಾಮಾಜಿಕವಾಗಿ ಅತಿ ಶಕ್ತಿಯುತವಾಗಿ ಬಳಕೆಯಾಗುತ್ತಿರುವಾಗ, ತರಗತಿಯಲ್ಲಿ ಮಾತ್ರ ನಿಷೇಧಿಸುವುದರಿಂದ ಸಮಾನತೆಯನ್ನು ತಂದಂತೆಯೂ ಆಗುವುದಿಲ್ಲ. ನಿಜವಾಗಿ,

ಅಸ್ಮಿತೆಗಳನ್ನು ಸಮಾನತೆಯ ವಿರೋಧಿ ಎಂಬ ದೃಷ್ಟಿಯಲ್ಲಿ ನೋಡುವುದಕ್ಕಿಂತ ವೈವಿಧ್ಯತೆಯ ಸೊಗಸು ಎಂಬ ನೆಲೆಯಲ್ಲೇ  ನೋಡಬೇಕಾಗಿದೆ. ಸಮಾನತೆಯನ್ನು ವಿದೇಶಿ ಕಣ್ಣಲ್ಲಿ ವ್ಯಾಖ್ಯಾನಿಸದೇ ದೇಶಿ ಜೀವನ ಕ್ರಮದ ಆಧಾರದಲ್ಲಿ ನೋಡದೇ ಇರುವುದೇ ಈ ಎಲ್ಲ ಸಮಸ್ಯೆಗಳಿಗೆ ಕಾರಣ ಎಂದು ಹೇಳಬೇಕಾಗುತ್ತದೆ. ಒಂದುವೇಳೆ, ಹಿಜಾಬ್ ಆಗಲಿ, ಬಿಂದಿ, ಪೇಟ, ಜನಿವಾರವೇ ಆಗಲಿ ಸಾಮಾಜಿಕ ನ್ಯಾಯ, ಏಕತೆ, ಸಮಾನತೆ ಇತ್ಯಾದಿ ಸಾಂವಿಧಾನಿಕ ಮೌಲ್ಯಗಳನ್ನು ಉಲ್ಲಂಘಿಸುತ್ತದೆ ಎಂದಾಗಿದ್ದರೆ, ತರಗತಿಯಿಂದಷ್ಟೇ ಅಲ್ಲ, ಇಡೀ ಸಾರ್ವಜನಿಕ ಜೀವನ ಕ್ರಮದಿಂದಲೇ ಅದಕ್ಕೆ ನಿಷೇಧ ಹೇರಬೇಕಾಗುತ್ತದೆ. ಆದರೆ, ಈ ಯಾವ ಧಾರ್ಮಿಕ ಅಸ್ಮಿತೆಗಳಿಗೂ ಸಂವಿಧಾನ ವಿರೋಧಿ ಎಂಬ ಹಣೆಪಟ್ಟಿ ಇಲ್ಲ ಮತ್ತು ಸಾರ್ವಜನಿಕವಾಗಿ ನಿಷೇಧವೂ ಇಲ್ಲ. ಹೀಗಿರುವಾಗ ಬರೇ ತರಗತಿಯಲ್ಲಿ ಅಥವಾ ಪರೀಕ್ಷೆಯ ವೇಳೆ ಮಾತ್ರ ಇದನ್ನು ಅಪಾಯಕಾರಿಯಂತೆ ಕಾಣುವುದಕ್ಕೆ ಅರ್ಥವೂ ಇಲ್ಲ. ಅಂದಹಾಗೆ,

ಜನಿವಾರ ವಿವಾದವು ಮತ್ತೊಮ್ಮೆ ನಮ್ಮನ್ನು ಹಿಜಾಬ್ ವಿವಾದದ ಕಡೆಗೆ ಕೊಂಡೊಯ್ಯಬೇಕಿದೆ. ನಿಜಕ್ಕೂ, ಹಿಜಾಬನ್ನು ವಿವಾದವನ್ನಾಗಿ ಮಾಡಬೇಕಿತ್ತೇ? ಅದು ತರಗತಿಯಲ್ಲಾಗಲಿ, ಶಾಲಾ ಕ್ಯಾಂಪಸ್‌ನಲ್ಲಾಗಲಿ ಯಾರಿಗಾದರೂ ತೊಂದರೆ ಮಾಡಿತ್ತೇ? ತರಗತಿಯೊಳಗೆ ಹಿಜಾಬ್ ನಿಷೇಧಿಸಿದ ಉಪನ್ಯಾಸಕರನ್ನು ಕರೆದು ವಿಚಾರಿಸಿ, ಅಗತ್ಯ ಬಿದ್ದರೆ ಶಿಸ್ತು ಕ್ರಮ ಕೈಗೊಂಡು ಅಲ್ಲಿಗೇ ಮುಗಿಸ ಬಹುದಾಗಿದ್ದ ಪ್ರಕರಣವನ್ನು ವಾರಗಟ್ಟಲೆ ಜೀವಂತ ಉಳಿಸಿಕೊಂಡದ್ದು ಏಕೆ? ಜನಿವಾರ ಪ್ರಕರಣವನ್ನು ತಕ್ಷಣ ನಿರ್ವಹಿಸಿದಂತೆ ಹಿಜಾಬ್ ಪ್ರಕರಣವನ್ನು ನಿಭಾಯಿಸದೇ ಇದ್ದುದು ಯಾವ ಕಾರಣಕ್ಕೆ? ಅವರ ಉದ್ದೇಶ ಏನಾಗಿತ್ತು? ಸಾರ್ವಜನಿಕರಿಗೆ ಸಮಸ್ಯೆಯೇ ಅಲ್ಲದ ಒಂದು ತುಂಡು ಬಟ್ಟೆಯು ರಾಜ್ಯದ 6 ಕೋಟಿ ಕನ್ನಡಿಗರ ಸಮಸ್ಯೆಯಾಗಿ ಪರಿವರ್ತನೆಯಾದುದು ಹೇಗೆ? ಏಕೆ? ಇಂಥದ್ದೊಂದು  ಅವಲೋಕನ ಸಾರ್ವಜನಿಕವಾಗಿ ನಡೆಯಬೇಕಿದೆ. ನಿಜವಾಗಿ,

ಹಿಜಾಬ್ ಪ್ರಕರಣವನ್ನು ರಾಜ್ಯ ಸರಕಾರವು ಆ ಕಾಲೇಜಿನ ಸಮಸ್ಯೆ ಮಾತ್ರವಾಗಿ ಕಂಡು ಅಲ್ಲಿಯೇ ಪರಿಹರಿಸಿ ಬಿಡದೇ ಇದ್ದುದರ ಹಿಂದೆ ರಾಜಕೀಯ ದುರುದ್ದೇಶ ಇತ್ತು ಅನ್ನುವುದನ್ನು ಆ ಬಳಿಕದ ಬೆಳವಣಿಗೆಗಳು ಸಾರಿ ಸಾರಿ ಹೇಳಿವೆ. ಹಿಜಾಬ್ ಹೆಸರಲ್ಲಿ ಮುಸ್ಲಿಮ್ ದ್ವೇಷ ಭಾವನೆಯನ್ನು ಕೆರಳಿಸುವುದು ಮತ್ತು ಆ ಮೂಲಕ ಹಿಂದೂಗಳನ್ನು ಧ್ರುವೀಕರಿಸುವುದು ಉದ್ದೇಶವಾಗಿತ್ತು. ಅದಕ್ಕಾಗಿ ಉಡುಪಿಯ ವಿದ್ಯಾರ್ಥಿನಿಯರನ್ನು ಬಲಿ ನೀಡಲು ಸರಕಾರ ಮುಂದಾಯಿತು. ಹಿಜಾಬ್ ವಿರುದ್ಧ ರಾಜ್ಯದಾದ್ಯಂತ ವಿದ್ಯಾರ್ಥಿಗಳನ್ನು ಸರಕಾರ ಪ್ರಚೋದಿಸಿತು. ಬೀದಿಗಿಳಿಸಿತು. 6 ಕೋಟಿ ಕನ್ನಡಿಗರನ್ನು ಹಿಂದೂ-ಮುಸ್ಲಿಮ್ ಎಂಬುದಾಗಿ ವಿಭಜಿಸಿತು.

ಆದರೆ ಇವತ್ತು ಅದೇ ಮಂದಿ ಜನಿವಾರ ನಿರಾಕರಣೆಯನ್ನು ಪ್ರಶ್ನಿಸುತ್ತಿದ್ದಾರೆ. ಪರೀಕ್ಷೆಗೂ ಜನಿವಾರಕ್ಕೂ ಏನು ಸಂಬಂಧ  ಎಂದು ಪ್ರಶ್ನಿಸುತ್ತಿದ್ದಾರೆ. ಆದರೆ, ಯುನಿಫಾರ್ಮ್ ನ  ಭಾಗಿವಾಗಿ ಭುಜದಲ್ಲಿರುವ ಶಾಲನ್ನು ತಲೆಗೆ ಹಾಕಿಕೊಂಡರೆ ಏನು ತೊಂದರೆ ಎಂದು ಮೂರು ವರ್ಷಗಳ ಹಿಂದೆ ವಿದ್ಯಾರ್ಥಿನಿಯರು ಪ್ರಶ್ನಿಸಿದಾಗ ಇದೇ ಮಂದಿ ಈ ಪ್ರಶ್ನೆಯನ್ನೇ ಕಟಕಟೆಯಲ್ಲಿ ನಿಲ್ಲಿಸಿದ್ದರು. ಸಮಾನತೆಯ ವಿರೋಧಿ ಎಂದಿದ್ದರು. ಅಂದಹಾಗೆ,

ದ್ವೇಷದ ಆಧಾರದಲ್ಲಿ ನ್ಯಾಯವನ್ನು ವಿತರಿಸಲು ಹೊರಟರೆ ಅಂತಿಮವಾಗಿ ದ್ವೇಷಕ್ಕೇ ಮುಖಭಂಗವಾಗುತ್ತದೆ ಅನ್ನುವುದನ್ನು ಈ ಜನಿವಾರ ಪ್ರಕರಣ ಎತ್ತಿ ತೋರಿಸಿದೆ.

Saturday, 12 April 2025

ಸನ್ಮಾರ್ಗಕ್ಕೆ 47 ವರ್ಷ: ಹೆಮ್ಮೆ, ಸವಾಲು ಮತ್ತು ನಿರೀಕ್ಷೆ





ಸನ್ಮಾರ್ಗಕ್ಕೆ 47 ವರ್ಷಗಳು ತುಂಬಿವೆ. ಇದು 48ನೇ ವರ್ಷದ ಮೊದಲ ಸಂಚಿಕೆ. ಈ 2025ರ ನೆತ್ತಿಯಲ್ಲಿ ನಿಂತು 1978ರ ಬುಡದೆಡೆಗೆ ನೋಡಿದರೆ, ಹೆಮ್ಮೆಪಡುವುದಕ್ಕೆ ಹತ್ತು-ಹಲವು ಸಂಗತಿಗಳಿವೆ. ಈ 47 ವರ್ಷಗಳ ದೀರ್ಘ ಅವಧಿಯಲ್ಲಿ ಸವಾಲುಗಳೂ ಇದ್ದುವು. ಬೆನ್ನು ತಟ್ಟುವಿಕೆಗಳೂ ಇದ್ದುವು. ಸಿಹಿಯೂ ಇತ್ತು, ಕಹಿಯೂ ಇತ್ತು.

1978 ಎಪ್ರಿಲ್ 23ರಂದು ಸನ್ಮಾರ್ಗದ ಮೊದಲ ಸಂಚಿಕೆ ಬಿಡುಗಡೆಗೊಂಡಾಗ ಸಂಪಾದಕರಾಗಿದ್ದವರು ಇಬ್ರಾಹೀಮ್ ಸಈದ್. ಅವರಿಗೆ ಬೆನ್ನೆಲುಬಾಗಿದ್ದವರು ನೂರ್ ಮುಹಮ್ಮದ್ ಮತ್ತು ಸಾದುಲ್ಲಾ. ಈ ಮೂವರೂ ಆ ಕಾಲದ ಪದವೀಧರರು. ಸಣ್ಣದೊಂದು ಪ್ರಯತ್ನ ನಡೆಸಿರುತ್ತಿದ್ದರೂ ಈ ಮೂವರೂ ಉನ್ನತ ಸರಕಾರಿ ನೌಕರಿಯನ್ನು ಗಿಟ್ಟಿಸಿರುತ್ತಿದ್ದರು. ಇಬ್ರಾಹೀಮ್ ಸಈದ್ ಇಂಥದ್ದೊಂದು ಪ್ರಯತ್ನದಲ್ಲಿ ಯಶಸ್ವಿಯೂ ಆಗಿದ್ದರು. ಅವರಿಗೆ ಸರಕಾರಿ ಬ್ಯಾಂಕ್ ನೌಕರಿಯೂ ಸಿಕ್ಕಿತ್ತು. ಆದರೆ, ಯಾವಾಗ ಬಡ್ಡಿಯ ಕುರಿತಾದ ಕುರ್‌ಆನಿನ ತಾಕೀತುಗಳು ಅವರೊಳಗನ್ನು ಕೊರೆಯಲು ಪ್ರಾರಂಭಿಸಿತೋ ಬದುಕಿಗೆ ಏಕೈಕ ಆಧಾರವಾಗಿದ್ದ ನೌಕರಿಯನ್ನೇ ತೊರೆದರು. ಹಾಗಂತ,

ಇನ್ನೊಂದು  ನೌಕರಿಯನ್ನು ದೃಢಪಡಿಸಿಕೊಂಡು ಅವರು ಹೀಗೆ ಬ್ಯಾಂಕ್‌ ನಿಂದ  ಇಳಿದು ಬಂದಿರಲೂ ಇಲ್ಲ. ಅವರು ತನ್ನ ಅಂತರಾತ್ಮದ ಕರೆಯಂತೆ ನಡಕೊಂಡಿದ್ದರು. ಆ ಬಳಿಕ ಕ್ಷಿಪ್ರ ಬೆಳವಣಿಗೆಗಳಾದುವು. ಸನ್ಮಾರ್ಗ ಪತ್ರಿಕೆ ಪ್ರಾರಂಭಿಸುವ ಬಗ್ಗೆ ಚರ್ಚೆ, ಯೋಜನೆ, ಸಮಾಲೋಚನೆಗಳು ನಡೆದುವು. ಅಂತಿಮವಾಗಿ ಪತ್ರಿಕೆ ಪ್ರಾರಂಭಿಸುವುದೆಂದು ನಿರ್ಧಾರವಾಯಿತು. ಸನ್ಮಾರ್ಗ ಸಂಪಾದಕರಾಗಿ ಇಬ್ರಾಹೀಮ್ ಸಈದ್ ಆಯ್ಕೆಯಾದರು. ನೂರ್ ಮುಹಮ್ಮದ್ ಮತ್ತು ಸಾದುಲ್ಲಾ ಇವರ ಜೊತೆಗೂಡಿದರು. ಮಾತ್ರವಲ್ಲ, ಆರಂಭ ಕಾಲದಲ್ಲಿ ಈ ಮೂವರೂ ವೇತನದ ಹಂಗಿಲ್ಲದೇ ದುಡಿದರು. ೧೨ ಪುಟಗಳ ಡೆಮಿ ಗಾತ್ರದಲ್ಲಿ ಪ್ರಾರಂಭವಾದ ಪತ್ರಿಕೆಯ ಬೆಲೆ ಆಗ 40 ಪೈಸೆಯಾಗಿತ್ತು.

ತನ್ನ ಮೊದಲ  ಸಂಚಿಕೆಯಲ್ಲೇ ಪತ್ರಿಕೆ ಕುರ್‌ಆನಿನ ಅನುವಾದವನ್ನು ಪ್ರಕಟಿಸಿತು. ಅಂದಿನ ಕಾಲಕ್ಕೆ ಸಂಬಂಧಿಸಿ ಇದು ಅತೀವ ಸವಾಲಿನದ್ದಾಗಿತ್ತು ಮತ್ತು ಕ್ರಾಂತಿಕಾರಿ ನಿರ್ಧಾರವಾಗಿತ್ತು. ಮುಸ್ಲಿಮ್ ಸಮುದಾಯ ಭಕ್ತಿಯಿಂದ ಓದಲಷ್ಟೇ ಕುರ್‌ಆನನ್ನು ಬಳಸುತ್ತಿದ್ದ ಕಾಲ. ಅರಬಿಯ ಹೊರತಾದ ಇನ್ನಾವುದೇ ಭಾಷೆಗೆ ಕುರ್‌ಆನನ್ನು ಅನುವಾದ ಮಾಡುವುದು ನಿಷಿದ್ಧ ಎಂದು ನಂಬಿಕೊಂಡಿದ್ದ ಕಾಲ. ಸನ್ಮಾರ್ಗ ಈ ನಂಬಿಕೆಯನ್ನು ಪ್ರಶ್ನಿಸಿತಲ್ಲದೇ, ಜನಸಾಮಾನ್ಯರಿಗೆ ಕುರ್‌ಆನಿನ ಅರ್ಥವನ್ನು ತಿಳಿಸುವ ಮಾಧ್ಯಮವಾಯಿತು. ಇದರೊಂದಿಗೆ ಆದ ಇನ್ನೊಂದು ಕ್ರಾಂತಿ ಏನೆಂದರೆ,

ಈ ಕುರ್‌ಆನ್ ಮೊದಲ ಬಾರಿ ಮುಸ್ಲಿಮೇತರರ ಬಳಿಯೂ ತಲುಪಿದ್ದು. ಕುರ್‌ಆನಿನ ಅನುವಾದವನ್ನು ಕನ್ನಡದಲ್ಲಿ ಓದುವುದರೊಂದಿಗೆ ಮುಸ್ಲಿಮೇತರರಲ್ಲಿದ್ದ ಹತ್ತು-ಹಲವು ತಪ್ಪು ಅಭಿಪ್ರಾಯಗಳು ದೂರವಾದುವು. ಇದರ ಜೊತೆಗೇ ಮುಸ್ಲಿಮರೂ ಕುರ್‌ಆನನ್ನು ಅರಿತು ಓದತೊಡಗಿದರು. ಆವರೆಗೆ ಪುಣ್ಯ ಸಂಪಾದನೆಗೆಂದು  ಕುರ್‌ಆನನ್ನು ಓದುತ್ತಿದ್ದವರು, ಮೊದಲ ಬಾರಿ ಜೀವನ ಬದಲಾವಣೆಗಾಗಿ ಓದತೊಡಗಿದರು. ತಮ್ಮ ಈಗಿನ ಬದುಕು ಮತ್ತು ಕುರ್‌ಆನ್ ಹೇಳುವ ಬದುಕನ್ನು ಪರಸ್ಪರ ತಿಕ್ಕಿ ನೋಡಿ ಪಶ್ಚಾತ್ತಾಪಪಟ್ಟರು. ಹೊಸ ಜೀವನಕ್ರಮವನ್ನು ಅಳವಡಿಸಿಕೊಳ್ಳಲು ನಿರ್ಧರಿಸಿದರು. ಹಾಗಂತ,

ಸನ್ಮಾರ್ಗ ಕೇವಲ ಕುರ್‌ಆನ್ ಅನುವಾದವೊಂದನ್ನಷ್ಟೇ ಪ್ರಕಟಿಸುತ್ತಾ ಇದ್ದುದಲ್ಲ. ಹದೀಸ್‌ಗಳ ಪ್ರಕಟನೆಯನ್ನೂ ಪ್ರಾರಂಭಿಸಿತು. ಇಸ್ಲಾಮೀ ಇತಿಹಾಸವನ್ನೂ ಪ್ರಕಟಿಸತೊಡಗಿತು. ಮಹಿಳೆಯರ ಹಕ್ಕುಗಳ ಬಗ್ಗೆ ಕುರ್‌ಆನ್ ಮತ್ತು ಪ್ರವಾದಿ ಚರ್ಯೆ ಏನು ಹೇಳುತ್ತದೆಂಬುದರ ಬಗ್ಗೆ ಅರಿವಿಲ್ಲದ ಹಾಗೂ ಅಂದಿನ ಸಾಮಾಜಿಕ ರೀತಿ-ನೀತಿಗಳನ್ನೇ ಅಳವಡಿಸಿಕೊಂಡಿದ್ದ ಮುಸ್ಲಿಮರಿಗೆ ಇಸ್ಲಾಮ್ ಮಹಿಳೆಗೆ  ನೀಡಿರುವ ಸ್ಥಾನ ಮಾನಗಳನ್ನು ಪರಿಪರಿಯಾಗಿ ವಿವರಿಸಿಕೊಟ್ಟಿತು. ಹೆಣ್ಣಿಗೆ ಆಸ್ತಿಯಲ್ಲಿ ಹಕ್ಕಿಲ್ಲ, ವರದಕ್ಷಿಣೆ ಇಸ್ಲಾಮ್ ನ ಭಾಗ, ಹೆಣ್ಣು ಶಿಕ್ಷಣ ಪಡೆಯಬೇಕಾಗಿಲ್ಲ, ಹೆಣ್ಣು ಮಸೀದಿ  ಪ್ರವೇಶಿಸುವಂತಿಲ್ಲ, ಆಕೆ ಗಂಡಿನ ಗುಲಾಮಳು... ಇತ್ಯಾದಿ ಇತ್ಯಾದಿ ಸ್ಥಾಪಿತ ನಿಲುವುಗಳಿಗೆ ಪ್ರಬಲ ಏಟನ್ನು ಕೊಟ್ಟದ್ದು ಸನ್ಮಾರ್ಗವೇ. ಮುಸ್ಲಿಂ ಮಹಿಳೆಯನ್ನು  ಸಂಕೋಲೆಗಳಿಂದ ಬಿಡಿಸಿದ್ದಲ್ಲದೇ ಹಿಜಾಬ್ ನ ಮಹತ್ವ, ತಾಯ್ತನದ ಮಹತ್ವ, ಕೌಟುಂಬಿಕ ಹೊಣೆಗಾರಿಕೆಗಳು, ದಾಂಪತ್ಯದ ಹಕ್ಕು- ಬಾಧ್ಯತೆಗಳು.. ಇತ್ಯಾದಿಯಾಗಿ ಹತ್ತು ಹಲವು ಸಂಗತಿಗಳನ್ನು ಕುರ್ ಆನ್  ಮತ್ತು ಹದೀಸ್  ಗಳ ಆಧಾರದಲ್ಲಿ ವಿವರಿಸುತ್ತಾ, ಇದನ್ನು ಅನುಸರಿಸುವ ಒಂದಿಡೀ ಹೊಸ ತಲೆಮಾರನ್ನೇ  ಸೃಷ್ಟಿಸಿತು. ಇದರ ಜೊತೆಗೆ, ಸನ್ಮಾರ್ಗ ಮಾಡಿದ ಇನ್ನೊಂದು ಮಹತ್ವಪೂರ್ಣ ಕಾರ್ಯವೆಂದರೆ ಸಂದೇಶ ಪ್ರಚಾರದ ಪ್ರಜ್ಞೆಯನ್ನು ಸಮುದಾಯದಲ್ಲಿ ಮೂಡಿಸಿದ್ದು. 

