
ನಿಜವಾಗಿ, ಅಪ್ರಾಪ್ತರನ್ನು ಮತ್ತು ಪ್ರಾಪ್ತ ವಯಸ್ಕರನ್ನು ಸಮಾನ ತಕ್ಕಡಿಯಲ್ಲಿಡುವುದೇ ತಪ್ಪು. ಇಬ್ಬರ ನಡುವೆ ಬೌದ್ಧಿಕ ಬೆಳವಣಿಗೆ, ಕಾನೂನಿನ ಅರಿವು, ತನ್ನ ಕೃತ್ಯದ ಪರಿಣಾಮದ ತಿಳುವಳಿಕೆ ಇತ್ಯಾದಿಗಳ ವಿಷಯದಲ್ಲಿ ಸಾಕಷ್ಟು ವ್ಯತ್ಯಾಸಗಳಿರುತ್ತವೆ. ಪ್ರಾಪ್ತನ ಅರಿವಿನ ಮಟ್ಟವನ್ನು ಅಪ್ರಾಪ್ತ ಹೊಂದಿರುವುದಿಲ್ಲ. ಮಗುವಿನ ಕೈಗೆ ವಾಚ್ ಕೊಟ್ಟರೆ ಉಪಯೋಗದ ಹೊರತಾದ ಎಲ್ಲವನ್ನೂ ಅದು ಮಾಡುತ್ತದೆ. ಮಗುವಿನ ಮಟ್ಟಿಗೆ ಅದು ಒಂದು ಆಟದ ಸಾಮಾನು. ಅದನ್ನು ಒಡೆದೂ ಬಿಡಬಹುದು. ಎತ್ತಿ ಎಸೆದು ಬಿಡಲೂ ಬಹುದು. ಆದರೆ ಮಗುತನ ದಾಟಿ ಬಂದ ಮಕ್ಕಳು ವಾಚ್ ಅನ್ನು ನೋಡುವ ವಿಧಾನವೇ ಬೇರೆ. ಅದು ಅವರ ಪಾಲಿಗೆ ಫ್ಯಾಶನ್. ಗೆಳೆಯರೆದುರು ಆಗಾಗ ಟೈಮ್ ನೋಡುವ ನೆಪದಲ್ಲಿ ಪ್ರದರ್ಶಿಸುವ ಹೆಚ್ಚುಗಾರಿಕೆ. ಒಂದು ವೇಳೆ, ಮಗುವನ್ನು ಮತ್ತು ಮಕ್ಕಳನ್ನು ಒಂದೇ ತಟ್ಟೆಯಲ್ಲಿ ಇಟ್ಟು ನೋಡಿದರೆ ಏನಾಗಬಹುದು? ಬಹುಶಃ, ಹದಿಹರೆಯದವರು ಮತ್ತು ವಯಸ್ಕರನ್ನು ಈ ಮಾನದಂಡವನ್ನಿಟ್ಟುಕೊಂಡು ತೂಗಿದರೆ ಉತ್ತಮವೇನೋ ಅನಿಸುತ್ತದೆ. ಹಾಗಂತ, ಅತ್ಯಾಚಾರದಲ್ಲಿ ಭಾಗಿಯಾಗುವ ಅಪ್ರಾಪ್ತರು ವಾಚ್ ಪುಡಿ ಮಾಡುವ ಮಗುವಿನಷ್ಟೇ ಮುಗ್ಧರು ಎಂದು ಇದರರ್ಥವಲ್ಲ. ಹದಿಹರೆಯದವರಿಗೆ ಅತ್ಯಾಚಾರವು ತಪ್ಪು ಮತ್ತು ಅದಕ್ಕೆ ಶಿಕ್ಷೆ ಇದೆ ಎಂಬುದು ಗೊತ್ತಿರಲೂ ಬಹುದು. ಆದರೂ, ಅವರನ್ನು ವಯಸ್ಕರಿಗೆ ಸಮಾನವಾಗಿ ನೋಡುವುದು ಅಪ್ರಬುದ್ಧ ಮತ್ತು ದುಡುಕುತನದಂತೆ ತೋರುತ್ತದೆ.