ಮುಸ್ಲಿಂ ಸಮುದಾಯದಲ್ಲಿ ಸಂದೇಶ ಪ್ರಚಾರದ ಪ್ರಜ್ಞೆ ಶೂನ್ಯ ಅನ್ನುವಷ್ಟು ಕಡಿಮೆಯಿತ್ತು. ಇಸ್ಲಾಮಿನಂತೆ ಬದುಕುವುದಕ್ಕೆ ಬೇಕಾದ ಮಾರ್ಗದರ್ಶನಗಳೇ ಅಸ್ಪಷ್ಟವಾಗಿದ್ದ ಕಾಲದಲ್ಲಿ ಸಂದೇಶ ಪ್ರಚಾರದ ಪ್ರಜ್ಞೆ ಮೂಡುವುದಕ್ಕೆ ಸಾಧ್ಯವೂ ಇರಲಿಲ್ಲ. ಸನ್ಮಾರ್ಗ ನಿರಂತರ ಈ ಬಗ್ಗೆ ಸಮುದಾಯವನ್ನು ಎಚ್ಚರಿಸುವ ಬರಹಗಳನ್ನು ಪ್ರಕಟಿಸತೊಡಗಿತು. ಪ್ರವಾದಿಯ(ಸ) ದೌತ್ಯವನ್ನು ಜನರ ಮುಂದಿಟ್ಟಿತು. ಕುರ್‌ಆನಿನ ಉದ್ದೇಶವನ್ನು ಪದೇ ಪದೇ ನೆನಪಿಸತೊಡಗಿತು. ಹೀಗೆ ಕ್ರಾಂತಿಯೊಂದಕ್ಕೆ ಸಮಾಜವನ್ನು ನಿಧಾನಕ್ಕೆ ಒಗ್ಗಿಸುತ್ತಾ ಬರತೊಡಗಿತು. ಇದರ ಜೊತೆಜೊತೆಗೇ,

ಕಾಲದ ಬದಲಾವಣೆಗಳಿಗೂ ತನ್ನನ್ನು ಒಡ್ಡಿಕೊಳ್ಳಬೇಕಾದ ಅನಿವಾರ್ಯತೆಯೂ ಸನ್ಮಾರ್ಗಕ್ಕಿತ್ತು. ಬ್ಲ್ಯಾಕ್ ಅಂಡ್ ವೈಟ್‌ನಿಂದ ಡಬಲ್ ಕಲರ್‌ಗೆ ಅದು ತನ್ನನ್ನು ಬದಲಿಸಿಕೊಂಡಿತು. ೧೨ ಪುಟಗಳ ಸಣಕಲು ಗಾತ್ರವು ಇನ್ನಷ್ಟು ಪುಟಗಳೊಂದಿಗೆ ದಷ್ಟಪುಷ್ಟವಾದುವು. ಹಾಗೆಯೇ ತಂತ್ರಜ್ಞಾನದಲ್ಲಾದ ಕ್ರಾಂತಿಕಾರಿ ಬದಲಾವಣೆಗೂ ಸನ್ಮಾರ್ಗ ಒಗ್ಗಿಕೊಳ್ಳಬೇಕಾಗಿತ್ತು. ಆ ಕಾರಣದಿಂದಲೇ 2019ರಲ್ಲಿ ವೆಬ್‌ಪೋರ್ಟಲನ್ನು ಪ್ರಾರಂಭಿಸುವ ಮೂಲಕ ಸನ್ಮಾರ್ಗ ಇತರ ಪತ್ರಿಕೆಗಳಿಗೆ ಸಮಸಮವಾಗಿ ಬೆಳೆಯಿತು. 2020ರಲ್ಲಿ ಡಿಜಿಟಲ್ ನ್ಯೂಸ್ ಚಾನೆಲನ್ನೂ ಆರಂಭಿಸಿತು. ಇವತ್ತು ಇವು ಇರಡೂ ಅತ್ಯಂತ ಜನಪ್ರಿಯ ಮಾಧ್ಯಮವಾಗಿ ಗುರುತಿಸಿಕೊಂಡಿದೆ ಮತ್ತು ಕಾಲದ ಬದಲಾವಣೆಗೆ ಅತ್ಯಂತ ಶೀಘ್ರವಾಗಿ ಸ್ಪಂದಿಸಿದ ಕ್ರಾಂತಿಕಾರಿ ಹೆಜ್ಜೆಯಾಗಿ ಶ್ಲಾಘನೆಗೆ ಒಳಗಾಗಿದೆ. ಅಲ್ಲದೇ, ಎರಡು ದಶಕಗಳ ಹಿಂದೆ ಅನುಪಮ ಪತ್ರಿಕೆಯನ್ನು  ಆರಂಭಿಸಿದ ಹೆಗ್ಗಳಿಕೆಯೂ ಸನ್ಮಾರ್ಗಕ್ಕಿದೆ. ಆದರೆ,

1978ರಲ್ಲಿ ಯಾರು ಸನ್ಮಾರ್ಗ ಪತ್ರಿಕೆಯ ರೂವಾರಿಗಳಾಗಿದ್ದರೋ ಆ ಮೂವರೂ ಇವತ್ತು ನಮ್ಮ ಜೊತೆ ಇಲ್ಲ. ಇವರ ಜೊತೆಗೇ, ಈ ಪತ್ರಿಕೆಯ ಚಂದಾದಾರಿಕೆಗಾಗಿ ರಾಜ್ಯದಾದ್ಯಂತ ಹಗಲಿರುಳೂ ಸುತ್ತಿದವರು, ಚಂದಾ ನೀಡಿ ಬೆಂಬಲಿಸಿದವರು, ಆರ್ಥಿಕವಾಗಿ ನೆರವಾದವರು ಮತ್ತು ಪತ್ರಿಕೆಯ ಏಳಿಗೆಗಾಗಿ ದುಡಿದವರಲ್ಲಿ ಅನೇಕರು ಇವತ್ತು ನಮ್ಮ ಜೊತೆ ಇಲ್ಲ. ಈ 48ರ ಪ್ರಾಯದಲ್ಲಿ ಸನ್ಮಾರ್ಗ ಅವರೆಲ್ಲರನ್ನೂ ನೆನಪಿಸಿಕೊಳ್ಳುತ್ತದೆ. ಹಾಗೆಯೇ, ಅಂದಿನಿಂದ  ಈ ಹೊತ್ತಿನವರೆಗೂ ಪ್ರತಿಫಲಾಪೇಕ್ಷೆಯಿಲ್ಲದೇ ಸನ್ಮಾರ್ಗದ ಅಭಿವೃದ್ಧಿಗಾಗಿ ಮತ್ತು ಬೆಳವಣಿಗೆಗಾಗಿ ಆರ್ಥಿಕವಾಗಿಯೂ ಬೌದ್ಧಿಕವಾಗಿಯೂ ದೈಹಿಕವಾಗಿಯೂ ಕೊಡುಗೆ ನೀಡುತ್ತಿರುವ ಎಲ್ಲ ಸಹೃದಯರನ್ನೂ ಈ ಸಂದರ್ಭದಲ್ಲಿ ಸನ್ಮಾರ್ಗ ಸ್ಮರಿಸಿಕೊಳ್ಳುತ್ತದೆ. ಇವರೆಲ್ಲರಿಗೂ ಅಲ್ಲಾಹನು ತಕ್ಕ ಪ್ರತಿಫಲವನ್ನು ನೀಡಲಿ.

ಹಾಗಂತ, ಸನ್ಮಾರ್ಗ ಲಾಭದಾಯಕ ಮಾಧ್ಯಮವಲ್ಲ. ತಂಬಾಕು, ಬ್ಯಾಂಕು, ಸಿನಿಮಾ ಇತ್ಯಾದಿ ಜಾಹೀರಾತುಗಳಿಗೆ ಸ್ವಯಂ ನಿರ್ಬಂಧ ಹೇರಿಕೊಂಡಿರುವ ಸನ್ಮಾರ್ಗಕ್ಕೆ ಆರಂಭದಿಂದ  ಇಂದಿನವರೆಗೂ ಆರ್ಥಿಕ ಸವಾಲು ಹೊಸತೂ ಅಲ್ಲ. ಎಷ್ಟೇ ಕಷ್ಟ ಎದುರಾದರೂ ‘ಧರ್ಮ ನಿಷಿದ್ಧ’ ಜಾಹೀರಾತುಗಳನ್ನು ಸ್ವೀಕರಿಸಲಾರೆ ಎಂಬ ನಿಲುವಿನಲ್ಲಿ ಅದು ಈ ವರೆಗೂ ರಾಜಿ ಮಾಡಿಕೊಂಡೂ ಇಲ್ಲ. ಒಂದುವೇಳೆ ಈ ವಿಷಯದಲ್ಲಿ ಮಾಡುವ ಸಣ್ಣ ರಾಜಿಯೂ ಸನ್ಮಾರ್ಗವನ್ನು ಇವತ್ತು ಆರ್ಥಿಕವಾಗಿ ಬಲಿಷ್ಠವಾಗಿಡುತ್ತಿತ್ತೋ ಏನೋ? ಆದರೆ, ಸನ್ಮಾರ್ಗ ಎಂದೂ ಈ ವಿಷಯದಲ್ಲಿ ರಾಜಿ ಮಾಡುವುದಿಲ್ಲ. ಈ ಕಾರಣದಿಂದಲೇ ಸನ್ಮಾರ್ಗ ದಾನಿಗಳಿಂದ ನೆರವನ್ನು ಕೋರುತ್ತದೆ. ಪತ್ರಿಕೆ, ವೆಬ್‌ಪೋರ್ಟಲ್ ಮತ್ತು ನ್ಯೂಸ್ ಚಾನೆಲ್- ಈ ಮೂರನ್ನೂ ಏಕಕಾಲದಲ್ಲಿ ನಡೆಸುವುದೆಂದರೆ ಅದು ಸಣ್ಣ ಸವಾಲಲ್ಲ. ಪ್ರತಿಯೊಂದೂ ದುಬಾರಿಯಾಗಿರುವ ಈ ಕಾಲದಲ್ಲಿ ಸಿಬಂದಿಗಳ ವೇತನದಿಂದ ಹಿಡಿದು ಪತ್ರಿಕೆಯ ಮುದ್ರಣದವರೆಗೆ, ಕ್ಯಾಮರಾದಿಂದ ಹಿಡಿದು ಕಂಪ್ಯೂಟರ್ ವರೆಗೆ ಎಲ್ಲವೂ ತುಟ್ಟಿಯೇ. ಈ ಸವಾಲುಗಳನ್ನು ಮೆಟ್ಟಿ ನಿಲ್ಲಬೇಕಾದರೆ ನಿಮ್ಮೆಲ್ಲರ ನೆರವಿನ ಅಗತ್ಯವಿದೆ. ಕೇವಲ ಆರ್ಥಿಕ ನೆರವು ಮಾತ್ರವಲ್ಲ, ಬೌದ್ಧಿಕ ನೆರವು ಮತ್ತು ದೈಹಿಕ ಶ್ರಮದ ಅಗತ್ಯವೂ ಇದೆ. ಈ ಪಯಣದಲ್ಲಿ ನಿಮ್ಮೆಲ್ಲರ ಭಾಗೀದಾರಿಕೆಯನ್ನು ಸನ್ಮಾರ್ಗ ಅಪೇಕ್ಷಿಸುತ್ತದೆ. ಸುಳ್ಳು ಮತ್ತು ದ್ವೇಷಗಳೇ ಆಳುವ ಈ ಕಾಲದಲ್ಲಿ ಸನ್ಮಾರ್ಗ ದುರ್ಬಲವಾಗದಂತೆ ಕಾಪಾಡುವ ಜವಾಬ್ದಾರಿಯನ್ನು ನೀವೆಲ್ಲ ವಹಿಸಿಕೊಳ್ಳಬೇಕು ಎಂದು ವಿನಂತಿಸುತ್ತದೆ.

Monday, 24 March 2025

ಕಾನೂನೊಂದೇ ವೃದ್ಧ ಹೆತ್ತವರಿಗೆ ಸುರಕ್ಪತೆಯನ್ನು ಒದಗಿಸಬಲ್ಲುದೇ?




ಮಕ್ಕಳಿಂದ ನಿರ್ಲಕ್ಷ್ಯಕ್ಕೆ ಒಳಗಾಗುವ ವೃದ್ಧ ಹೆತ್ತವರಿಗೆ ಆಸರೆಯಾಗಲು ರಾಜ್ಯ ಸರಕಾರ ನಿರ್ಧರಿಸಿದೆ. ವಯಸ್ಸಾದ ತಂದೆ- ತಾಯಿಯಿಂದ ಆಸ್ತಿಯನ್ನು ತಮ್ಮ ಹೆಸರಿಗೆ ಬರೆಸಿಕೊಂಡ ಬಳಿಕ ಅವರನ್ನು ನಿರ್ಲಕ್ಷಿಸುವ ಮಕ್ಕಳಿಗೆ ಪಾಠವಾಗುವ  ಸಂದೇಶವನ್ನು ಸಚಿವ ಕೃಷ್ಣ ಭೈರೇಗೌಡ ನೀಡಿದ್ದಾರೆ. ಹೀಗೆ ಮಾಡುವ ಮಕ್ಕಳ ಹೆಸರಲ್ಲಿರುವ ವಿಲ್ ಅಥವಾ ದಾನಪತ್ರವ ನ್ನು ರದ್ದು ಮಾಡುವುದಕ್ಕೆ 2007ರಲ್ಲಿ ಕೇಂದ್ರ ಸರಕಾರ ಜಾರಿಗೆ ತಂದಿರುವ ‘ಪೋಷಕರ ಕಲ್ಯಾಣ ಕಾಯ್ದೆ’ಯಲ್ಲಿ ಅವಕಾ ಶವಿದ್ದು, ಅದನ್ನು ಕಠಿಣವಾಗಿ ಜಾರಿ ಮಾಡಲಾಗುವುದು ಎಂದವರು ಹೇಳಿದ್ದಾರೆ. ಮುಖ್ಯವಾಗಿ ಬೆಳಗಾವಿ ಇನ್‌ಸ್ಟಿಟ್ಯೂಟ್  ಆಫ್ ಮೆಡಿಕಲ್ ಸೈನ್ಸ್ ಒಂದರಲ್ಲಿಯೇ ಹೀಗೆ ಮಕ್ಕಳಿಂದ ನಿರ್ಲಕ್ಷಿಸಲ್ಪಟ್ಟ ಹೆತ್ತವರ ಸಂಖ್ಯೆ 150ಕ್ಕಿಂತಲೂ ಹೆಚ್ಚಿದೆ ಎಂದು  ವರದಿಯಿದೆ. ರಾಜ್ಯದ ಇನ್ನಿತರ ಆಸ್ಪತ್ರೆಗಳಲ್ಲಿ ಲೆಕ್ಕ ಹಾಕಿದರೆ ಈ ಸಂಖ್ಯೆ ಬಹಳ ದೊಡ್ಡದಿರಬಹುದು. ನಿಜವಾಗಿ,

ಪೋಷಕರ ಕಲ್ಯಾಣ ಕಾಯ್ದೆಯನ್ನು ಅತ್ಯಂತ ಬಿಗಿಯಾಗಿ ಜಾರಿಗೆ ತಂದ ಕೊಪ್ಪಳ ಉಪವಿಭಾಗಾಧಿ ಕಾರಿ ಸಿ.ಡಿ. ಗೀತಾ  ಅವರು 2019ರಲ್ಲಿ ಚರ್ಚೆಗೆ ಒಳಗಾಗಿದ್ದರು. ಕೊಪ್ಪಳದ ಗಂಗಾವತಿ ನಗರದ ಸತ್ಯನಾರಾಯಣ ಪೇಟೆಯ 68 ವರ್ಷದ  ಮನೋಹರ ದೇಸಾಯಿಯವರು ತಮ್ಮ ಹೆಸರಿನಲ್ಲಿದ್ದ 3 ಎಕರೆ ಭೂಮಿಯನ್ನು ಮಕ್ಕಳಾದ ರಾಘವೇಂದ್ರ, ಯೋಗೇಶ,  ವಿನಯ ದೇಸಾಯಿ ಅವರ ಹೆಸರಿಗೆ ವರ್ಗಾಯಿಸಿದ್ದರು. ಆದರೆ, ಆಸ್ತಿ ವರ್ಗಾವಣೆ ಆದ ಬಳಿಕ ಮಕ್ಕಳು ತಮ್ಮನ್ನು  ಸರಿಯಾಗಿ ನೋಡಿಕೊಳ್ಳುತ್ತಿಲ್ಲ, ವೈದ್ಯಕೀಯ ಖರ್ಚು-ವೆಚ್ಚಗಳಿಗೆ ಹಣ ನೀಡುತ್ತಿಲ್ಲ, ತಾನು ಹೃದಯ ಸಂಬAಧಿ  ಕಾಯಿಲೆಯಿಂದ ಬಳಲುತ್ತಿದ್ದು, ಶಸ್ತçಚಿಕಿತ್ಸೆಗೆ ಹಣ ಬೇಕಾಗಿದೆ, ಆದರೆ ಮಕ್ಕಳು ಅದಕ್ಕೆ ಬೇಕಾದ ವ್ಯವಸ್ಥೆ ಮಾಡುತ್ತಿಲ್ಲ,  ಆದ್ದರಿಂದ ಮಕ್ಕಳ ಹೆಸರಿಗೆ ವರ್ಗಾಯಿಸಿರುವ ಭೂಮಿಯನ್ನು ಪುನಃ ನನಗೇ ನೀಡಬೇಕು ಎಂದವರು ಅರ್ಜಿ ಸಲ್ಲಿಸಿದ್ದರು.  ಇದನ್ನು ಆಲಿಸಿದ ಉಪ ವಿಭಾಗಾಧಿಕಾರಿ ಗೀತಾ ನೇತೃತ್ವದ ನ್ಯಾಯಮಂಡಳಿಯು ಪೋಷಕರ ಕಲ್ಯಾಣ ಕಾಯ್ದೆಯನ್ನು  ಬಳಸಿ ಆಸ್ತಿ ದಾನಪತ್ರವನ್ನು ರದ್ದು ಮಾಡಿ ಮನೋಹರ ದೇಸಾಯಿಯವರಿಗೆ ವರ್ಗಾಯಿಸಿತ್ತು. ಇದಾಗಿ 6 ವರ್ಷಗಳ  ಬಳಿಕ ರಾಜ್ಯ ಸರಕಾರ ಈ ಕಾಯ್ದೆಯ ಬಗ್ಗೆ ವಿಧಾನಸಭೆಯಲ್ಲೇ  ಉಲ್ಲೇಖಿಸಿ ಕಾನೂನು ಜಾಗೃತಿಯ ಪಾಠ ಮಾಡಿದೆ.  ಅಂದಹಾಗೆ,

ದೈಹಿಕವಾಗಿ ಶಕ್ತರಾಗಿರುವವರೆಗೆ ಸಮಸ್ಯೆಗಳು ಕಡಿಮೆ ಅಥವಾ ಯಾವುದೇ ಸಮಸ್ಯೆ ಎದುರಾದರೂ ಅದನ್ನು ಎದುರಿಸುವ  ಧೈರ್ಯ ಮತ್ತು ಛಲ ವ್ಯಕ್ತಿಯಲ್ಲಿ ಇರುತ್ತದೆ. ಏನಿಲ್ಲವೆಂದರೂ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟಿಸುವ ಮೂಲಕ  ಸಾರ್ವಜನಿಕ ಗಮನ ಸೆಳೆಯುವುದಕ್ಕೆ ಅವಕಾಶ ಇರುತ್ತದೆ. ಮಾಧ್ಯಮಗಳ ಗಮನ ಸೆಳೆದು ತನ್ನ ಸಮಸ್ಯೆ ಸಾರ್ವಜನಿಕವಾಗಿ  ಚರ್ಚೆಯಾಗುವಂತೆ ನೋಡಿಕೊಳ್ಳುವುದಕ್ಕೂ ಸವಲತ್ತು ಇರುತ್ತದೆ. ಆದರೆ, ವೃದ್ಧರು ಹಾಗಲ್ಲ. ಈ ಯಾವ ಅವಕಾಶವನ್ನೂ  ಬಳಸಿಕೊಳ್ಳಲು ಸಾಧ್ಯವಾಗದಷ್ಟು ಅವರು ದುರ್ಬಲರಾಗಿರುತ್ತಾರೆ. ಒಂದು ಸಾರ್ವಜನಿಕ ಪ್ರತಿಭಟನೆ ಹಮ್ಮಿಕೊಳ್ಳುವುದಕ್ಕೆ  ಬೇಕಾದ ದೈಹಿಕ ಶಕ್ತಿಯಾಗಲಿ, ಸಂಪರ್ಕವಾಗಲಿ ಇರುವುದಿಲ್ಲ. ಈ ಅಸಾಮರ್ಥ್ಯವು ಅವರನ್ನು ಮಾನಸಿಕವಾಗಿ  ಕುಗ್ಗಿಸುತ್ತಿರುತ್ತದೆ. ತಮಗೆ ಎದುರಾಗುವ ಎಲ್ಲ ರೀತಿಯ ಕಿರುಕುಳ ಮತ್ತು ಹಿಂಸೆಯನ್ನೂ ಬಾಯಿ ಮುಚ್ಚಿ ಅ ನುಭವಿಸಬೇಕೆಂಬ ಭಾವವು ದಿನೇ ದಿನೇ ಅವರನ್ನು ಕಂಗಾಲುಗೊಳಿಸುತ್ತಿರುತ್ತದೆ. ಮನೆಗೆ ಬಂದವರಲ್ಲಿ ಈ ಸಂಕಟವನ್ನು  ಹೇಳಿಕೊಳ್ಳೋಣವೆಂದರೆ, ಎಲ್ಲಿ ಮಕ್ಕಳು ಹಗೆ ತೀರಿಸುತ್ತಾರೋ ಅನ್ನುವ ಭಯ. ಹೀಗೆ ಯಾರಲ್ಲೂ ಹೇಳಿಕೊಳ್ಳಲಾಗದ  ಮತ್ತು ಹೇಳದೆಯೂ ಇರಲಾಗದ ಸ್ಥಿತಿಯೊಂದು ವೃದ್ಧ ಹೆತ್ತವರz್ದÁಗಿರುತ್ತದೆ. ಈ ಬಗ್ಗೆ ಸರ್ವೇ ನಡೆಸಿರುವ ಹೆಲ್ಪ್ ಏಜ್  ಇಂಡಿಯಾವು 2022ರಲ್ಲಿ ಬಿಡುಗಡೆಗೊಳಿಸಿರುವ ವರದಿಯಲ್ಲಿ ಆಘಾತಕಾರಿ ಅಂಶಗಳಿವೆ. ಮುಖ್ಯವಾಗಿ,

ಈ ದೇಶದ ವೃದ್ಧ ಹೆತ್ತವರ ಪೈಕಿ 82% ಮಂದಿಯೂ ತಮ್ಮ ಮಕ್ಕಳೊಂದಿಗೆ ವಾಸಿಸುತ್ತಿದ್ದಾರೆ. ಆದರೆ ಇವರಲ್ಲಿ 35% ವೃದ್ಧ  ಹೆತ್ತವರು ತಮ್ಮ ಗಂಡು ಮಕ್ಕಳಿಂದ ನಿಂದನೆಯನ್ನು ಎದುರಿಸುತ್ತಿದ್ದಾರೆ ಮತ್ತು 21% ವೃದ್ಧರು ತಮ್ಮ ಸೊಸೆಯಂದಿರಿಂದ   ನಿಂದನೆ ಮತ್ತು ಕಟು ಮಾತುಗಳನ್ನು ಅನುಭವಿಸುತ್ತಿದ್ದಾರೆ. ಮನೆಕೆಲಸಗಾರ್ತಿಯಿಂದ 2% ವೃದ್ಧರು ನಿಂದನೆಯನ್ನು  ಎದುರಿಸುತ್ತಿದ್ದಾರೆ ಎಂದು ಹೆಲ್ಪ್ ಏಜ್ ಇಂಡಿಯಾ ಬಿಡುಗಡೆಗೊಳಿಸಿರುವ ವರದಿಯಲ್ಲಿ ಹೇಳಲಾಗಿದೆ. ಬ್ರಿಡ್ಜ್ ದಿ ಗ್ಯಾಪ್:  ಅಂಡರ್‌ಸ್ಟ್ಯಾಂಡಿಂಗ್  ಎಲ್ಡರ್ ನೀಡ್ಸ್ ಎಂಬ ಹೆಸರಲ್ಲಿ ಬಿಡುಗಡೆಗೊಳಿಸಲಾಗಿರುವ ಈ ವರದಿಯಲ್ಲಿ 22 ನಗರಗಳ  300ರಷ್ಟು ವೃದ್ಧರನ್ನು ಸಂದರ್ಶಿಸಲಾಗಿತ್ತು. ಅಂದಹಾಗೆ,

ವರ್ಷಾoಪ್ರತಿ   ವೃದ್ಧಾಶ್ರಮಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿರುವುದು ಮತ್ತು ಮಕ್ಕಳ ನಿರ್ಲಕ್ಷ್ಯವನ್ನು ಆರೋಪಿಸಿ ವೃದ್ಧರು  ನ್ಯಾಯಾಲಯದ ಬಾಗಿಲು ತಟ್ಟುತ್ತಿರುವ ಸಂಖ್ಯೆಯಲ್ಲೂ ಅಧಿಕವಾಗುತ್ತಿರುವುದು ಆಶಾದಾಯಕ ಬೆಳವಣಿಗೆಯೇನೂ ಅಲ್ಲ.  ಹಾಗಂತ, ದೇಶದ ವೃದ್ಧರ ಪೈಕಿ 82% ಮಂದಿ ಕೂಡಾ ಮನೆಯಲ್ಲೇ  ಇದ್ದಾರೆ ಎಂಬುದಕ್ಕಾಗಿ ನಾವು ಸಂತಸಪಡುವ  ಹಾಗೂ ಇಲ್ಲ. ಹೀಗೆ ಮನೆಯಲ್ಲೇ  ಇರುವ ವೃದ್ಧ ಹೆತ್ತವರು ಹೇಗೆ ಬದುಕುತ್ತಿದ್ದಾರೆ, ಅವರನ್ನು ಮಕ್ಕಳು ಮತ್ತು  ಸೊಸೆಯಂದಿರು ಹೇಗೆ ನೋಡಿಕೊಳ್ಳುತ್ತಿದ್ದಾರೆ ಎಂಬುದೂ ಬಹಳ ಮುಖ್ಯ. ಅನೇಕ ಬಾರಿ ಹೀಗೆ ಮನೆಯಲ್ಲಿರುವ ವೃದ್ಧ  ಹೆತ್ತವರು ವೃದ್ಧಾಶ್ರಮವನ್ನು ಬಯಸುವಷ್ಟು ಮನೆಯ ವಾತಾವರಣ ಕ್ರೂರವಾಗಿರುತ್ತದೆ. ಮಕ್ಕಳು ಅವರನ್ನು ಹೊರೆಯಂತೆ  ಕಾಣುವುದು ಮತ್ತು ದಿನಾ ನಿಂದಿಸುವುದು ನಡೆಯುತ್ತಿರುತ್ತದೆ. ಇಂಥ ಬೆಳವಣಿಗೆಯನ್ನು ವಿಲ್ ಅಥವಾ ದಾನಪತ್ರವನ್ನು  ರದ್ದುಗೊಳಿಸುವುದರಿಂದ ಪರಿಹರಿಸಬಹುದೇ ಎಂಬ ಪ್ರಶ್ನೆಯಿದೆ. ಇದು ಒಂದು ಪರಿಹಾರ ಮಾರ್ಗ ಆಗಬಹುದಾದರೂ  ಮಕ್ಕಳ ಮನಸ್ಥಿತಿಯಲ್ಲಿ ಬದಲಾವಣೆ ತರದ ಹೊರತು ಇದಕ್ಕೆ ಬೇರೆ ಯಾವುದೂ ಪೂರ್ಣ ಪರಿಹಾರ ಆಗಲಾರದು ಎಂದೇ  ಹೇಳಬೇಕಾಗುತ್ತದೆ. ಮಕ್ಕಳ ಹೆಸರಿಗೆ ವರ್ಗಾಯಿಸಿದ ಆಸ್ತಿಯನ್ನು ಮರಳಿ ಪಡೆಯಲು ಹೆತ್ತವರಿಗೆ ಅವಕಾಶ  ಮಾಡಿಕೊಡಲಾಗುವ ಕಾನೂನು ಹೆತ್ತವರನ್ನೇ ಅಪಾಯಕ್ಕೆ ದೂಡುವ ಸಾಧ್ಯತೆಗೂ ಕಾರಣವಾಗಬಹುದು. ದೈಹಿಕವಾಗಿ  ದುರ್ಬಲರಾಗಿರುವ ಹೆತ್ತವರನ್ನು ನಿರ್ದಯಿ ಮಕ್ಕಳು ಸಾಯಿಸಲೂ ಬಹುದು. ಆದ್ದರಿಂದಲೇ ಮಕ್ಕಳ ಮನಸ್ಥಿತಿಯನ್ನು  ಬದಲಾಯಿಸುವ ಪರಿಹಾರ ಮುಖ್ಯ ಅನಿಸುವುದು.

ಹೆತ್ತವರನ್ನು ನಿರ್ಲಕ್ಷಿಸುವ ಮಕ್ಕಳನ್ನು ಪವಿತ್ರ ಕುರ್‌ಆನ್ ದೇವಭಯ ಮತ್ತು ವಿಚಾರಣೆಯ ಭಯದ ಆಧಾರದಲ್ಲಿ  ತಿದ್ದುವುದಕ್ಕೆ ಆದ್ಯತೆ ನೀಡಿದೆ. ನೀವು ಸ್ವರ್ಗಕ್ಕೋ ಅಥವಾ ನರಕಕ್ಕೋ ಎಂಬುದನ್ನು ನಿರ್ಧರಿಸುವುದು ನೀವು ನಿಮ್ಮ ವೃದ್ಧ  ಹೆತ್ತವರೊಂದಿಗೆ ಹೇಗೆ ನಡಕೊಂಡಿದ್ದೀರಿ ಎಂಬುದನ್ನು ಆಧರಿಸಿರುತ್ತದೆ ಎಂದು ಇಸ್ಲಾಮ್ ಬೋಧಿಸುತ್ತದೆ. ಹೆತ್ತವರಿಗೆ ‘ಛೆ’  ಎಂಬ ಪದವನ್ನೂ ಬಳಸಬಾರದು ಎಂದೂ ಕುರ್‌ಆನ್ ಎಚ್ಚರಿಸುತ್ತದೆ. ಚಿಕ್ಕಂದಿನಲ್ಲಿ ನಮ್ಮನ್ನು ಪ್ರೀತಿ ವಾತ್ಸಲ್ಯದಿಂದ  ನೋಡಿಕೊಂಡಂತೆಯೇ ಅವರ ವೃದ್ಧಾಪ್ಯದಲ್ಲಿ ಅವರನ್ನು ಅನುಗ್ರಹಿಸು ಎಂದು ದೇವನಲ್ಲಿ ಪ್ರಾರ್ಥಿಸುವಂತೆ ಕುರ್‌ಆನ್  ಮಕ್ಕಳಿಗೆ ಆದೇಶಿಸುತ್ತದೆ. ಸಂಕಷ್ಟಗಳ ಮೇಲೆ ಸಂಕಷ್ಟವನ್ನು ಅನುಭವಿಸಿ ತಾಯಿ ನಿಮ್ಮನ್ನು ಪ್ರಸವಿಸಿದ್ದಾಳೆ ಎಂದು  ತಾಯಿಯ ಮಹತ್ವವನ್ನು ಸಾರುತ್ತಾ ಕುರ್‌ಆನ್ ಮಕ್ಕಳನ್ನು ಎಚ್ಚರಿಸುತ್ತದೆ. ವೃದ್ಧರಾದ ಹೆತ್ತವರ ಸೇವೆ ಮಾಡುವುದು  ಧರ್ಮಯುದ್ಧದಲ್ಲಿ ಭಾಗವಹಿಸುವುದಕ್ಕೆ ಸಮಾನವಾದುದು ಎಂದು ಪ್ರವಾದಿ(ಸ) ಹೇಳಿದ್ದಾರೆ. ಹೆತ್ತವರ ಕೋಪಕ್ಕೆ  ತುತ್ತಾಗುವ ಮಕ್ಕಳು ಎಷ್ಟೇ ಧರ್ಮಿಷ್ಟರಾದರೂ ಸ್ವರ್ಗ ಪ್ರವೇಶಿಸಲಾರರು ಎಂಬುದಾಗಿಯೂ ಇಸ್ಲಾಮ್ ಎಚ್ಚರಿಸುತ್ತದೆ.  ಇಸ್ಲಾಮ್ ಇಂಥ ಬೋಧನೆಗಳ ಮೂಲಕವೇ ಸಮಾಜವನ್ನು ತಿದ್ದುವ ಪ್ರಯತ್ನ ನಡೆಸಿದೆ. ಸದ್ಯದ ಅಗತ್ಯ ಏನೆಂದರೆ,

ಕಾನೂನಿನ ಕಣ್ಣು ತಪ್ಪಿಸಲು ಸಾಧ್ಯವಾದರೂ ದೇವನ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬ ಪ್ರಜ್ಞೆಯೊಂದಿಗೆ  ಬದುಕುವ ಸಮಾಜವನ್ನು ನಿರ್ಮಿಸುವುದು. ಅಷ್ಟೇ.

Tuesday, 11 March 2025

ಯಾವುದು ಸಾಬ್ರ ಬಜೆಟ್?





ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿರುವ ಬಜೆಟನ್ನು ಸಾಬ್ರ ಬಜೆಟ್, ಹಲಾಲ್ ಬಜೆಟ್, ಪಾಕಿಸ್ತಾನಿ ಬಜೆಟ್  ಎಂದು ಟೀಕಿಸುವ ಮೂಲಕ ಬಿಜೆಪಿ ಮತ್ತು ಅದರ ಬಾಲಬಡುಕ ಮಾಧ್ಯಮಗಳು ಮಾಡಿರುವ ಅತಿದೊಡ್ಡ ಉಪಕಾರ ಏ ನೆಂದರೆ, ಮಾತಾಡುವಾಗ ತಾವು ಮೆದುಳು ಉಪಯೋಗಿಸಲ್ಲ ಎಂಬುದನ್ನು ಸಾಬೀತುಪಡಿಸಿರುವುದು. ಈ ಬಾರಿಯ  ಬಜೆಟ್‌ನ ಒಟ್ಟು ಗಾತ್ರ ೪,೦೯,೫೪೯ ಕೋಟಿ ರೂಪಾಯಿ. ಇದರಲ್ಲಿ ಅಲ್ಪಸಂಖ್ಯಾತರಿಗೆ ಕೊಡಲಾದ ಮೊತ್ತ ಬರೇ ೪೫೦೦  ಕೋಟಿ ರೂಪಾಯಿ. ಇದು ಒಟ್ಟು ಬಜೆಟ್ ಮೊತ್ತಕ್ಕೆ ಹೋಲಿಸಿದರೆ ಬರೇ ಒಂದು ಶೇಕಡಾ ಮಾತ್ರ ಆಗುತ್ತದೆ. ಅದರಲ್ಲೂ  ಅಲ್ಪಸಂಖ್ಯಾತರೆಂದರೆ ಬರೇ ಮುಸ್ಲಿಮರು ಮಾತ್ರ ಎಂದಾಗುವುದಿಲ್ಲ. ಕ್ರೈಸ್ತರು, ಜೈನರು, ಬೌದ್ಧರು, ಸಿಕ್ಖರು ಎಲ್ಲರೂ  ಇದೇ ಅಲ್ಪಸಂಖ್ಯಾತ ಚೌಕಟ್ಟಿನೊಳಗೆ ಬರುತ್ತಾರೆ. ಇದೇವೇಳೆ,

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ೪೨,೦೧೮ ಕೋಟಿ ರೂಪಾಯಿಯನ್ನು ನೀಡಲಾಗಿದೆ. ಹಿಂದುಳಿದ ವರ್ಗಗಳಿಗೆ  ೩೫೦೦ ಕೋಟಿ ರೂಪಾಯಿ ಅನುದಾನ ನೀಡಲಾಗಿದೆ. ಅಲ್ಲದೇ ಹಿಂದುಳಿದ ವರ್ಗಗಳಲ್ಲೇ  ಬೇರೆ ಬೇರೆ ನಿಗಮಗಳಿವೆ.  ಅವುಗಳಿಗೂ ಪ್ರತ್ಯೇಕ ಅನುದಾನವನ್ನು ನೀಡಲಾಗಿದೆ. ಈಗಾಗಲೇ ೨ ಕೋಟಿ ರೂಪಾಯಿ ವರೆಗಿನ ಸರ್ಕಾರಿ  ಕಾಮಗಾರಿಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಮೀಸಲಾತಿ ಇದೆ. ಅದನ್ನು ಪ್ರಶ್ನಿಸದ ಈ ಬಿಜೆಪಿ ಮತ್ತು  ಅದರ ಬಾಲಬಡುಕರು ಇದೀಗ ಮುಸ್ಲಿಮರೂ ಸೇರಿದಂತೆ ಅಲ್ಪಸಂಖ್ಯಾತ ಗುತ್ತಿಗೆದಾರರಿಗೆ ಸರಕಾರಿ ಕಾಮಗಾರಿಗಳಲ್ಲಿ  ಮೀಸಲಾತಿ ನೀಡಿರುವುದನ್ನು ಪ್ರಶ್ನಿಸುತ್ತಿz್ದÁರೆ. ಈ ಬಾರಿಯ ಬಜೆಟ್‌ನಲ್ಲಿ ಪರಿಶಿಷ್ಟ ಜಾತಿ ಉಪಯೋಜನೆಗೆ ೨೯,೯೯೨  ಕೋಟಿ ರೂಪಾಯಿಯ ಅನುದಾನ ಘೋಷಿಸಲಾಗಿದೆ. ಜೊತೆಗೇ ಬುಡಕಟ್ಟು ಉಪಯೋಜನೆಗಾಗಿ ೧೨,೦೨೬ ಕೋಟಿ  ರೂಪಾಯಿ ಅನುದಾನ ನೀಡಲಾಗಿದೆ. ಪರಿಶಿಷ್ಟ ಜಾತಿಗೆ ಸಂಬAಧಿಸಿ ಪ್ರಗತಿ ಕಾಲನಿ ಎಂಬ ಯೋಜನೆಯನ್ನು  ಹಮ್ಮಿಕೊಳ್ಳಲಾಗಿದ್ದು, ಅದರ ಅಭಿವೃದ್ಧಿ ಕಾಮಗಾರಿ ಪೂರ್ಣಗೊಳಿಸಲು ೨೨೨ ಕೋಟಿ ರೂಪಾಯಿ ಮೀಸಲಿಡಲಾಗಿದೆ.  ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳ ಒಟ್ಟು ೩೧ ವಸತಿ ಶಾಲೆಗಳನ್ನು ಪಿಯು ಶಾಲೆಗಳಾಗಿ ಉ ನ್ನತೀಕರಣ ಮಾಡುವುದಾಗಿ ಬಜೆಟ್‌ನಲ್ಲಿ ಘೋಷಿಸಲಾಗಿದೆ. ೨೫ ಹೋಬಳಿಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ  ಪಂಗಡದ ವಸತಿ ಶಾಲೆಗಳನ್ನು ಪ್ರಾರಂಭಿಸುವುದಾಗಿ ಹೇಳಲಾಗಿದೆ. ೨೧೩ ಕೋಟಿ ರೂಪಾಯಿಯ ವೆಚ್ಚದಲ್ಲಿ ಕ್ರೈಸ್ ವಸತಿ  ಶಾಲೆಗಳಿಗೆ ಡೆಸ್ಕ್, ಬೆಂಚ್, ಪೀಠೋಪಕರಣ ಮತ್ತು ಇತರ ಅಗತ್ಯ ಶೈಕ್ಷಣಿಕ ಮೂಲ ಸೌಲಭ್ಯಗಳನ್ನು ಒದಗಿಸುವುದಾಗಿ  ಬಜೆಟ್‌ನಲ್ಲಿ ಹೇಳಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡ ವಿದ್ಯಾರ್ಥಿ ನಿಲಯಗಳಲ್ಲಿನ ಆಹಾರ ವ್ಯವಸ್ಥೆಯ ಪಾರದ ರ್ಶಕತೆಗಾಗಿ ಸಾಮಾಜಿಕ ಪರಿಶೋಧನೆ ನಡೆಸುವುದಾಗಿ ಹೇಳಲಾಗಿದೆ. ದೇಶದ ಪ್ರತಿಷ್ಠಿತ ೧೦೦ ಶಿಕ್ಷಣ ಸಂಸ್ಥೆಗಳಲ್ಲಿ ಪದವಿ  ಮತ್ತು ಸ್ನಾತಕೋತ್ತರ ಪದವಿಗೆ ಪ್ರವೇಶ ಪಡೆಯುವ ಎಸ್‌ಸಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಲಾಗುವುದು ಎಂದು  ಸಿದ್ದರಾಮಯ್ಯ ಘೋಷಿಸಿದ್ದಾರೆ. ಸರಕಾರಿ ಮತ್ತು ಖಾಸಗಿ ಮೆಡಿಕಲ್, ಎಂಜಿನಿಯರಿAಗ್ ಕಾಲೇಜುಗಳಲ್ಲಿ ವ್ಯಾಸಂಗ  ಮಾಡುತ್ತಿದ್ದು, ಅದೇ ಕಾಲೇಜಿನ ವಸತಿ ನಿಲಯ ಗಳಲ್ಲಿ ಪ್ರವೇಶ ಪಡೆದ ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು  ೩೫೦೦ ರೂಪಾಯಿ ನೆರವು ನೀಡಲಾಗುತ್ತದೆ. ಹೈನುಗಾರಿಕೆ ಕೈಗೊಳ್ಳುವ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ  ಸಮುದಾಯದವರಿಗೆ ನಿಗಮದ ಮೂಲಕ ಘಟಕ ವೆಚ್ಚವಾಗಿ ಶೇ. ೫೦ರಷ್ಟು ಸಹಾಯ ಧನ ನೀಡಲಾಗುವುದು ಅಥವಾ ೧  ಲಕ್ಷದ ೨೫ ಸಾವಿರ ಸಹಾಯ ಧನ ನೀಡಲಾಗುವುದು. ೨೦೨೫-೨೬ರಲ್ಲಿ ೭೮ ಬುಡಕಟ್ಟು ವಸತಿ ಶಾಲೆಗಳಲ್ಲಿ ೭ನೇ ತರಗತಿ  ಪ್ರಾರಂಭಿಸಲಾಗುವುದು. ಪರಿಶಿಷ್ಟ ಪಂಗಡದ ೨೦ ಹೊಸ ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳನ್ನು  ಪ್ರಾರಂಭಿಸಲಾಗುವುದು ಎಂದು ಬಜೆಟ್‌ನಲ್ಲಿ ಘೋಷಿಸಲಾಗಿದೆ. ಅಂದಹಾಗೆ,