ನಿಜವಾಗಿ, ಆಧುನಿಕ ತಂತ್ರಜ್ಞಾನಗಳು ತೀರಾ ಬೆಳೆದಿರುವ ಮತ್ತು ಮೊಬೈಲ್‍ನಲ್ಲಿ `ಸರ್ವವೂ' ಲಭ್ಯವಾಗುತ್ತಿರುವ ಇಂದಿನ ದಿನಗಳು ಹದಿಹರೆಯವನ್ನು ಅಪಾಯಕಾರಿಯಾಗುವಂತೆ ತಯಾರುಗೊಳಿಸುತ್ತಿದೆ. 10 ವರ್ಷಗಳ ಹಿಂದಿನ ಹದಿಹರೆಯಕ್ಕೂ ಇವತ್ತಿನ ಹದಿಹರೆಯಕ್ಕೂ ಬೌದ್ಧಿಕವಾಗಿಯೂ ಭೌತಿಕವಾಗಿಯೂ ಧಾರಾಳ ಅಂತರಗಳಿವೆ. ಇವತ್ತು ಅಪ್ರಾಪ್ತನು/ಳು ಪ್ರಾಪ್ತ ವಯಸ್ಕನಷ್ಟು ಪ್ರಬುದ್ಧವಾಗಿ ಮಾತಾಡುತ್ತಾನೆ/ಳೆ. ಯಾವುದೇ ವಿಷಯದ ಮೇಲೆ ಪ್ರಾಪ್ತ ವಯಸ್ಕನಿಗೆ ಸರಿಸಮವಾದ ಮಾಹಿತಿಯನ್ನು ಪಡೆಯುವ ಎಲ್ಲ ಸೌಲಭ್ಯಗಳೂ ಇವತ್ತು ಅಪ್ರಾಪ್ತರಿಗಿವೆ. ಒಂದು ರೀತಿಯಲ್ಲಿ, ಇವತ್ತಿನ ತಂತ್ರಜ್ಞಾನಗಳು ಅಪ್ರಾಪ್ತರನ್ನು ಅಕಾಲಿಕ ಪ್ರಾಪ್ತ ವಯಸ್ಕರನ್ನಾಗಿ ಮಾಡುತ್ತಿವೆ. ಅವರು ಯಾವ ವಿಷಯದ ಮೇಲೆ ಕುತೂಹಲ ವ್ಯಕ್ತಪಡಿಸುತ್ತಾರೋ ಆ ಕುತೂಹಲವನ್ನು ತಣಿಸುವುದಕ್ಕೆ ಬೆರಳ ತುದಿಯಲ್ಲೇ ಅವಕಾಶವನ್ನು ಒದಗಿಸುತ್ತಿದೆ. 20 ವರ್ಷಗಳ ಹಿಂದೆ ಆಗಿದ್ದರೆ ನೀಲಿ ಚಿತ್ರವನ್ನು ವೀಕ್ಷಿಸುವುದಕ್ಕೆ ಚಿತ್ರ ಮಂದಿರಕ್ಕೆ ಹೋಗಬೇಕಿತ್ತು. ಅದೂ ಕದ್ದು ಮುಚ್ಚಿ- ರಾತ್ರಿಯ ವೇಳೆ ಹೋಗುವವರೇ ಹೆಚ್ಚಿದ್ದರು. ಇದೊಂದೇ ಅಲ್ಲ, `ತಪ್ಪು' ಎಂದು ಸಮಾಜ ಯಾವುದರ ಮೇಲೆಲ್ಲ ಮುದ್ರೆ ಹಾಕಿತ್ತೋ ಅವೆಲ್ಲವೂ ಸುಲಭವಾಗಿ ಲಭ್ಯವಾಗದಂಥ ವಾತಾವರಣ ಆಗೆಲ್ಲ ಇತ್ತು. ಆದರೆ ಇವತ್ತು ಆ ಬೇಲಿಯೇ ಕಿತ್ತು ಹೋಗಿದೆ. ಬೇಲಿಯೇ ಇಲ್ಲದ ವಿಶಾಲ ಜಗತ್ತೊಂದು ಇವತ್ತು ಪ್ರಾಪ್ತರು-ಅಪ್ರಾಪ್ತರು ಎಂಬ ಬೇಧವಿಲ್ಲದೇ ಎಲ್ಲರೆದುರೂ ತೆರೆದುಕೊಂಡಿದೆ. ಕೆಟ್ಟದ್ದನ್ನು