ಮುಸ್ಲಿಮರೂ ಸೇರಿದಂತೆ ಇಡೀ ಅಲ್ಪಸಂಖ್ಯಾತ ಸಮುದಾಯಕ್ಕೆ ಬರೇ ೪೫೦೦ ಕೋಟಿ ರೂಪಾಯಿ ಕೊಟ್ಟಿದ್ದನ್ನೇ ಹಲಾಲ್  ಬಜೆಟ್, ಸಾಬ್ರ ಬಜೆಟ್ ಎನ್ನುವುದಾದರೆ, ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ನೀಡಲಾಗಿರುವ ೪೨,೦೧೮ ಕೋಟಿ ರೂ ಪಾಯಿ ನೀಡಿರುವುದನ್ನು ಏನೆನ್ನ ಬೇಕು? ಈ ಬಿಜೆಪಿ ಮತ್ತು ಅದರ ಬಾಲಬಡುಕ ಮಾಧ್ಯಮಗಳು ಆಗಾಗ ‘ಹಿಂದೂ’  ಎಂಬ ಐಡೆಂಟಿಟಿ ಕಾರ್ಡನ್ನು ಪ್ರದರ್ಶಿಸುತ್ತದಲ್ಲ? ಪರಿಶಿಷ್ಟ ಮಾತ್ರವಲ್ಲ, ಜಾತಿ-ಪಂಗಡ ಮತ್ತು ಬುಡಕಟ್ಟು  ಸಮುದಾಯಗಳನ್ನೂ ಅದು ಹಿಂದೂ ಎಂಬ ವಿಶಾಲ ವ್ಯಾಪ್ತಿಯೊಳಗೆ ಸೇರಿಸಿಕೊಳ್ಳುತ್ತಲ್ಲ? ಹಾಗಿದ್ದ ಮೇಲೆ ಜುಜುಬಿ  ೪೫೦೦ ಕೋಟಿ ರೂಪಾಯಿಯನ್ನು ಮುಸ್ಲಿಮರು, ಜೈನರು, ಕ್ರೈಸ್ತರೂ ಸೇರಿದಂತೆ ಅಲ್ಪಸಂಖ್ಯಾತರಿಗಾಗಿ ಮೀಸಲಿಟ್ಟಿದ್ದಕ್ಕಾಗಿ  ಇದು ಸಾಬ್ರ ಬಜೆಟ್ ಆಗುವುದಾದರೆ ಎಸ್‌ಸಿ, ಎಸ್‌ಟಿ ಸಮುದಾಯಗಳಿಗೆ ಮೀಸಲಿರಿಸಲಾದ ೪೨,೦೧೮ ಕೋಟಿಗಾಗಿ  ಯಾಕೆ ಇದನ್ನು ಹಿಂದೂ ಬಜೆಟ್ ಎಂದು ಬಿಜೆಪಿ ಕರೆಯುತ್ತಿಲ್ಲ?

ರಾಜ್ಯದಲ್ಲಿ ಅಲ್ಪಸಂಖ್ಯಾತರು ಹೆಚ್ಚೆಂದರೆ ೧೮% ಇದ್ದಾರೆ. ಆದರೆ ಎಸ್‌ಸಿ, ಎಸ್‌ಟಿ ಸಮುದಾಯದ ಸಂಖ್ಯೆ ೨೬% ಇದೆ. ಜ ನಸಂಖ್ಯೆಯ ಈ ಶೇಕಡಾವಾರನ್ನು ಹೋಲಿಸಿದರೆ ಅಲ್ಪಸಂಖ್ಯಾತರಿಗೆ ಮೀಸಲಿಟ್ಟ ಮೊತ್ತ ನಗಣ್ಯ ಅನ್ನುವಷ್ಟು ಸಣ್ಣದು. ೨೬%  ಇರುವ ಸಮುದಾಯಕ್ಕೆ ೪೨,೦೧೮ ಕೋಟಿ ರೂಪಾಯಿ ಕೊಡುವಾಗ ೧೮% ಇರುವ ಸಮುದಾಯಕ್ಕೆ ಬರೇ ೪೫೦೦ ಕೋಟಿ  ರೂಪಾಯಿ ಕೊಡುವುದು ಯಾವ ನ್ಯಾಯ? ನಿಜಕ್ಕೂ, ಬಿಜೆಪಿ ಮತ್ತು ಅದರ ಮಡಿಲ ಮಾಧ್ಯಮಗಳು ಪ್ರಶ್ನಿಸಬೇಕಾದದ್ದು  ಈ ತಾರತಮ್ಯವನ್ನು. ಆದರೆ, ಬಿಜೆಪಿಯಾದರೋ ರಾಜಕೀಯ ಪಕ್ಷ. ಅಲ್ಪಸಂಖ್ಯಾತರೆAದರೆ ಮುಸ್ಲಿಮರು ಮಾತ್ರ ಎಂಬAತೆ  ನಟಿಸುತ್ತಾ ಮತ್ತು ನಂಬಿಸುತ್ತಾ ಬರುತ್ತಿರುವ ಆ ಪಕ್ಷಕ್ಕೆ ಅಧಿಕಾರದ ಗುರಿಯಿದೆ. ಅದಕ್ಕೆ ಪೂರಕವಾಗಿ ಏನೆಲ್ಲ ಸುಳ್ಳುಗಳನ್ನು  ಹೆಣೆಯಬೇಕೋ ಅವೆಲ್ಲವನ್ನೂ ಅದು ಹೆಣೆಯುತ್ತಿದೆ. ಆದರೆ, ಈ ಟಿವಿ ಮಾಧ್ಯಮಕ್ಕೆ ಏನಾಗಿದೆ? ಅದೇಕೆ ಈ ಮಟ್ಟದಲ್ಲಿ  ಸುಳ್ಳಿಗೆ ನೇತೃತ್ವವನ್ನು ನೀಡುತ್ತಿದೆ? ಅಂದಹಾಗೆ,

ಅಲ್ಪಸAಖ್ಯಾತರಲ್ಲಿ ಉಳಿದೆಲ್ಲ ಸಮುದಾಯಗಳನ್ನು ಬಿಟ್ಟು ಕೇವಲ ಮುಸ್ಲಿಮರನ್ನು ಮಾತ್ರ ಎತ್ತಿಕೊಂಡರೂ ಮತ್ತು ಈ  ಸಮುದಾಯ ಸರಕಾರಕ್ಕೆ ಸಲ್ಲಿಸುವ ನೇರ ಮತ್ತು ಪರೋಕ್ಷ ತೆರಿಗೆಗಳೆಷ್ಟು ಎಂಬುದನ್ನು ಲೆಕ್ಕ ಹಾಕಿದರಂತೂ ಬಜೆಟ್‌ನಲ್ಲಿ  ಘೋಷಿಸಲಾಗಿರುವುದು ಜುಜುಬಿಯಲ್ಲೇ  ಜುಜುಬಿ ಎಂದು ಗೊತ್ತಾಗುತ್ತದೆ. ಜನಸಂಖ್ಯೆಯ ಆಧಾರದಲ್ಲಿ ಹೇಳುವುದಾದರೆ,  ಮುಸ್ಲಿಮ್ ಸಮುದಾಯ ೨೯ ಸಾವಿರ ಕೋಟಿ ರೂಪಾಯಿಯನ್ನು ಪರೋಕ್ಷ ತೆರಿಗೆಯಾಗಿ ಸರಕಾರಕ್ಕೆ ಪಾವತಿಸುತ್ತಿದೆ.  ಅಲ್ಲದೇ, ಮುಸ್ಲಿಮ್ ಸಮುದಾಯವು ರಾಜ್ಯದ ಅತ್ಯಂತ ದೊಡ್ಡ ಗ್ರಾಹಕ ಸಮುದಾಯವಾಗಿದೆ. ಅಬಕಾರಿಯನ್ನು  ಹೊರತುಪಡಿಸಿ ಉಳಿದೆಲ್ಲ ಇಲಾಖೆಗಳೂ ಮುಸ್ಲಿಮ್ ಸಮುದಾಯದಿಂದ ಧಾರಾಳ ಲಾಭ ಪಡೆಯುತ್ತಿದೆ. ವಿದೇಶಿ  ವಿನಿಮಯದ ವಿಚಾರದಲ್ಲಂತೂ ಸರಕಾರದ ಬೊಕ್ಕಸಕ್ಕೆ ಮುಸ್ಲಿಮ್ ಸಮುದಾಯದ ಕೊಡುಗೆ ಬಹಳ ದೊಡ್ಡದು. ಜವಳಿ,  ಮೀನುಗಾರಿಕೆ, ಕೈಗಾರಿಕೆ, ಚರ್ಮೋದ್ಯಮ ಸಹಿತ ಹಲವು ಕ್ಷೇತ್ರಗಳಿಗೆ ಮುಸ್ಲಿಮ್ ಕೊಡುಗೆ ಸಣ್ಣದೇನಲ್ಲ. ಮುಸ್ಲಿಮರ ನೇರ  ಮತ್ತು ಪರೋಕ್ಷ ತೆರಿಗೆಗಳು ಈ ಎಲ್ಲ ಕ್ಷೇತ್ರಗಳಿಂದ ಸರಕಾರಕ್ಕೆ ಪ್ರತಿದಿನ ಸಲ್ಲಿಕೆಯಾಗುತ್ತಿದೆ. ಒಂದುರೀತಿಯಲ್ಲಿ,

ಮುಸ್ಲಿಮ್ ಸಮುದಾಯ ನೇರವಾಗಿ ಮತ್ತು ಪರೋಕ್ಷವಾಗಿ ಈ ಸರಕಾರಕ್ಕೆ ನೀಡುತ್ತಿರುವ ಹಣವನ್ನು ಲೆಕ್ಕ ಹಾಕಿದರೆ,  ಸರಕಾರದಿಂದ ಸಮುದಾಯ ಪಡಕೊಳ್ಳುತ್ತಿರುವುದು ಶೂನ್ಯಾತಿಶೂನ್ಯ ಎಂದೇ ಹೇಳಬೇಕು. ತಾವು ಕೊಟ್ಟಿರುವುದರಿಂದ  ೧%ದಷ್ಟನ್ನು ಮಾತ್ರ ಪಡೆಯುತ್ತಿರುವ ಮತ್ತು ಮಿಕ್ಕುಳಿದ ೯೯%ವನ್ನೂ ಸರ್ವರ ಅಭಿವೃದ್ಧಿಗಾಗಿ ಬಿಟ್ಟು ಕೊಡುತ್ತಿರುವ  ಸಮುದಾಯದ ಬಗ್ಗೆ ಹೆಮ್ಮೆ ಪಡಬೇಕಾದ ಈ ಬಿಜೆಪಿ ಮತ್ತು ಬಾಲಬಡುಕ ಮಾಧ್ಯಮಗಳು ಇದೀಗ ಅವೆಲ್ಲವನ್ನೂ  ಮರೆಮಾಚಿ ಅಪ್ಪಟ ಸುಳ್ಳನ್ನು ಹರಡುತ್ತಿರುವುದಕ್ಕೆ ನಾಚಿಕೆಯಾಗಬೇಕು. ನಿಜವಾಗಿ, ಹೆಚ್ಚಿನ ಅನುದಾನಕ್ಕಾಗಿ ಮುಸ್ಲಿಮರು  ಬೀದಿಗಿಳಿಯಬೇಕಿತ್ತು. ವಿವಿಧ ಕಲ್ಯಾಣ ಕಾರ್ಯಕ್ರಮಗಳನ್ನು ಘೋಷಿಸುವಂತೆ ಸರಕಾರದ ಮೇಲೆ ಒತ್ತಡ ಹೇರಬೇಕಿತ್ತು.  ತಾವು ಸರಕಾರಕ್ಕೆ ಪಾವತಿಸುತ್ತಿರುವುದರಿಂದ ೧೦%ವನ್ನಾದರೂ ನಮಗೆ ಮರಳಿಸಿ ಎಂದು ಒತ್ತಾಯಿಸಬೇಕಿತ್ತು. ಆದರೆ, ಅದರ  ಬದಲು ಈ ಸಮುದಾಯವನ್ನೇ ಕಟಕಟೆಯಲ್ಲಿ ನಿಲ್ಲಿಸುವ ರೀತಿಯ ಮಾತುಗಳನ್ನು ಬಿಜೆಪಿ ಆಡುತ್ತಿದೆ ಎಂದಾದರೆ  ಅದರೊಳಗೆ ಮುಸ್ಲಿಮ್ ದ್ವೇಷವೆಂಬ ವಿಷ ತುಂಬಿದೆ ಎಂದಷ್ಟೇ ಹೇಳಬೇಕಾಗಿದೆ.

Monday, 10 February 2025

ಕೇಜ್ರಿವಾಲ್ ಸೋಲಿಗೆ ಏನು ಕಾರಣ?

 


‘ಆಲ್ಟರ್‌ನೇಟಿವ್ ಪಾಲಿಟಿಕ್ಸ್’ ಎಂಬ ಹೆಸರಲ್ಲಿ ಅಧಿಕಾರಕ್ಕೆ ಬಂದ ಕೇಜ್ರಿವಾಲ್‌ರ ಆಪ್ ಪಕ್ಷಕ್ಕೆ ದೆಹಲಿ ಚುನಾವಣೆಯಲ್ಲಿ  ಸೋಲಾಗಲು ಕಾರಣವೇನು ಎಂಬ ಬಗ್ಗೆ ಟಿ.ವಿ. ಚಾನೆಲ್‌ಗಳು, ಪತ್ರಿಕೆಗಳು ಮತ್ತು ಸೋಶಿಯಲ್ ಮೀಡಿಯಾಗಳು  ಚರ್ಚಿಸಿ ಚರ್ಚಿಸಿ ಸುಸ್ತಾಗಿವೆ. ಕೇಜ್ರಿವಾಲ್ ಮಾಡಿರುವ ತಪ್ಪುಗಳು, ದುರಹಂಕಾರ ಎನ್ನಬಹುದಾದ ನಿಲುವುಗಳು, ಮತಗಳ  ಮೇಲೆ ಕಣ್ಣಿಟ್ಟು ತೆಗೆದುಕೊಂಡು ಅನ್ಯಾಯದ ನಿರ್ಧಾರಗಳು ಮತ್ತು ಭ್ರಷ್ಟಾಚಾರಗಳು ಇತ್ಯಾದಿ ಸಾಲುಸಾಲು ಕಾರಣಗಳು  ಒಂದೊಂದಾಗಿ ಉಲ್ಲೇಖಕ್ಕೆ ಒಳಗಾಗುತ್ತಿವೆ. ಅಲ್ಲದೇ, ಇವಿಎಂ ಮೇಲೆ ಆರೋಪ ಹೊರಿಸದೆಯೇ ಕೇಜ್ರಿವಾಲ್ ಕೂಡಾ  ತನ್ನ ಸೋಲನ್ನು ಒಪ್ಪಿಕೊಂಡಿದ್ದಾರೆ. ಈ ಮೂಲಕ ಇವಿಎಂ ಹೊರತಾದ ಕಾರಣಗಳನ್ನೇ ದೆಹಲಿ ಫಲಿತಾಂಶಕ್ಕೆ ಸಂಬಂಧಿಸಿ  ಚರ್ಚಿಸಬೇಕಾಗಿದೆ ಎಂಬ ಪರೋಕ್ಷ ಸೂಚನೆಯನ್ನೂ ಅವರು ನೀಡಿದ್ದಾರೆ.

ಬಹುಶಃ, ಕೇಜ್ರಿವಾಲ್ ಸೋಲನ್ನು ಎರಡು ಮಗ್ಗುಲುಗಳಲ್ಲಿ ಚರ್ಚಿಸಬಹುದಾಗಿದೆ. 
1. ಅದರ ಹುಟ್ಟು ಯಾಕಾಯಿತೋ  ಅಧಿಕಾರ ಸಿಕ್ಕ ಬಳಿಕ ಅದು ತನ್ನ ಹುಟ್ಟನ್ನೇ ಮರೆಯಿತು. 10 ವರ್ಷಗಳ ಹಿಂದೆ ದೆಹಲಿ ಗದ್ದುಗೆಗೇರುವುದಕ್ಕೆ ಅವರಿಗೆ  ಊರುಗೋಲು ಆದದ್ದು ಭ್ರಷ್ಟಾಚಾರ. ಅಣ್ಣಾ ಹಜಾರೆಯನ್ನು ಬಳಸಿಕೊಂಡು ಮನ್‌ಮೋಹನ್ ಸಿಂಗ್ ಸರಕಾರದ ವಿರುದ್ಧ  ದೆಹಲಿಯ ಜಂತರ್ ಮಂತರ್‌ನಲ್ಲಿ ಹೋರಾಟ ಸಂಘಟಿಸಿದ್ದ ಕೇಜ್ರಿವಾಲ್, ಆ ಬಳಿಕ ದೆಹಲಿಯ ಕಾಂಗ್ರೆಸ್ ಮುಖ್ಯಮಂತ್ರಿ  ಶೀಲಾ ದೀಕ್ಷಿತ್ ವಿರುದ್ಧ ಭ್ರಷ್ಟಾಚಾರ ಆರೋಪ ಹೊರಿಸಿ ರಂಗಕ್ಕಿಳಿದರು. ಶೀಲಾರನ್ನು ಮಹಾನ್ ಭ್ರಷ್ಟಾಚಾರಿ ಎಂದರು.  2013ರಲ್ಲಿ ನಡೆದ ಅಸೆಂಬ್ಲಿ ಚುನಾವಣೆಯಲ್ಲಿ ಶೀಲಾ ದೀಕ್ಷಿತ್ ವಿರುದ್ಧ ಸ್ಪರ್ಧಿಸಿ 25 ಸಾವಿರ ಮತಗಳ ಅಂತರದಿAದ  ಜಯಗಳಿಸಿದರು. ಆ ಬಳಿಕ ಭ್ರಷ್ಟಾಚಾರದ ಆರೋಪಗಳು ಒಂದೊAದಾಗಿ ಬಿದ್ದು ಹೋದುವು. 2ಜಿ ಹಗರಣವನ್ನು ಮತ್ತು  ಲೋಕಪಾಲ ಜಾರಿಯನ್ನು ಮುಂದಿಟ್ಟುಕೊಂಡು ಇಂಡಿಯಾ ಎಗೈನ್‌ಸ್ಟ್ ಕರಪ್ಶನ್ ಎಂಬ ಧ್ಯೇಯವಾಕ್ಯದಡಿ ಹೋರಾಟ  ಸಂಘಟಿಸಿದ್ದ ಕೇಜ್ರಿವಾಲ್ ತಂಡ ಆ ಬಳಿಕ ಅವೆರಡನ್ನೂ ಬಹುತೇಕ ಮರೆತೇ ಬಿಟ್ಟವು. 2ಜಿ ಹಗರಣವೇ ಅಲ್ಲ ಅನ್ನುವುದ ನ್ನು ವರ್ಷಗಳ ಬಳಿಕ ನ್ಯಾಯಾಲಯವೇ ಸಾರಿತು. ಶೀಲಾ ದೀಕ್ಷಿತ್‌ರ ಭ್ರಷ್ಟಾಚಾರ ಏನು ಅನ್ನುವುದನ್ನು ಪತ್ತೆ ಹಚ್ಚಲು  ಈವರೆಗೂ ಕೇಜ್ರಿವಾಲ್‌ಗೆ ಸಾಧ್ಯವಾಗಲಿಲ್ಲ. ಲೋಕಪಾಲ್‌ನ ಸ್ಥಿತಿ ಈಗ ಏನಾಗಿದೆ ಅನ್ನುವುದೇ ತಿಳಿದಿಲ್ಲ. ಇದೇವೇಳೆ, ಸ್ವತಃ  ಕೇಜ್ರಿವಾಲ್ ಅವರೇ ಭ್ರಷ್ಟಾಚಾರದ ಆರೋಪಕ್ಕೆ ಸಿಲುಕಿದರು. ಜೈಲಿಗೂ ಹೋದರು.

ವಿಶೇಷ ಏನೆಂದರೆ, 2013ರಲ್ಲಿ ಶೀಲಾ ದೀಕ್ಷಿತ್‌ರ ವಿರುದ್ಧ ಭ್ರಷ್ಟಾಚಾರದ ಸುಳ್ಳು ಆರೋಪವನ್ನು ಹೊರಿಸಿ ಗೆದ್ದಿದ್ದ  ಕೇಜ್ರಿವಾಲ್‌ರ ಸೋಲಿಗೆ ಅದೇ ಶೀಲಾ ದೀಕ್ಷಿತ್‌ರ ಮಗನೇ ಕಾರಣವಾದದ್ದು. ನವದೆಹಲಿ ಕ್ಷೇತ್ರದಿಂದ ಸ್ಪರ್ಧಿಸಿದ್ದ  ಕೇಜ್ರಿವಾಲ್ ಅವರು 4089 ಮತಗಳ ಅಂತರದಿAದ ಸೋತಿದ್ದಾರೆ. ಇದೇ ಕ್ಷೇತ್ರದಲ್ಲೇ  ಕೇಜ್ರಿವಾಲ್ ಅವರು 2013ರಲ್ಲಿ  ಶೀಲಾ ದೀಕ್ಷಿತ್‌ರನ್ನು ಸೋಲಿಸಿದ್ದರು. ಈ ಬಾರಿ ಶೀಲಾ ದೀಕ್ಷಿತ್‌ರ ಮಗ ಸಂದೀಪ್ ಸಿಂಗ್ ಅವರು ಕಾಂಗ್ರೆಸ್‌ನಿAದ ಸ್ಪ ರ್ಧಿಸಿ 4566 ಮತಗಳನ್ನು ಪಡೆದು ಮೂರನೇ ಸ್ಥಾನಿಯಾದರು. ಒಂದುವೇಳೆ, ಕಾಂಗ್ರೆಸ್ ಮತ್ತು ಆಪ್ ಮೈತ್ರಿ  ಮಾಡಿಕೊಂಡು ಸಂದೀಪ್ ದೀಕ್ಷಿತ್ ಇಲ್ಲಿ ಸ್ಪರ್ಧಿಸದೇ ಇರುತ್ತಿದ್ದರೆ, ಅವರಿಗೆ ಬಿದ್ದಿರುವ 4566 ಮತಗಳು ಕೇಜ್ರಿವಾಲ್‌ಗೆ  ಬಿದ್ದು ಅವರು ಗೆಲ್ಲುವ ಸಾಧ್ಯತೆ ಇತ್ತು ಎಂಬ ವಿಶ್ಲೇಷಣೆ ನಡೆಯುತ್ತಿದೆ. ಅಂತೂ 2013ರಲ್ಲಿ ಭ್ರಷ್ಟಾಚಾರದ ಸುಳ್ಳು ಆರೋಪ  ಹೊರಿಸಿ ಶೀಲಾ ದೀಕ್ಷಿತ್‌ರನ್ನು ಸೋಲಿಸಿದ್ದ ಕೇಜ್ರಿವಾಲ್‌ರನ್ನು 12 ವರ್ಷಗಳ ಬಳಿಕ ಅದೇ ಶೀಲಾ ದೀಕ್ಷಿತ್‌ರ ಮಗ  ಸೋಲಿಸಿದ್ದು ವಿಶೇಷ ಅನ್ನಬೇಕು.

ಅಂದಹಾಗೆ, ಅಧಿಕಾರದಲ್ಲಿರುವಾಗ ಕೇಜ್ರಿವಾಲ್ ಅತ್ಯಂತ ದುರಹಂಕಾರದಿಂದ  ಮತ್ತು ಕೋಮುಪಕ್ಷಪಾತದಿಂದ ವರ್ತಿಸಿದರು  ಅನ್ನುವುದಕ್ಕೆ ಹಲವು ಉದಾಹರಣೆಗಳಿವೆ. ಸಿಎಎ-ಎನ್‌ಆರ್‌ಸಿ ಹೋರಾಟದ ಸಂದರ್ಭದಲ್ಲಿ ಅವರ ಮಾತು-ಕೃತಿಗಳು  ಯಾವ ಕಾರಣಕ್ಕೂ ‘ಆಲ್ಟರ್‌ನೇಟಿವ್ ಪಾಲಿಟಿಕ್ಸ್’ನ ರೂಪದಲ್ಲಿರಲಿಲ್ಲ. ದೆಹಲಿ ಪೊಲೀಸ್ ಇಲಾಖೆ ತನ್ನ ಕೈಯಲ್ಲಿರುತ್ತಿದ್ದರೆ  ಒಂದೇ ತಾಸಿನೊಳಗೆ ಶಾಹೀನ್‌ಬಾಗ್ ಪ್ರತಿಭಟನಾಕಾರರನ್ನು ತೆರವು ಮಾಡಿಸುತ್ತಿದ್ದೆ  ಎಂದು ಇಂಡಿಯಾ ಟುಡೆ ಚಾನೆಲ್  ಜೊತೆಗಿನ ಸಂವಾದದಲ್ಲಿ ಹೇಳಿದ್ದರು. ಈಗ ಕೇಜ್ರಿವಾಲ್‌ರ ವಿರುದ್ಧ ಯಾರು ಗೆದ್ದಿದ್ದಾರೋ ಅದೇ ಪರ್ವೇಶ್ ವರ್ಮಾ  ಅವರು 2020ರಲ್ಲಿ ದೆಹಲಿಯಲ್ಲಿ ಮುಸ್ಲಿಮ್ ದ್ವೇಷ ಭಾಷಣ ಮತ್ತು ಘೋಷಣೆಗಳನ್ನು ಕೂಗುತ್ತಾ ರ‍್ಯಾಲಿ ನಡೆಸಿದ್ದರು.  ಅವರ ನೇತೃತ್ವದಲ್ಲಿದ್ದ ದುಷ್ಕರ್ಮಿಗಳ ಗುಂಪು ಮುಸ್ಲಿಮರ ಮೇಲೆ ದಬ್ಬಾಳಿಕೆ, ದೌರ್ಜನ್ಯ, ಹಿಂಸೆಯನ್ನು ಎಸಗಿತ್ತು. ಆದರೆ  ಆ ಇಡೀ ಸನ್ನಿವೇಶವನ್ನು ಕೈಕಟ್ಟಿ ನೋಡಿದ್ದ ಕೇಜ್ರಿವಾಲ್, ತನಗೂ ತನ್ನದೇ ಜನತೆ ಅನುಭವಿಸುತ್ತಿರುವ ಸಂಕಷ್ಟಕ್ಕೂ  ಸಂಬAಧವೇ ಇಲ್ಲ ಎಂಬAತೆ ನಡೆದುಕೊಂಡಿದ್ದರು. ಆ ನೋವನ್ನು ಈ ಬಾರಿ ಮುಸ್ಲಿಮರು ಮತದಾನದಲ್ಲಿ ವ್ಯಕ್ತ ಪಡಿಸಿದ್ದಾರೆ. 25%ಕ್ಕಿಂತ ಹೆಚ್ಚು ಮುಸ್ಲಿಮ್ ಮತದಾರರಿರುವ ಕ್ಷೇತ್ರಗಳಲ್ಲಿ ಆಪ್ ಕಳೆದಬಾರಿ 61%ಕ್ಕಿಂತ ಹೆಚ್ಚು ಮತಗಳನ್ನು  ಪಡೆದಿದ್ದರೆ ಈ ಬಾರಿ ಅದು 50%ಕ್ಕೆ ಕುಸಿದಿದೆ. ಅಂದರೆ 11% ಮತಗಳಿಕೆ ಇಲ್ಲಿ ಕಡಿಮೆಯಾಗಿದೆ. ಹಾಗೆಯೇ, ಮುಸ್ಲಿಮ್  ಮತದಾರರ ಪ್ರಮಾಣ 10ರಿಂದ 25% ಇರುವ ಕ್ಷೇತ್ರಗಳಲ್ಲೂ ಆಪ್ ಈ ಬಾರಿ 7%ಕ್ಕಿಂತಲೂ ಹೆಚ್ಚು ಕಡಿಮೆ ಮತಗಳನ್ನು  ಪಡೆದಿದೆ. ಅಲ್ಲದೇ, ದೆಹಲಿಯಲ್ಲಿ ಬಡ ಮುಸ್ಲಿಮರ ಮನೆಗಳನ್ನು ಮತ್ತು ಮಸೀದಿಗಳನ್ನು ಅಕ್ರಮದ ಹೆಸರಲ್ಲಿ ದೆಹಲಿಯ  ಬಿಜೆಪಿ ಆಡಳಿತದ ನಗರ ಪಾಲಿಕೆಯು ಬುಲ್ಡೋಜರ್ ಮೂಲಕ ನೆಲಸಮ ಮಾಡುತ್ತಿದ್ದಾಗ ಸುಮ್ಮನಿದ್ದ ಮುಖ್ಯಮಂತ್ರಿ  ಅತಿಶಿ ಅವರು ದೇವಸ್ಥಾನದ ಮುಂದೆ ನಿಂತು ಬುಲ್ಡೋಜರ್ ಮಾಡದಂತೆ ಅಬ್ಬರಿಸಿದ್ದೂ ನಡೆದಿತ್ತು. ಜೊತೆಗೇ ದೆಹಲಿ  ಸರಕಾರದ ಎಲ್ಲ ಕಚೇರಿಗಳಲ್ಲಿ ಸರಕಾರದ್ದೇ  ಖರ್ಚಲ್ಲಿ ಲಕ್ಷ್ಮೀ ಪೂಜೆಯನ್ನೂ ಮಾಡಲಾಗಿತ್ತು. ನೋಟಿನಲ್ಲಿ ಲಕ್ಷ್ಮಿಯ ಚಿತ್ರ  ಛಾಪಿಸಬೇಕೆಂದು ಇದೇ ಕೇಜ್ರಿವಾಲ್ ಒಂದು ಸಂದರ್ಭದಲ್ಲಿ ಆಗ್ರಹಿಸಿದ್ದರು. ಒಂದುಕಡೆ, ಮುಸ್ಲಿಮರ ವಿರುದ್ಧ ಬಿಜೆಪಿ  ಬಹಿರಂಗ ಸಮರ ಸಾರಿ ಇನ್ನಿಲ್ಲದಂತೆ ತೊಂದರೆ ಕೊಡುತ್ತಿರುವುದನ್ನು ಮೌನವಾಗಿ ನೋಡುತ್ತಾ ಮತ್ತು ಇನ್ನೊಂದು ಕಡೆ  ಬಿಜೆಪಿಯ ಮತದಾರರನ್ನು ಸೆಳೆಯುವುದಕ್ಕಾಗಿ ಬಿಜೆಪಿಯಂತೆಯೇ ನಡಕೊಳ್ಳುತ್ತಾ ಆಪ್ ತನ್ನ ಮೂಲವನ್ನೇ ಮರೆತು  ನಡಕೊಂಡಿತ್ತು.

ನಿಜವಾಗಿ, ಹರ್ಯಾಣದಲ್ಲಿ ಗೆಲ್ಲಲೇಬೇಕಿದ್ದ ಕಾಂಗ್ರೆಸನ್ನು ಸೋಲಿಸಿದ್ದು ಇದೇ ಕೇಜ್ರಿವಾಲ್ ಪಕ್ಷ. ಹರ್ಯಾಣದಲ್ಲಿ  ಯಾವುದೇ ನಿರೀಕ್ಷೆ ಇಲ್ಲದಿದ್ದರೂ ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಳ್ಳದೇ ಒಂಟಿಯಾಗಿ ಎಲ್ಲ 90 ಸ್ಥಾನಗಳಿಗೂ ಆಪ್ ಸ್ಪ ರ್ಧಿಸಿತು. ಈ ಮೂಲಕ ಕಾಂಗ್ರೆಸ್ ಸುಮಾರು 17 ಕ್ಷೇತ್ರಗಳಲ್ಲಿ ಸೋಲಲು ನೇರ ಕಾರಣವಾಯಿತು. ಒಂದುವೇಳೆ, ಈ 17  ಸ್ಥಾನಗಳ ಪೈಕಿ 15 ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲ್ಲುತ್ತಿದ್ದರೂ ಹರ್ಯಾಣ ಕಾಂಗ್ರೆಸ್ ಪಾಲಾಗುತ್ತಿತ್ತು. ಇದಕ್ಕೆ ದೆಹಲಿಯಲ್ಲಿ  ಕಾಂಗ್ರೆಸ್ ಪ್ರತೀಕಾರವನ್ನು ತೀರಿಸಿಕೊಂಡಿತು. ದೆಹಲಿಯ ಎಲ್ಲ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಸ್ಪರ್ಧಿಸಿತು. ಕನಿಷ್ಠ 12 ಕ್ಷೇತ್ರಗಳಲ್ಲಿ  ಆಪ್ ಅಭ್ಯರ್ಥಿಗಳ ಸೋಲಿಗೆ ನೇರ ಕಾರಣವಾಯಿತು. ಹಾಗೆಯೇ, ರಾಹುಲ್ ಗಾಂಧಿ ಸಹಿತ ಪ್ರಮುಖ ನಾಯಕರೇ  ದೆಹಲಿಯಲ್ಲಿ ಆಪ್ ವಿರುದ್ಧ ಚುನಾವಣಾ ಭಾಷಣ ಮಾಡಿದರು. ಈ ಭಾಷಣಗಳ ಕಾರಣದಿಂದಲೂ ಆಪ್‌ಗೆ ಬೀಳಬೇಕಿದ್ದ  ಸಾವಿರಾರು ಮತಗಳು ಇತರ ಪಕ್ಷಗಳ ಪಾಲಾದುವು. ಒಂದುವೇಳೆ, ದೆಹಲಿಯಲ್ಲಿ ಈ ಎರಡೂ ಪಕ್ಷಗಳು ಮೈತ್ರಿ  ಮಾಡಿಕೊಂಡಿರುತ್ತಿದ್ದರೆ ಫಲಿತಾಂಶ ಈ ರೀತಿ ಇರುತ್ತಿರಲಿಲ್ಲ ಎಂಬ ಮಾತು ಕೇಳಿಬರುತ್ತಿದೆ.

ನಿಜವಾಗಿ, ದೆಹಲಿಯಲ್ಲಿ ಕೇಜ್ರಿವಾಲ್ ಯಾವೆಲ್ಲ ಉಚಿತಗಳನ್ನು ಈಗಾಗಲೇ ಜಾರಿ ಮಾಡಿದ್ದರೋ ಅವೆಲ್ಲವನ್ನೂ ಹಾಗೆಯೇ  ಮುಂದುವರಿಸುವುದಾಗಿ ಬಿಜೆಪಿ ಭರವಸೆ ನೀಡಿತ್ತು. ಮಾತ್ರವಲ್ಲ, ಕೇಜ್ರಿವಾಲ್ ಕೊಡುವ 200 ಯೂನಿಟ್ ಉಚಿತ ವಿದ್ಯುತ್  ಬದಲಾಗಿ 300 ಯುನಿಟ್ ನೀಡುವುದಾಗಿಯೂ ಬಿಜೆಪಿ ಭರವಸೆಯನ್ನು ನೀಡಿತ್ತು. ಹೀಗಿರುವಾಗ ದೆಹಲಿ ಜನರ ಪಾಲಿಗೆ  ಕೇಜ್ರಿವಾಲ್‌ರೇ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕಾದ ಯಾವ ಅಗತ್ಯವೂ ಇರಲಿಲ್ಲ. ತಮಗೆ ಈಗಾಗಲೇ ಸಿಗುವ  ಉಚಿತಗಳೆಲ್ಲವೂ ಬಿಜೆಪಿ ಅಧಿಕಾರಕ್ಕೆ ಬಂದರೂ ಲಭ್ಯವಾಗುವುದಾದರೆ ಬದಲಾವಣೆ ಮಾಡಿ ನೋಡುವುದರಲ್ಲಿ  ಕಳಕೊಳ್ಳುವುದಕ್ಕೇನಿದೆ ಎಂದವರು ಭಾವಿಸಿರಬಹುದು ಅಥವಾ 2020ರ ಚುನಾವಣೆಯಲ್ಲಿ ಕೇಜ್ರಿವಾಲ್‌ರನ್ನು ಈ  ಮತದಾರರು ಕೇವಲ ಉಚಿತಕ್ಕಾಗಿ ಮಾತ್ರ ಬೆಂಬಲಿಸಿರಲೂ ಬಹುದು. ಆಂತರಿಕವಾಗಿ ಬಿಜೆಪಿಯನ್ನು ಬೆಂಬಲಿಸುತ್ತಾ  ಕೇವಲ ಉಚಿತಕ್ಕಾಗಿ ಮಾತ್ರ ಅವರು ಕೇಜ್ರಿವಾಲ್‌ಗೆ ಮತ ಹಾಕಿರಬಹುದು. ಲೋಕಸಭಾ ಚುನಾವಣೆಯಲ್ಲಿ 8ರಲ್ಲಿ 8 ಸ್ಥಾ ನವನ್ನೂ ಈ ಮತದಾರರು ಬಿಜೆಪಿಗೆ ನೀಡಿರುವುದನ್ನು ನೋಡಿದರೆ, ಬಿಜೆಪಿ ನೀಡಿರುವ ಉಚಿತದ ಭರವಸೆಯೇ ಕೇಜ್ರಿ  ಸೋಲಿನಲ್ಲಿ ಪ್ರಮುಖ ಪಾತ್ರ ವಹಿಸಿರಬಹುದು ಎಂದೂ ಹೇಳಬಹುದು.

Tuesday, 14 January 2025

ರಘುರಾಮ್ ಭಟ್ರು, ಮುಸ್ಲಿಮ್ ಯುವಕ ಮತ್ತು ಸಮಾಜ




ಹಿಂದೂ ಮುಸ್ಲಿಮರನ್ನು ಪರಸ್ಪರ ಶತ್ರುಗಳಂತೆ ಮತ್ತು ಈ ಎರಡೂ ಧರ್ಮಗಳು ಜೊತೆ ಜೊತೆಯಾಗಿ ಸಾಗಲು ಸಾಧ್ಯವೇ  ಇಲ್ಲ ಎಂಬಂತೆ  ಭಾಷಣಗಳಲ್ಲೂ ಬರಹಗಳಲ್ಲೂ ಪ್ರಚಾರ ಮಾಡಲಾಗುತ್ತಿರುವ ಈ ದಿನಗಳಲ್ಲಿ ಇವೆಲ್ಲವನ್ನೂ ಸುಳ್ಳು  ಮಾಡುವಂತೆ ಮಾಡಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಈಶ್ವರಮಂಗಲದಲ್ಲಿ ಕಳೆದವಾರ ನಡೆದಿದೆ. ಇಲ್ಲಿನ ಮುಂಡ್ಯ  ದೇವಸ್ಥಾನದ ಅರ್ಚಕರಾದ ರಘುರಾಮ ಭಟ್ ಅವರು ಬೈಕ್ ಸ್ಕಿಡ್ ಆಗಿ ರಸ್ತೆಗೆ ಬಿದ್ದು ಗಾಯಗೊಂಡಿದ್ದಾರೆ. ಅವರನ್ನು  ಅಲ್ಲಿಯೇ ಇದ್ದ ಕುಂಬ್ರ ಮಸೀದಿಗೆ ಕರೆತಂದು ಪ್ರಥಮ ಚಿಕಿತ್ಸೆ ಕೊಡಿಸಲಾಗಿದೆ. ಆ ಬಳಿಕ ರಿಕ್ಷಾ ಚಾಲಕ ಬಶೀರ್  ಕಡ್ತಿಮಾರ್ ಎಂಬವರು ವೈದ್ಯರಲ್ಲಿಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದಾರೆ. ಈ ಘಟನೆಯ ವೀಡಿಯೋ  ಸೋಶಿಯಲ್ ಮೀಡಿಯಾದಲ್ಲಿ ಭಾರೀ ಪ್ರಮಾಣದಲ್ಲಿ ಹಂಚಿಕೆಯಾಗಿದೆ. ಮಸೀದಿಯ ವರಾಂಡದಲ್ಲಿ ಕುಳಿತ ಅರ್ಚಕರ  ಕಾಲಿನಿಂದ ರಕ್ತ ಹರಿಯುತ್ತಿದೆ. ಅವರು ಧರಿಸಿರುವ ಚಪ್ಪಲಿಯಲ್ಲೂ ರಕ್ತವಿದೆ. ಅವರ ಗಾಯಗೊಂಡ ಕಾಲಿಗೆ ಮುಸ್ಲಿಮ್  ಯುವಕ ಬ್ಯಾಂಡೇಜ್ ಕಟ್ಟುತ್ತಿರುವುದು ಮತ್ತು ಕಾಲಿನಿಂದ ರಕ್ತವನ್ನು ಒರೆಸುತ್ತಿರುವುದೂ ವೀಡಿಯೋದಲ್ಲಿದೆ.
ನಿಜವಾಗಿ, 

ಇದು ವೀಡಿಯೋ ಮಾಡಿ ಹಂಚಿಕೊಳ್ಳುವಷ್ಟು ಅಪರೂಪದಲ್ಲಿ ಅಪರೂಪದ ಘಟನೆ ಏನಲ್ಲ. ಸೋಶಿಯಲ್ ಮೀಡಿಯಾಕ್ಕಿಂತ ಮೊದಲಿನ ಕಾಲದಲ್ಲೂ ಇಂಥ ಘಟನೆಗಳು ನಡೆಯುತ್ತಿದ್ದುವು. ಸೋಶಿಯಲ್ ಮೀಡಿಯಾದ ಈ  ಕಾಲದಲ್ಲೂ ಇಂಥವು ನಡೆಯುತ್ತಲೇ ಇವೆ. ಆದರೆ, ಇವತ್ತೇಕೆ ಇಂಥ ವೀಡಿಯೋಗಳು ಬಿಸಿ ಬಿಸಿ ದೋಸೆಯಂತೆ  ಹಂಚಿಕೆಯಾಗುತ್ತಿವೆ ಎಂದರೆ, ಅದಕ್ಕೆ ನಾವು ನೆಟ್ಟು ಬೆಳೆಸುತ್ತಿರುವ ದ್ವೇಷವೆಂಬ ಸಸಿಯೇ ಕಾರಣ.