ಇವತ್ತು ಕದ್ದು-ಮುಚ್ಚಿ-ರಾತ್ರಿ ವೇಳೆ ನೋಡಬೇಕಾದ ಅಗತ್ಯವಿಲ್ಲ. ಎಲ್ಲವನ್ನೂ ಮೊಬೈಲ್ ಒದಗಿಸುತ್ತದೆ. ಅಪ್ರಾಪ್ತರಲ್ಲಿ ಪ್ರೌಢತನವನ್ನು ಹುಟ್ಟಿಸುವುದಕ್ಕೆ ಬೇಕಾದ ಎಲ್ಲವೂ ಇವತ್ತು ಮೊಬೈಲ್‍ನಲ್ಲಿ ಸುಲಭದಲ್ಲೇ ದಕ್ಕುತ್ತಿದೆ. ಇಂಥ ಸ್ಥಿತಿಯಲ್ಲಿ, ಅಪ್ರಾಪ್ತ ವಯಸ್ಸಿನ ಮಿತಿಯನ್ನು ತಗ್ಗಿಸುವುದೋ ಅಥವಾ ಅವರು ಭಾಗಿಯಾದ ಅತ್ಯಾಚಾರದಂಥ ಹೀನ ಕೃತ್ಯಗಳನ್ನು ಪ್ರಾಪ್ತ ವಯಸ್ಕರ
ಪರಿಚ್ಛೇದದಡಿಯಲ್ಲಿ ತಂದು ವಿಚಾರಣೆಗೆ ಒಳಪಡಿಸುವುದೋ ಸಮಸ್ಯೆಗೆ ಉತ್ತರವಾಗುವ ಸಾಧ್ಯತೆಯಿಲ್ಲ. ಇದರ ಬದಲು ಎಳೆ ಮನಸ್ಸನ್ನು ಚಂಚಲಗೊಳಿಸುವವುಗಳ ಅಧ್ಯಯನ ನಡೆಸಬೇಕು. ಆಧುನಿಕ ತಂತ್ರಜ್ಞಾನಗಳನ್ನು ಹೇಗೆ ಮತ್ತು ಯಾಕಾಗಿ ಬಳಸಬೇಕೆಂಬ ಬಗ್ಗೆ ಮನಮುಟ್ಟುವ ರೀತಿಯಲ್ಲಿ ಎಳೆ ಮನಸ್ಸಿಗೆ ತಿಳಿಸಿಕೊಡಬೇಕು. ಇತರರನ್ನು ಹೇಗೆ ಕಾಣಬೇಕು ಮತ್ತು ಗೌರವಿಸಬೇಕು ಎಂಬುದನ್ನು ಆಗಾಗ ಹೇಳಿಕೊಡುತ್ತಲಿರಬೇಕು. ಇವು ಮತ್ತು ಇಂತಹ ಇನ್ನಿತರ ತಿದ್ದುವ ವಿಧಾನಗಳು ‘ಅಪ್ರಾಪ್ತ ಅಪರಾಧ’ವನ್ನು ತಡೆಗಟ್ಟುವುದಕ್ಕೆ ಪರಿಹಾರ ಆಗಬಹುದೇ ಹೊರತು ವಯಸ್ಸಿನ ಮಿತಿಯನ್ನು ಇಳಿಸುವುದಲ್ಲ. ಒಂದು ವೇಳೆ, ಇವತ್ತು ವಯಸ್ಸಿನ ಮಿತಿಯನ್ನು 16ಕ್ಕೆ ಇಳಿಸಿದರೆ ಇನ್ನೈದು ವರ್ಷಗಳಲ್ಲಿ ಅದನ್ನು 14ಕ್ಕೆ ಇಳಿಸಬೇಕಾದ ಅಗತ್ಯವೂ ಕಂಡುಬರಬಹುದು. ಸಮಸ್ಯೆಯಿರುವುದು ವಯಸ್ಸಿನಲ್ಲಲ್ಲ, ಆ ವಯಸ್ಸಿಗೆ ನಾವೇನನ್ನು ತುಂಬಿಸುತ್ತಿದ್ದೇವೆ ಎಂಬುದರಲ್ಲಿ. ನಿರ್ಭಯ ಪ್ರಕರಣದ ಬಾಲಾಪರಾಧಿಯನ್ನು ನಾವು ಈ ಮಾನದಂಡದಿಂದಲೇ ವಿಶ್ಲೇಷಿಸಬೇಕಾಗಿದೆ.