ಈ ಹಿಂದೆ ಸೋಶಿಯಲ್ ಮೀಡಿಯಾ ಇರಲಿಲ್ಲ. ಆ ಕಾರಣದಿಂದಲೋ ಏನೋ ದ್ವೇಷ ಪ್ರಚಾರಕ್ಕೆ ಅವಕಾಶವೂ  ಸೀಮಿತವಾಗಿತ್ತು. ಜನರು ಪರಸ್ಪರ ಧರ್ಮ ನೋಡದೇ ಮರುಗುತ್ತಾ, ಸಹಕರಿಸುತ್ತಾ ತಮ್ಮ ಪಾಡಿಗೇ ಬದುಕುತ್ತಿದ್ದರು.  ಆದರೆ, ಯಾವಾಗ ಸೋಶಿಯಲ್ ಮೀಡಿಯಾದ ಆಗಮನವಾಯಿತೋ ದ್ವೇಷ ಪ್ರಚಾರದ ಭರಾಟೆಯೂ ಹೆಚ್ಚಾಯಿತು.  ಹಿಂದೂ ಮತ್ತು ಮುಸ್ಲಿಮರನ್ನು ಎರಡು ಧ್ರುವಗಳಂತೆ ವ್ಯಾಖ್ಯಾನಿಸುವ ಕೈ ಮತ್ತು ಬಾಯಿಗಳು ದೇಶದೆಲ್ಲೆಡೆ  ತುಂಬಿಕೊಳ್ಳತೊಡಗಿದವು. ದಿನನಿತ್ಯ ಪತ್ರಿಕೆ, ಟಿ.ವಿ. ಚಾನೆಲ್ ಮತ್ತು ಸೋಶಿಯಲ್ ಮೀಡಿಯಾದಲ್ಲಿ ಈ ದ್ವೇಷದ್ದೇ  ಪ್ರಾಬಲ್ಯ.  ‘ಮುಸ್ಲಿಮನಿಂದ ಹಿಂದೂ ಯುವಕನಿಗೆ ಚೂರಿ’, ‘ಮುಸ್ಲಿಮ್ ಯುವಕನನ್ನು ಥಳಿಸಿ ಹತ್ಯೆ ಮಾಡಿದ ಹಿಂದೂ’, ‘ಅಕ್ರಮ  ಗೋಸಾಗಾಟ: ಇಬ್ಬರು ಮುಸ್ಲಿಮರ ಬಂಧನ’, ‘ಮುಸ್ಲಿಮ್ ಯುವಕನೊಂದಿಗೆ ಹಿಂದೂ ಯುವತಿ ಪರಾರಿ’, ‘ಹಿಂದೂ  ಯುವಕನೊಂದಿಗೆ ಮುಸ್ಲಿಮ್ ಯುವತಿ ಮದುವೆ’, ‘ಮತಾಂತರ’, ‘ಕಾಫಿರ್’, ‘ಜಿಹಾದ್’, ‘ಮಂದಿರ ಒಡೆದು ಮಸೀದಿ  ನಿರ್ಮಾಣ’, ‘ಇಷ್ಟನೇ ಇಸವಿಗೆ ಮುಸ್ಲಿಮರು ಬಹುಸಂಖ್ಯಾತ ರಾಗುವರು’, ‘ಹಿಂದೂಗಳ ಭೂಮಿ ಕಬಳಿಸುತ್ತಿರುವ  ಮುಸ್ಲಿಮರು’, ‘ಮುಸ್ಲಿಮರು ಪಾಕಿಸ್ತಾನಕ್ಕೆ ಹೋಗಲಿ’, ‘ಹಿಂದೂ ಧರ್ಮ ಅಪಾಯದಲ್ಲಿದೆ’, ‘ಹಿಂದೂ-ಮುಸ್ಲಿಮರು  ಜೊತೆಯಾಗಿ ಬದುಕಲು ಸಾಧ್ಯವಿಲ್ಲ...’ ಹೀಗೆ ಭಯಪಡಿಸುವ, ಹಿಂದೂ-ಮುಸ್ಲಿಮರನ್ನು ವಿಭಜಿಸುವ ಮತ್ತು ಅಪರಾಧಕ್ಕಿಂತ ಅಪರಾಧಿಗಳ ಧರ್ಮವನ್ನೇ ಎತ್ತಿ ಹೇಳುವ ರೀತಿಯ ಸುದ್ದಿ ನಿರೂಪಣೆ ಮತ್ತು ಶೀರ್ಷಿಕೆಗಳು ನಿಧಾನಕ್ಕೆ ಜನರ ಮನಸ್ಸನ್ನು ಕಲಕತೊಡಗಿದುವು. ಒಂದುಕಡೆ ಪತ್ರಿಕೆಗಳು ಇಂಥ ಸುದ್ದಿಗಳ ಬೆನ್ನು ಬೀಳುತ್ತಿದ್ದರೆ ಇನ್ನೊಂದು ಕಡೆ  ರಾಜಕಾರಣಿಗಳು ಇದಕ್ಕಿಂತಲೂ ಪ್ರಚೋದನಕಾರಿಯಾಗಿ ಮಾತಾಡತೊಡಗಿದರು. ಈ ಎಲ್ಲವೂ ಸೇರಿಕೊಂಡು ಒಂದು  ಬಗೆಯ ಅನುಮಾನ ಮತ್ತು ಭಯದ ವಾತಾವರಣವನ್ನು ನಿರ್ಮಿಸತೊಡಗಿದುವು. ಹಾಗಂತ,

ಪಕ್ಕದ ಫ್ಲಾಟಿನಲ್ಲಿರುವ ಹಿಂದೂವಿನ ಬಗ್ಗೆ ಮುಸ್ಲಿಮನು ಯಾವುದೇ ತಕರಾರು ವ್ಯಕ್ತಪಡಿಸುವುದಿಲ್ಲ. ಹಾಗೆಯೇ ಮುಸ್ಲಿಮನ  ಬಗ್ಗೆ ಹಿಂದೂವಿಗೂ ಯಾವುದೇ ದೂರುಗಳಿರುವುದಿಲ್ಲ. ಇದು ನಗರಕ್ಕೆ ಸಂಬಂಧಿಸಿ ಮಾತ್ರ ಅಲ್ಲ, ಹಳ್ಳಿ, ಗ್ರಾಮೀಣ ಪ್ರದೇ ಶಗಳ ಪರಿಸ್ಥಿತಿಯೂ ಹೀಗಿಯೇ. ಅಕ್ಕಪಕ್ಕದಲ್ಲಿ ಮನೆ ಮಾಡಿಕೊಂಡು ಬದುಕುತ್ತಿರುವ ಹಿಂದೂವಿಗಾಗಲಿ  ಮುಸ್ಲಿಮರಿಗಾಗಲಿ ಪರಸ್ಪರ ದೂರುಗಳಿಲ್ಲ. ಹಾಗಿದ್ದರೆ ಹಿಂದೂಗಳಿಗೆ ಅಪಾಯಕಾರಿಯಾದ ಮುಸ್ಲಿಮ್ ಮತ್ತು  ಮುಸ್ಲಿಮರಿಗೆ ಅಪಾಯಕಾರಿಯಾದ ಹಿಂದೂ ಎಲ್ಲಿದ್ದಾರೆ ಎಂದು ಪ್ರಶ್ನಿಸಿದರೆ ಎಲ್ಲರೂ ತಮಗೆ ಗೊತ್ತಿಲ್ಲದ ಇನ್ನೊಂದು  ಊರಿನತ್ತ ಬೆಟ್ಟು ಮಾಡುತ್ತಾರೆ. ತನ್ನ ಪಕ್ಕದ ಮುಸ್ಲಿಮ್ ಒಳ್ಳೆಯವ, ಆದರೆ, ಆ ಬಿಹಾರದ  ಮುಸ್ಲಿಮ್ ಇದ್ದಾರಲ್ಲ,  ಅವರು ಕೆಟ್ಟವರು ಎಂಬ ಸಮರ್ಥನೆ ಸಿಗುವುದಿದೆ. ಅಂದಹಾಗೆ,

ಆ ಬಿಹಾರದ  ಮುಸ್ಲಿಮನನ್ನು ಈ ವ್ಯಕ್ತಿ ನೋಡಿರುವುದಿಲ್ಲ, ಮಾತಾಡಿಸಿರುವುದಿಲ್ಲ. ಮತ್ತೆ ಹೇಗೆ ಬಿಹಾರ  ಮುಸ್ಲಿಮರು  ಕೆಟ್ಟವರಾಗಿದ್ದಾರೆ ಅಂದರೆ, ಅದಕ್ಕೆ ಈ ಮಾಧ್ಯಮಗಳು ಮತ್ತು ಭಾಷಣಗಾರರೇ ಕಾರಣ. ಎಲ್ಲೋ  ಏನೋ ಘಟನೆ ನಡೆದಿದೆ  ಎಂಬ ಆಧಾರದಲ್ಲಿ ಇಡೀ ಮುಸ್ಲಿಮ್ ಸಮುದಾಯವನ್ನೇ ಕಟಕಟೆಯಲ್ಲಿ ನಿಲ್ಲಿಸುವ ರೀತಿಯ ಸುದ್ದಿ ಭಯೋತ್ಪಾದನೆಯನ್ನು  ಇವರೆಲ್ಲ ಹರಡುತ್ತಿದ್ದಾರೆ. ನಿಜವಾಗಿ, 

ಹಿಂದೂಗಳಾಗಲಿ ಮುಸ್ಲಿಮರಾಗಲಿ ಈ ಮಣ್ಣಿನಲ್ಲೇ  ಬೆಳೆದವರು. ಹಿಂದೂ ಮುಸ್ಲಿಮರ ಸಾಮರಸ್ಯದ ಬದುಕಿಗೆ  ಇಲ್ಲಿ ಸಾವಿರ ವರ್ಷಗಳಿಗಿಂತಲೂ ಅಧಿಕ ಇತಿಹಾಸವಿದೆ. ಹಿಂದೂವಿಗೆ ಮುಸ್ಲಿಮ್ ನೆರವಾಗುವುದು ಮತ್ತು ಮುಸ್ಲಿಮರಿಗೆ  ಹಿಂದೂ ನೆರವಾಗುವುದೆಲ್ಲ ಸುದ್ದಿ ಮಾಡಿ ದಣಿಯುವಷ್ಟು ಈ ದೇಶದಲ್ಲಿ ಪ್ರತಿದಿನ ನಡೆಯುತ್ತಿದೆ. ಬಹುತೇಕ ಇಂಥ ಘಟನೆಗಳನ್ನು ಜನರು ವೀಡಿಯೋ ಮಾಡುವುದಿಲ್ಲ. ಸಹಜವೆಂಬಂತೆ  ಇವೆಲ್ಲ ಬದುಕಿನ ಭಾಗವಾಗಿ ನಡೆದುಕೊಂಡು  ಹೋಗುತ್ತಿದೆ. ಮಾತ್ರವಲ್ಲ, ಮಾಧ್ಯಮಗಳಿಗೂ ಇಂಥವುಗಳಲ್ಲಿ ಆಸಕ್ತಿ ಕಡಿಮೆ. ದ್ವೇಷ ಬಿತ್ತುವ ರಾಜಕಾರಣಿಗಳಂತೂ ಇಂಥ  ಘಟನೆಗಳನ್ನೇ ದ್ವೇಷಿಸುವ ಸಾಧ್ಯತೆ ಇದೆ. ಆದರೆ, ನಕಾರಾತ್ಮಕ ಸುದ್ದಿಗಳು ಹೀಗಲ್ಲ. ಅವುಗಳಿಗೆ ಬಹುಬೇಗ ಪ್ರಚಾರ  ಸಿಗುತ್ತವೆ. ಇವತ್ತಿನ ದಿನಗಳಲ್ಲಿ ಇಂಥ ಸುದ್ದಿಗಳಿಗೆ ಬಹುದೊಡ್ಡ ಮಾರುಕಟ್ಟೆಯಿದೆ. ಆ ಕಾರಣದಿಂದಲೇ,

ಈಶ್ವರಮಂಗಲದಲ್ಲಿ ನಡೆದಂಥ ಘಟನೆಗಳು ಹೆಚ್ಚೆಚ್ಚು ಚರ್ಚೆಯಾಗಬೇಕು ಮತ್ತು ಪ್ರತಿ ಘಟನೆಯೂ ಚಿತ್ರೀಕರಣಗೊಂಡು  ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೆಯಾಗಬೇಕು ಅನ್ನುವುದು. ನಕಾರಾತ್ಮಕ ಸುದ್ದಿಗಳನ್ನು ತೆರೆಮರೆಗೆ ಸರಿಸಬೇಕಾದರೆ  ಅಥವಾ ಅವುಗಳ ಪ್ರಭಾವವನ್ನು ಕಡಿಮೆಗೊಳಿಸ ಬೇಕಾದರೆ ಸಕಾರಾತ್ಮಕ ಸುದ್ದಿಗಳು ಮುನ್ನೆಲೆಗೆ ಬರಬೇಕಾಗುತ್ತದೆ. ಜನರು  ಸಿದ್ಧಾಂತದ ಮಾತುಗಳಿಗಿಂತ ಪ್ರಾಯೋಗಿಕ ಘಟನೆಗಳಿಗೆ ಬೇಗ ಆಕರ್ಷಿತರಾಗುತ್ತಾರೆ. ರಘುರಾಮ್ ಭಟ್‌ರನ್ನು ಮುಸ್ಲಿಮ್  ಯುವಕ ಮಸೀದಿ ವರಾಂಡದಲ್ಲಿ ಕೂರಿಸಿ ಉಪಚರಿಸಿದ ವೀಡಿಯೋ ಚಿತ್ರೀಕರಣಗೊಳ್ಳದೇ ಇರುತ್ತಿದ್ದರೆ ಅದು ಪ್ರಭಾವ ಶಾಲಿ ಸುದ್ದಿ ಆಗುವ ಸಾಧ್ಯತೆ ಕಡಿಮೆ ಇತ್ತು. ಸುದ್ದಿಯೇ ಆಗದೇ ತೆರೆಮರೆಗೆ ಸರಿಯುವ ಸಾಧ್ಯತೆಯೂ ಇತ್ತು. ಆದರೆ  ಯಾವಾಗ ಆ ಇಡೀ ಘಟನೆ ಕ್ಯಾಮರಾದಲ್ಲಿ ಸೆರೆಯಾಯಿತೋ ಜನಸಾಮಾನ್ಯರು ಅದರಲ್ಲಿ ತಮ್ಮನ್ನು ಕಂಡರು.  ಮುಸ್ಲಿಮರನ್ನು ದ್ವೇಷಿಸುತ್ತಿದ್ದ ವ್ಯಕ್ತಿಗಳೇ ಈ ದೃಶ್ಯವನ್ನು ಮೆಚ್ಚಿಕೊಂಡರು. ನೆರವಾದ ಆ ಮುಸ್ಲಿಮ್ ಯುವಕನಿಗೆ ಧನ್ಯವಾದ  ಸಲ್ಲಿಸಿದರು. ಮಾತ್ರವಲ್ಲ, ಅಪಪ್ರಚಾರ ಮತ್ತು ದ್ವೇಷ ಪ್ರಚಾರದ ಸುದ್ದಿ ಮತ್ತು ಭಾಷಣವನ್ನು ವಾಟ್ಸಾಪ್ ಗ್ರೂಪ್‌ಗಳಲ್ಲಿ  ಯಾರಾದರೂ ಹಂಚಿಕೊಂಡಾಗ ಅದಕ್ಕೆ ಪ್ರತಿಕ್ರಿಯೆಯಾಗಿ ಈ ವೀಡಿಯೋವನ್ನು ಹಂಚಿಕೊಳ್ಳುವುದೂ ನಡೆಯಿತು.

ಸದ್ಯದ ಅಗತ್ಯ ಏನೆಂದರೆ, ಸಾಧ್ಯವಾದಷ್ಟೂ ಸಕಾರಾತ್ಮಕ ಸುದ್ದಿ ಮತ್ತು ವೀಡಿಯೋಗಳನ್ನು ಹಂಚಿಕೊಳ್ಳುವುದು. ಆ ಮೂಲಕ  ನಕಾರಾತ್ಮಕ ಸುದ್ದಿಗಳ ಪ್ರಭಾವವನ್ನು ತಗ್ಗಿಸುವುದು. ಸಾಮಾನ್ಯ ಜನರು ಎಂದೂ ಪ್ರತೀಕಾರ ಭಾವದಿಂದ ಬದುಕುವುದಿಲ್ಲ.  ಅವರೊಳಗೆ ಅಂಥ ಭಾವವನ್ನು ಪದೇ ಪದೇ ತುಂಬಿಸಲಾಗುತ್ತದೆ. ಒಂದುವೇಳೆ, ಅವರಿಗೆ ಸಕಾರಾತ್ಮಕ ಸುದ್ದಿಗಳು ಮತ್ತು  ವೀಡಿಯೋಗಳು ಲಭಿಸಿದರೆ ಅವರು ದ್ವೇಷ ಸಾಧಕರ ಟೂಲ್ ಆಗುವುದಕ್ಕೆ ಸಾಧ್ಯವೂ ಇಲ್ಲ. ಈ ಹಿನ್ನೆಲೆಯಲ್ಲಿ ಈಶ್ವರ  ಮಂಗಲದ ಅರ್ಚಕರ ವೀಡಿಯೋ ಮುಖ್ಯವಾಗುತ್ತದೆ. ಅದನ್ನು ಚಿತ್ರೀಕರಿಸಿ ಸೋಶಿಯಲ್ ಮೀಡಿಯಾದಲ್ಲಿ  ಹಂಚಿಕೊಂಡವರನ್ನು ಶ್ಲಾಘಿಸಬೇಕಾಗುತ್ತದೆ. ನಕಾರಾತ್ಮಕ ಸುದ್ದಿಗಳೇ ತುಂಬಿ ಹೋಗಿರುವ ಮಾರುಕಟ್ಟೆಗೆ ಇಂಥ ಸಕಾರಾತ್ಮಕ  ಸುದ್ದಿಗಳು ಲಗ್ಗೆ ಇಡುತ್ತಾ ಹೋದರೆ ನಿಧಾನಕ್ಕೆ ಇವುಗಳೇ ಈ ಮಾರುಕಟ್ಟೆಯನ್ನು ಆಳಬಹುದು ಮತ್ತು ಆಳಬೇಕು.

ಅರ್ಚಕ ರಘುರಾಮ್ ಭಟ್‌ರನ್ನು ಮಸೀದಿ ವರಾಂಡಕ್ಕೆ ಕೊಂಡೊಯ್ದು ಉಪಚರಿಸಿದ ಆ ಒಳ್ಳೆಯ ಮನಸ್ಸುಗಳಿಗೆ ಧ ನ್ಯವಾದ.

Monday, 6 January 2025

ಜಮಾಅತೆ ಇಸ್ಲಾಮೀ ಹಿಂದ್ ಆಗ್ರಹ ಮತ್ತು 2024ರ ಭಾರತ




2025ನ್ನು ಕೋಮು ಸೌಹಾರ್ದದ ವರ್ಷವಾಗಿ ಘೋಷಿಸುವಂತೆ ಪ್ರಧಾನಿ ನರೇಂದ್ರ ಮೋದಿ ಯವರಿಗೆ ಜಮಾಅತೆ  ಇಸ್ಲಾಮೀ ಹಿಂದ್ ಆಗ್ರಹಿಸಿರುವಂತೆಯೇ, 2024ರ ಭಾರತದ ಚಿತ್ರಣವನ್ನು ಸೆಂಟರ್ ಫಾರ್ ಸ್ಟಡಿ ಆಫ್ ಸೊಸೈಟಿ ಆಂಡ್  ಸೆಕ್ಯುಲರಿಸಂ ಎಂಬ ಸರಕಾರೇತರ ಸಂಸ್ಥೆಯೊಂದು ದೇಶದ ಮುಂದಿಟ್ಟಿದೆ. 2024ರಲ್ಲಿ ಒಟ್ಟು 59 ಕೋಮು ಘರ್ಷಣೆಗಳು  ನಡೆದಿದ್ದು, ಸಾವಿಗೀಡಾದ 13 ಮಂದಿಯಲ್ಲಿ 10 ಮಂದಿ ಮುಸ್ಲಿಮರಾಗಿದ್ದರೆ ಮೂರು ಮಂದಿ ಹಿಂದೂಗಳು ಎಂದು  ವರದಿ ಹೇಳುತ್ತದೆ. ಗುಂಪು ಥಳಿತದ ಒಟ್ಟು 12 ಪ್ರಕರಣಗಳು ನಡೆದಿದ್ದು, ಸಾವಿಗೀಡಾದ 10 ಮಂದಿಯಲ್ಲಿ 8 ಮಂದಿ  ಮುಸ್ಲಿಮರಾಗಿದ್ದಾರೆ. ಇನ್ನುಳಿದ ಇಬ್ಬರಲ್ಲಿ ಒಬ್ಬರು ಹಿಂದೂ ಮತ್ತು ಇನ್ನೊಬ್ಬರು ಕ್ರೈಸ್ತರಾಗಿದ್ದಾರೆ. 2021ರಲ್ಲಿ ಗುಂಪು  ಥಳಿತದಿಂದಾಗಿ 21 ಮಂದಿ ಹತ್ಯೆಗೀಡಾಗಿದ್ದರು ಎಂಬುದನ್ನು ಪರಿಗಣಿಸಿದರೆ, 2024 ಪರಿಸ್ಥಿತಿ ಒಂದಷ್ಟು ಸುಧಾರಿಸಿ  ಎಂದು ಹೇಳಬಹುದು. ಅದೇವೇಳೆ, 2023ರಲ್ಲಿ 32 ಕೋಮು ಘರ್ಷಣೆ ಪ್ರಕರಣಗಳು ನಡೆದಿದ್ದರೆ, 2024ರಲ್ಲಿ 59  ಪ್ರಕರಣಗಳು ನಡೆದಿವೆ ಎಂಬುದು ಅಷ್ಟೇ ಆತಂಕದ ಸಂಗತಿಯೂ ಹೌದು. ಅಂದಹಾಗೆ,

ಕೋಮು ಘರ್ಷಣೆ ಮತ್ತು ಗುಂಪು ಥಳಿತ ಎಂಬ ಕ್ರೌರ್ಯದ ಈ ಎರಡು ವಿಭಿನ್ನ ಮಾದರಿಗಳು ಮನುಷ್ಯರು ಮತ್ತು  ಪ್ರಾಣಿಗಳ ನಡುವೆ ನಡೆಯುತ್ತಿಲ್ಲ ಅಥವಾ ಮನುಷ್ಯರು ಮತ್ತು ಅನ್ಯಗೃಹ ಜೀವಿಗಳ ನಡುವೆಯೂ ನಡೆಯುತ್ತಿಲ್ಲ. ತ ನ್ನಂತೆಯೇ ಕಣ್ಣು, ಕಿವಿ, ಮೂಗು, ಬಾಯಿ, ಕೈ-ಕಾಲು ಸಹಿತ ಸರ್ವ ಅಂಗಗಳೂ ಸಮಾನವಾಗಿರುವ ವ್ಯಕ್ತಿಯ ಮೇಲೆ  ಆತನ ಧರ್ಮ, ಆಹಾರ, ಸಂಸ್ಕೃತಿ ಬೇರೆ ಎಂಬ ಕಾರಣಕ್ಕಾಗಿ ಓರ್ವ ವ್ಯಕ್ತಿ ಅಮಾನುಷವಾಗಿ ನಡಕೊಳ್ಳುವುದನ್ನೇ  ಇವೆರಡೂ ಸಂಕೇತಿಸುತ್ತವೆ. ಹೆಚ್ಚಿನೆಲ್ಲ ಕೋಮು ಘರ್ಷಣೆಗಳು ಧಾರ್ಮಿಕ ಸಭೆ ಮತ್ತು ಮೆರವಣಿಗೆಗಳ ಸಂದರ್ಭದಲ್ಲಿಯೇ  ನಡೆದಿದೆ. ಪ್ರಶ್ನೆ ಇರುವುದೂ ಇಲ್ಲೇ.

ಧರ್ಮದ ಹೆಸರಲ್ಲಿ ನಡೆಯುವ ಕಾರ್ಯಕ್ರಮಗಳೇಕೆ ಮನುಷ್ಯ ವಿರೋಧಿ ಸ್ವರೂಪವನ್ನು ಪಡಕೊಳ್ಳ ತೊಡಗಿವೆ? ಧಾರ್ಮಿಕ  ಕಾರ್ಯಕ್ರಮಗಳೆಂದರೆ ಆಯಾ ಧರ್ಮದ ಮೌಲ್ಯಗಳನ್ನು ಜನರಿಗೆ ತಲುಪಿಸುವ ಸಂದರ್ಭವಾಗಿ ಬಳಕೆಯಾಗಬೇಕು.  ಗಣೇಶ ಚತುರ್ಥಿ ಎಂಬುದು ಗಣೇಶನನ್ನು ನಂಬುವ ಮತ್ತು ನಂಬದ ಜನರಿಗೆ ಮಾಹಿತಿಯನ್ನು ಮುಟ್ಟಿಸುವ ಮತ್ತು  ಸಿಹಿಯಾದ ಸನ್ನಿವೇಶವನ್ನು ಅನುಭವಿಸುವ ಘಳಿಗೆ. ತನ್ನನ್ನು ನಂಬದವರ ಮೇಲೆ ಗಣೇಶ ಬಲವಂತದಿAದ ತನ್ನ  ವಿಚಾರವನ್ನು ಹೇರಿದ ಯಾವ ಕುರುಹೂ ಹಿಂದೂ ಪುರಾಣದಲ್ಲಿ ಇಲ್ಲ. ಕೃಷ್ಟಾಷ್ಟಮಿಗೆ ಸಂಬAಧಿಸಿಯೂ ಇವೇ ಮಾತನ್ನು  ಹೇಳ ಬಹುದು. ಈದ್‌ಗೆ ಸಂಬAಧಿಸಿಯೂ ಇವೇ ಮಾತುಗಳನ್ನು ಹೇಳಬಹುದು. ಈ ದೇಶದಲ್ಲಿ 20 ಕೋಟಿಯಷ್ಟು  ಮುಸ್ಲಿಮರಿದ್ದಾರೆ. ಇದರ ಹೊರತಾಗಿ ಕ್ರೈಸ್ತರು, ಸಿಕ್ಖರು, ಬೌದ್ಧರು, ಫಾರ್ಸಿಗಳು ಸಹಿತ ಹಿಂದೂ ಮತ್ತು ಇಸ್ಲಾಮ್  ಧರ್ಮಗಳಲ್ಲಿ ಗುರುತಿಸಿಕೊಳ್ಳದ ಕೋಟ್ಯಂತರ ಜನರಿದ್ದಾರೆ. ಇವರೆಲ್ಲರಿಗೆ ಹಿಂದೂ ಧರ್ಮವನ್ನು ಪರಿಚಯಿಸುವ  ಹೊಣೆಗಾರಿಕೆ ಆ ಧರ್ಮದ ವಕ್ತಾರರ ಮೇಲಿದೆ. ಯಾವುದೇ ಧರ್ಮದ ಬಗ್ಗೆ ಸದ್ಭಾವನೆ ಮೂಡುವುದು ಮತ್ತು ಆ  ಧರ್ಮದ ಕಡೆಗೆ ಜನರು ಆಕರ್ಷಿತರಾಗುವುದು, ಆ ಧರ್ಮದ ಅನುಯಾಯಿಗಳ ವರ್ತನೆ ಮತ್ತು ಬದುಕಿನ ರೀತಿ- ನೀತಿಯಿಂದ. ವಿಷಾದ ಏನೆಂದರೆ,

ಈ ದೇಶದ ಬಹುಸಂಖ್ಯಾತರ ಒಂದು ಗುಂಪು ದಿನೇ ದಿನೇ ಹಿಂದೂ ಧರ್ಮದ ಐಕಾನ್‌ಗಳ ಬಗ್ಗೆ ಮತ್ತು ಹಿಂದೂ  ಧರ್ಮದ ಮೌಲ್ಯಗಳ ಬಗ್ಗೆ ಹಿಂದೂಯೇತರರಿಗೆ ಅತ್ಯಂತ ನಕಾರಾತ್ಮಕ ಸಂದೇಶವನ್ನು ರವಾನಿಸುತ್ತಾ ಇದೆ. ಹಾಗಂತ, ಈ  ಗುಂಪಿನಲ್ಲಿ ಕೇವಲ ಜನಸಾಮಾನ್ಯರು ಮಾತ್ರ ಇರುವುದಲ್ಲ. ಧರ್ಮಗುರುಗಳು, ಸ್ವಾಮೀಜಿಗಳು, ಮುಖಂಡರು ಸಹಿತ  ಪ್ರಭಾವಶಾಲಿಗಳೂ ಇದ್ದಾರೆ. ಇವರೆಲ್ಲ ಹಿಂದೂ ಧರ್ಮವನ್ನು ಪ್ರಚಾರ ಮಾಡುವ ಮತ್ತು ಅದರ ಮೌಲ್ಯಗಳನ್ನು  ಸಾರ್ವಜನಿಕವಾಗಿ ಹಂಚಿಕೊಳ್ಳುವ ಬದಲು ಹಿಂದೂಯೇತರ ಧರ್ಮಗಳನ್ನು ಅದರಲ್ಲೂ ಮುಖ್ಯವಾಗಿ ಇಸ್ಲಾಮನ್ನು  ತೆಗಳಲು ಸಮಯ ವಿನಿಯೋಗಿಸುತ್ತಾರೆ. ಅಪ್ಪಟ ಧಾರ್ಮಿಕ ಸಭೆಗಳಲ್ಲೂ ಮುಸ್ಲಿಮ್ ದ್ವೇಷ ಭಾಷಣಗಳು ನಡೆಯುತ್ತವೆ.  ಧಾರ್ಮಿಕ ಮೆರವಣಿಗೆಗಳಂತೂ ಮಸೀದಿಗಳ ಮುಂದೆ ಸ್ಥಗಿತಗೊಂಡು ಕೂಗಬಾರದ ಘೋಷಣೆಗಳನ್ನು ಕೂಗುವುದು  ಮತ್ತು ಕುಣಿತ ಮತ್ತು ಬ್ಯಾಂಡುಗಳನ್ನು ಬಡಿಯುವುದನ್ನೆಲ್ಲ ಮಾಡಲಾಗುತ್ತದೆ. ಮುಸ್ಲಿಮರು ಹೆಚ್ಚಿರುವ ಪ್ರದೇಶಗಳಲ್ಲಿ ಇಂಥ  ಮೆರವಣಿಗೆಗಳು ಸಾಗುವಾಗಲಂತೂ ಪ್ರಚೋದನಕಾರಿ ಘೋಷಣೆಗಳನ್ನು ಕೂಗಲಾಗುತ್ತದೆ. ಅವಮಾನಕಾರಿಯಾಗಿ ನಿಂದಿಸಲಾಗುತ್ತದೆ. ಕಲ್ಲು ತೂರಾಟ ಮತ್ತು ಪ್ರಚೋದನಾತ್ಮಕ ಆಂಗಿಕ ಅಭಿನಯಗಳೂ ನಡೆಯುತ್ತವೆ. ವಿಷಾದ ಏನೆಂದರೆ,

ಇಂಥ  ಬೆಳವಣಿಗೆಗಳನ್ನು ಪ್ರಶ್ನಿಸಬೇಕಾದವರು ತಮ್ಮ ಕರ್ತವ್ಯವನ್ನು ನಿಭಾಯಿಸುತ್ತಿಲ್ಲ ಎಂಬುದು. ಇದು ಹಿಂದೂ ಧರ್ಮದ  ವರ್ಚಸ್ಸಿಗೆ ಹಾನಿಯನ್ನುಂಟು ಮಾಡುವುದಕ್ಕೆ ಪರೋಕ್ಷ ಕೊಡುಗೆಯನ್ನು ನೀಡುತ್ತದೆ. ಯಾರು ಹಿಂದೂ ಧರ್ಮದ  ರಕ್ಷಕರಂತೆ ಬಿಂಬಿಸಿಕೊಂಡು  ಧರ್ಮ ದ್ವೇಷದ ಮಾತನ್ನಾಡುತ್ತಾರೋ ಮತ್ತು ಮುಸ್ಲಿಮರ ವಿರುದ್ಧ ಪ್ರಚೋದನಾತ್ಮಕವಾಗಿ  ನಡಕೊಳ್ಳುತ್ತಾರೋ ಅದರ ಪ್ರಭಾವ ಅವರಿಗಷ್ಟೇ ಮತ್ತು ಅವರಿರುವ ಪ್ರದೇಶಕ್ಕಷ್ಟೇ ಸೀಮಿತವಾಗಿರುವುದಿಲ್ಲ. ಅವರು  ಆಡಿರುವ ಪ್ರತಿ ಮಾತು ಮತ್ತು ಪ್ರತಿ ವರ್ತನೆಯೂ ಸೋಶಿಯಲ್ ಮೀಡಿಯಾದ ಕಾರಣದಿಂದಾಗಿ ದೇಶದೆಲ್ಲೆಡೆಗೆ  ಹರಡುತ್ತದೆ. ಇದು ಹಿಂದೂ ಧರ್ಮದ ನಿಜ ಮೌಲ್ಯದ ಮೇಲೆ ಮಸುಕನ್ನು ಮೂಡಿಸುತ್ತಲೇ ಹೋಗುತ್ತದೆ. ಸಂಭಾವಿತರು  ಇಂಥ ಮಾತುಗಳಿಂದ ಅಂತರ ಕಾಯ್ದುಕೊಳ್ಳುತ್ತಾ ತಮ್ಮಷ್ಟಕ್ಕೇ ತಾವಿದ್ದರೆ, ಪ್ರಚೋದಕರ ಮಾತು-ಕೃತಿಯಿಂದ  ಪ್ರಭಾವಿತರಾದವರು ಅದಕ್ಕೆ ಇನ್ನಷ್ಟು ಉಪ್ಪು-ಖಾರ ಸೇರಿಸಿ ಇನ್ನಷ್ಟು ಉಗ್ರವಾಗಿ ನಡಕೊಳ್ಳತೊಡಗುತ್ತಾರೆ. ಮುಸ್ಲಿಮರ  ವಿರುದ್ಧ ಮತ್ತು ಅವರ ಆಚಾರ-ವಿಚಾರಗಳ ವಿರುದ್ಧ ಹೇಳಿಕೆಗಳನ್ನು ನೀಡತೊಡಗುತ್ತಾರೆ. ಸಂದರ್ಭ-ಸನ್ನಿವೇಶಗಳು ಸಿಕ್ಕರೆ  ಅಥವಾ ಅಂಥವುಗಳನ್ನು ಸ್ವಯಂ ಸೃಷ್ಟಿಸಿಕೊಂಡೇ ಕಾನೂನು ಕೈಗೆತ್ತಿಕೊಳ್ಳುತ್ತಾರೆ. ಥಳಿತಗಳಲ್ಲಿ ಭಾಗಿಯಾಗುತ್ತಾರೆ. ಹೀಗೆ  ಹಿಂದೂ ಧರ್ಮದ ನಿಜ ಮೌಲ್ಯ ಪ್ರತಿಪಾದಕರು ಒಂದು ಕಡೆ ಮೌನವಾಗುತ್ತಾ ಸಾಗಿದಾಗ, ಹಿಂದೂ ಧರ್ಮವನ್ನು ತಪ್ಪಾಗಿ  ಪ್ರತಿನಿಧಿಸುವ ಗುಂಪು ಸದ್ದು ಮಾಡುತ್ತಾ ತಿರುಗುತ್ತಿರುತ್ತದೆ. ಇದರಿಂದಾಗಿ ಹಿಂದೂ ಧರ್ಮವು ದಿನೇ ದಿನೇ ತನ್ನ ವರ್ಚಸ್ಸ ನ್ನು ಕಳಕೊಳ್ಳುತ್ತಾ ಸಾಗುತ್ತಿರುತ್ತದೆ. ಸದ್ಯ ಅಂಥದ್ದೊಂದು  ವಾತಾವರಣ ದೇಶದೆಲ್ಲೆಡೆ ಇದೆ ಎಂಬುದೇ ನಿಜ.  ಒಂದು ರೀತಿಯಲ್ಲಿ,

ಈ ಬಗೆಯ ವಾತಾವರಣ ಈ ದೇಶದ ಅಭಿವೃದ್ಧಿಗೂ ಮತ್ತು ಆರೋಗ್ಯಕ್ಕೂ ಹಾನಿಕಾರಕ. ಈ ದೇಶದಲ್ಲಿ ಹಿಂದೂ- ಮುಸ್ಲಿಮ್ ಸೌಹಾರ್ದದ ಬದುಕಿಗೆ ಸಾವಿರ ವರ್ಷಗಳ ಇತಿಹಾಸವಿದೆ. ವಿದೇಶದಿಂದ ಬಂದ ಅರಬ್ ವರ್ತಕರನ್ನು ಈ  ದೇಶದ ಹಿಂದೂಗಳು ಪ್ರೀತಿಯಿಂದ ಬರಮಾಡಿ ಕೊಂಡಿದ್ದಾರೆ. ಅವರು ಇಲ್ಲೇ  ನೆಲೆಸುವುದಕ್ಕೂ ವೈವಾಹಿಕ ಸಂಬಂಧ ಬೆಳೆಸುವುದಕ್ಕೂ ಅವಕಾಶ ನೀಡಿದ್ದಾರೆ.  ಹಿಂದೂ-ಮುಸ್ಲಿಮರ ನಡುವೆ ಸೌಹಾರ್ದದ ಬೆಸುಗೆಯನ್ನು ಕಟ್ಟಿದ ಮಹಾನುಭಾವರಾದ ಅನೇಕರು ಈ ನೆಲದಲ್ಲಿ ಆಗಿ  ಹೋಗಿದ್ದಾರೆ. ಮಸೀದಿ ಮತ್ತು ಮಂದಿರಗಳು ಧರ್ಮ ಸೌಹಾರ್ದದ ಸಂಕೇತಗಳಾಗಿ ನೂರಾರು ವರ್ಷಗಳಿಂದ ಈ ದೇ ಶದಲ್ಲಿ ಗುರುತಿಸಿಕೊಂಡು ಬಂದಿವೆ. ಅವು ಹಾಗೆಯೇ ಉಳಿಯಬೇಕಾದುದು ಈ ದೇಶದ ಒಳಿತು ಮತ್ತು ಅಭಿವೃದ್ಧಿಯ  ದೃಷ್ಟಿಂಯಿಂದ  ಅನಿವಾರ್ಯ. ಆದ್ದರಿಂದ,

ಧರ್ಮವನ್ನು ದ್ವೇಷದ ಸಾಧನವಾಗಿ ಬಳಸುವ ಗುಂಪುಗಳನ್ನು ತಡೆಯಬೇಕಾದುದು ಆಯಾ ಧರ್ಮಗಳ ಹೊಣೆಗಾರರ  ಕರ್ತವ್ಯವಾಗಿದೆ. ಹಿಂಸಾತ್ಮಕ ಮನೋಭಾವವುಳ್ಳವರ ಕೈಯ ಆಯುಧವಾಗಿ ಧರ್ಮ ಬಳಕೆಯಾಗಬಾರದು. ಧರ್ಮಕ್ಕೆ  ಸಂಬಂಧಿಸಿದ ರ‍್ಯಾಲಿಗಳು, ಮೆರವಣಿಗೆಗಳು, ಭಾಷಣಗಳೆಲ್ಲ ಆಯಾ ಧರ್ಮದ ಮೌಲ್ಯವನ್ನು ಸಾರುವುದಕ್ಕಿರುವ  ಸಂದರ್ಭಗಳಾಗಬೇಕೇ ಹೊರತು ಇನ್ನೊಂದು ಧರ್ಮವನ್ನು ಅವಮಾನಿಸುವ ಮತ್ತು ಧರ್ಮದ್ವೇಷದ ಮಾತುಗಳ ನ್ನಾಡುವುದಕ್ಕಿರುವ ಸಂದರ್ಭವಾಗಿ ಬಳಕೆಯಾಗಬಾರದು. ಇದು ಸಾಧ್ಯವಾಗುವುದು ಧರ್ಮದ ನಿಜ ಅನುಯಾಯಿಗಳು  ಮೌನ ಮುರಿದಾಗ. ರಾಜಕೀಯಕ್ಕಾಗಿ ಧರ್ಮದ ದುರುಪಯೋಗಿಸುವವರನ್ನು ಪ್ರಬಲವಾಗಿ ವಿರೋಧಿಸುವ  ವಾತಾವರಣವನ್ನು ಹುಟ್ಟು ಹಾಕಬೇಕಾಗಿದೆ. ಹಿಂದೂ ಧರ್ಮವು ಮುಸ್ಲಿಮ್ ವಿರೋಧಿಯಲ್ಲ ಮತ್ತು ಧರ್ಮದ ಹೆಸರಲ್ಲಿ  ಮಾಡುವ ಅನ್ಯಾಯ, ಹಲ್ಲೆ-ಹತ್ಯೆಗಳು ಸ್ವೀಕಾರಾರ್ಹವಲ್ಲ ಎಂಬುದನ್ನು ಪ್ರಬಲವಾಗಿ ಸಾರುವ ಸನ್ನಿ ವೇಶಗಳು  ನಿರ್ಮಾಣವಾಗಬೇಕು. 2025 ಆ ಕಾರಣಕ್ಕಾಗಿ ಗುರುತಿಗೀಡಾಗಲಿ ಎಂದು ಜಮಾಅತೆ ಇಸ್ಲಾಮೀ ಹಿಂದ್ ಹಾರೈಸಿದೆ. ಧರ್ಮದ್ವೇಷದ ಭಾಷಣ, ಲಿಂಚಿಂಗ್ , ಪ್ರಭುತ್ವ ತಾರತಮ್ಯದಂಥ ಅನ್ಯಾಯಗಳು ಕೊನೆಯಾಗಲಿ ಎಂದೂ ಆಗ್ರಹಿಸಿದೆ. ಜೊತೆಗೆ ಬಜೆಟ್ ಗೆ ಸಂಬಂಧಿಸಿ ಹದಿನಾರು ಅಂಶಗಳ ಬೇಡಿಕೆ ಪಟ್ಟಿಯನ್ನೂ ಮುಂದಿಟ್ಟಿದೆ. ಎಲ್ಲವೂ ನಿರೀಕ್ಷಿಸಿದಂತೆ ಸಾಗಿದರೆ 2025 ಭಾರತದ ಪಾಲಿಗೆ ಸ್ಮರಣೀಯ ವರ್ಷವಾಗಲಿದೆ.

Saturday, 4 January 2025

ಹೆಚ್ಚುತ್ತಿರುವ ಅಪರಾಧ ಪ್ರಕರಣಗಳು ಮತ್ತು ಧರ್ಮ...




ಕಳೆದವಾರ ನಡೆದ ಎರಡು ಘಟನೆಗಳಿಗೆ ಮಾಧ್ಯಮಗಳು ಸಾಕಷ್ಟು ಮಹತ್ವ ಕೊಟ್ಟು ಪ್ರಕಟಿಸಿದುವು. 

1. ಸಾರ್ವಜನಿಕ  ಇಲಾಖೆಯಲ್ಲಿ ಎಂಜಿನಿಯರ್ ಆಗಿ ನಿವೃತ್ತರಾದ ಒಡಿಸ್ಸಾದ ಹಿರಿಯ ನಾಗರಿಕರೊಬ್ಬರು ಪೊಲೀಸರಿಗೆ ದೂರು ನೀಡುವ  ಮೂಲಕ ಮೊದಲ ಘಟನೆ ಬೆಳಕಿಗೆ ಬಂತು. ಇವರಿಗೆ ಬೇರೆ ಬೇರೆ ಸಂಖ್ಯೆಯಿಂದ  ಕರೆ ಬಂತು. ನಿಮ್ಮ ಹೆಸರಲ್ಲಿ ಭಾರೀ ಪ್ರಮಾಣದಲ್ಲಿ ಹಣಕಾಸು ಅವ್ಯವಹಾರ ಆಗಿದೆ  ಮತ್ತು ನಿಮ್ಮ ಆಧಾರ್ ಲಿಂಕನ್ನು ಬಳಸಿಕೊಂಡು ವಂಚಕರು ನಿಮ್ಮನ್ನು ಇಕ್ಕಟ್ಟಿನಲ್ಲಿ ಸಿಲುಕಿಸಿಬಿಟ್ಟಿದ್ದಾರೆ ಎಂದು ಕರೆ  ಮಾಡಿದವರು ಹೇಳಿದರು. ಮುಂಬೈ ಕ್ರೈಮ್ ಬ್ರಾಂಚ್ ನಿಂದ ಕರೆ ಮಾಡಲಾಗುತ್ತಿದೆ ಎಂದು ಹೇಳಿದ ಆ ವ್ಯಕ್ತಿ, ಪ್ರಕರಣದಲ್ಲಿ  ನಿಮಗೆ 7 ವರ್ಷಗಳ ವರೆಗೆ ಶಿಕ್ಷೆಯಾಗುತ್ತದೆ ಎಂದೂ ನಂಬಿಸಿದ. ಅವರ ಆಧಾರ್ ಸಂಖ್ಯೆಯನ್ನೂ ಹೇಳಿದ. ಇನ್ನೊಂದು  ಕಡೆ, ಫೆಡೆಕ್ಸ್ ಎಂಬ ಕೊರಿಯರ್ ಸಂಸ್ಥೆಯಿಂದ  ಎಂದು ಹೇಳಿಕೊಂಡು ಕರೆ ಬಂತು. ಅವರ ಹೆಸರಲ್ಲಿ ಮಾದಕ ಪದಾರ್ಥ  ವ್ಯವಹಾರ ನಡೆಯುತ್ತಿರುವುದಾಗಿ ಕರೆ ಮಾಡಿದಾತ ಹೇಳಿದನಲ್ಲದೇ, ಭಾರೀ ಅಪಾಯ ಕಾದಿದೆ ಎಂಬಂತೆ  ಬೆದರಿಸಿದ. ಈ  ಹಿರಿಯರಿಗೆ ಭಯವಾಯಿತು. ಇಂಜಿನಿಯರ್ ಆಗಿ ಕೈತುಂಬಾ ಸಂಬಳ ಪಡೆದು ಆರಾಮವಾಗಿ ಬದುಕಿದ್ದ ಅವರ ಪಾಲಿಗೆ  ಈ ಕರೆಗಳು ಅನಿರೀಕ್ಷಿತವಾಗಿತ್ತು. ನಿವೃತ್ತಿ ವೇತನ ಮತ್ತು ಉದ್ಯೋಗಸ್ಥೆಯಾಗಿದ್ದ ಪತ್ನಿಯ ದುಡಿಮೆಯೊಂದಿಗೆ  ಆರಾಮವಾಗಿ ಬದುಕುವುದನ್ನು ಮಾತ್ರ ಯೋಚಿಸಿದ್ದ ಅವರನ್ನು ಈ ಕರೆಗಳು ಚಿಂತೆಗೆ ಹಚ್ಚಿತು. ಇತರರಿಗೆ ಗೊತ್ತು  ಮಾಡುವುದಕ್ಕಿಂತ ಆದಷ್ಟು ಬೇಗ ಈ ಉರುಳಿನಿಂದ ಪಾರಾದರೆ ಸಾಕು ಎಂದು ಯೋಚಿಸಿದ ಅವರು ಕರೆ ಮಾಡಿದವರ  ತಾಳಕ್ಕೆ ತಕ್ಕಂತೆ ಕುಣಿಯತೊಡಗಿದರು. ತನ್ನ ಮತ್ತು ಪತ್ನಿಯ ಖಾತೆಯಿಂದ ಕರೆ ಮಾಡಿದವರು ನೀಡಿದ ಖಾತೆಗೆ ಒಟ್ಟು  ಒಂದು ಕೋಟಿ 37 ಲಕ್ಪ ರೂಪಾಯಿಯನ್ನು ವರ್ಗಾಯಿಸಿದರು. ಮತ್ತೂ ಅವರು ಪೀಡಿಸಿದಾಗ ಇವರು ಪೊಲೀಸರಿಗೆ  ದೂರು ನೀಡಿದರು. ತನಿಖೆ ಕೈಗೊಂಡ ಪೊಲೀಸರು ಅನಿತಾ ಮಲ್ಹೋತ್ರಾ ಮತ್ತು ಅನುರಾಗ್ ಮಲ್ಹೋತ್ರ ಎಂಬ ತಾಯಿ,  ಮಗನನ್ನು ಬಂಧಿಸಿದರು. ಇವರ ಮೇಲೆ ಅದಾಗಲೇ ಇಂಥ 15ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿರುವುದನ್ನೂ ಪತ್ತೆ  ಹಚ್ಚಿದರು.

ಇನ್ನೊಂದು ಘಟನೆ, ವಿಜಯ ಕುಮಾರ್ ಎಂಬ 39 ವರ್ಷ ವಯಸ್ಸಿನ ವ್ಯಕ್ತಿಯದ್ದು. ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ  ಆಫ್ ಇಂಡಿಯಾ ಅಥವಾ TRAIಯ  ಅಧಿಕಾರಿಗಳೆಂದು ಗುರುತಿಸಿಕೊಂಡ ವ್ಯಕ್ತಿಗಳು ಇವರಿಗೆ ಕರೆ ಮಾಡಿದರು. ನಿಮ್ಮ  ಮೊಬೈಲ್ ಸಿಮ್ ಹಣಕಾಸು ಅವ್ಯವಹಾರಗಳಿಗೆ ಬಳಕೆಯಾಗಿದೆ ಎಂದು ಹೇಳಿದರು. ಬಳಿಕ ವೀಡಿಯೋ ಕರೆಗೆ  ಬರುವಂತೆ ಆಹ್ವಾನಿಸಿದರು. ಇವರು ವೀಡಿಯೋ ಕರೆ ಮಾಡುವ ಆ್ಯಪ್ ಡೌನ್‌ಲೋಡ್ ಮಾಡಿ ಸ್ಪಂದಿಸಿದರು. ಅಲ್ಲಿಂದ  ಭಯ ಹುಟ್ಟಿಸುವ ಪ್ರಕ್ರಿಯೆ ಆರಂಭವಾಯಿತು. ನೀವು ತನಿಖೆಯಲ್ಲಿದ್ದೀರಿ ಮತ್ತು ನಿಮ್ಮ ಆಧಾರ್ ಕಾರ್ಡ್ ಬಳಸಿ  ರಾಷ್ಟ್ರೀಯ ಬ್ಯಾಂಕ್‌ ನಿಂದ  6 ಕೋಟಿ ರೂಪಾಯಿಯ ಅವ್ಯವಹಾರ ಮಾಡಲಾಗಿದೆ ಎಂದು ನಂಬಿಸಿದರು. ಬೆದರಿದ  ವಿಜಯ ಕುಮಾರ್, ಕರೆ ಮಾಡಿದವರು ಹೇಳಿದಂತೆ ನಡಕೊಳ್ಳಲು ಪ್ರಾರಂಭಿಸಿದರು. ಒಟ್ಟು 11 ಖಾತೆಯಿಂದ 12 ಕೋಟಿ  ರೂಪಾಯಿಯಷ್ಟು ಮೊತ್ತವನ್ನು ಅವರ ಖಾತೆಗಳಿಗೆ ವರ್ಗಾಯಿಸಿದರು. ದುರಂತ ಏನೆಂದರೆ, ಈ ಇಡೀ ಪ್ರಕ್ರಿಯೆಯನ್ನು  ಮನೆಯವರಿಂದ ಮತ್ತು ಗೆಳೆಯರಿಂದ ಅವರು ಮುಚ್ಚಿಟ್ಟಿದ್ದರು. ಕೊನೆಗೆ ಗತ್ಯಂತರವಿಲ್ಲದೇ ಪೊಲೀಸರಿಗೆ ದೂರು  ನೀಡಿದಾಗ ಘಟನೆ ಬೆಳಕಿಗೆ ಬಂತು. ಅಂದಹಾಗೆ,

ಡಿಜಿಟಲ್ ಅರೆಸ್ಟ್ ಎಂಬ ಹೊಸ ಪದವೊಂದು ಹುಟ್ಟಿಕೊಂಡದ್ದೇ  ಈ ಬಗೆಯ ವಂಚನೆಗಳ ಹಿನ್ನೆಲೆಯಲ್ಲಿ. ತಾಂತ್ರಿಕವಾಗಿ  ಹೊಸ ಹೊಸ ಸಂಶೋಧನೆಗಳಾದಂತೆಯೇ ವಂಚನೆ, ಮೋಸಗಳಲ್ಲೂ ಹೊಸ ಹೊಸ ಶೋಧನೆಗಳಾಗುತ್ತವೆ ಎಂಬುದನ್ನು  ಇವು ಮತ್ತು ಇಂಥ ಹತ್ತು-ಹಲವು ಬಗೆಯ ವಂಚನಾ ಘಟನೆಗಳು ಹೇಳುತ್ತಿವೆ. ಅಲ್ಲದೇ, ಇದೀಗ ಮೊಬೈಲ್ ಕರೆಗಳ  ಮೊದಲು ಡಿಜಿಟಲ್ ಅರೆಸ್ಟಿನ ಬಗ್ಗೆ ಎಚ್ಚರಿಸುವ ಮಾಹಿತಿಗಳನ್ನು ಕೇಂದ್ರ ಸರಕಾರ ಹಂಚಿಕೊಳ್ಳತೊಡಗಿದೆ. ನೀವು ಯಾರಿಗಾದರೂ ಕರೆ ಮಾಡುವ ಉದ್ದೇಶದಿಂದ ಡಯಲ್ ಮಾಡಿದರೆ ಆ ಕಡೆಯ ವ್ಯಕ್ತಿ ಕರೆ ಸ್ವೀಕರಿಸುವ ವರೆಗೂ ಈ ಮಾಹಿತಿ  ನಿಮ್ಮನ್ನು ಪದೇ ಪದೇ ಎಚ್ಚರಿಸುತ್ತಲೇ ಇರುತ್ತದೆ. ಈ ಹಿಂದೆ ಕೊರೋನಾ ಕಾಲದಲ್ಲಿ ಇಂಥದ್ದೇ  ಎಚ್ಚರಿಕೆಯನ್ನು ಆಲಿಸಿ  ಆಲಿಸಿ ಅದು ಬಾಯಿಪಾಠವೇ ಆಗಿತ್ತು. ಅಂಥದ್ದೇ  ಪರಿಸ್ಥಿತಿ ಇದೀಗ ನಿರ್ಮಾಣವಾಗಿದೆ ಎಂಬುದನ್ನೇ ಈಗಿನ  ಬೆಳವಣಿಗೆಗಳು ಹೇಳುತ್ತಿವೆ. ನಿಜವಾಗಿ,

ಕಾನೂನಿನ ಭಯ ಮತ್ತು ದೇವಭಯ- ಎರಡೂ ಇಲ್ಲವಾದಾಗ ಮನುಷ್ಯ ಅತ್ಯಂತ ಕ್ರೂರಿಯಾಗಬಲ್ಲ. ಅಪರಾಧ  ಪ್ರಕರಣಗಳಲ್ಲಿ ಶಿಕ್ಷೆಯಾಗುವ ಪ್ರಮಾಣ ಬಹಳ ಕಡಿಮೆಯಾಗಿರುವುದು ಇಲ್ಲಿನ ಒಂದು ಲೋಪವಾದರೆ, ಸತ್ಯ-ನ್ಯಾಯ- ಪ್ರಾಮಾಣಿಕತೆ ಇತ್ಯಾದಿ ಮೌಲ್ಯಗಳು ಸಾಮಾಜಿಕ ಬದುಕಿನಿಂದ ದೂರವಾಗುತ್ತಿರುವುದು ಇನ್ನೊಂದು ಲೋಪ. ಭಾರತೀಯ  ಕಾನೂನುಗಳು ಎಷ್ಟೇ ಪ್ರಬಲವಾಗಿರಲಿ, ಅದನ್ನು ಜಾರಿ ಮಾಡುವ ವಿವಿಧ ಹಂತದ ಅಧಿಕಾರಿಗಳು ಭ್ರಷ್ಟರಾದರೆ, ಕಾನೂನು  ಹಲ್ಲಿಲ್ಲದ ಹಾವಾಗಬೇಕಾಗುತ್ತದೆ. ಯಾವುದೇ ಅಪರಾಧವನ್ನು ಪರಿಣಾಮಕಾರಿಯಾಗಿ ಸಾಬೀತುಪಡಿಸುವುದು ಪೊಲೀಸರನ್ನು ಹೊಂದಿಕೊಂಡಿರುತ್ತದೆ. ಅವರು ಪ್ರಕರಣ ದಾಖಲು ಮಾಡುವುದು, ಸಾಕ್ಷ್ಯ  ಸಂಗ್ರಹ, ಪೂರಕ ಸಾಕ್ಷ್ಯಗಳು ಮತ್ತು ಪ್ರಬಲ  ಎಫ್‌ಐಆರ್ ಅನ್ನು ದಾಖಲಿಸಿದರೆ ಅಪರಾಧಿ ಕಾನೂನು ಕುಣಿಕೆಯಿಂದ ತಪ್ಪಿಸಿಕೊಳ್ಳುವುದು ಸುಲಭ ಅಲ್ಲ. ಬಳಿಕ  ನ್ಯಾಯಾಧೀಶರ ಪಾತ್ರವೂ ಇಲ್ಲಿ ಮುಖ್ಯವಾಗುತ್ತದೆ. ಆದರೆ, ಅಪರಾಧವನ್ನು ದಾಖಲಿಸುವ ಪ್ರಾಥಮಿಕ ಹಂತವೇ ನಮ್ಮ  ದೇಶದಲ್ಲಿ ತೀರಾ ದುರ್ಬಲವಾಗಿದೆ. ಬಡವರಿಗೊಂದು ನೀತಿ, ಶ್ರೀಮಂತರಿಗೊಂದು, ರಾಜಕಾರಣಿಗಳಿಗೊಂದು,  ಪ್ರಭಾವಿಗಳಿಗೊಂದು ನೀತಿ ಎಂಬಂತೆ ನಮ್ಮಲ್ಲಿನ ಹೆಚ್ಚಿನ ಪೊಲೀಸ್ ಠಾಣೆಗಳು ವರ್ತಿಸುತ್ತವೆ. ನೀವು ಶ್ರೀಮಂತರಾಗಿದ್ದು,  ಹಣ ನೀಡಲು ತಯಾರಿದ್ದೀರೆಂದರೆ ಎಂಥದ್ದೇ  ಅಪರಾಧವನ್ನೂ ಮುಚ್ಚಿ ಹಾಕಲು ಸಾಧ್ಯವಿದೆ ಎಂಬ ವಾತಾವರಣವೊಂದು  ದೇಶದಲ್ಲಿ ನಿರ್ಮಾಣವಾಗಿಬಿಟ್ಟಿದೆ. ಆದ್ದರಿಂದಲೇ, ಮೇಲಿನ ಎರಡೂ ಘಟನೆಗಳ ವ್ಯಕ್ತಿಗಳು ಲಂಚ ಕೊಟ್ಟು ಪ್ರಕರಣದಿಂದ  ಪಾರಾಗುವ ದಾರಿಯನ್ನು ಕಂಡುಕೊಳ್ಳಲು ಯತ್ನಿಸಿದ್ದರು.
ಇನ್ನೊಂದು ಕಡೆ,

 ಧರ್ಮವು ಬಾಹ್ಯ ಸಂಕೇತಗಳಿಗಷ್ಟೇ ಸೀಮಿತಗೊಳ್ಳತೊಡಗಿದೆ. ಧರ್ಮವೆಂದರೆ, ಮೌಲ್ಯಗಳ  ಗೋದಾಮು ಎಂದರ್ಥ. ಪೊಲೀಸರು, ಸಿಸಿಟಿವಿಗಳು, ನ್ಯಾಯಾಲಗಳು ಮತ್ತು ಕಾನೂನುಗಳು ಇಲ್ಲದೇ ಇರುವ  ಸಮಯದಲ್ಲೂ ಅತ್ಯಂತ ಪ್ರಾಮಾಣಿಕ ಮತ್ತು ಸತ್ಯಸಂಧ ಬದುಕನ್ನು ನಡೆಸಲು ಪ್ರೇರಣೆ ನೀಡುವುದಕ್ಕೆ ವ್ಯಕ್ತಿಯನ್ನು  ತರಬೇತುಗೊಳಿಸುವುದೇ ಧರ್ಮ. ಸುಳ್ಳು ಹೇಳಿದರೆ, ವಂಚಿಸಿದರೆ, ಅನ್ಯಾಯ ಎಸಗಿದರೆ, ಅಪರಾಧ ಪ್ರಕರಣಗಳಲ್ಲಿ  ಭಾಗಿಯಾದರೆ... ಇತ್ಯಾದಿ ಸರ್ವ ಕೆಡುಕುಗಳಿಗೂ ದೇವನು ಶಿಕ್ಷೆ ನೀಡುತ್ತಾನೆ ಎಂಬ ಪ್ರಜ್ಞೆಯೊಂದಿಗೆ ಬದುಕುವುದನ್ನೇ  ಧರ್ಮಗಳು ಕಲಿಸಿಕೊಡುತ್ತವೆ. ವಿಶೇಷ ಏನೆಂದರೆ,

ಈ ದೇಶದಲ್ಲಿ ಧರ್ಮಿಷ್ಠರು ದಿನೇ ದಿನೇ ಹೆಚ್ಚುತ್ತಿದ್ದಾರೆ. ಮಸೀದಿಗಳಡಿ ಮಂದಿರವನ್ನು ಹುಡುಕುವಷ್ಟು ಮತ್ತು ಅನಾಥ  ಆರಾಧನಾಲಯಗಳನ್ನು ಪುನರುಜ್ಜೀವನಗೊಳಿಸಿ ಆರಾಧನೆಗೆ ಅರ್ಹ ಮಾಡುವಷ್ಟು ಧಾರ್ಮಿಕತನ ಇಲ್ಲಿ ಕಾಣಿಸುತ್ತಿದೆ. ಹಿಂ ದಿಗಿಂತ ಹೆಚ್ಚಾಗಿ ಇವತ್ತು ಜನರು ಧಾರ್ಮಿಕ ಸಂಕೇತಗಳನ್ನು ಧರಿಸುತ್ತಿದ್ದಾರೆ. ಆದರೆ, ಧರ್ಮ ಕಲಿಸುವ ಮೌಲ್ಯಗಳ  ಪಾಲನೆಯಲ್ಲಿ ಮಾತ್ರ ದಿನೇ ದಿನೇ ಸೋರಿಕೆ ಹೆಚ್ಚಾಗುತ್ತಿದೆ. ಅತೀವ ಧರ್ಮನಿಷ್ಠ ಎಂದು ಗುರುತಿಸಿಕೊಂಡವರೇ ಅಪರಾಧ  ಪ್ರಕರಣಗಳಲ್ಲಿ ಸಿಕ್ಕಿ ಬೀಳುವುದನ್ನೂ ಮತ್ತು ಯಾವ ಅಪರಾಧಿ ಪ್ರಜ್ಞೆಯೂ ಇಲ್ಲದೆ ವರ್ತಿಸುವುದನ್ನೂ ನಾವು  ನೋಡುತ್ತಿದ್ದೇವೆ.

ಇಸ್ಲಾಮ್ ಮನುಷ್ಯ ಸಂಬಂಧವನ್ನು ದೇವನೊಂದಿಗೆ ಜೋಡಿಸುತ್ತದೆ. ಮನುಷ್ಯನ ಪ್ರತಿ ಕ್ರಿಯೆಯೂ ದಾಖಲಿಸಲ್ಪಡುತ್ತದೆ  ಮತ್ತು ಮರಣಾನಂತರ ದೇವನು ಅವನ್ನು ಎದುರಿಟ್ಟು ವಿಚಾರಿಸುತ್ತಾನೆ ಎಂಬು ದಾಗಿ ಇಸ್ಲಾಮ್ ಹೇಳುತ್ತದೆ. ಆದ್ದರಿಂದ  ದೇವ ನೋಡುತ್ತಿದ್ದಾನೆ ಎಂಬ ಪ್ರಜ್ಞೆಯಿಂದಲೇ ಇಹಲೋಕ ದಲ್ಲಿ ಜೀವಿಸಬೇಕು ಎಂದು ಇಸ್ಲಾಮ್ ಆದೇಶಿಸುತ್ತದೆ. ವ್ಯಕ್ತಿ  ಸುಧಾರಣೆಯಲ್ಲಿ ದೇವಭಯವನ್ನು ಪ್ರಬಲ ಅಸ್ತçವಾಗಿ ಪ್ರತಿಪಾದಿಸುವ ಇಸ್ಲಾಮ್, ಅಪರಾಧವನ್ನು ತಡೆಯುವುದಕ್ಕೆ  ಇದನ್ನೇ ಪ್ರಬಲ ಆಯುಧವಾಗಿಯೂ ಪರಿಚಯಿಸುತ್ತದೆ. ಕಾನೂನುಗಳ ದೌರ್ಬಲ್ಯವನ್ನು ದುರುಪಯೋಗಿಸುವವರ ಸಂಖ್ಯೆ  ಹೆಚ್ಚಾಗುತ್ತಿರುವ ಈ ದಿನಗಳಲ್ಲಿ ‘ದೇವ ನೋಡುತ್ತಿದ್ದಾನೆ’ ಎಂಬ ಎಚ್ಚರಿಕೆಯ ಪ್ರಜ್ಞೆಯನ್ನು ಜನರಲ್ಲಿ ಮೂಡಿಸಬೇಕಾದ  ಅಗತ್ಯ ಇದೆ.